Published on: March 14, 2022

ಖೇಲೋ ಇಂಡಿಯಾ

ಖೇಲೋ ಇಂಡಿಯಾ

ಸುದ್ಧಿಯಲ್ಲಿ ಏಕಿದೆ ? ಕರ್ನಾಟಕದಲ್ಲಿ ಏಪ್ರಿಲ್ 24 ರಿಂದ ಮೇ 3 ರವರೆಗೆ ಆಯೋಜಿಸಲಾಗಿರುವ ಖೇಲೋ ಇಂಡಿಯಾ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಮಲ್ಲಗಂಬ ಮತ್ತು ಯೋಗವನ್ನು ಸೇರಿಸಲಾಗುವುದು.

ಮುಖ್ಯಾಂಶಗಳು

  • ಈ ಕ್ರೀಡಾಕೂಟವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದು, ದೇಶದಾದ್ಯಂತ ಸುಮಾರು 8,000 ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. 2020 ರಲ್ಲಿ ಒಡಿಶಾದಲ್ಲಿ ನಡೆದ ಕ್ರೀಡಾಕೂಟಕ್ಕೆ ಹೋಲಿಸಿದರೆ, ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳ ಸಂಖ್ಯೆ ದ್ವಿಗುಣವಾಗಿದೆ.
  • ಕ್ರೀಡಾಕೂಟದಲ್ಲಿ ಈ ಬಾರಿ ಮಲ್ಲಗಂಬ, ಯೋಗ ಸೇರಿದಂತೆ 17ರಿಂದ 23ಕ್ಕೆ ಆಟೋಟಗಳನ್ನು ಹೆಚ್ಚಿಸಲಾಗಿದೆ. ಕ್ರೀಡಾಕೂಟವು 2021 ರಲ್ಲಿ ಕರ್ನಾಟಕದಲ್ಲಿ ನಡೆಯಬೇಕಿತ್ತು, ಆದರೆ ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲಾಗಿತ್ತು.

ಮಲ್ಲಕಂಬ

  • ಮಲ್ಲಕಂಬ – ಈ ನೆಲದಲ್ಲಿ ಹುಟ್ಟಿದ ಅಪ್ಪಟ ದೇಶೀಯ ಕ್ರೀಡೆ. ಕೆಲ ಮೀಟರ್ಸ್ ಎತ್ತರದ ಕಟ್ಟಿಗೆ ಕಂಬವನ್ನು ಕುಸ್ತಿ ಪಟ್ಟುಗಳ ಸಾಧನೆಗಾಗಿ ಬಳಸಲಾಗುತ್ತಿತ್ತು. ಈ ಹೆಸರೇ ಸೂಚಿಸುವಂತೆ (ಮಲ್ಲ+ಕಂಬ) ಮಲ್ಲರು ಉಪಯೋಗಿಸುವ ಕಂಬ. ಆದರೆ ನಂತರದ ವರ್ಷಗಳಲ್ಲಿ ಇದೇ ಒಂದು ಸ್ವತಂತ್ರ ಕ್ರೀಡೆಯಾಗಿ ರೂಪುಗೊಂಡಿತು.
  • ಮಲ್ಲಕಂಬವು ಯುದ್ಧ ತರಬೇತಿ ಅಂಗವಾಗಿಯೇ ರೂಪುಗೊಂಡಿರಬಹುದು.
  • ಮರಾಠಾ ದೊರೆ ಎರಡನೇ ಪೇಶ್ವೇ ಬಾಜಿರಾವ್‍ನ ಕಾಲದಲ್ಲಿ ಈ ಕ್ರೀಡೆಗೆ ವಿಶೇಷ ಪ್ರಾಧಾನ್ಯ ಲಭ್ಯವಾಯಿತು. ಇವನ ಆಶ್ರಿತ ಹಾಗೂ ಆಸ್ಥಾನ ಗುರು ಶ್ರೀ ಬಾಳಂಭಟ್ಟ ದಾದಾ ದೇವಧರ (1780-1840) ಉತ್ತಮ ಕುಸ್ತಿಪಟುವಲ್ಲದೆ ರಾಜ್ಯಾಂಗದ ದಕ್ಷ ಶಿಕ್ಷಕನೂ ಆಗಿದ್ದ.
  • ಬಾಳಂಭಟ್ಟ ಬನಾರಸದಲ್ಲಿ ಒಂದು ಕುಸ್ತಿ ಅಖಾಡಾ ಪ್ರಾರಂಭಿಸಿದರು. ಇದರಿಂದ ಉತ್ತೇಜಿತರಾದ ಅವರು ಅಮೃತಸರದಿಂದ ದಕ್ಷಿಣದ ರಾಮೇಶ್ವರದವರೆಗೆ ಸಂಚರಿಸಿ, ಕುಸ್ತಿಯಲ್ಲಿ ಅನೇಕ ಪ್ರಶಸ್ತಿ ಪಡೆಯುವುದರ ಜೊತೆಗೆ ಮಲ್ಲಕಂಬಕ್ಕೆ ಜನಪ್ರಿಯತೆಯನ್ನೊದಗಿಸಿಕೊಟ್ಟರು. ಆಗ ಮಲ್ಲಕಂಬದಲ್ಲಿ ಸ್ಥಿರ, ನೇತಾಡುವ, ಬಾಟಲಿ ಮೇಲಿನ ಬೆತ್ತದ ಹಾಗೂ ಹಗ್ಗದ ಹೀಗೆ ಅನೇಕ ಪ್ರಕಾರಗಳನ್ನು ಆವಿಷ್ಕರಿಸಿ ಪ್ರಚುರಪಡಿಸಿದರು. ಅವರ ಪ್ರಖ್ಯಾತಿಯಿಂದ ಮಲ್ಲಕಂಬ ಗರಡಿಮನೆಯ ಅವಿಭಾಜ್ಯ ಅಂಗವಾಯಿತು.
  • ಬಾಲಗಂಗಾಧರ ತಿಲಕರು ನಂತರ ಇದಕ್ಕೆ ಆಶ್ರಯದಾತರಾದರು. ಅವರೇ ಸ್ಥಾಪಿಸಿದ ಅಮರಾವತಿಯ ಹನುಮಾನ್ ವ್ಯಾಯಾಮಶಾಲೆಯಲ್ಲಿ ಮಲ್ಲಕಂಬದ ತರಬೇತಿಗೆ ಅವಕಾಶ ಕಲ್ಪಿಸಲಾಯಿತು. ಆಗ ಇದೊಂದು ಸ್ವತಂತ್ರ ಕ್ರೀಡೆಯಾಗಿ ರೂಪುಗೊಂಡಿತು. 1936ರ ಒಲಿಂಪಿಕ್ ಕ್ರೀಡೆಗಳಲ್ಲಿ, ಹಿಟ್ಲರನ ಎದುರು, ಈ ಶಾಲೆ ಮಲ್ಲಕಂಬ ಪ್ರದರ್ಶನ ನೀಡಿ ಮೆಚ್ಚುಗೆ ಪಡೆಯಿತು. ಇದರ ನಂತರ ಮಿರಜ್ ದೊರೆ ಪಟವರ್ಧನ ಮಹಾರಾಜ ‘ವ್ಯಾಯಾಮ ಜ್ಞಾನಕೋಶ ಎಂಬ ಒಂಬತ್ತು ಬೃಹತ್ ಕ್ರೀಡಾ ಕೋಶಗಳನ್ನು ಪ್ರಕಟಿಸಿದ. ಅದರಲ್ಲಿ ಆರನೇ ಕೋಶ ಮಲ್ಲಕಂಬಕ್ಕೆ ಮೀಸಲಾಗಿದ್ದು, ಪೂರ್ಣ ಮಾಹಿತಿಯನ್ನೊದಗಿಸುತ್ತದೆ.

ಖೇಲೋ ಇಂಡಿಯಾ

  • ಭಾರತದಲ್ಲಿ ಕ್ರೀಡಾ ಸಂಸ್ಕೃತಿಯನ್ನು ತಳಮಟ್ಟದಲ್ಲಿ ಪುನರುಜ್ಜೀವನಗೊಳಿಸಲು ಖೇಲೋ ಇಂಡಿಯಾವನ್ನು ಪರಿಚಯಿಸಲಾಯಿತು. ಖೇಲೋ ಇಂಡಿಯಾದಲ್ಲಿ ಕ್ರೀಡಾಕೂಟದಲ್ಲಿ ಅಳಿವಿನಂಚಿನತ್ತ ಸಾಗುತ್ತಿರುವ ಕ್ರೀಡೆಗಳಿಗೆ ರಾಷ್ಟ್ರ ಮಟ್ಟದಲ್ಲಿ ಮನ್ನಣೆ ಸಿಗುವ ಸಾಧ್ಯತೆಗಳಿವೆ.