Published on: February 15, 2024
ಚುಟುಕು ಸಮಾಚಾರ : 15 ಫೆಬ್ರವರಿ 2024
ಚುಟುಕು ಸಮಾಚಾರ : 15 ಫೆಬ್ರವರಿ 2024
- ಅಣಬೆ ಕಪ್ಪೆ: ಕರ್ನಾಟಕದ ಕುದುರೆಮುಖ ಪರ್ವತ ಶ್ರೇಣಿಯ ತಪ್ಪಲಿನ ಕಾರ್ಕಳ ತಾಲ್ಲೂಕಿನ ಮಾಳ ಗ್ರಾಮದ ಕೊಳವೊಂದರಲ್ಲಿ ಕಂಡು ಬಂದ ‘ಗೋಲ್ಡನ್ ಬ್ಯಾಕ್ಡ್’ ಕಪ್ಪೆಯ ಪಕ್ಕೆಯ ಮೇಲೆ ಅಣಬೆ ಮೊಳಕೆಯೊಡೆದಿದೆ.
- ಕೊಳೆತ ವಸ್ತು, ಮಣ್ಣು, ಮರದ ಮೇಲೆ ಮಾತ್ರ ಬೆಳೆಯುವ ಅಣಬೆಯು ಜೀವಂತ ಪ್ರಾಣಿಯ ಮೇಲೆ ಬೆಳೆದಿರುವುದು ಇದೇ ಮೊದಲು. ಶಿಲೀಂಧ್ರ (ಫಂಗೈ) ವರ್ಗಕ್ಕೆ ಸೇರಿದ ಅಣಬೆಯನ್ನು ‘ಮೈಸಿನ್’ ಅಥವಾ ‘ಬಾನೆಟ್ ಮಶ್ರೂಮ್’ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಗೋಲ್ಡನ್ ಬ್ಯಾಕ್ಡ್’ ಕಪ್ಪೆ ಎಂದು ಕರೆಯಲ್ಪಡುವ ಇಂಡೋಸಿಲ್ವಿರಾನಾ ಔರಾಂಟಿಯಾಕಾ(ವೈಜ್ಞಾನಿಕ ಹೆಸರು), ಭಾರತದ ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿರುವ ಕಪ್ಪೆ ಜಾತಿಯಾಗಿದೆ.
- ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೆಎಫ್ಡಿ ಕಾಯಿಲೆಯ ಹರಡುವಿಕೆಯನ್ನು ಪರಿಶೀಲಿಸಲು ಪರೀಕ್ಷೆಗಳನ್ನು ನಡೆಸಿದೆ. ಇದನ್ನು ಮಂಗನ ಕಾಯಿಲೆ ಎಂದು ಕರೆಯಲಾಗುತ್ತದೆ. ಇದು ಉಣ್ಣೆ ಕಚ್ಚಿ ಹರಡುವ ವೈರಲ್ ಹೆಮರಾಜಿಕ್(ಬಹು ಅಂಗಾಂಗ ವೈಫಲ್ಯ) ಜ್ವರ ಆಗಿದೆ ಮೂಲ: ಕೆಎಫ್ಡಿಯನ್ನು ಮೊದಲು 1956 ರಲ್ಲಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕೈಸನೂರು ಅರಣ್ಯ ಪ್ರದೇಶದಲ್ಲಿ ಗುರುತಿಸಲಾಯಿತು. ಆದ್ದರಿಂದ ರೋಗಕ್ಕೆ ಈ ಪ್ರದೇಶದ ಹೆಸರನ್ನು ಇಡಲಾಗಿದೆ.
- ಸೌರವಿದ್ಯುತ್ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ‘ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನಾ’(ಸೌರ ಮೇಲ್ಚಾವಣಿ ಯೋಜನೆಯ ಮರುನಾಮಕರಣ) ಆರಂಭಿಸುತ್ತಿದೆ. ಒಂದು ಕೋಟಿ ಮನೆಗಳಿಗೆ ಪ್ರತಿ ತಿಂಗಳು ತಲಾ 300 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ಪೂರೈಸುವ ಗುರಿಯನ್ನು ಈ ಯೋಜನೆಯು ಹೊಂದಿದೆ. ನೋಡಲ್ ಏಜನ್ಸಿ: REC (ರೂರಲ್ ಎಲೆಕ್ಟ್ರಿಫಿಕೇಶನ್ ಕಾರ್ಪೊರೇಷನ್) ಲಿಮಿಟೆಡ್
- ಕಾಜಿ ನೀಮು(ಸಿಟ್ರಸ್ ಲೆಮನ್) ಹಣ್ಣನ್ನು ‘ರಾಜ್ಯ ಹಣ್ಣು’ ಎಂದು ಅಸ್ಸಾಂ ಸರ್ಕಾರ ಘೋಷಿಸಿದೆ. ನಿಂಬೆ ಜಾತಿಗೆ ಸೇರಿದ ‘ಕಾಜಿ ನೀಮು’ ಅಸ್ಸಾಂನಲ್ಲಿ ಸಿಗುವ ಒಂದು ವಿಶೇಷ ಫಲವಾಗಿದೆ. 2016ರಲ್ಲಿ ಭೌಗೋಳಿಕ ಗುರುತಿನ ಸ್ಥಾನಮಾನವನ್ನು(ಜಿಐ ಟ್ಯಾಗ್) ಈ ಹಣ್ಣಿಗೆ ನೀಡಲಾಗಿತ್ತು. ಆಹಾರಕ್ಕೆ ವಿಶೇಷವಾದ ಸ್ವಾದವನ್ನು ನೀಡುವುದಲ್ಲದೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಈ ಹಣ್ಣಿಗಿದೆ.
- ಅರಬ್ ಸಂಯುಕ್ತ ಸಂಸ್ಥಾನ(ಅಬುಧಾಬಿ)ದಲ್ಲಿ ‘ಬೋಚಾಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ ’(ಬಿಎಪಿಎಸ್) ಹಿಂದೂ ದೇವಾಲಯವನ್ನು ಭಾರತದ ಪ್ರಧಾನಿ ಅವರು ಫೆಬ್ರುವರಿ 14ರಂದು ಉದ್ಘಾಟಿಸಿದರು. ದುಬೈ-ಅಬುಧಾಬಿ ಶೇಖ್ ಜಾಯೆದ್ ಹೆದ್ದಾರಿಯ ಅಲ್ ರಹ್ಬಾ ಬಳಿಯ ಅಬು ಮುರೇಖಾದಲ್ಲಿ 27 ಎಕರೆ ಪ್ರದೇಶದಲ್ಲಿ BAPS ಸ್ವಾಮಿನಾರಾಯಣ ಸಂಸ್ಥೆಯಿಂದ ದೇವಾಲಯವನ್ನು ನಿರ್ಮಿಸಲಾಗಿದೆ.
- ಮಯನ್ಮಾರ್ ಮಿಲಿಟರಿ ಸರ್ಕಾರವು ದೇಶದ ಎಲ್ಲ ಯುವಕ ಮತ್ತು ಯುವತಿಯರು ಸೇನೆಯಲ್ಲಿ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ. 18 ರಿಂದ 35 ವರ್ಷ ವಯಸ್ಸಿನ ಯುವಕರು ಮತ್ತು 18 ರಿಂದ 27 ವರ್ಷ ವಯಸ್ಸಿನ ಯುವತಿಯರು 2 ವರ್ಷಗಳ ಕಾಲ ಸೇವೆ ಸಲ್ಲಿಸಬೇಕು. 45 ವರ್ಷ ವಯಸ್ಸಿನವರೆಗಿನ ವೈದ್ಯರು ಮುಂತಾದ ಪರಿಣಿತರು ಮೂರು ವರ್ಷಗಳ ಕಾಲ ಸೇನೆಗೆ ಸೇವೆ ಸಲ್ಲಿಸಬೇಕು. ‘ದೇಶವನ್ನು ರಕ್ಷಿಸುವ ಜವಾಬ್ದಾರಿ ಕೇವಲ ಸೈನಿಕರದ್ದಲ್ಲ, ಪ್ರತಿಯೊಬ್ಬ ನಾಗರಿಕನದ್ದು. ಹಾಗಾಗಿ ಎಲ್ಲರೂ ನಾಗರಿಕ ಸೇನಾ ಸೇವಾ ಕಾನೂನನ್ನು ಹೆಮ್ಮೆಯಿಂದ ಪಾಲಿಸಬೇಕು’ ಎಂದು ಮಿಲಿಟರಿ ಸರ್ಕಾರದ ವಕ್ತಾರ ತಿಳಿಸಿದ್ದಾರೆ. 2021ರಿಂದ ಸೇನೆಯ ನಿಯಂತ್ರಣದಲ್ಲಿರುವ ಮಯನ್ಮಾರ್ ನಲ್ಲಿ ಯೋಧರ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಹೊಸ ಕಾನೂನನ್ನು ರೂಪಿಸಿದೆ.