Published on: June 21, 2023

‘ಎಂಕ್ಯೂ 9ಬಿ’ ಡ್ರೋನ್

‘ಎಂಕ್ಯೂ 9ಬಿ’ ಡ್ರೋನ್

ಸುದ್ದಿಯಲ್ಲಿ ಏಕಿದೆ? ಪ್ರಿಡೇಟರ್’ ಎಂದು ಗುರುತಿಸುವ, ಕಡಲಗಡಿಯಲ್ಲಿಕಣ್ಗಾವಲು ಇಡುವ ಶಸ್ತ್ರಸಜ್ಜಿತ ‘ಎಂಕ್ಯೂ 9ಬಿ’ ಹೆಸರಿನ 30 ಡ್ರೋನ್ ಗಳನ್ನು  ಅಮೆರಿಕದಿಂದ  ಖರೀದಿಸುವ ಪ್ರಸ್ತಾವಕ್ಕೆ ರಕ್ಷಣಾ ಸಚಿವಾಲಯ  ಅನುಮೋದನೆ ನೀಡಿದೆ.

ಮುಖ್ಯಾಂಶಗಳು

  • ರಕ್ಷಣಾ ಸಚಿವ ರಾಜನಾಥ್ ಸಿಂಗ್ ನವದೆಹಲಿಯಲ್ಲಿ ನಡೆದ ರಕ್ಷಣಾ ಸ್ವಾದೀನ ಮಂಡಳಿ (ಡಿಎಸಿ) ಸಭೆಯಲ್ಲಿ ರಕ್ಷಣಾ ಪರಿಕರ ಖರೀದಿಗೆ ಸಂಬಂಧಿಸಿದ ನೂತನ ಕೈಪಿಡಿ ಬಿಡುಗಡೆ ಮಾಡಿದರು. ರಕ್ಷಣಾ ಸ್ವಾದೀನ ಮಂಡಳಿ (ಡಿಎಸಿ) ಸಭೆ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಿತು.
  • ಅಮೆರಿಕದ ಜನರಲ್ ಅಟೊಮಿಕ್ಸ್ ಸಂಸ್ಥೆ ಜೊತೆಗಿನ ಈ ವಹಿವಾಟು ಕಾರ್ಯಗತಗೊಂಡರೆ, ನ್ಯಾಟೊ ಸಮೂಹ ಹೊರತುಪಡಿಸಿ ಅಮೆರಿಕದಿಂದ ಇಂತಹ ಶಸ್ತ್ರಾಸ್ತ್ರ ಪಡೆಯಲಿರುವ ಮೊದಲ ರಾಷ್ಟ್ರ ಭಾರತವಾಗಲಿದೆ.
  • ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿ ಅವಧಿಯಲ್ಲಿಸೇನಾ ಒಪ್ಪಂದ ಏರ್ಪಡಲಿರುವ ಎರಡು ಮುಖ್ಯ ವಹಿವಾಟಿನಲ್ಲಿಪ್ರಿಡೇಟರ್ ಖರೀದಿಯೂ ಒಂದಾಗಿದೆ.
  • ಈ ಪ್ರಸ್ತಾವದ ಪ್ರಕಾರ, ನೌಕಾಪಡೆಗೆ ಇಂತಹ 14 ಶಸ್ತ್ರಸಜ್ಜಿತ ಡ್ರೋನ್, ವಾಯುಪಡೆ ಮತ್ತು ಸೇನೆಗೆ ತಲಾ 8 ಡ್ರೋನ್ ಪಡೆಯಲಿವೆ. ಭಾರತ ನೌಕಾಪಡೆಯು ಪ್ರಸ್ತುತ ಎರಡು ಶಸ್ತ್ರಾಸ್ತ್ರ ರಹಿತ ಕಡಲು ಕಣ್ಗಾವಲು ಡ್ರೋನ್ಗಳನ್ನು ಗಸ್ತು ಚಟುವಟಿಕೆಗೆ ಬಳಸುತ್ತಿದೆ. ಇವುಗಳನ್ನೂ ಜನಲರ್ ಆಟೊಮಿಕ್ಸ್ ಸಂಸ್ಥೆಯಿಂದ ಗುತ್ತಿಗೆ ಆಧಾರದಲ್ಲಿಪಡೆಯಲಾಗಿದೆ. ಇವುಗಳನ್ನು ಇತ್ತೀಚೆಗೆ ಎಲ್ಎಸಿಯಲ್ಲಿ ಕಣ್ಗಾವಲಿಗೆ ಬಳಸಿ ಕೊಳ್ಳಲಾಗಿತ್ತು.

ಉದ್ದೇಶ 

  • ಹಿಂದೂ ಮಹಾಸಾಗರ ವಲಯದಲ್ಲಿ ಚೀನಾದ ಪ್ರಾಬಲ್ಯ ಹೆಚ್ಚಾಗುತ್ತಿದೆ ಎಂಬ ಬೆಳವಣಿಗೆಯ ಹಿನ್ನೆಲೆಯಲ್ಲಿಇದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.  ಹಿಂದೂ ಮಹಾಸಾಗರದಾಳದಲ್ಲಿ ಮತ್ತು ಭಾರತ-ಚೀನ ನಡುವಣ ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಕಣ್ಗಾವಲನ್ನು ಹೆಚ್ಚಿಸಲು ಇವುಗಳನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.

ಡ್ರೋನ್ನ ವಿವರ

  • ಪ್ರಿಡೇಟರ್ ಡ್ರೋನ್ಗಳು ಕ್ಷಿಪಣಿಗಳು, ಸ್ಮಾರ್ಟ್‌ ಬಾಂಬ್ಗಳನ್ನು ಹೊತ್ತೂಯ್ಯುವುದಲ್ಲದೆ ನಿರ್ದಿಷ್ಟ ಗುರಿಯ ಮೇಲೆ ಅತ್ಯಂತ ನಿಖರ ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ. ಯಾವುದೇ ಹವಾಮಾನ ಪರಿಸ್ಥಿತಿಯಲ್ಲೂ ಸಮುದ್ರದಲ್ಲಿ 5,500 ನಾಟಿಕಲ್ ಮೈಲುಗಳ ವ್ಯಾಪ್ತಿವರೆಗೆ 35 ಗಂಟೆಗಳಿಗೂ ಅಧಿಕ ಕಾಲ ಹಾರಾಡುವ ಶಕ್ತಿ ಹೊಂದಿರಲಿವೆ. ಸುಮಾರು 450 ಕೆ.ಜಿ. ತೂಕದ ನಾಲ್ಕು ಕ್ಷಿಪಣಿಗಳನ್ನು ಒಯ್ಯಬಹುದಾಗಿದೆ.
  • ಶತ್ರು ರಾಷ್ಟ್ರಗಳ ವಿರುದ್ಧದ ಕಾರ್ಯಾಚರಣೆ, ಕಡಲ್ಗಳ್ಳರ ಪತ್ತೆ, ಮಾದಕ ವಸ್ತು ದಂಧೆಕೋರರ ವಿರುದ್ಧ ನಿಗಾ ಸಹಿತ ದೇಶ ವಿರೋಧಿ ಕೃತ್ಯ ಎಸಗುವವರ ಮೇಲೆ ಹದ್ದುಗಣ್ಣು ಇರಿಸಲು ಮತ್ತು ಅಂಥವರನ್ನು ಸದೆಬಡಿಯಲು ಸೇನಾಪಡೆಗಳಿಗೆ ಸಹಾಯಕವಾಗಲಿದೆ. ರಹಸ್ಯ ಕಾರ್ಯಾಚರಣೆಗಳನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಅವನ್ನು ವಿಫಲಗೊಳಿಸಲು ಸೇನಾಪಡೆಗಳಿಗೆ ಅನುಕೂಲವಾಗಲಿದೆ.