Published on: May 21, 2023
‘ಎನರ್ಜಿ ಟ್ರಾನ್ಸಿಟಿಷನ್ ಅಡ್ವೈಸರಿ ಕಮಿಟಿ’ಯ ಶಿಫಾರಸುಗಳು
‘ಎನರ್ಜಿ ಟ್ರಾನ್ಸಿಟಿಷನ್ ಅಡ್ವೈಸರಿ ಕಮಿಟಿ’ಯ ಶಿಫಾರಸುಗಳು
ಸುದ್ದಿಯಲ್ಲಿ ಏಕಿದೆ? 10 ಲಕ್ಷಕ್ಕೂ ಅಧಿಕ ಜನಸಂಖ್ಯೆಯುಳ್ಳ ನಗರಗಳಲ್ಲಿ ಡೀಸೆಲ್ ಚಾಲಿತ ನಾಲ್ಕು ಚಕ್ರಗಳ ವಾಹನವನ್ನು 2027ರ ಹೊತ್ತಿಗೆ ನಿಷೇಧಿಸುವಂತೆ ತೈಲ ಸಚಿವಾಲಯದ ಸಮಿತಿಯು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ.
ಮುಖ್ಯಾಂಶಗಳು
- ಪೆಟ್ರೋಲಿಯಂ ಮತ್ತು ನೈಸಗಿರ್ಕ ಅನಿಲ ಸಚಿವಾಲಯದ ಕಾರ್ಯದರ್ಶಿ ತರುಣ್ ಕಪೂರ್ ನೇತೃತ್ವದ ‘ಎನರ್ಜಿ ಟ್ರಾನ್ಸಿಟಿಷನ್ ಅಡ್ವೈಸರಿ ಕಮಿಟಿ’ಯು ಇಂಥಹದ್ದೊಂದು ಮಹತ್ವದ ಶಿಫಾರಸನ್ನು ಕೇಂದ್ರ ಸರಕಾರಕ್ಕೆ ಮಾಡಿದೆ.
ಉದ್ದೇಶ: ಇಂಗಾಲಾಮ್ಲ ಹೊರಸೂಸುವಿಕೆ ಪ್ರಮಾಣ ತಗ್ಗಿಸುವ ಉದ್ದೇಶದಿಂದ ಇಂಥಹದ್ದೊಂದು ಶಿಫಾರಸು ಮಾಡಿದೆ. ಇದು ಕಾರ್ಯಗತಗೊಂಡಲ್ಲಿ ಇನ್ನೂ 5 ವರ್ಷಗಳ ನಂತರ ನಾಲ್ಕು ಚಕ್ರಗಳ ಡಿಸೇಲ್ ಚಾಲಿತ ವಾಹನಗಳ ಬದಲಾಗಿ, ಅವುಗಳ ಸ್ಥಾನದಲ್ಲಿ ಎಲೆಕ್ಟ್ರಿಕ್ ಇಲ್ಲವೇ ಸಿಎನ್‌ಜಿ ಚಾಲಿತ ವಾಹನಗಳು ಬರಲಿವೆ.
ಸಮಿತಿಯ ಇತರ ಶಿಫಾರಸುಗಳು
- ತರುಣ್ ಕಪೂರ್ ನೇತೃತ್ವದ ಸಮಿತಿಯು 2035ರ ವೇಳೆಗೆ ಇಂಟರ್ನಲ್ ಕಂಬಷನ್ ಎಂಜಿನ್‌ಗಳನ್ನು ಹೊಂದಿರುವ ಮೋಟಾರ್‌ಸೈಕಲ್, ಸ್ಕೂಟರ್, ತ್ರಿಚಕ್ರ ವಾಹನ ಅಥವಾ ಟ್ರಕ್‌ಗಳನ್ನು ಹಂತಹಂತವಾಗಿ ನಿಲ್ಲಿಸುವಂತೆ ಸೂಚಿಸಿದೆ. ಸುಮಾರು 10 ವರ್ಷಗಳಲ್ಲಿ ನಗರ ಪ್ರದೇಶಗಳಲ್ಲಿ ಯಾವುದೇ ಡೀಸೆಲ್ ಚಾಲಿತ ಸಿಟಿ ಬಸ್‌ಗಳನ್ನು ಹೊಸದಾಗಿ ಸೇರಿಸಬಾರದು. ಅದರ ಬದಲು ಎಲೆಕ್ಟ್ರಿಕ್ ಬಸ್‌ಗಳಿಗೆ ಒತ್ತು ನೀಡಬೇಕು.
- ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳ ತ್ವರಿತ ಅಳವಡಿಕೆ ಮತ್ತು ಉತ್ಪಾದನೆ ಯೋಜನೆಯಡಿ (ಎಫ್‌ಎಎಂಇ) ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ನೀಡುತ್ತಿರುವ ಪ್ರೋತ್ಸಾಹಕ ಕ್ರಮಗಳನ್ನು ಸರಕಾರ ವಿಸ್ತರಿಸಬೇಕು.
- ಪ್ರಯಾಣಿಕ ಕಾರುಗಳು ಮತ್ತು ಟ್ಯಾಕ್ಸಿಗಳು ಸೇರಿ ನಾಲ್ಕು-ಚಕ್ರ ವಾಹನಗಳನ್ನು ಭಾಗಶಃ ಎಲೆಕ್ಟ್ರಿಕ್‌ಗೆ ಮತ್ತು ಭಾಗಶಃ ಎಥೆನಾಲ್ ಮಿಶ್ರಿತ ಪೆಟ್ರೋಲ್‌ಗೆ ಬದಲಿಸಬೇಕು. ಈ ಪ್ರಮಾಣ 50:50 ಅನುಪಾತದಲ್ಲಿರಬೇಕು.
- 2024ರಿಂದ ನಗರಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ನೋಂದಣಿಗೆ ಹೆಚ್ಚು ಉತ್ತೇಜನ ನೀಡಬೇಕು. ಸರಕುಗಳ ಸಾಗಣೆಗೆ ವಿದ್ಯುತ್ ಮಾರ್ಗದ ರೈಲು ಹಾಗೂ ಗ್ಯಾಸ್ ಪವರ್ಡ್ ಟ್ರಕ್‌ಗಳ ಬಳಕೆಗೆ ಒತ್ತುಕೊಡಬೇಕು.
2040ಕ್ಕೆ ಪೆಟ್ರೋಲ್/ಡೀಸೆಲ್ ಬಳಕೆ ತೀವ್ರ
- ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಒತ್ತುಕೊಡದಿದ್ದರೆ 2040ರ ಹೊತ್ತಿಗೆ ಭಾರತದಲ್ಲಿ ಪೆಟ್ರೋಲ್ / ಡೀಸೆಲ್ ಬೇಡಿಕೆ ತೀವ್ರವಾಗಲಿದೆ. ಅಲ್ಲದೇ ಅಡುಗೆ ಪದ್ಧತಿಯಲ್ಲಿ ಎಲೆಕ್ಟ್ರಿಕ್ ಪರಿಕರಗಳ ಬಳಕೆಯನ್ನು ಉತ್ತೇಜಿಸದಿದ್ದರೆ 2030ರ ಹೊತ್ತಿಗೆ ಎಲ್‌ಪಿಜಿ ಬೇಡಿಕೆಯೂ ಹೆಚ್ಚಲಿದೆ ಎಂದು ಸಮಿತಿಯು ಪರೋಕ್ಷವಾಗಿ ಎಚ್ಚರಿಸಿದೆ.