Published on: December 26, 2022
ಕನ್ನಡಿಗರಿಗೆ ಹುದ್ದೆ ಮೀಸಲು
ಕನ್ನಡಿಗರಿಗೆ ಹುದ್ದೆ ಮೀಸಲು
ಸುದ್ದಿಯಲ್ಲಿ ಏಕಿದೆ? ರಾಜ್ಯದಲ್ಲಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲ ಇಲಾಖೆಗಳಲ್ಲಿ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿನ ಸಿ ಮತ್ತು ಡಿ ದರ್ಜೆ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಬೇಕೆಂಬ ಖಾಸಗಿ ನಿರ್ಣಯವನ್ನು ವಿಧಾನಪರಿಷತ್ತಿನಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.
ಮುಖ್ಯಾಂಶಗಳು
- ಕೇಂದ್ರ ಸರ್ಕಾರದಲ್ಲಿನ ಶೇ.80ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡುವ ಸಂಬಂಧ ಡಾ. ಸರೋಜಿನಿ ಮಹಿಷಿ ಅವರು ನೀಡಿದ ವರದಿ ದಶಕಗಳು ಕಳೆದರೂ ಜಾರಿಗೆ ಬಂದಿಲ್ಲ ಎಂದು ಖಾಸಗಿ ನಿರ್ಣಯ ಪ್ರಸ್ತಾಪದಲ್ಲಿ ಮನದಟ್ಟು ಮಾಡಲಾಗಿದೆ.
ಸರೋಜಿನಿ ಮಹಿಷಿ ವರದಿ
- ರಾಜ್ಯದ ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ತಯಾರಿಸಲಾದ ವರದಿಯಿದು. ಕರ್ನಾಟಕದ ಸಾರ್ವಜನಿಕ ವಲಯ ಸಂಸ್ಥೆಗಳು, ಖಾಸಗಿ ಮತ್ತು ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗಗಳಲ್ಲಿ ನಿರ್ದಿಷ್ಟ ಶೇಕಡಾವಾರು ಮೀಸಲಾತಿಯನ್ನು ಕನ್ನಡಿಗರಿಗೆ ಮಾತ್ರ ನೀಡಬೇಕೆಂದು ಸರೋಜಿನಿ ಮಹಿಷಿ ಸಮಿತಿ ಶಿಫಾರಸು ಮಾಡಿದೆ.
- ಕೇಂದ್ರದ ಮಾಜಿ ಸಚಿವೆ ಸರೋಜಿನಿ ಮಹಿಷಿ ನೇತೃತ್ವದ ಸಮಿತಿ 1984ರಲ್ಲಿ ತನ್ನ ವರದಿಯನ್ನು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿತ್ತು.
ಸರೋಜಿನಿ ಮಹಿಷಿ ವರದಿಯ ಪ್ರಮುಖ ಶಿಫಾರಸುಗಳು:
- ಕರ್ನಾಟಕದಲ್ಲಿ ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕೆಂದು ಶಿಫಾರಸು ಮಾಡಿದ್ದ ಸರೋಜಿನಿ ಮಹಿಷಿ ವರದಿ 58 ಶಿಫಾರಸುಗಳನ್ನು ಸರ್ಕಾರದ ಮುಂದಿಟ್ಟಿತು.
ಕರ್ನಾಟಕದಲ್ಲಿರುವ ಎಲ್ಲಾ ಸಾರ್ವಜನಿಕ ವಲಯ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಶೇಕಡಾ 100ರಷ್ಟು ಮೀಸಲಾತಿ. - ಕೇಂದ್ರ ಸರ್ಕಾರಿ ಇಲಾಖೆಗಳು ಮತ್ತು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ವಲಯ ಘಟಕಗಳ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಯನ್ನು ಕೇವಲ ಕನ್ನಡಿಗರಿಗೆ ಮಾತ್ರ ನೀಡಬೇಕು.
- ಕರ್ನಾಟಕದಲ್ಲಿ ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಮತ್ತು ಸಾರ್ವಜನಿಕ ವಲಯ ಘಟಕಗಳಲ್ಲಿ ಗ್ರೂಪ್ ಬಿ ಮತ್ತು ಗ್ರೂಪ್ ಎ ಹುದ್ದೆಗಳಲ್ಲಿ ಕ್ರಮವಾಗಿ ಶೇಕಡಾ 80ರಷ್ಟು ಮತ್ತು ಶೇಕಡಾ 65ರಷ್ಟು ಕನ್ನಡಿಗರಿಗೆ ಮೀಸಲು ಇಡಬೇಕು.
- ರಾಜ್ಯದ ಕೈಗಾರಿಕಾ ಘಟಕಗಳಲ್ಲಿ ಖಾಸಗಿ ಅಧಿಕಾರಿ ಹುದ್ದೆಗಳನ್ನು ಕನ್ನಡಿಗರಿಗೇ ಕೊಡಬೇಕು.
ಕೈಗಾರಿಕೆಗಳಲ್ಲಿ ಸ್ಥಳೀಯ ಜನರಿಗೆ ಪ್ರಾಧಾನ್ಯತೆ ಕೊಡಬೇಕು.
ಸರೋಜಿನಿ ಬಿಂದುರಾವ್ ಮಹಿಷಿ
- ಮಹಿಷಿ ಸಮಿತಿಯ ಮುಖ್ಯಸ್ಥೆ ಸರೋಜಿನಿ ಬಿಂದುರಾವ್ ಮಹಿಷಿ ಅವರನ್ನು ನೇಮಿಸಿದ್ದೇ ಕರ್ನಾಟಕ ಸರ್ಕಾರ. ಕರ್ನಾಟಕದ ಮೊದಲ ಮಹಿಳಾ ಸಂಸದೆ ಎಂಬ ಹೆಗ್ಗಳಿಕೆ ಇವರದ್ದು. ಧಾರವಾಡ ಉತ್ತರ ಕ್ಷೇತ್ರವನ್ನು 1962ರಿಂದ 1980ರ ಅವಧಿಯಲ್ಲಿ ನಾಲ್ಕು ಬಾರಿ ಪ್ರತಿನಿಧಿಸಿದ್ದರು. ಜನತಾ ಪಕ್ಷದಿಂದ ರಾಜ್ಯಸಭೆಗೆ ಕೂಡ ಆಯ್ಕೆಯಾಗಿದ್ದರು.