Published on: November 8, 2022

ಕೃಷಿ ಪೌಷ್ಟಿಕ ತೋಟ ಯೋಜನೆ

ಕೃಷಿ ಪೌಷ್ಟಿಕ ತೋಟ ಯೋಜನೆ

ಸುದ್ದಿಯಲ್ಲಿ ಏಕಿದೆ?

ಗ್ರಾಮೀಣ ಪ್ರದೇಶದ ಬಡ ಹಾಗೂ ದುರ್ಬಲ ಕುಟುಂಬಗಳ ಮಹಿಳೆಯರ ಸಾಂಸ್ಥಿಕ, ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣದ ಮೂಲಕ ಬಡತನದ ತೀವ್ರತೆಯನ್ನು ತಗ್ಗಿಸುವ ಉದ್ದೇಶದಿಂದ ಕೃಷಿ ಪೌಷ್ಟಿಕ ತೋಟ ಎಂಬ ಯೋಜನೆಯನ್ನು ಸರ್ಕಾರ ಅನುಷ್ಠಾನಕ್ಕೆಗೊಳಿಸಿದೆ  .

ಮುಖ್ಯಾಂಶಗಳು

  • ಗ್ರಾಮೀಣ ಭಾಗದಲ್ಲಿ ಮಹಿಳೆಯರ ಬದುಕಿನಲ್ಲಿ ಅಮೂಲಾಗ್ರ ಬದಲಾವಣೆಗಾಗಿ ಜೀವನೋಪಾಯ ಅಭಿಯಾನ ಹಲವು ಯೋಜನೆಗಳನ್ನು ರೂಪಿಸಿ ಜಾರಿಗೆ ತರುತ್ತಿದೆ. ಅದರಲ್ಲಿ ಕೃಷಿ ಪೌಷ್ಟಿಕ ತೋಟ ಯೋಜನೆ ಮಹತ್ವದ್ದಾಗಿದೆ. ಇಡೀ ದೇಶದಲ್ಲಿಯೇ ನಮ್ಮ ರಾಜ್ಯದಲ್ಲಿಯೇ ಹೆಚ್ಚಿನ ತೋಟಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಹಿನ್ನಲೆ

  • ಹಿಂದೆ ಗ್ರಾಮೀಣ ಭಾಗದ ಜನರು ಸಾವಯವ ಮಾದರಿಯಲ್ಲಿ ಔಷಧೀಯ ಗುಣವುಳ್ಳ ಹಣ್ಣು , ಸೊಪ್ಪು ಮತ್ತು ತರಕಾರಿ ಬೆಳೆದು ಸೇವಿಸುತ್ತಿದ್ದರು . ಹಾಗಾಗಿ ಆರೋಗ್ಯ ಮತ್ತು ಆಯಸ್ಸಿನ ವೃದ್ಧಿಯಾಗುತ್ತಿತ್ತು.
  • ಆದರೆ, ಇತ್ತೀಚೆಗೆ ರಾಸಾಯನಿಕಗಳ ಬಳಕೆಯಿಂದಾಗಿ ವಿಷಯುಕ್ತ ಕೃಷಿ ಉತ್ಪನ್ನಗಳನ್ನು ಸೇವಿಸಲಾಗುತ್ತಿದೆ. ಇದರಿಂದ ಅಪೌಷ್ಟಿಕತೆ ಹೆಚ್ಚುತ್ತಿದ್ದರೆ, ಆರೋಗ್ಯದ ಮೇಲೂ ಪರಿಣಾಮವಾಗುತ್ತಿದೆ.
  • ಗ್ರಾಮೀಣ ಭಾಗದಲ್ಲಿ ಮಹಿಳೆ ಮತ್ತು ಮಕ್ಕಳಲ್ಲಿನ ಅಪೌಷ್ಟಿಕತೆ ಸಮಾಜಕ್ಕೆ ದೀರ್ಘಕಾಲದ ಹಾನಿಯನ್ನುಂಟು ಮಾಡುತ್ತಿದೆ. ಕಬ್ಬಿಣಾಂಶ, ವಿಟಮಿನ್, ಪಾಲಿಕ್ ಆಸಿಡ್ ಹಾಗೂ ಇತರ ಪೋಷಕಾಂಗಳ ಕೊರತೆಯಿಂದ ರಕ್ತಹೀನತೆ ಕಾಡುತ್ತಿದೆ.
  • ಕೃಷಿ ಪೌಷ್ಟಿಕ ತೋಟಗಳು ಇಂಥ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಲಿವೆ ಎಂಬ ಆಶಯ ಹೊಂದಲಾ ಗಿದೆ.

ಉದ್ದೇ ಶ

  • ಗ್ರಾಮೀಣ ಪ್ರದೇಶದ ಮಹಿಳೆಯರು ಮತ್ತು ಮಕ್ಕಳಲ್ಲಿ ಇರುವ ಅಪೌಷ್ಟಿಕತೆಯ ಪ್ರಮಾಣ ದೂರ ಮಾಡುವುದು , ಅದರೊಂದಿಗೆ ಆರ್ಥಿಕ ಚಟುವಟಿಕೆ ಹೆಚ್ಚುವಂತೆ ನೋಡಿಕೊಳ್ಳುವುದು ಒಟ್ಟಾರೆ ಯೋಜನೆಯ ಉದ್ದೇಶವಾಗಿದೆ.

ಯೋಜನೆಯ ಸ್ವರೂಪ 

  • ರಾಜ್ಯ ಸರ್ಕಾರ ಈ ವರ್ಷವನ್ನು ಜೀವನೋಪಾಯ ವರ್ಷವೆಂದು ಘೋಷಣೆ ಮಾಡಿದೆ. ರಾಜ್ಯದಲ್ಲಿ ಜೀವನೋಪಾಯ ಮಿಷನ್ ಅಡಿ 2.39 ಲಕ್ಷ ಸ್ವಸಹಾಯ ಸಂಘಗಳಿವೆ. ಅದರಲ್ಲಿ 6 ಲಕ್ಷ ಸದಸ್ಯರಿದ್ದಾರೆ. ಈ ಸದಸ್ಯರ ಮೂಲಕ 6.02 ಲಕ್ಷ ಕೃಷಿ ಪೌಷ್ಟಿಕ ತೋಟವನ್ನು ಅಭಿವೃದ್ಧಿ ಪಡಿಸುವುದು ಸರ್ಕಾರದ ಯೋಜನೆ.
  • ರಾಜ್ಯದಲ್ಲಿ 6 ಸಾವಿರ ಗ್ರಾಮ ಪಂಚಾಯಿತಿಗಳಿದ್ದು ಪ್ರತಿಯೊಂದು ಪಂಚಾಯಿತಿ ವ್ಯಾಪ್ತಿಯಲ್ಲಿ 101 ಕೃಷಿ ಪೌಷ್ಟಿಕ ತೋಟಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಅದರ 2.39 ಲಕ್ಷ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತದೆ.

ನರ್ಸರಿಗಳ ಅಭಿವೃದ್ಧಿ

  • ಕೃಷಿ ಪೌಷ್ಟಿಕ ತೋಟಗಳನ್ನು ಅಭಿವೃದ್ಧಿಪಡಿಸಬೇಕೆಂದರೆ ಸಸಿಗಳನ್ನು ಬೆಳೆಸಬೇಕಾಗುತ್ತದೆ. ಈ ಕಾರಣಕ್ಕಾ ಗಿ 452 ನರ್ಸರಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
  • ಈ ಯೋಜನೆಗೆ ಒಟ್ಟಾರೆ 84,30,268 ವಿವಿಧ ರೀತಿಯ ಸಸಿಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಸ್ವಸಹಾಯ ಸಂಘಗಳು ನರ್ಸರಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ವೆಚ್ಚವೆಷ್ಟು?

  • ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ದೀನದಯಾಳ್ ಅಂತ್ಯೋದಯ ಯೋಜನೆಯು ರಾಜ್ಯದ ಜೀವನೋಪಾಯ ಮಿಷನ್ನ ಸಂಜೀವಿನಿ ಮೂಲಕ ಜಾರಿಗೆ ಬರುತ್ತಿದೆ. ನರೇಗಾದ ಹಣ ಸೇರಿ ಒಟ್ಟಾರೆ 288.27 ಕೋಟಿ ರೂ. ಗಳನ್ನು ಈ ಯೋಜನೆಗೆ ವೆಚ್ಚ ಮಾಡಲಾಗುತ್ತಿದೆ.

 ತೋಟದಲ್ಲಿ ಏನೇನು ಇರಲಿದೆ?

  • ಪ್ರತಿಯೊಂದು ತೋಟದಲ್ಲಿಯೂ 7 ಜಾತಿಯ ಬಹುವಾರ್ಷಿಕ ಬೆಳೆಗಳಾದ ಪಪ್ಪಾಯ, ಸೀಬೆ, ನೆಲ್ಲಿ, ನುಗ್ಗೆ, ಕರಿಬೇವು , ತೆಂಗು /ಹಲಸು , 6 ರೀತಿಯ ತರಕಾರಿಗಳಾದ ಟೊಮ್ಯಾಟೊ , ಬದನೆ, ಬೆಂಡೆ, ಚವಳಿ, ಹೀರೇಕಾಯಿ, ಈರುಳ್ಳಿ, ಮೆಣಸಿನಕಾಯಿ ಹಾಗೂ ಆರು ರೀತಿಯ ಸೊಪ್ಪುಗಳಾದ ಪಾಲಕ್, ಮೆಂತ್ಯೆ, ದಂಟು , ಸಬ್ಬಸಿಗೆ, ರಾಜಗಿರಿ, ಕೊತ್ತಂಬರಿ ಬೀಜದ ಕಿಟ್ ಗಳನ್ನು ನೀಡಲಾಗುತ್ತದೆ.

ಮನೆ ಗಾರ್ಡೆನ್ಗೂ ಅವಕಾಶ

  • ಜಮೀನಿನಲ್ಲಿ ಬೇಕಾದರೂ ತೋಟ ಮಾಡಬಹುದು ಅಥವಾ ಮನೆಯಲ್ಲಿ ತೋಟ ಮಾಡಿಕೊಂಡು ಹಣ್ಣು , ತರಕಾರಿ, ಸೊಪ್ಪುಬೆಳೆಯುವುದಕ್ಕೂ ಅವಕಾಶ ನೀಡಲಾಗಿದೆ.
  • ರಾಜ್ಯದಲ್ಲಿಯೇ ಹೆಚ್ಚು ಕೃಷಿ ಪೌಷ್ಟಿಕ ತೋಟಗಳನ್ನು ಮಾಡಲು ದೀನದಯಾಳ್ ಅಂತ್ಯೋದಯ ಯೋಜನೆಯಲ್ಲಿ ಅವಕಾಶ ನೀಡಲಾಗಿದೆ.

ಮಾರುಕಟ್ಟೆ ವ್ಯವಸ್ಥೆ

  • ಮಹಿಳೆಯರು ತೋಟ ಮಾಡಿಕೊಂಡು ಕೇವಲ ತಮಗೆ ಮಾತ್ರ ಹಣ್ಣು , ಸೊಪ್ಪು, ತರಕಾರಿ ಬಳಕೆ ಮಾಡಿಕೊಳ್ಳುವುದಲ್ಲ. ಬದಲಾಗಿ ಮಾರಾಟ ಮಾಡುವ ಮೂಲಕ ಆರ್ಥಿಕ ಸಬಲತೆ ಪಡೆಯಬಹುದಾಗಿದೆ. ಸರ್ಕಾರ ಸಹ ಬೇರೆ ಬೇರೆ ಸಂಸ್ಥೆಗಳ ಮೂಲಕ ಮಾರುಕಟ್ಟೆ ಒದಗಿಸುವ ಪ್ರಯತ್ನ ಸಹ ಮಾಡಲಿದೆ. ಸ್ಥಳೀಯವಾಗಿ ಸ್ವಸಹಾಯ ಸಂಘಗಳು ಸಹ ಮಾರುಕಟ್ಟೆ ಕಂಡುಕೊಳ್ಳಬಹುದಾಗಿದೆ.

ಜಿಲ್ಲಾ ಪಂಚಾಯತಿಗಳ  ಪಾತ್ರ

  • ಕೃಷಿ ಪೌ ಷ್ಟಿಕ ತೋಟಗಳನ್ನು ಮಾಡುವಲ್ಲಿ ಜಿಲ್ಲಾ ಪಂಚಾಯಿತಿಗಳ ಪಾತ್ರ ಮಹತ್ವದ್ದಾಗಿದ್ದು , ತೋಟಗಾರಿಕೆ ಇಲಾಖೆಯ ನೆರವಿನಲ್ಲಿ ಜಾರಿ ಮಾಡಲು ಜಿಪಂ ಸಿಇಒಗಳಿಗೆ ಕ್ರಿಯಾ ಯೋಜನೆ ರೂಪಿಸುವಂತೆ ಸರ್ಕಾರ ಸೂಚನೆ ನೀಡಿದೆ. ಅಲ್ಲಿಂದ ಬರುವ ಕ್ರಿಯಾ ಯೋಜನೆಗಳನ್ನು ಒಪ್ಪಿಗೆ ನೀಡಿ ಹಣ ಬಿಡುಗಡೆ ಮಾಡಲಿದೆ.

ಉಪಯೋಗಗಳು

  • ಮಹಿಳೆಯರು , ಮಕ್ಕಳ ಅಪೌಷ್ಟಿಕತೆ ನಿವಾರಣೆ
  • ಗ್ರಾಮೀಣ ಮಹಿಳೆಯರ ಆರ್ಥಿಕ ಚಟುವಟಿಕೆ
  • ಆಹಾರ ಭದ್ರತೆ ಲಭ್ಯ
  • ಪೌಷ್ಟಿಕ ಆಹಾರದಲ್ಲಿ ಸ್ವಾವಲಂಬನೆ
  • ತಮಗೆ ಬೇಕಾದ ಹಣ್ಣು , ತರಕಾರಿ, ಸೊಪ್ಪು ಬೆಳೆಸಿಕೊಳ್ಳಲು ಅವಕಾಶ
  • ಆರೋಗ್ಯ ಮತ್ತು ಆರ್ಥಿಕತೆ ಮೇಲಿನ ವ್ಯತಿರಿಕ್ತ ಪರಿಣಾಮ ದರ, ಆರೋಗ್ಯ ಮತ್ತು ಆಯಸ್ಸುಗಳೆರಡು ವೃದ್ಧಿಯಾಗಲಿದೆ.