Published on: January 9, 2023

‘ಐಎಸ್‌ಟಿ’ ಕಾಲಮಾನ ಕಡ್ಡಾಯ

‘ಐಎಸ್‌ಟಿ’ ಕಾಲಮಾನ ಕಡ್ಡಾಯ

ಸುದ್ದಿಯಲ್ಲಿ ಏಕಿದೆ? ದೇಶಾದ್ಯಂತ ಎಲ್ಲಾ ವಲಯಗಳಾದ್ಯಂತ ‘ಇಂಡಿಯನ್‌ ಸ್ಟ್ಯಾಂಡರ್ಡ್‌ ಟೈಮ್‌'(ಐಎಸ್‌ಟಿ) ಕಾಲಮಾನವನ್ನು ಕಡ್ಡಾಯಗೊಳಿಸಲು ಕೇಂದ್ರ ಸರಕಾರ ಮುಂದಾಗಿದ್ದು, ಇದಕ್ಕಾಗಿ ಪ್ರತ್ಯೇಕ ನೀತಿಯೊಂದನ್ನು ಹೊರತರಲಿದೆ.

ಮುಖ್ಯಾಂಶಗಳು

  • ಪ್ರಸ್ತುತ ‘ಐಎಸ್‌ಟಿ’ ಕಾಲಮಾನ ಕಡ್ಡಾಯವಲ್ಲ. ಹೀಗಾಗಿ ನೆಟ್‌ವರ್ಕ್‌ಗಳಲ್ಲಿ ‘ಗ್ಲೋಬಲ್‌ ನ್ಯಾವಿಗೇಶನ್‌ ಸ್ಯಾಟೆಲೈಟ್‌ ಸಿಸ್ಟಮ್‌’ (ಜಿಎನ್‌ಎಸ್‌ಎಸ್‌) ಸೇರಿದಂತೆ ಇತರೆ ಮೂಲಗಳ ಕಾಲಮಾನವನ್ನು ತಮ್ಮ ಸರ್ವರ್‌ಗಳಲ್ಲಿ ಅನುಸಂಧಾನ ಮಾಡಲಾಗುತ್ತಿದೆ.

ಯೋಜನೆಯ ಜಾರಿ:  ಕೇಂದ್ರದ ಗ್ರಾಹಕ ವ್ಯವಹಾರಗಳ ಸಚಿವಾಲಯ

ಸಹಯೋಗ : ನಿರ್ದಿಷ್ಟ ‘ಐಎಸ್‌ಟಿ’ ಕಾಲಮಾನವನ್ನು ಸೃಷ್ಟಿಸಲು ಮತ್ತು ಪ್ರಸಾರ ಮಾಡಲು ‘ರಾಷ್ಟ್ರೀಯ ಭೌತಿಕ ಪ್ರಯೋಗಾಲಯ'(ಎನ್‌ಎಲ್‌ಪಿ) ಮತ್ತು ‘ಇಸ್ರೊ’ ಜತೆ ಸಹಯೋಗದೊಂದಿಗೆ ಯೋಜನೆಯೊಂದನ್ನು ರೂಪಿಸುತ್ತಿದೆ.

ಉದ್ದೇಶ

  • ಇದು ಜಾರಿಯಾದಲ್ಲಿ ಟೆಲಿಕಾಂ ಸೇವಾ ಪೂರೈಕೆದಾರರು, ಇಂಟರ್ನೆಟ್‌ ಸೇವಾ ಪೂರೈಕೆದಾರರು, ಪವರ್‌ಗ್ರಿಡ್‌ಗಳು, ಬ್ಯಾಂಕ್‌ಗಳು, ಸ್ಟಾಕ್‌ ಎಕ್ಸ್‌ಚೇಂಜ್‌ ಇತ್ಯಾದಿ ಎಲ್ಲೆಡೆ ಒಂದೇ ಕಾಲಮಾನ ಇರಲಿದೆ. ಎಲ್ಲಾ ಸಂಪರ್ಕ ಜಾಲಗಳು ಮತ್ತು ಕಂಪ್ಯೂಟರ್‌ಗಳನ್ನು ‘ಐಎಸ್‌ಟಿ’ ಕಾಲಮಾನದೊಂದಿಗೆ ಅನುಸಂಧಾನ (ಸಿಂಕ್ರೊನೈಸ್‌) ಮಾಡುವುದರಿಂದ ಸಮಯದ ವ್ಯತ್ಯಾಸ ನಿವಾರಣೆಯಾಗಲಿದೆ.
  • ಎನ್‌ಪಿಎಲ್‌ ಮತ್ತು ಇಸ್ರೋ ಜತೆಗಿನ ಸಹಯೋಗದ ಒಪ್ಪಂದದ ಮೂಲಕ, ದೇಶಾದ್ಯಂತ ಐದು ಸ್ಥಳಗಳಿಂದ ವಿವಿಧ ಟೆಲಿಕಾಂ ಆಪರೇಟರ್‌ಗಳು, ಹಣಕಾಸು ಸಂಸ್ಥೆಗಳು, ಡೇಟಾ ಸೆಂಟರ್‌ಗಳು, ಜನಸಾಮಾನ್ಯ ಜನರು ಇತ್ಯಾದಿಗಳಿಗೆ ನಿಖರವಾದ ‘ಐಎಸ್‌ಟಿ’ ಕಾಲಮಾನ ಒದಗಿಸಲು ತಂತ್ರಜ್ಞಾನವನ್ನು ರೂಪಿಸಲು ಉದ್ದೇಶಿಸಲಾಗಿದೆ.

ರಾಷ್ಟ್ರೀಯ ಭದ್ರತೆ ಹೇಗೆ ಮಹತ್ವವಾಗಲಿದೆ?

  • ”ದೇಶದಲ್ಲಿರುವ ಎಲ್ಲಾ ಸಂಪರ್ಕ ಜಾಲಗಳು ಮತ್ತು ಕಂಪ್ಯೂಟರ್‌ಗಳು, ರಾಷ್ಟ್ರೀಯ ಭದ್ರತೆಯಂತಹ ಮಹತ್ವದ ವಲಯಗಳಲ್ಲಿನ ‘ರಿಯಲ್‌ ಟೈಮ್‌’ ತಂತ್ರಾಂಶಗಳನ್ನು ರಾಷ್ಟ್ರೀಯ ಕಾಲಮಾನದೊಂದಿಗೆ ಅನುಸಂಧಾನಗೊಳಿಸುವುದು ಅತ್ಯಗತ್ಯವಾಗಿದೆ. ಇದರ ಅನುಷ್ಠಾನದ ಬಳಿಕ ಕಾಲಮಾನ ಲೋಪಗಳು ನಿವಾರಣೆಯಾಗಲಿದ್ದು, ದೇಶದ ಭದ್ರತೆ ಹೆಚ್ಚಳಕ್ಕೆ ಸಹಾಯಕವಾಗಲಿದೆ”.

ಬೆಂಗಳೂರಿನಲ್ಲೂ ಕೇಂದ್ರ

  • ‘ಐಎಸ್‌ಟಿ’ ಕಾಲಮಾನ ಕೇಂದ್ರ ಸ್ಥಾಪನೆಯ ಉದ್ದೇಶಿತ ನಗರಗಳಲ್ಲಿ ಬೆಂಗಳೂರು ಸಹ ಸೇರಿದೆ. ಉಳಿದಂತೆ ಭುವನೇಶ್ವರ, ಫರೀದಾಬಾದ್‌, ಗುವಾಹಟಿ ಮತ್ತು ಅಹಮದಾಬಾದ್‌ ಈ ಪಟ್ಟಿಯಲ್ಲಿವೆ.

ಅನುಕೂಲಗಳು

  • ದೇಶದ ಭದ್ರತೆಯಂತಹ ವ್ಯೂಹಾತ್ಮಕ ಹಾಗೂ ವ್ಯೂಹಾತ್ಮಕವಲ್ಲದ ವಲಯಗಳಾದ ನ್ಯಾವಿಗೇಷನ್‌, ದೂರಸಂಪರ್ಕ, ಇಂಟರ್ನೆಟ್‌, ಪವರ್‌ ಗ್ರಿಡ್‌, ಬ್ಯಾಂಕಿಂಗ್‌, ಡಿಜಿಟಲ್‌ ಆಡಳಿತ, ಸಾರಿಗೆ ವ್ಯವಸ್ಥೆ, ಹಣಕಾಸು ವಹಿವಾಟು, ಸೈಬರ್‌ ವ್ಯವಸ್ಥೆ, ಕೃತಕ ಬುದ್ಧಿಮತ್ತೆ ಮುಂತಾದವುಗಳಿಗೆ ನಿಖರ ಕಾಲಮಾನವು ಅತ್ಯಗತ್ಯವಾಗಿದೆ.
  • ಮೂಲ ಭೌತಿಕ ನಿಯತಾಂಕಗಳ ಅಳತೆಯಂತಹ ಅತ್ಯುನ್ನತ ವೈಜ್ಞಾನಿಕ ಸಂಶೋಧನೆ, ಗುರುತ್ವಾಕರ್ಷಣೆ ಅಲೆಗಳ ಪತ್ತೆ, ರೇಡಿಯೊ ಟೆಲಿಸ್ಕೋಪ್‌, ಆಳ-ಅಂತರಿಕ್ಷ ಪಥನಿರ್ದೇಶನ ಮುಂತಾದ ಉದ್ದೇಶಗಳಿಗೆ ನ್ಯಾನೊ ಸೆಕೆಂಡ್‌ ಕೂಡಾ ವ್ಯತ್ಯಾಸವಿಲ್ಲದ ನಿಖರ ಕಾಲಮಾನವು ಅತ್ಯಗತ್ಯವಾಗಿದೆ.
  • ‘ಐಎಸ್‌ಟಿ’ ಅನುಸಂಧಾನ ಅನುಷ್ಠಾನದಿಂದ ಅತ್ಯಂತ ಸೂಕ್ಷ್ಮ ಕಾಲಮಾನ ವ್ಯತ್ಯಾಸಗಳೂ ನಿವಾರಣೆಯಾಗಲಿವೆ.

‘ಐಎಸ್‌ಟಿ’ ಕಾಲಮಾನ

ಭಾರತ ಸಮಯ ವಲಯವು, ಉತ್ತರಪ್ರದೇಶದ ಮಿರ್ಜಾಪುರದ ಮೂಲಕ ಹಾದುಹೋಗುವ 82.5 ಡಿಗ್ರಿ ಪೂರ್ವ ರೇಖಾಂಶವನ್ನು ಆಧರಿಸಿದೆ. ಭಾರತೀಯ ಕಾಲಮಾನವು, ಪ್ರಧಾನ ಮಧ್ಯಾಹ್ನ ರೇಖೆಯನ್ನು ಆಧರಿಸಿದ ‘ಪರಸ್ಪರ ಹೊಂದಾಣಿಕೆಯ ಸಾರ್ವತ್ರಿಕ ಕಾಲ’ಕ್ಕಿಂ ತ (ಯುಟಿಸಿ–ಕೊಆರ್ಡಿನೇಟೆಡ್ ಯುನಿವರ್ಸಲ್ ಟೈಮ್) 5 ಗಂಟೆ 30 ನಿಮಿಷಗಳಷ್ಟು ಮುಂದಿದೆ. ಇದನ್ನು ಭಾರತೀಯ ಕಾಲಮಾನ (ಐಎಸ್ಟಿ–ಇಂಡಿಯನ್ ಸ್ಟ್ಯಾಂ ಡರ್ಡ್ ಟೈಮ್) ಎಂದು ವ್ಯಾಖ್ಯಾನಿಸಲಾಗಿದೆ. 1947ರಲ್ಲಿ ಸ್ವಾತಂತ್ರ್ಯ ದೊರೆತಾಗಿನಿಂದ ದೇಶದ ಅಧಿಕೃತ ಸಮಯ ಇದೇ ಆಗಿದೆ.