Published on: December 31, 2021

ಗ್ರಾಮ ಪಂಚಾಯಿತಿಗಳಿಗೆ ಹೊಸ ತೆರಿಗೆ ನೀತಿ

ಗ್ರಾಮ ಪಂಚಾಯಿತಿಗಳಿಗೆ ಹೊಸ ತೆರಿಗೆ ನೀತಿ

ಸುದ್ಧಿಯಲ್ಲಿ ಏಕಿದೆ ? ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ನಿಯಮ-2021′ ರ ಕರಡು ಪ್ರತಿಯನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಇದರಲ್ಲಿ ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಕುಡಿಯುವ ನೀರಿಗೆ, ಖಾಲಿ ಪ್ರದೇಶಗಳಿಗೆ ತೆರಿಗೆ ವಿಧಿಸುವ ಪ್ರಸ್ತಾಪ ಇದೆ. ಈ ಬಗ್ಗೆ ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆಗಳನ್ನು ಆಹ್ವಾನಿಸಿದೆ.

ಹೊಸ ತೆರಿಗೆ ನೀತಿಯಲ್ಲಿ ಏನಿದೆ ?

  • ಈ ವರೆಗೆ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಯಾವುದೇ ಶುಲ್ಕ ಇರಲಿಲ್ಲ. ಆದರೆ ಈ ಕಡರಿನಲ್ಲಿ ಇದೇ ಮೊದಲ ಬಾರಿಗೆ ಕುಡಿಯುವ ನೀರಿಗೂ ಶಲ್ಕ ವಿಧಿಸುವ ಪ್ರಸ್ತಾಪ ಇದೆ. ಎಷ್ಟು ಶುಲ್ಕ ವಿಧಿಸಬೇಕು ಎನ್ನುವುದನ್ನು ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ನಿರ್ಧಾರ ಮಾಡಲಿದೆ.
  • ಹೊಸದಾಗಿ ಕುಡಿಯುವ ನೀರಿನ ಸಂಪರ್ಕ ಪಡೆಯಲು ಬಯಸುವ ವಸತಿ ಕಟ್ಟಡಗಳಿಗೆ 2 ಸಾವಿರ ರೂಪಾಯಿ ಹಾಗೂ ವಸತಿಯೇತರ, ವಾಣಿಜ್ಯ ಕಟ್ಟಡಗಳಿಗೆ ಮೂರು ಸಾವಿರ ರೂಪಾಯಿ ಶುಲ್ಕ ವಿಧಿಸುವ ಪ್ರಸ್ತಾಪ ಈ ಕರಡು ಪ್ರತಿಯಲ್ಲಿ ಇದೆ.
  • ಗ್ರಾಮ ಪಂಚಾಯಿತಿಗಳು ಈ ವರೆಗೆ ಮನೆ ತೆರಿಗೆ ಮಾತ್ರ ಸಂಗ್ರಹಿಸುತ್ತಿತ್ತು. ಆದರೆ ಉದ್ದೇಶಿತ ಕರಡು ಪ್ರತಿಯಲ್ಲಿ ವಸತಿ, ವಾಣಿಜ್ಯ ಮತ್ತು ಕೈಗಾರಿಕೆ ಕಟ್ಟಡಗಳ ಮೇಲೆ ತೆರಿಗೆ ವಿಧಿಸುವ ಪ್ರಸ್ತಾಪ ಇದೆ. ಜತೆಗೆ ಖಾಲಿ ಜಮೀನಿನ ಮೇಲೆ, ವಸತಿಯೇತರ ಕಟ್ಟಡ ಹಾಗೂ ಖಾಲಿ ಜಾಗಗಳ ಮೇಲೆ ಅಥವಾ ಅವರೆಡರ ಮೇಲೆ, ಭೂ ಪರಿವರ್ತಿತ ಖಾಲಿ ಜಮೀನಿನ ಮೇಲೆ ತೆರಿಗೆ ವಿಧಿಸಲು ಉದ್ದೇಶಿಸಲಾಗಿದೆ. ಇದರ ಜತೆ ಜತೆಗೆ ಕಾನೂನು ಬಾಹಿರವಾಗಿ ನಿರ್ಮಾಣ ಮಾಡಲಾಗಿರುವ ಕಟ್ಟಡಗಳ ಮೇಲೆ ತೆರಿಗೆ ವಿಧಿಸಲಾಗುವುದು ಎಂದು ಕರಡು ಪ್ರತಿಯಲ್ಲಿ ಉಲ್ಲೇಖ ಇದೆ.
  • ಈ ವೆರೆಗೆ ಗ್ರಾಂಥಾಲಯ ಕರವನ್ನು ಮಾತ್ರ ಗ್ರಾಮ ಪಂಚಾಯಿತಿಗಳು ವಸೂಲು ಮಾಡುತ್ತಿದ್ದವು. ಇದೀಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಚಿತ್ವ ಕಾಪಾಡಲು ಪ್ರತಿ ಕುಟುಂಬಕ್ಕೆ ನೈರ್ಮಲ್ಯ ಶುಲ್ಕ, ಸಂತೆ, ಮಾರುಕಟ್ಟೆ, ಹಾಗೂ ರಸ್ತೆ ಬದಿ ಮಾರಾಟ ಸ್ಥಳಗಳಿಗೆ ದೈನಂದಿನ ಶುಲ್ಕ, ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಪ್ರವಾಸಿ ಸ್ಥಳ, ಪ್ರೇಕ್ಷಣಿಯ ಹಾಗೂ ಯಾತ್ರಾ ಸ್ಥಳಗಳಲ್ಲಿ ಪಂಚಾಯತಿಗಳು ಒದಗಿಸಿದ ಪಾರ್ಕಿಂಗ್‌ನಲ್ಲಿ ಬಸ್‌, ಲಾರಿಗಳಿಗೆ ದೈನಂದಿನ ಶುಲ್ಕ, ಫೈಬರ್‌ ಕೇಬಲ್‌, ಗ್ಯಾಸ್‌ ಅಥವಾ ಪೆಟ್ರೋಲಿಯಂ, ಇತರೆ ಪೈಪ್‌ ಲೈನ್‌ ಹಾಕಲು ಶುಲ್ಕ, ಮನೋರಂಜನೆ ಮೇಲೆ ಶುಲ್ಕ ವಿಧಿಸಲು ಸರ್ಕಾರ ಉದ್ದೇಶಿಸಿದೆ. ಹೀಗಾದಲ್ಲಿ ಪ್ರತೀ ಸೇವೆಗೂ ಗ್ರಾಮೀಣರೂ ಕೂಡ ಶುಲ್ಕ ಪಾವತಿ ಮಾಡಬೇಕು.
  • ವಿವಿಧ ಉದ್ದೇಶಗಳಿಗಾಗಿ ಗ್ರಾಮ ಪಂಚಾಯತಿಗಳು ನೀಡುವ ನಿರಾಕ್ಷೇಪಣ ಪತ್ರ (NOC) ಗಳಿಗೆ 200 ರೂ., ಇ-ಸ್ವತ್ತು ಹಾಗೂ ಬಾಪೂಜಿ ಸೇವಾ ಕೇಂದ್ರದ ಮೂಲಕ ನೀಡುವ ಪ್ರತಿ ಸೇವೆಗಳಿಗೆ 50 ರೂ., ಗ್ರಾಮ ಪಂಚಾಯತಿಗಳ ಆಸ್ತಿ ವಿವರಗಳ ವಹಿಯಲ್ಲಿ ಮಾಲಿಕನ ಹೆಸರು ಸೇರ್ಪಡೆ, ಬದಲಾವಣೆಗೆ 1000 ರೂ. ಶುಲ್ಕ ವಿಧಿಸುವ ಪ್ರಸ್ತಾಪವೂ ಹೊಸ ಕರಡು ಪ್ರತಿಯಲ್ಲಿವೆ.

ಯಾವುದಕ್ಕೆಲ್ಲಾ ತೆರಿಗೆ ವಿನಾಯಿತಿ?

  • ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಹಾಗೂ ಗ್ರಾಮ ಪಂಚಾಯತ್‌ ಮುಂತಾದ ಸ್ಥಳೀಯ ಸಂಸ್ಥೆಗಳಿಗೆ ಸೇರಿದ ಕಟ್ಟಡ ಮತ್ತು ಖಾಲಿ ನಿವೇಶನಗಳು, ಸಂಪೂರ್ಣ ಧರ್ಮಾರ್ಥ ಸಂಸ್ಥೆಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.
  • ಇನ್ನು ಸೈನಿಕರು, ಮಾಜಿ ಸೈನಿಕರು, ಸೈನಿಕರ ವಿಧವಾ ಮಹಿಳೆಯರ ಸ್ವಂತ ವಾಸದ ಕಟ್ಟಡ, ವಿಶೇಷ ಚೇತನರು ಮತ್ತು ವಿಧವೆಯರು, ಏಡ್ಸ್‌, ಕುಷ್ಠರೋಗ ಪೀಡಿತ ಮಾಲಿಕರ ವಾಸದ ಮನೆಗಳಿಗೆ, ಸರ್ಕಾರದ ಯೋಜನೆಯಡಿ ನೋಂದಾಯಿಸಲ್ಪಟ್ಟ ಮಹಿಳಾ ಸ್ವಸಹಾಯ ಸಂಘ, ಒಕ್ಟೂಟ, ವಿಶೇಷ ಚೇತನರು ನಡೆಸುವ ಸಣ್ಣ ವಾಣಿಜ್ಯ ಘಟಕಗಳಿಗೆ ಶೇ.50ರಷ್ಟು ತೆರಿಗೆ ವಿನಾಯಿತಿ ಇರಲಿದೆ