Published on: September 30, 2021

ಎತ್ತಿನಹೊಳೆ ಯೋಜನೆ

ಎತ್ತಿನಹೊಳೆ ಯೋಜನೆ

ಸುದ್ಧಿಯಲ್ಲಿ ಏಕಿದೆ? ವಿವಾದಿತ ಎತ್ತಿನಹೊಳೆ ಯೋಜನೆಗಾಗಿ ಈವರೆಗೆ 20,185 ಮರಗಳ ಮಾರಣಹೋಮ ನಡೆದಿದೆ. ಯೋಜನೆಗಳ ಹೆಸರಿನಲ್ಲಿ ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟಕ್ಕೆ ಕೊಡಲಿ ಏಟು ಹಾಕುತ್ತಿರುವ ಸರ್ಕಾರದ ನಡೆಯನ್ನು ಪರಿಸರವಾದಿಗಳು ಖಂಡಿಸಿದ್ದಾರೆ.

  • ಬಯಲು ಸೀಮೆಯ ಜನರಿಗೆ ಕುಡಿಯುವ ನೀರನ್ನು ಒದಗಿಸುವ ಹಿನ್ನೆಲೆಯಲ್ಲಿ ಎತ್ತಿನಹೊಳೆ ಯೋಜನೆಯನ್ನು ಆರಂಭಿಸಲಾಗಿದೆ. ಈ ಯೋಜನೆಗೆ ಆರಂಭದಲ್ಲೇ ವ್ಯಾಪಕ ವಿರೋಧಗಳು ಎದುರಾಗಿದ್ದವು. ಆದರೆ ವಿರೋಧಗಳ ನಡುವೆಯೇ ಕಾಮಗಾರಿ ನಡೆಯುತ್ತಿದೆ. 8000 ಕೋಟಿಯಿಂದ ಆರಂಭವಾದ ಈ ಯೋಜನೆ ವೆಚ್ಚ ಇದೀಗ 23,000 ಕೋಟಿಗೆ ತಲುಪಿದೆ.

ಪರಿಹಾರಾತ್ಮಕವಾಗಿ ನೆಡುತೋಪು!

  • ಇನ್ನು ಯೋಜನೆಗಾಗಿ ಮರಗಳ ಮಾರಣಹೋಮಕ್ಕೆ ಪರಿಹಾರವಾಗಿ ನೆಡುತೋಪುಗಳನ್ನು ಬೆಳೆಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಕಡಿತ ಮಾಡಿದ ಮರಗಳ ಬದಲಿಗೆ 28 ಹೆಕ್ಟೇರ್‌ ಅರಣ್ಯ ಭೂಮಿಯಲ್ಲಿ ಪರಿಹಾರಾತ್ಮಕವಾಗಿ ನೆಡುತೋಪು ಬೆಳೆಸಲಾಗಿದೆ. ಹಾಗೂ 40 ಹೆಕ್ಟೇರ್‌ ಅರಣ್ಯ ಪ್ರದೇಶದಲ್ಲಿ ಪೀನಲ್ ಪರಿಹಾರಾತ್ಮಕ ನೆಡುತೋಪು ನೆಡಲಾಗಿದೆ.ಇದಕ್ಕಾಗಿ 2020-21 ನೇ ಸಾಲಿನ ಅಂತ್ಯದ ವರೆಗೆ 32.16 ಲಕ್ಷ ಹಾಗೂ 37.66 ಲಕ್ಷ ವೆಚ್ಛ ಭರಿಸಲಾಗಿದೆ ಎಂದು ತಿಳಿಸಿದೆ.

ಏನಿದು ಎತ್ತಿನ ಹೊಳೆ ಯೋಜನೆ?

  • ಎತ್ತಿನಹೊಳೆ ಯೋಜನೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಯೋಜನೆಯಾಗಿದೆ‌. ಬಯಲು ಸೀಮೆಗಳಾದ ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಲಾಗಿದೆ.
  • ಸಿದ್ಧರಾಮಯ್ಯ ಸರ್ಕಾರದ ಅವಧಿಯಲ್ಲಿ ಯೋಜನೆ ಜಾರಿಗೊಂಡಿದ್ದು ಈವರೆಗೂ ಪೂರ್ಣಗೊಂಡಿಲ್ಲ. ಯೋಜನೆ ಪುರ್ಣಗೊಂಡಲ್ಲಿ 24 ಟಿಎಂಸಿ ನೀರು ಸಿಗುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ವಿಜ್ಞಾನಿಗಳು ಕೇವಲ 8 ಟಿಎಂಸಿ ನೀರು ಸಿಗುತ್ತದೆ ಎಂದು ವರದಿ ನೀಡಿದ್ದಾರೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿ ನಡೆಯುತ್ತಿದ್ದು ಶೇ,40 ರಷ್ಟು ಕಾಮಗಾರಿ ಮುಗಿದಿಲ್ಲ.