Published on: March 2, 2023

ಕರ್ನಾಟಕದ ‘ಸಂಸ್ಕೃತ ಗ್ರಾಮ’

ಕರ್ನಾಟಕದ ‘ಸಂಸ್ಕೃತ ಗ್ರಾಮ’


ಸುದ್ದಿಯಲ್ಲಿ ಏಕಿದೆ? ಅಭಿಜಾತ ಭಾಷೆ ಸಂಸ್ಕೃತದ ಮೂಲಕವೇ ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಈ ಗ್ರಾಮವೇ ಮತ್ತೂರು.  ಏಕೈಕ ಸಂಸ್ಕೃತ ಮಾತನಾಡುವ ಗ್ರಾಮವಿದು. ಇಲ್ಲಿನ ರೈಲ್ವೆ ನಿಲ್ದಾಣದ ನಾಮಫಲಕದಲ್ಲಿ ತ್ರಿಭಾಷಾ (ಕನ್ನಡ, ಇಂಗ್ಲಿಷ್, ಹಿಂದಿ)ಜೊತೆಗೆ ಸಂಸ್ಕೃತವನ್ನು ಸೇರಿಸಲಾಗಿದ್ದು ಈ ಮೂಲಕ ಸಂಸ್ಕೃತ ಗ್ರಾಮಕ್ಕೆ ನೈರುತ್ಯ ರೈಲ್ವೆ ವಿಶೇಷ ಗೌರವ ಸಲ್ಲಿಸಿದೆ


ಮುಖ್ಯಾಂಶಗಳು

  • ತುಂಗಾ ನದಿಯ ದಡದಲ್ಲಿರುವ ಈ ಮತ್ತೂರು ಗ್ರಾಮವು ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿದೆ. ಇದನ್ನು ಮಥೂರು ಎಂದು ಕೂಡ ಕರೆಯುತ್ತಾರೆ.
  • ಈ ಪುಟ್ಟ ಗ್ರಾಮದಲ್ಲಿ ವೇದಗಳು ಮತ್ತು ವೇದಗಳಿಗೆ ಸಂಬಂಧಪಟ್ಟ ಮಹತ್ವಪೂರ್ಣ ಅಧ್ಯಯನವನ್ನು ಕಲಿಸಿಕೊಡಲಾಗುತ್ತದೆ.
  • ಇಲ್ಲಿನ ವೇದಾಂತ ಶಾಲೆಯನ್ನು ಹೊಳೆನರಸಿಪುರ ದತ್ತಿಯ ಸಹಯೋಗದೊಂದಿಗೆ ನಡೆಸಲಾಗುತ್ತಿದೆ. ಮುಖ್ಯವಾಗಿ ಶಂಕರ ವೇದಾಂತವನ್ನು ಬೋಧಿಸುವ ಬೆರಳಣಿಕೆಯ ಶಾಲೆಗಳಲ್ಲಿ ಇದು ಕೂಡ ಒಂದಾಗಿದೆ.
  • 1982 ರಲ್ಲಿ ಉಡುಪಿಯ ಪೇಜಾವರ ಮಠದ ಮಠಾಧೀಶರಾದ ವಿಶ್ವೇಶ ತೀರ್ಥರು ಮತ್ತೂರಿಗೆ ಭೇಟಿ ನೀಡಿ, ಗ್ರಾಮವನ್ನು “ಸಂಸ್ಕೃತ ಗ್ರಾಮ” ಎಂದು ನಾಮಕರಣ ಮಾಡಿದಾಗ ಈ ಗಮರ್ನಾಹ ಬದಲಾವಣೆಯಾಯಿತು. ಈ ಗ್ರಾಮವು ಕರ್ನಾಟಕದಾದ್ಯಂತ 30 ಕ್ಕೂ ಸಂಸ್ಕೃತ ಪ್ರಾಧ್ಯಾಪಕರನ್ನು ಉತ್ಪಾದಿಸಿದೆ.

ಗ್ರಾಮದ ಜನರು ಸಂಸ್ಕೃತ ಮಾತನಾಡುವ ಉದ್ದೇಶ

  • ಭಾರತದ ಅಭಿಜಾತ ಭಾಷೆಯಾದ ಸಂಸ್ಕೃತವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮತ್ತೂರು ಗ್ರಾಮ ನೀಡುತ್ತಿರುವ ಕೊಡುಗೆ ಶ್ಲಾಘನೀಯ. ಸಂಸ್ಕೃತ ಭಾಷೆಯನ್ನು ಜನಮಾನಸದಲ್ಲಿ ಉಳಿಸುವ ನಿಟ್ಟಿನಲ್ಲಿ ಇದೊಂದು ಸ್ಫೂರ್ತಿದಾಯಕ ಕಾರ್ಯವಾಗಿದೆ. ವ್ಯವಹಾರಿಕವಾಗಿ ಸಂಸ್ಕೃತ ಭಾಷೆ ಬೆಳೆಯಬೇಕು ಎಂದು ಗ್ರಾಮದಲ್ಲಿ ವ್ಯಾಪಾರ ವಹಿವಾಟು ಸಹ ಸಂಸ್ಕೃತ ಭಾಷೆಯಲ್ಲೇ ನಡೆಯುತ್ತಿದೆ.

ಗ್ರಾಮದ ವಿಶೇಷಗಳು

  • ಹತ್ತು ದಿನದಲ್ಲೇ ಸಂಸ್ಕೃತ ಕಲಿಯಬೇಕು ಎಂಬ ಆಶಯದಿಂದ ಆರಂಭಗೊಂಡ ಭಾಷಾ ಕಲಿಕಾ ಶಿಬಿರದ ಸ್ಫೂರ್ತಿಯಿಂದ ಕೆಲವೇ ವರ್ಷಗಳಲ್ಲಿ ಇಡೀ ಗ್ರಾಮವೇ ಸಂಸ್ಕೃತ ಮಯವಾಗಿ ಮಾರ್ಪಟ್ಟಿತು.
  • ಮಾತುಕತೆ ಎಲ್ಲವೂ ಸಂಸ್ಕೃತದಲ್ಲೇ ನಡೆಯುತ್ತದೆ.
  • ಗ್ರಾಮದ ಶೇ. 80 ರಷ್ಟು ಜನರು ಸಂಸ್ಕೃತದಲ್ಲೇ ಮಾತನಾಡುತ್ತಾರೆ.
  • ಗ್ರಾಮದ ಬಹುತೇಕ ವಿದ್ಯಾರ್ಥಿಗಳು ಸಂಸ್ಕೃತವನ್ನೇ ಪ್ರಥಮ ಭಾಷೆಯನ್ನಾಗಿ ವ್ಯಾಸಂಗ ಮಾಡಿದ್ದಾರೆ. ಹಲವರು ಸಂಸ್ಕೃತದಲ್ಲೇ ಸ್ನಾತಕೋತ್ತರ ಪದವಿ ಪಡೆದು ಪಿ.ಎಚ್.ಡಿ. ಕೂಡ ಮಾಡಿದ್ದಾರೆ.
  • ಸಂಸ್ಕೃತ ಸಂಶೋಧನ ಕೇಂದ್ರ ಸಹ ಈ ಗ್ರಾಮದಲ್ಲಿ ಇದ್ದು, ಇಲ್ಲಿ ಸಹ ಸಾಕಷ್ಟು ವಿದ್ಯಾರ್ಥಿಗಳು ಸಂಸ್ಕೃತದ ಅಧ್ಯಾಯನ ನಡೆಸುತ್ತಿದ್ದಾರೆ.

ಗ್ರಾಮದ ಇತಿಹಾಸ

  • ಪುರಾತತ್ವ ಇಲಾಖೆಯು ಸಂರಕ್ಷಿಸಿರುವ ತಾಮ್ರದ ಫಲಕದ ಶಾಸನದ ಪ್ರಕಾರ, ಈ ಮತ್ತೂರು ಮತ್ತು ಪಕ್ಕದ ಗ್ರಾಮ ಹೊಸಹಳ್ಳಿ 1512 ರ ವಿಜಯನಗರದ ಚಕ್ರವರ್ತಿಯಿಂದ ಜನರಿಗೆ ಉಡುಗೊರೆಯಾಗಿ ನೀಡಲಾಯಿತು.

ಸಂಸ್ಕೃತ ಭಾಷೆ 

  • ಇಂಡೋ-ಯುರೋಪಿಯನ್ ಭಾಷಾಬಳಗಕ್ಕೆ ಸೇರಿದ ಅತಿ ಪ್ರಾಚೀನ ಭಾಷೆಗಳಲ್ಲಿ ಒಂದು ಮತ್ತು ಭಾರತದ ಶಾಸ್ತ್ರೀಯ ಭಾಷೆ.  ಭಾರತದಲ್ಲಿ ಸಂಸ್ಕೃತ ಭಾಷೆ ಹೊಂದಿರುವ ಸ್ಥಾನವನ್ನು ಯುರೋಪಿನಲ್ಲಿ ಲ್ಯಾಟಿನ್ ಹಾಗೂ ಗ್ರೀಕ್ ಭಾಷೆಗಳು ಹೊಂದಿವೆ. ಇದು ಭಾರತದ 22 ಅಧಿಕೃತ ಭಾಷೆಗಳಲ್ಲಿ ಒಂದು. ಪುರಾತನವಾದ ಭಾರತೀಯ ಸಂಸ್ಕೃತಿ, ವಿಜ್ಞಾನ, ಸಾಹಿತ್ಯ ಮತ್ತು ತತ್ವಶಾಸ್ತ್ರಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದ್ದ ಭಾಷೆ ಸಂಸ್ಕೃತವಾಗಿದೆ. ಅಲ್ಲದೆ, ಇದು ಹಿಂದೂ, ಬೌದ್ಧ ಮತ್ತು ಜೈನ ಧರ್ಮಶಾಸ್ತ್ರಗಳ ಪಾರಂಪರಿಕ ಭಾಷೆ ಕೂಡ ಹೌದು.