Published on: July 26, 2022

ಉದ್ಯೋಗ ನೀತಿ

ಉದ್ಯೋಗ ನೀತಿ

ಸುದ್ದಿಯಲ್ಲಿ ಏಕಿದೆ?

ಕೈಗಾರಿಕೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸುವ ಹೊಸ ಉದ್ಯೋಗ ನೀತಿ 2022-25ಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಮುಖ್ಯಾಂಶಗಳು

  • ಈ ಹೊಸ ನೀತಿಯಡಿ, ಕೈಗಾರಿಕೆಗಳು ಸ್ಥಳೀಯರಿಗೆ ನಿರ್ದಿಷ್ಟಪಡಿಸಿದಂತೆ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಬೇಕು. ಈ ನೀತಿಯು ಕರ್ನಾಟಕದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸುವ ಗುರಿ ಹೊಂದಿದೆ.
  • ಕೈಗಾರಿಕಾ ಘಟಕಗಳನ್ನು ವಿಸ್ತರಿಸಿಕೊಳ್ಳಲು ಬಯಸುತ್ತಿರುವವರು ಅಥವಾ ಹೊಸ ಕೈಗಾರಿಕೆ ಸ್ಥಾಪಿಸಲು ಎದುರು ನೋಡುತ್ತಿರುವವರು ಸ್ಥಳೀಯರಿಗೆ ಉದ್ಯೋಗದ ಸಂಖ್ಯೆಯನ್ನು ಹೆಚ್ಚಿಸಬೇಕು.
  • ಮಧ್ಯಮ, ದೊಡ್ಡ, ಮೆಗಾ, ಅಲ್ಟ್ರಾ-ಮೆಗಾ ಮತ್ತು ಸೂಪರ್-ಮೆಗಾ ಉದ್ಯಮಗಳಲ್ಲಿ  ಹೆಚ್ಚುತ್ತಿರುವ ಹೂಡಿಕೆಗೆ ಹೆಚ್ಚುವರಿ ಉದ್ಯೋಗಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸುವಂತೆ ಮಾರ್ಗಸೂಚಿ ರೂಪಿಸಲಾಗಿದೆ. ಮಧ್ಯಮ ಪ್ರಮಾಣದ ಕೈಗಾರಿಕೆ ಎಂದು ವರ್ಗೀಕರಿಸಿದರೆ (ಕನಿಷ್ಠ 20 ಉದ್ಯೋಗಿಗಳು ಇರುವ) ವಿಸ್ತರಣೆಗಾಗಿ 10 ಕೋಟಿ ರೂ. ಹೂಡಿಕೆ ಮಾಡಲು ಬಯಸಿದರೆ ಸ್ಥಳೀಯರಿಗೆ 10 ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಬೇಕಾಗುತ್ತದೆ.
  • ಹೂಡಿಕೆದಾರರು 50 ಕೋಟಿ ರೂ. ಹೂಡಿಕೆ ಮಾಡಲು ಬಯಸಿದರೆ, 35 ರಿಂದ 50 ಉದ್ಯೋಗಗಳನ್ನು ಸೃಷ್ಟಿಸಬೇಕು ಮತ್ತು ಸೂಪರ್-ಮೆಗಾ ಇಂಡಸ್ಟ್ರಿ ವಿಭಾಗದಡಿ 100 ಕೋಟಿ ರೂ.ವರೆಗೆ ಹೂಡಿಕೆ ಮಾಡಲು ಬಯಸಿದರೆ, ಅವರು 50 ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಬೇಕು. ಈ ಎಲ್ಲಾ ಹೆಚ್ಚುವರಿ ಉದ್ಯೋಗಗಳು ಸ್ಥಳೀಯ ಕನ್ನಡಿಗರಿಗೆ ಇರುತ್ತದೆ. ಅವರು ರೂಪಿಸಿದ ಮಾರ್ಗಸೂಚಿಗಳಲ್ಲಿ ವಿವಿಧ ಘಟಕಗಳು ಸ್ಥಳೀಯರಿಗೆ ಹೇಗೆ ಉದ್ಯೋಗ ಒದಗಿಸಬೇಕು ಎಂಬುದನ್ನು ಸೂಚಿಸುತ್ತವೆ.

ರಾಜ್ಯ ಕೈಗಾರಿಕಾ ಮಂಡಳಿಯಿಂದ ಉದ್ಯೋಗ ಕೋಟಾದ ನಿರ್ವಹಣೆ: 

  • ಉದ್ಯೋಗ ಮೀಸಲಾತಿಯು ಎಲ್ಲಾ ಎ.ಬಿ, ಸಿ ಮತ್ತು ಡಿ ಉದ್ಯೋಗ ವರ್ಗಗಳಿಗೆ ಅನ್ವಯಿಸುತ್ತದೆ, ಇದರಲ್ಲಿ ಸ್ಥಳೀಯರು ಕೆಲಸ ಮಾಡಬೇಕು. ಇದನ್ನು ಮೇಲ್ವಿಚಾರಣೆ ಮಾಡಲು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಜೊತೆಗೆ ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆಯ ಅಧಿಕಾರಿಗಳು ಆಗಾಗ್ಗೆ ಪರಿಶೀಲನೆ ನಡೆಸುತ್ತಾರೆ.

ಸ್ಥಳೀಯರಿಗೆ ಉದ್ಯೋಗಗಳು: 

  • 10 ಕೋಟಿ ರೂ. ಹೂಡಿಕೆಯೊಂದಿಗೆ ಕನಿಷ್ಠ 20 ಸಿಬ್ಬಂದಿ ಹೊಂದಿರುವ ಮಧ್ಯಮ ಪ್ರಮಾಣದ ಸಂಸ್ಥೆಗಳು ಸ್ಥಳೀಯರಿಗೆ 10 ಉದ್ಯೋಗಗಳನ್ನು ನೀಡಬೇಕು.
  • 50 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಕನಿಷ್ಠ 60 ಸಿಬ್ಬಂದಿಯನ್ನು ಹೊಂದಿರುವ ದೊಡ್ಡ ಪ್ರಮಾಣದ ಸಂಸ್ಥೆಗಳು  50 ಉದ್ಯೋಗಗಳನ್ನು ಸೃಷ್ಟಿಸಬೇಕು.
  • 50 ಕೋಟಿ ರೂ. ಹೂಡಿಕೆಯೊಂದಿಗೆ ಕನಿಷ್ಠ 260 ಉದ್ಯೋಗಿಗಳನ್ನು ಹೊಂದಿರುವ ಮೆಗಾ ಸ್ಕೇಲ್ ಸಂಸ್ಥೆಗಳು ಸ್ಥಳೀಯರಿಗೆ ಹೆಚ್ಚುವರಿ 50 ಉದ್ಯೋಗಗಳನ್ನು ಸೃಷ್ಟಿಸಬೇಕು.
  • 50 ಕೋಟಿ ರೂ. ಹೂಡಿಕೆಯೊಂದಿಗೆ ಕನಿಷ್ಠ 510 ಉದ್ಯೋಗಿಗಳನ್ನು ಹೊಂದಿರುವ ಅಲ್ಟ್ರಾ ಮೆಗಾ ಸ್ಕೇಲ್ ಸಂಸ್ಥೆಗಳು 50 ಉದ್ಯೋಗಗಳನ್ನು ಸೃಷ್ಟಿಸಬೇಕು
  • 100 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಕನಿಷ್ಠ 1,000 ಉದ್ಯೋಗಿಗಳನ್ನು ಹೊಂದಿರುವ ಮೆಗಾ ಸ್ಕೇಲ್ ಕಂಪನಿಗಳು 50 ಉದ್ಯೋಗಗಳನ್ನು ಸೃಷ್ಟಿಸಬೇಕು.