Published on: March 16, 2023

ಕೃಷಿ ಸಮ್ಮಾನ್ ಯೋಜನೆ

ಕೃಷಿ ಸಮ್ಮಾನ್ ಯೋಜನೆ

ಸುದ್ದಿಯಲ್ಲಿ ಏಕಿದೆ? ಕರ್ನಾಟಕ ರಾಜ್ಯದಲ್ಲಿಯೇ ಅತಿ ಹೆಚ್ಚು ರೈತರಿಗೆ ಕಿಸಾನ್ ಸಮ್ಮಾನ್ ದೊರಕಿಸಿಕೊಟ್ಟ ಜಿಲ್ಲೆಗಳಲ್ಲಿ ಬೆಳಗಾವಿ ಅಗ್ರಸ್ಥಾನ ಪಡೆದಿದೆ. 5 ಲಕ್ಷಕ್ಕೂ ಅಧಿಕ ರೈತರ ಖಾತೆಗೆ 13ನೇ ಕಂತಿನ ಹಣ ಜಮೆ ಮಾಡಲಾಗಿದೆ.

ಮುಖ್ಯಾಂಶಗಳು

  • ತುಮಕೂರು ಜಿಲ್ಲೆ ದ್ವಿತೀಯ ಹಾಗೂ ಹಾಸನ ತೃತೀಯ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿಕಲಬುರಗಿ, ಮಂಡ್ಯ ಹಾಗೂ ವಿಜಯಪುರ ಜಿಲ್ಲೆಗಳಿವೆ.
  • ಅತಿ ಕಡಿಮೆ ರೈತರಿಗೆ ತಲುಪಿದ ಜಿಲ್ಲೆಗಳಾಗಿ ಬೆಂಗಳೂರು ನಗರ ಹಾಗೂ ಕೊಡಗು ಜಿಲ್ಲೆಗಳು ಕೊನೆಯ ಸ್ಥಾನದಲ್ಲಿವೆ.
  • ಒಂದೇ ಕುಟುಂಬದಲ್ಲಿನ ಸಹೋದರರು ಹಾಗೂ ತಂದೆ-ಮಕ್ಕಳ ಹೆಸರಿಗೆ ಜಮೀನು ಪೋಡಿ ಮಾಡಿಕೊಳ್ಳುವುದರ ಮೂಲಕ ಪ್ರತ್ಯೇಕ ಕುಟುಂಬಗಳೆಂದು ದಾಖಲೆ ಸಲ್ಲಿಸುತ್ತಿದ್ದಾರೆ.
  • ನಿಯಮದ ಪ್ರಕಾರ ಒಂದೇ ಜಮೀನು (ವೀಸ್ತೀರ್ಣ ಎಷ್ಟಾದರೂ) ಎರಡ್ಮೂರು ಜಂಟಿ ಖಾತೆಯಲ್ಲಿದ್ದರೂ ಕುಟುಂಬಗಳು ಬೇರೆ ಬೇರೆ ಎಂದು ಪರಿಗಣಿಸಿ ಎಲ್ಲ ಖಾತೆದಾರರೂ ಕಿಸಾನ್ ಸಮ್ಮಾನ್ ಪಡೆಯಲು ಅರ್ಹರಾಗಿದ್ದಾರೆ. ಹೀಗಾಗಿ, ಯೋಜನೆಯ ಲಾಭ ಪಡೆಯುವ ರೈತರ ಸಂಖ್ಯೆ ಹೆಚ್ಚಾಗುತ್ತಿದೆ.

ಕೃಷಿ ಸಮ್ಮಾನ್ ಯೋಜನೆ

  • ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯು ಭಾರತ ಸರ್ಕಾರದ ಉಪಕ್ರಮವಾಗಿದ್ದು, ರೈತರಿಗೆ ಕನಿಷ್ಠ ಆದಾಯವನ್ನು ಬೆಂಬಲವಾಗಿ ವರ್ಷಕ್ಕೆ ರೂ. 6,000 ವರೆಗೆ ನೀಡುತ್ತದೆ. ಡಿಸೆಂಬರ್ 2018 ರಲ್ಲಿ  ಘೋಷಿಸಲಾಯಿತು   ಮತ್ತು ಫೆಬ್ರವರಿ 2019  ರಲ್ಲಿ ಅಧಿಕೃತವಾಗಿ ಜಾರಿಗೊಳಿಸಲಾಯಿತು.
  • ಈ ಯೋಜನೆಯ ಫಲಾನುಭವಿಗಳಾದ ಪ್ರತಿ ರೈತ ಕುಟುಂಬಕ್ಕೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂ.ಗಳನ್ನು ನೀಡಲಾಗುತ್ತದೆ.
  • ಗಂಡ, ಹೆಂಡತಿ, ಅಪ್ರಾಪ್ತ ಮಕ್ಕಳು ಇರುವ ರೈತ ಕುಟುಂಬವನ್ನು ಫಲಾನುಭವಿ ಕುಟುಂಬವನ್ನಾಗಿ ಆಯ್ಕೆ ಮಾಡಲಾಗುತ್ತದೆ.
  • ಒಂದು ಹಣಕಾಸು ವರ್ಷದಲ್ಲಿ ಮೂರು ಬಾರಿ ನಿಶ್ಚಿತ ಆದಾಯ ನೀಡಲಾಗುತ್ತದೆ. ಅಲ್ಲಿಗೆ,ಒಂದು ಫಲಾನುಭವಿ ರೈತ ಕುಟುಂಬಕ್ಕೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂ.ಗಳಂತೆ ಒಂದು ವರ್ಷದಲ್ಲಿ 6 ಸಾವಿರ ರೂ.ಗಳು ಸಂದಾಯವಾಗುತ್ತದೆ.

ಆದಾಯ ನೇರವಾಗಿ ಬ್ಯಾಂಕ್ ಖಾತೆಗೆ

  • ಈ ಯೋಜನೆಯಡಿ ನೋಂದಾಯಿಸಲ್ಪಟ್ಟಿರುವ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗುತ್ತದೆ.

ಯಾರು  ಈ ಯೋಜನೆಗೆ ಅರ್ಹರಲ್ಲ?

ರೈತ ಕುಟುಂಬದವರಾಗಿದ್ದರೂ, ಮೇಲ್ನೋಟಕ್ಕೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ಅರ್ಹರೆನಿಸಿದರೂ ಇವರು ಈ ಯೋಜನೆಗೆ ಅರ್ಹರಲ್ಲ. ಅವರೆಂದರೆ,

  • ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು.
  • ಸೇವೆಯಲ್ಲಿರುವ ಅಥವಾ ನಿವೃತ್ತರಾಗಿರುವ ಸರ್ಕಾರಿ ಅಧಿಕಾರಿಗಳು ಅಥವಾ ಉದ್ಯೋಗಿಗಳು
  • ಕೇಂದ್ರ ಅಥವಾ ರಾಜ್ಯ ಸಚಿವಾಲಯಗಳು, ಕಚೇರಿಗಳು ಹಾಗೂ ಇಲಾಖೆಗಳಲ್ಲಿ ಹಾಗೂ ಅವುಗಳ ಅಧೀನದಲ್ಲಿರುವ ಸಂಸ್ಥೆಗಳ ಸಿಬ್ಬಂದಿ
  • ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾರ್ವಜನಿಕ ಸಂಸ್ಥೆಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಕಚೇರಿ, ಸ್ವಾಯತ್ತ ಸಂಸ್ಥೆ ಅಥವಾ ಅವುಗಳ ಅಧೀನದಲ್ಲಿರುವ ಸ್ಥಳೀಯ ಸಂಸ್ಥೆಗಳಲ್ಲಿ, ಕಚೇರಿಗಳಲ್ಲಿನ ಸಿಬ್ಬಂದಿ (ಬಹು ಕಾರ್ಯೋದ್ದೇಶದ ಸಿಬ್ಬಂದಿ, 4ನೇ ದರ್ಜೆಯ ನೌಕರರು, ಗ್ರೂಪ್ ಡಿ ನೌಕರರನ್ನು ಹೊರತುಪಡಿಸಿ).