Published on: December 16, 2021

ಕುಡಿಯೋ ನೀರಲ್ಲಿ ಯುರೇನಿಯಂ

ಕುಡಿಯೋ ನೀರಲ್ಲಿ ಯುರೇನಿಯಂ

ಸುದ್ಧಿಯಲ್ಲಿ ಏಕಿದೆ ? ಡಿವೆಚಾ ಸೆಂಟರ್‌ ಫಾರ್‌ ಕ್ಲೈಮೇಟ್‌ ಚೇಂಜ್‌, ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ಹಾಗೂ ಮಂಗಳೂರು ವಿವಿಯ ಸೆಂಟರ್‌ ಫಾರ್‌ ಅಡ್ವಾನ್ಸ್‌ಡ್ ರಿಸರ್ಚ್ ಇನ್‌ ಎನ್ವಿರಾನ್‌ಮೆಂಟಲ್‌ ರೇಡಿಯೊ ಆ್ಯಕ್ಟಿವಿಟಿ ಸಂಸ್ಥೆಗಳು ನೀರಿನಲ್ಲಿ ಯುರೇನಿಯಂನ ಅಂಶ ಇರುವ ಬಗ್ಗೆ ಅಧ್ಯಯನ ನಡೆಸಿವೆ.

ಮುಖ್ಯಾಂಶಗಳು

  • ರಾಜ್ಯದ 13 ಜಿಲ್ಲೆಗಳ 73 ಹಳ್ಳಿಗಳಲ್ಲಿ ಈ ಅಧ್ಯಯನ ನಡೆಸಲಾಗಿದ್ದು, ಈ ಪೈಕಿ 48 ಹಳ್ಳಿಗಳ ನೀರಿನಲ್ಲಿ ಮಿತಿ ಮೀರಿದ ಯುರೇನಿಯಂ ಅಂಶ ಇರುವುದು ಪತ್ತೆಯಾಗಿದೆ.

ನೀರಿನಲ್ಲಿ ಯಾವ ಪ್ರಮಾಣದಲ್ಲಿ ಯುರೇನಿಯಂ ಇರುತ್ತದೆ ?

  • ನೀರಿನಲ್ಲಿ ನಿಸರ್ಗದತ್ತವಾಗಿ ಲಘು ಪ್ರಮಾಣದಲ್ಲಿ ಯುರೇನಿಯಂ ಇರುತ್ತದೆ ಒಂದು ಲೀಟರ್‌ನಲ್ಲಿ 30 ಮೈಕ್ರೊ ಗ್ರಾಂಯುರೇನಿಯಂ ಇದ್ದರೆ ಸಮಸ್ಯೆ ಇಲ್ಲ. ಭಾರತೀಯ ಅಣ್ವಸ್ತ್ರ ಶಕ್ತಿ ನಿಯಂತ್ರಣ ಸಂಸ್ಥೆಯ ಪ್ರಕಾರ 60 ಮೈಕ್ರೋ ಗ್ರಾಂವರೆಗೂ ಓಕೆ. ಆದರೆ, ಅಧ್ಯಯನ ನಡೆದವುಗಳ ಪೈಕಿ 48 ಹಳ್ಳಿಗಳ ನೀರಿನಲ್ಲಿ 60 ಎಂ.ಜಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಯುರೇನಿಯಂ ಇದೆ.

ಯಾವ ಜಿಲ್ಲೆಗಳಲ್ಲಿ ಈ ಸಮಸ್ಯೆ ಇದೆ ?

  • ಚಿಕ್ಕಬಳ್ಳಾಪುರ ಜಿಲ್ಲೆಯ 7, ಕೋಲಾರ ಜಿಲ್ಲೆಯ 5, ತುಮಕೂರು ಮತ್ತು ಚಿತ್ರದುರ್ಗದ ತಲಾ ಒಂದು ಗ್ರಾಮದಲ್ಲಿ ಒಂದು ಲೀಟರ್‌ ನೀರಿನಲ್ಲಿ 1 ಸಾವಿರಕ್ಕೂ ಹೆಚ್ಚು ಮೈಕ್ರೋಗ್ರಾಂ ಯುರೇನಿಯಂ ಅಂಶ ಇರುವುದು ಪತ್ತೆಯಾಗಿದ್ದು ನೀರಿನ ಗುಣಮಟ್ಟದ ಕುರಿತು ಹಲವು ಪ್ರಶ್ನೆಗಳು ಉದ್ಭವವಾಗಿವೆ.

ಕಾರಣ

  • ವಿಶೇಷವೆಂದರೆ ಸದ್ಯ ಸ್ಯಾಂಪಲ್‌ ತೆಗೆದುಕೊಂಡಿರುವ ಬೋರ್‌ವೆಲ್‌ಗಳ ವ್ಯಾಪ್ತಿಯಲ್ಲಿ ಯಾವುದೇ ಅಣ್ವಸ್ತ್ರ ಕಾರ್ಯ ಚಟುವಟಿಕೆ ಅಥವಾ ನಗರ ಪ್ರದೇಶದಿಂದ ಹೊರಹಾಕುವ ತ್ಯಾಜ್ಯದ ನಾಲೆ, ಯಾವುದೇ ಕೈಗಾರಿಕೆಗಳಿಂದ ಹೊರಬರುವ ತ್ಯಾಜ್ಯಗಳು ಇಲ್ಲ. ಜನರು ಬಳಸುತ್ತಿರುವ ಬೋರ್‌ವೆಲ್‌ಗಳ ನೀರನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿತ್ತು. ಯುರೇನಿಯಂ ಅಂಶ ಹೆಚ್ಚಾಗಲು ಮಿತಿ ಮೀರಿದ ಅಂತರ್ಜಲ ಬಳಕೆ ಹಾಗೂ ಗ್ರಾನೈಟ್‌ ಸೇರಿದಂತೆ ನಾನಾ ಥರದ ಕಲ್ಲುಗಣಿಗಾರಿಕೆಗಳು ಕಾರಣವಾಗಿರಬಹುದು ಎಂದು ಹೇಳಲಾಗಿದೆ.
  • ಕರ್ನಾಟಕದ ಪಶ್ಚಿಮ ಭಾಗಕ್ಕಿಂತ ಪೂರ್ವ ಭಾಗದಲ್ಲೇ ಅತಿ ಹೆಚ್ಚು ಪೋಟಾಷಿಯಂ, ಯುರೇನಿಯಂ ಮತ್ತು ಥೋರಿಯಂ ಇರುವುದು ಈ ಮೊದಲಿನಿಂದಲೂ ಅಧ್ಯಯನಗಳಲ್ಲಿ ಕಂಡುಬಂದಿದೆ. ಹೀಗಾಗಿ ಪೂರ್ವ ಭಾಗದ ಜಿಲ್ಲೆಗಳಲ್ಲೇ ಯುರೇನಿಯಂ ಅಂಶ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಆಧ್ಯಯನ ನಡೆಯಬೇಕು ಎಂಬ ಅಭಿಪ್ರಾಯವಿದೆ.

ನಾನಾ ರೋಗಗಳಿಗೆ ಆಹ್ವಾನ

  • ಯುರೇನಿಯಂಯುಕ್ತ ನೀರಿನ ಸೇವನೆ ದೀರ್ಘಕಾಲಿಕ ರೋಗಗಳಿಗೆ ಕಾರಣವಾಗುತ್ತದೆ. ಆರಂಭದಲ್ಲಿ ಸಣ್ಣ ಪ್ರಮಾಣದ ಜ್ವರ, ತಲೆನೋವು, ವಾಂತಿ ಹೀಗೆ ಸಣ್ಣ ಪುಟ್ಟ ಕಾಯಿಲೆಗಳಿಂದ ಶುರುವಾಗಿ ದೀರ್ಘಕಾಲದಲ್ಲಿ ಮೂಳೆ, ಶ್ವಾಸಕೋಶ ಮತ್ತು ಲಿವರ್‌ ಕ್ಯಾನ್ಸರ್‌ ಬರುವ ಸಾಧ್ಯತೆಯೂ ಇದೆ ಎನ್ನುತ್ತಾರೆ ವೈದ್ಯರು.