Published on: December 23, 2022

ಚುಟುಕು ಸಮಾಚಾರ – 23 ಡಿಸೆಂಬರ್ 2022

ಚುಟುಕು ಸಮಾಚಾರ – 23 ಡಿಸೆಂಬರ್ 2022

  • ನಂದಿಬೆಟ್ಟದ ತಪ್ಪಲಿನ ಹೆಗ್ಗಡಿಹಳ್ಳಿಯಲ್ಲಿ ಹೊಸ ಜೇಡ ಪ್ರಭೇದವನ್ನು ಪರಿಸರಾಸಕ್ತರು ಪತ್ತೆ ಹಚ್ಚಿದ್ದಾರೆ. ನಂದಿ ಬೆಟ್ಟದಲ್ಲಿ ಹುಟ್ಟುವ ಅರ್ಕಾವತಿ ನದಿಯ ಹೆಸರನ್ನು ಈ ಹೊಸ ಜೇಡ ಪ್ರಬೇಧಕ್ಕೆ ಇಡಲಾಗಿದೆ. ಎಲ್ಲಿ ಕಾಣಸಿಗುತ್ತದೆ? ಭಾರತ, ಚೀನಾ, ಶ್ರೀಲಂಕಾ ಮತ್ತು ವಿಯಟ್ನಾಂ ಸೇರಿದಂತೆ ಜಗತ್ತಿನ 4 ದೇಶಗಳಲ್ಲಿ ಮಾತ್ರ ಕಾಣಬಹುದಾಗಿದೆ.
  • ರೋಗ ನಿರೋಧಕ ಔಷಧಯುಕ್ತ ಕರ್ಕ್ಯುಮಿನ್ ಅಂಶ ಶೇ 7ರಷ್ಟಿರುವ ಮೇಘಾಲಯದ ಲಕಾಡಾಂಗ್ ಅರಿಸಿನ ತಳಿಯನ್ನು ಕೇಂದ್ರ ತಂಬಾಕು ಸಂಶೋಧನಾಲಯದಲ್ಲಿ ‘ಪ್ರತಿಭಾ ಮತ್ತು ಪ್ರಗತಿ’ ಹೆಸರಿನಲ್ಲಿ ಅಭಿವೃದ್ಧಿಪಡಿಸಲಾಗಿದೆ.
  • ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನವು ಇದೀಗ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಸಜ್ಜಾಗಿದ್ದು, ಹೊಸ ಜಾತಿಯ ಪಕ್ಷಿಗಳು ಮತ್ತು ಸಸ್ತನಿಗಳನ್ನು ವಿದೇಶಗಳಿಂದ ಪಡೆದುಕೊಂಡಿದೆ.
  • ಕೇಂದ್ರ ಸಾಹಿತ್ಯ ಅಕಾಡೆಮಿಯು ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ನೀಡುವ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು ಕನ್ನಡದ ಪ್ರಮುಖ ಲೇಖಕರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ‘ಬಹುತ್ವದ ಭಾರತ ಮತ್ತು ಬೌದ್ಧ ತಾತ್ತ್ವಿಕತೆ’ ಕೃತಿಯು ಈ ವರ್ಷದ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ. ಅನುವಾದ ಪ್ರಶಸ್ತಿಗೆ ಪದ್ಮರಾಜ ದಂಡಾವತಿ ಅವರು ಅನುವಾದಿಸಿದ ‘ಸೀತಾ: ರಾಮಾಯಣದ ಸಚಿತ್ರ ಮರುಕಥನ’ ಕೃತಿ ಆಯ್ಕೆಯಾಗಿದೆ.
  • ದೇಶದಲ್ಲಿ ಪ್ರತಿವರ್ಷ ಡಿಸೆಂಬರ್ 23ನ್ನು ರಾಷ್ಟ್ರೀಯ ರೈತರ ದಿನ ಅಥವಾ ಕಿಸಾನ್ ದಿವಸ ಎಂದು ಆಚರಿಸಲಾಗುತ್ತದೆ. ಭಾರತದ 5ನೇ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಸ್ಮರಣಾರ್ಥ ಅವರ ಜನ್ಮದಿನವನ್ನು ಕಿಸಾನ್ ದಿವಸ ಎಂದು ಆಚರಿಸಲಾಗುತ್ತದೆ. 2001ರಿಂದ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವನ್ನು ರಾಷ್ಟ್ರೀಯ ರೈತರ ದಿನವನ್ನಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿತು.