Published on: March 13, 2023

ಇಂಡೋನೇಷ್ಯಾದ ರಾಜಧಾನಿ ಬದಲಾವಣೆ

ಇಂಡೋನೇಷ್ಯಾದ ರಾಜಧಾನಿ ಬದಲಾವಣೆ


ಸುದ್ದಿಯಲ್ಲಿ ಏಕಿದೆ? ಇಂಡೋನೇಷಿಯಾ ತನ್ನ ರಾಜಧಾನಿಯನ್ನು ಬೊರ್ನಿಯೊ ದ್ವೀಪಕ್ಕೆ ವರ್ಗಾವಣೆ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದೆ.


ಮುಖ್ಯಾಂಶಗಳು

  • ಹಾಲಿ ರಾಜಧಾನಿ ಜಕಾರ್ತದಲ್ಲಿ ಜನದಟ್ಟಣೆ, ಮಾಲಿನ್ಯ ಹೆಚ್ಚಳವಾಗಿದ್ದು, ಹೆಚ್ಚು ಭೂಕಂಪಗಳಿಗೆ ತುತ್ತಾಗಿ, ಕ್ಷಿಪ್ರಗತಿಯಾಗಿ ಜಾವಾ ಸಮುದ್ರಕ್ಕೆ ಮುಳುಗುವ ಭೀತಿ ಇದ್ದ ಹಿನ್ನೆಲೆಯಲ್ಲಿ ಇಂಡೋನೇಷ್ಯಾ 2022 ರ ಮಧ್ಯಭಾಗದಲ್ಲಿ ಹೊಸ ರಾಜಧಾನಿ ನಿರ್ಮಾಣ ಆರಂಭಿಸಿತ್ತು.
  • ಹೊಸ ಮಹಾನಗರವು “ಸುಸ್ಥಿರ ಅರಣ್ಯ ನಗರ” ಇದು ಪರಿಸರವನ್ನು ಅಭಿವೃದ್ಧಿಯ ಕೇಂದ್ರವಾಗಿರಿಸಿಕೊಳ್ಳುತ್ತದೆ. 2045 ರ ವೇಳೆಗೆ ಇಂಗಾಲದ ತಟಸ್ಥವಾಗಿರಲು ಗುರಿಯನ್ನು ಹೊಂದಿದೆ.
  • ಈ ಯೋಜನೆಯು ಪರಿಸರವಾದಿಗಳು ಮತ್ತು ಸ್ಥಳೀಯ ಸಮುದಾಯಗಳಿಂದ ಟೀಕೆಗೆ ಗುರಿಯಾಗಿದ್ದು, ಪರಿಸರವನ್ನು ಹಾಳುಮಾಡುತ್ತದೆ, ಒರಾಂಗುಟನ್‌ಗಳಂತಹ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಆವಾಸಸ್ಥಾನವನ್ನು ಮತ್ತಷ್ಟು ಕುಗ್ಗಿಸುತ್ತದೆ ಮತ್ತು ತಮ್ಮ ಜೀವನೋಪಾಯಕ್ಕಾಗಿ ಭೂಮಿಯನ್ನು ಅವಲಂಬಿಸಿರುವ ಸ್ಥಳೀಯ ಜನರನ್ನು ಸ್ಥಳಾಂತರಿಸುತ್ತದೆ ಎಂಬ ಆರೋಪ ಕೇಳಿಬಂದಿದೆ.

ವರ್ಗಾವಣೆ ಏಕೆ?

  • ಜಕಾರ್ತ 10 ಮಿಲಿಯನ್ ಮಂದಿಗೆ ವಾಸಸ್ಥಾನವಾಗಿದ್ದು ದೊಡ್ಡ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಇದನ್ನು ಜಗತ್ತಿನಲ್ಲೇ ಅತಿ ವೇಗವಾಗಿ ಮುಳುಗುತ್ತಿರುವ ನಗರ ಎಂದು ಗುರುತಿಸಲಾಗಿದೆ ಹಾಗೂ ಈಗಿನ ಪ್ರಮಾಣದಲ್ಲೇ ಈ ಪ್ರಕ್ರಿಯೆ ಮುಂದುವರೆದಲ್ಲಿ 2050 ರ ವೇಳೆಗೆ ನಗರದ ಮೂರನೇ ಒಂದು ಭಾಗ ಮುಳುಗಡೆಯಾಗಿರಲಿದೆ. ಅನಿಯಂತ್ರಿತ ಅಂತರ್ಜಲ ಹೊರತೆಗೆಯುವಿಕೆ ಇದಕ್ಕೆ ಮುಖ್ಯ ಕಾರಣವಾಗಿದೆ. ಆದರೆ ಹವಾಮಾನ ಬದಲಾವಣೆಯಿಂದಾಗಿ ಏರುತ್ತಿರುವ ಜಾವಾ ಸಮುದ್ರದ ಮಟ್ಟದಿಂದ ಈ ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಂಡಿದೆ.
  • ಇಲ್ಲಿನ ಗಾಳಿ ಹಾಗೂ ಅಂತರ್ಜಲ ಅತಿಯಾಗಿ ಕಲುಷಿತಗೊಂಡಿದ್ದು, ಪ್ರವಾಹದ ಕಾರಣದಿಂದಾಗಿ ರಸ್ತೆಗಳು ಜಲಾವೃತಗೊಳ್ಳಲಿದ್ದು, ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ವರ್ಷಕ್ಕೆ 4.5 ಬಿಲಿಯನ್ ಡಾಲರ್ ನಷ್ಟು ವೆಚ್ಚವಾಗುತ್ತಿದೆ.
  • ಜಕಾರ್ತಾವನ್ನು ಬಾಧಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು, ಅದರ ಜನಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ದೇಶವು “ಸುಸ್ಥಿರ ನಗರ” ದೊಂದಿಗೆ ಹೊಸದಾಗಿ ಪ್ರಾರಂಭಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಹೊಸ ನಗರದ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಾಗಿದೆ.