Published on: December 6, 2021

ಕಾವೇರಿ ಬ್ಲಾಕ್ಚೈನ್ ಡಿಜಿಟಲ್ ವ್ಯಾಲೆಟ್

ಕಾವೇರಿ ಬ್ಲಾಕ್ಚೈನ್ ಡಿಜಿಟಲ್ ವ್ಯಾಲೆಟ್

ಸುದ್ಧಿಯಲ್ಲಿ ಏಕಿದೆ? ರಾಜ್ಯದ ಆಸ್ತಿ ಮಾಲೀಕರು ತಮ್ಮ ಪ್ರಾಪರ್ಟಿ ದಾಖಲೆಗಳನ್ನು ಸುಲಭವಾಗಿ, ಸುಭದ್ರವಾಗಿ ಸಂಗ್ರಹಿಸಿಡಲು ನೆರವಾಗುವ ಬ್ಲಾಕ್‌ಚೈನ್‌ ತಂತ್ರಜ್ಞಾನ ಆಧರಿತ ‘ಸ್ಮಾರ್ಟ್‌ಕಾರ್ಡ್‌’ ಮತ್ತು ‘ಕೀ’ ಹೊಂದಿರುವ ವಿಶೇಷ ಡಿಜಿಟಲ್‌ ವ್ಯಾಲೆಟನ್ನು ರಾಜ್ಯ ಸರಕಾರವು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದೆ.

  • ಐಐಟಿ ಕಾನ್ಪುರದ ಸಹಯೋಗದಲ್ಲಿ ಸೆಂಟರ್‌ ಫಾರ್‌ ಸ್ಮಾರ್ಟ್‌ ಗವರ್ನೆನ್ಸ್‌ (ಸಿಎಸ್‌ಜಿ) ಈ ಪ್ರಾಜೆಕ್ಟ್ ಅಭಿವೃದ್ಧಿಪಡಿಸಿದ್ದು, ಪ್ರಾಜೆಕ್ಟ್‌ಗೆ ‘ಕಾವೇರಿ ಬ್ಲಾಕ್‌ಚೈನ್‌’ ಎಂದು ಹೆಸರಿಡಲಾಗಿದೆ.

ಅನುಕೂಲಗಳು

  • ರಾಜ್ಯದ ಎಲ್ಲಾ ಭೂ ದಾಖಲೆಗಳ ಡಿಜಿಟಲೀಕರಣ ಮತ್ತು ದೃಢೀಕರಣಕ್ಕೆ ನೆರವಾಗುವ ‘ಕಾವೇರಿ ಬ್ಲಾಕ್‌ಚೈನ್‌’ ಭೂಮಾಲೀಕರ ಆಸ್ತಿಗಳಿಗೆ ವಿಶೇಷ ಭದ್ರತೆಯನ್ನೂ ನೀಡಲಿದೆ. ಪ್ರಾಪರ್ಟಿ ಮಾಲೀಕರು ಡಿಜಿಟಲ್‌ ಕೀ ಅಥವಾ ಪಿನ್‌ ನಂಬರ್‌ ನೀಡದೆ ಇದ್ದರೆ ಈ ಪ್ರಾಪರ್ಟಿ ದಾಖಲೆಗಳಲ್ಲಿ ಯಾವುದೇ ಮಾರ್ಪಾಡು ಮಾಡಲು ಸಾಧ್ಯವಿಲ್ಲ.
  • ಸರಕಾರದ ಮಾಲೀಕತ್ವದ ಆಸ್ತಿಗಳು, ಖಾಸಗಿ ಕೃಷಿ ಭೂಮಿ, ವಾಣಿಜ್ಯ ಮತ್ತು ವಸತಿ ಪ್ರಾಪರ್ಟಿಗಳು ಸೇರಿದಂತೆ ಸಮಸ್ತ ಆಸ್ತಿ ದಾಖಲೆಗಳನ್ನು ಈ ಕಾವೇರಿ ಬ್ಲಾಕ್‌ಚೈನ್‌ ಡಿಜಿಟಲ್‌ ವ್ಯಾಲೆಟ್‌ನಲ್ಲಿ ಸಂಗ್ರಹಿಸಿಡಬಹುದಾಗಿದೆ.
  • ಪ್ರತಿಯೊಬ್ಬ ಪ್ರಾಪರ್ಟಿ ಮಾಲೀಕರಿಗೂ ತಮ್ಮ ಹೆಸರಲ್ಲಿ ಆಸ್ತಿ ದಾಖಲೆಗಳನ್ನು ಸಂಗ್ರಹಿಸಿಡಲು ನೆರವಾಗುವ ವಿಶೇಷ ಸ್ಮಾರ್ಟ್‌ಕಾರ್ಡನ್ನು ಸರಕಾರ ವಿತರಿಸಲಿದೆ. ಆಸ್ತಿ ಮಾರಾಟ, ಖರೀದಿ, ಭೋಗ್ಯ, ಮೋರ್ಟ್‌ಗೇಜ್‌, ಗಿಫ್ಟ್‌ ಡೀಡ್‌ ಇತ್ಯಾದಿ ಸುಮಾರು 67 ಬಗೆಯ ಭೂ ವ್ಯವಹಾರಗಳ ದಾಖಲೆಗಳನ್ನು ಈ ಡಿಜಿಟಲ್‌ ವ್ಯಾಲೆಟ್‌ನಲ್ಲಿ ಸಂಗ್ರಹಿಸಿಡಬಹುದಾಗಿದೆ.
  • ಸಿಎಸ್‌ಜಿಯು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಪರೀಕ್ಷಿಸುತ್ತಿದೆ.

ಹೇಗೆ ಕೆಲಸ ಮಾಡುತ್ತದೆ?

  • ಕಂದಾಯ ಇಲಾಖೆಯಲ್ಲಿ ಭೂಮಿ/ಆಸ್ತಿ ವಿಚಾರವಾಗಿ ಹೆಸರು ನೋಂದಾಯಿಸಿರುವ ಆಸ್ತಿ ಮಾಲೀಕರಿಗೆ ಇಲಾಖೆಯು ಚಿಪ್‌ ಇರುವ ಸ್ಮಾರ್ಟ್‌ಕಾರ್ಡ್‌ ವಿತರಿಸಲಿದೆ. ಪ್ರಾಪರ್ಟಿ ಹೊಂದಲು ಬಯಸುವ ಅಥವಾ ಈಗಾಗಲೇ ಪ್ರಾಪರ್ಟಿ ಖರೀದಿಸಿರುವ ಯಾರೂ ಬೇಕಾದರೂ ಈ ಚಿಪ್‌ ಇರುವ ಸ್ಮಾರ್ಟ್‌ಕಾರ್ಡ್‌ ಪಡೆಯಬಹುದು.
  • ಬಳಿಕ ಈ ಕಾರ್ಡನ್ನು ಸ್ಥಳೀಯ ಸಬ್‌ರಿಜಿಸ್ಟ್ರಾರ್‌ ಕಚೇರಿಯಲ್ಲಿ ಇ-ಕೆವೈಸಿ ಪ್ರಕ್ರಿಯೆ ಮೂಲಕ ದೃಢೀಕರಣ ಮಾಡಲಾಗುತ್ತದೆ. ಅಲ್ಲಿ ವ್ಯಕ್ತಿಯ ಆಧಾರ್‌ ಸಂಖ್ಯೆಯನ್ನು ದೃಢೀಕರಿಸಲಾಗುತ್ತದೆ ಮತ್ತು ಬಯೋಮೆಟ್ರಿಕ್‌ ಪಡೆಯಲಾಗುತ್ತದೆ. ‘ಕಾವೇರಿ ಪೋರ್ಟಲ್‌ನಲ್ಲಿರುವ ದಾಖಲೆಗೂ ಆಧಾರ್‌ ಸಂಖ್ಯೆಗೂ ಹೊಂದಾಣಿಕೆಯಾದರೆ ದೃಢೀಕರಣಗೊಳ್ಳುತ್ತದೆ. ಇದೇ ಮಾಹಿತಿಯು ಬ್ಲಾಕ್‌ಚೈನ್‌ನಲ್ಲಿಯೂ ಸಂಗ್ರಹಗೊಳ್ಳುತ್ತದೆ. ಈ ದಾಖಲೆಗಳನ್ನು ಪ್ರಾಪರ್ಟಿ ಖರೀದಿದಾರರು ನಾಲ್ಕು ಅಂಕಿಯ ಪಾಸ್‌ವರ್ಡ್‌ ಮೂಲಕ ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ ಪಡೆಯಬಹುದು
  • ಇದು ಸ್ಮಾರ್ಟ್‌ಕಾರ್ಡ್‌ ಮತ್ತು ಕೀ ಜೊತೆಗೆ ಬಂದಿರುವುದರಿಂದ ಆಸ್ತಿ ಮಾಲೀಕರು ಈ ದಾಖಲೆ ಪತ್ರಗಳನ್ನು ಸಬ್‌ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಇನ್‌ಸ್ಟಾಲ್‌ ಮಾಡಿರುವ ಕಿಯೋಸ್ಕ್‌ಗಳಲ್ಲಿ ಮಾತ್ರ ಪಡೆಯಬಹುದಾಗಿದೆ. ಆಸ್ತಿ ಮಾರಾಟದ ಸಂದರ್ಭದಲ್ಲಿಯೂ ಸ್ಮಾರ್ಟ್‌ಕಾರ್ಡ್‌ ನೀಡಲಾಗುತ್ತದೆ.