Published on: October 15, 2021

ಚಿನ್ನಾಭರಣ ನಗದೀಕರಣ ಯೋಜನೆಗೆ ಚಾಲನೆ

ಚಿನ್ನಾಭರಣ ನಗದೀಕರಣ ಯೋಜನೆಗೆ ಚಾಲನೆ

ಸುದ್ಧಿಯಲ್ಲಿ ಏಕಿದೆ?  ತಮಿಳುನಾಡಿನ ವಿವಿಧ ದೇವಸ್ಥಾನಗಳಿಗೆ ಭಕ್ತರು ನೀಡುವ ಚಿನ್ನದ ಸಣ್ಣ ಆಭರಣಗಳ ನಗದೀಕರಣ ಯೋಜನೆಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಮರು ಚಾಲನೆ ನೀಡಿದರು.

  • ಚೆನ್ನೈನ ತಿರುವೇಕಾಡು, ತಿರುಚಿನಾಪಳ್ಳಿಯ ಸಮಯಪುರಂ, ವಿರುಧುನಗರ ಜಿಲ್ಲೆಯ ಇರುಕನಕುಡಿಗಳಲ್ಲಿನ ಮೂರು ದೇವಾಲಯಗಳಲ್ಲಿನ ಚಿನ್ನದ ಸಣ್ಣ ಆಭರಣಗಳ ನಗದೀಕರಣ ಯೋಜನೆಯನ್ನು ಸ್ಟಾಲಿನ್ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.

ಏನಿದು ಯೋಜನೆ ?

  • ಭಕ್ತರು ಹರಕೆಯ ಚಿನ್ನದ ಸಣ್ಣ ಆಭರಣಗಳನ್ನು ಗಟ್ಟಿಗಳಾಗಿ ಪರಿವರ್ತಿಸಿ, ನಂತರ ಚಿನ್ನದ ಗಟ್ಟಿಗಳನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟು, ದೇವಸ್ಥಾನಗಳಿಗೆ ಬಡ್ಡಿ ರೂಪದಲ್ಲಿ ಆದಾಯ ತಂದುಕೊಡುವ ಯೋಜನೆ ಇದಾಗಿದೆ.
  • ಸರ್ಕಾರವು ರಾಜ್ಯವನ್ನು ಚೆನ್ನೈ, ಮಧುರೈ ಮತ್ತು ತಿರುಚಿನಾಪಳ್ಳಿ ಹೀಗೆ ಮೂರು ವಲಯಗಳಾಗಿ ವಿಂಗಡಿಸಿದ್ದು, ದೇವಸ್ಥಾನದ ಚಿನ್ನಾಭರಣಗಳ ನಗದೀಕರಣ ಪ್ರಕ್ರಿಯೆಯ ಮೇಲ್ವಿಚಾರಣೆಗೆ ನಿವೃತ್ತ ನ್ಯಾಯಾಧೀಶರನ್ನು ನೇಮಿಸಿದೆ. ಇಡೀ ಪ್ರಕ್ರಿಯೆಯನ್ನು ಸಂಪೂರ್ಣ ವಿಡಿಯೊ ಚಿತ್ರೀಕರಣ ಮಾಡಲಾಗುತ್ತದೆ.
  • ಕಳೆದ ಹತ್ತು ವರ್ಷಗಳಲ್ಲಿ ಭಕ್ತರು ದೇವಸ್ಥಾನಗಳಿಗೆ ದಾನ ಮಾಡಿದ ಚಿನ್ನದ ಆಭರಣಗಳು ನಿಷ್ಪ್ರಯೋಜಕವಾಗಿವೆ. ಸರ್ಕಾರ ಚಿನ್ನದ ಆಭರಣಗಳನ್ನು ಚಿನ್ನದ ಗಟ್ಟಿಗಳಾಗಿ ಪರಿವರ್ತಿಸುವ ಮೂಲಕ ಮತ್ತು ಬ್ಯಾಂಕುಗಳಲ್ಲಿ ಠೇವಣಿ ಇಟ್ಟು, ನಗದೀಕರಣ ಮಾಡುವ ಮೂಲಕ ದೇವಾಲಯಕ್ಕೆ ಆದಾಯ ತಂದುಕೊಡಲಿದೆ. ಈ ಹಣವನ್ನು ವಿವಿಧ ಅಭಿವೃದ್ಧಿ ಉದ್ದೇಶಗಳಿಗಾಗಿ ಬಳಸಬಹುದು.

ಹಿನ್ನಲೆ

  • ನ್ಯಾಯಾಲಯದಲ್ಲಿ, ತಮಿಳುನಾಡು ಸರ್ಕಾರವು ಈ ಯೋಜನೆಯನ್ನು ಬಲವಾಗಿ ಸಮರ್ಥಿಸಿಕೊಂಡಿದೆ. ಈ ಯೋಜನೆ 1977ರಿಂದ ಜಾರಿಯಲ್ಲಿದೆ. ಪಳನಿಯಲ್ಲಿರುವ ಮುರುಗನ್ ದೇವಸ್ಥಾನ, ಮಧುರೆಯ ಮೀನಾಕ್ಷಿ ಅಮ್ಮನ್ ದೇವಸ್ಥಾನ, ತಿರುಚೆಂಡೂರಿನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭಕ್ತರು ಉಡುಗೊರೆಯಾಗಿ ಚಿನ್ನವನ್ನು ನೀಡುತ್ತಿದ್ದರು.
  • ಸಮಯಪುರದ ಮರಿಯಮ್ಮನ ದೇವಸ್ಥಾನದಲ್ಲಿನ ಸಣ್ಣ ಆಭರಣಗಳನ್ನು ಚಿನ್ನದ ಗಟ್ಟಿಗಳಾಗಿ ಪರಿವರ್ತಿಸಲಾಗಿದೆ. 500 ಕೆ.ಜಿಗಿಂತಲೂ ಹೆಚ್ಚು ಚಿನ್ನದ ಗಟ್ಟಿಗಳನ್ನು ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಠೇವಣಿ ಇಡಲಾಗಿದೆ.