Published on: December 12, 2022
ಚುಟುಕು ಸಮಾಚಾರ – 12 ನವೆಂಬರ್ 2022
ಚುಟುಕು ಸಮಾಚಾರ – 12 ನವೆಂಬರ್ 2022
- ಮೈಸೂರು ರಾಜ ಟಿಪ್ಪು ಸುಲ್ತಾನ್ ಆಡಳಿತಾವಧಿಯಿಂದಲೂ ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಪ್ರತಿದಿನ ಸಂಜೆ ಹೊತ್ತಿನಲ್ಲಿ ನಡೆಯುವ ‘ದೀವಟಿಗೆ ಸಲಾಂ’ ಪೂಜಾ ವಿಧಾನವನ್ನು ನಿಲ್ಲಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ‘ದೀವಟಿಗೆ ಸಲಾಂ’ ನಡೆಯುತ್ತಿದ್ದ ಸಮಯದಲ್ಲಿ ಇನ್ನು ಮುಂದೆ ‘ದೀಪ ನಮಸ್ಕಾರ’ ನಡೆಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
- ರಾಜ್ಯ ಸರಕಾರ 2022-23ನೇ ಸಾಲಿನ ಆಯವ್ಯಯದಲ್ಲಿ ಯಶಸ್ವಿನಿ ಯೋಜನೆ ಪರಿಷ್ಕರಿಸಿ ಮರು ಜಾರಿ ಮಾಡಿ ಆದೇಶಿಸಿದ್ದು, ರಾಜ್ಯಾದ್ಯಂತ ಸದಸ್ಯತ್ವ ನೋಂದಣಿ ಆರಂಭಗೊಂಡಿದೆ. ಗ್ರಾಮೀಣ ಸಹಕಾರ ಸಂಘಗಳ ಸ್ವಸಹಾಯ ಗುಂಪುಗಳ ನಾಲ್ಕು ಸದಸ್ಯರ ಕುಟುಂಬಕ್ಕೆ ವಾರ್ಷಿಕ 500 ರೂ. ಶುಲ್ಕ ಮತ್ತು ನಗರ ಕೇಂದ್ರೀತ ಸಹಕಾರಿ ಸಂಘದ ಗ್ರಾಮೀಣ ಭಾಗದ ಶಾಖಾ ಸದಸ್ಯರಿಗೆ 500 ರೂ. ಬದಲು 1000 ರೂ. ಶುಲ್ಕವನ್ನು ವಿಧಿಸಲಾಗಿದೆ.
- ಡಿಸೆಂಬರ್ 13-15ರವರೆಗೆ ಬೆಂಗಳೂರಿನಲ್ಲಿ ಮೊದಲ ಜಿ20 ಹಣಕಾಸು ಮತ್ತು ಸೆಂಟ್ರಲ್ ಬ್ಯಾಂಕ್ ನಿಯೋಗಗಳ ಸಭೆ ನಡೆಯಲಿದ್ದು, ಕೇಂದ್ರ ಹಣಕಾಸು ಸಚಿವಾಲಯ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜಂಟಿಯಾಗಿ ಇದನ್ನು ಆಯೋಜಿಸಿವೆ.’21 ನೇ ಶತಮಾನದ ಪಾಲುದಾರಿಕಾ ಜಾಗತಿಕ ಸವಾಲುಗಳನ್ನು ಎದುರಿಸಲು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳ ಪ್ರಬಲಪಡಿಸುವಿಕೆ’ ಎಂಬ ವಿಷಯದ ಬಗ್ಗೆ ಸಮಿತಿ ಚರ್ಚೆ ನಡೆಸಲಿದೆ. ‘ಸೂಕ್ಷ್ಮ ಹಣಕಾಸು ವ್ಯವಸ್ಥೆಯಲ್ಲಿ ಕೇಂದ್ರೀಯ ಬ್ಯಾಂಕುಗಳ ಪಾತ್ರ’ ಕುರಿತ ವಿಚಾರ ಸಂಕಿರಣವೂ ನಡೆಯಲಿದೆ.
- ಪದೇ ಪದೇ ಕರೆ ಮಾಡಿ ಕಿರಿಕಿರಿ ಉಂಟು ಮಾಡುವ ಸಾಲದ ಆಫರ್ ಕೊಡುವ ಕರೆಗಳು, ಅನ್ಯರ ಹೆಸರಲ್ಲಿ ವಂಚನೆಗೆ ಯತ್ನಿಸುವ ಕರೆಗಳನ್ನು ತಡೆಗಟ್ಟಲು ಕೇಂದ್ರ ಸರಕಾರ ಮುಂದಾಗಿದೆ. ಈ ಸಂಬಂಧ ದೇಶದ ಎಲ್ಲ ಹೊಸ ಮೊಬೈಲ್ ಫೋನ್ಗಳಲ್ಲಿ ಕಾರ್ಯನಿರ್ವಹಿಸುವ ನೂತನ ‘ಕಾಲರ್ ಐಡಿ’ಯ ಅಳವಡಿಕೆ ಹಾಗೂ ಬಳಕೆಯಲ್ಲಿರುವ ಫೋನ್ಗಳಿಗೆ ಇನ್ಸ್ಟಾಲ್ ಮಾಡಿಕೊಳ್ಳಬಹುದಾದ ಆ್ಯಪ್ ಬಿಡುಗಡೆ ಮಾಡಲಿದೆ.
- ತೆಂಗಿನ ಮರ ಹತ್ತುವವರಿಗೆ ವಿಮೆ – ತೆಂಗು ಅಭಿವೃದ್ಧಿ ಮಂಡಳಿಯು ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯ ಜೊತೆಗೂಡಿ, ತೆಂಗಿನ ಮರ ಹತ್ತುವವರಿಗೆ ವಿಮಾ ಸೌಲಭ್ಯ ಜಾರಿಗೆ ತಂದಿದೆ. ಇದರ ಅಡಿ ಅಪಘಾತ ಮತ್ತು ಸಾವಿಗೆ ರೂ. 5 ಲಕ್ಷದವರೆಗೆ ವಿಮಾ ರಕ್ಷೆ ಇರುತ್ತದೆ. ಆಸ್ಪತ್ರೆಗೆ ದಾಖಲಾದರೆ ರೂ. 1 ಲಕ್ಷದವರೆಗೆ ನೆರವು ಸಿಗುತ್ತದೆ. ಮಂಡಳಿಯು ತನ್ನ ‘ಫ್ರೆಂಡ್ಸ್ ಆಫ್ ಕೊಕೊನಟ್ ಟ್ರೀ’ ಮತ್ತು ನೀರಾ ತಂತ್ರಜ್ಞ ತರಬೇತಿ ಯೋಜನೆಗಳ ಅಡಿ ತರಬೇತಿ ಪಡೆಯುತ್ತಿರುವವರಿಗೆ ಒಂದು ವರ್ಷದ ಅವಧಿಗೆ ವಿಮಾ ಸೌಲಭ್ಯವನ್ನು ಉಚಿತವಾಗಿ ಒದಗಿಸಲಿದೆ.
- ರಾಷ್ಟ್ರೀಯತೆ ಆಧಾರದ ಮೇಲೆ ಗ್ರೀನ್ ಕಾರ್ಡ್ ನೀಡುವ ಬದಲು ಮೆರಿಟ್ ಆಧಾರದ ಮೇಲೆ ವಲಸೆ ಉದ್ಯೋಗಿಗಳಿಗೆ ಗ್ರೀನ್ ಕಾರ್ಡ್ ನೀಡುವ ಮಸೂದೆಗೆ ಒಪ್ಪಿಗೆ ಸೂಚಿಸಲು ಅಮೇರಿಕ ಸರಕಾರ ನಿರ್ಧರಿಸಿದೆ. 9 ವರ್ಷಕ್ಕಿಂತ ಹೆಚ್ಚು ಕಾಲದಿಂದ ಅಮೆರಿಕದಲ್ಲಿ ನೆಲೆಸಿರುವ ಯಾವುದೇ ರಾಷ್ಟ್ರದ ಉದ್ಯೋಗಿ, ತಮ್ಮ ಪ್ರತಿಭೆಯ ಆಧಾರದ ಮೇಲೆ ಗ್ರೀನ್ ಕಾರ್ಡ್ ಪಡೆಯಬಹುದಾಗಿದೆ.