Published on: March 6, 2023

ಚುಟುಕು ಸಮಾಚಾರ – 4 ಮಾರ್ಚ್ 2023

ಚುಟುಕು ಸಮಾಚಾರ – 4 ಮಾರ್ಚ್ 2023

  • ಅಲ್ಟ್ ಡಿಜಿಟಲ್ ಟೆಕ್ನಾಲಜೀಸ್ ಎಂಬ ಐಟಿ ಕಂಪನಿ ಬೆಂಗಳೆ ಗ್ರಾಮದ ಒಡ್ಡಿನಕೊಪ್ಪದಲ್ಲಿ ತನ್ನ ಶಾಖೆಯನ್ನು ಆರಂಭಿಸಿದ್ದು, ಇದರಿಂದ ಉದ್ಯೋಗ ಅರಸಿ ವಲಸೆ ಹೋಗುವ ಬದಲು ಐಟಿ ಉದ್ಯೋಗಿಗಳು ತಾವಿರುವ ಪರಿಸರದ ನಡುವಲ್ಲೇ ಕೆಲಸ ಮಾಡುವಂತಾಗಿದೆ. 8 ವರ್ಷಗಳ ಹಿಂದೆ ಪ್ರಾರಂಭವಾದ ಸಂಸ್ಥೆಯ ಮುಖ್ಯ ಕಚೇರಿ ಉತ್ತರ ಪ್ರದೇಶದ ನೋಯ್ಡಾದಲ್ಲಿದೆ. ನೊಯ್ಡಾದಲ್ಲಿ ಕೆಲಸ ಮಾಡುವ ಟೆಕ್ಕಿಗಳಂತೆಯೇ ಇಲ್ಲಿನ ಟೆಕ್ಕಿಗಳಿಗೂ ಸಮಾನ ವೇತನವನ್ನು ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರತಿ ಗ್ರಾಮವು ಡಿಜಿಟಲ್ ಸಂಪರ್ಕವನ್ನು ಹೊಂದಿದೆ. ಇನ್ನೂ ಅನೇಕ ಪ್ರದೇಶಗಳು ಹೊಸ ಸಂಪರ್ಕಗಳನ್ನು ಪಡೆಯುತ್ತಿವೆ. ರಾಜ್ಯ ಸರ್ಕಾರವು ಪ್ರಚಾರ ಮಾಡುತ್ತಿರುವ ಬಿಯಾಂಡ್ ಬೆಂಗಳೂರು ಪರಿಕಲ್ಪನೆಯು ಶಿರಸಿಯಂತಹ ಸಣ್ಣ ಪಟ್ಟಣಗಳಲ್ಲಿ ಕಂಪನಿಗಳಿಗೆ ನೆಲೆಸಲು ಸಹಾಯ ಮಾಡುತ್ತದೆ.
  • ಹೊಸದಿಲ್ಲಿಯಲ್ಲಿ 2016 ರಲ್ಲಿ ನಡೆದಿದ್ದ ಭೀಕರ ಅತ್ಯಾಚಾರ ಘಟನೆಯ ನಂತರ ರಚಿಸಲಾದ ‘ನಿರ್ಭಯಾ ಯೋಜನೆ’ ಅಡಿಯಲ್ಲಿ ದೇಶದಾದ್ಯಂತ ಅನೇಕ ನಗರಗಳಲ್ಲಿ ಜಾರಿಗೊಳಿಸಲಾಗುತ್ತಿರುವ ಸೇಫ್ ಸಿಟಿ ಯೋಜನೆ ಇದೀಗ ಕರ್ನಾಟಕದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಾಲನೆ ದೊರಕಿದೆ. ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಈ ಯೋಜನೆಗೆ ಚಾಲನೆ ನೀಡಿದ್ದಾರೆ.
  • ಶಿಗ್ಗಾವಿ ತಾಲೂಕಿನ ಶಿಶುವಿನಾಳ ಗ್ರಾಮದ ಸಂತ ಶರೀಫ ಶಿವಯೋಗಿ ಮತ್ತು ಗೋವಿಂದಭಟ್ಟರ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಶಿಶುನಾಳ ಗ್ರಾಮದಲ್ಲಿ ಸಂತ ಶಿಶುನಾಳ ಶರೀಫರ ತತ್ವ ಪದಗಳ ಭಾವಾರ್ಥ ಅರಿಯುವ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದಾರೆ.
  • ಛತ್ತೀಸ್ಗಢದ ಬಲೋದ್ ಜಿಲ್ಲಾಧಿಕಾರಿಗಳ ಕಚೇರಿ, ಹಳೆಯ ಮಾದರಿಯನ್ನು ಹೊಸದಾಗಿ ಅಳವಡಿಸಿಕೊಂಡು ಗಮನ ಸೆಳೆಯುತ್ತಿದೆ. ಕಚೇರಿಗೆ ಬಣ್ಣ ಹಾಕುವ ವಿಷಯದಲ್ಲಿ ಸಂಪೂರ್ಣ ಸಾವಯವ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದ್ದು, ಹಸುವಿನ ಸಗಣಿ ಪ್ರಮುಖ ಘಟಕಾಂಶವಾಗಿರುವ ನೈಸರ್ಗಿಕ, ಪರಿಸರ ಸ್ನೇಹಿ ಪೇಂಟ್ ನ್ನು ಹಚ್ಚಲಾಗಿದೆ.
  • ಕೇಂದ್ರ ಸರ್ಕಾರವು ಎನ್ಜಿಒಗಳ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದು ಈ ಹಿನ್ನೆಲೆಯಲ್ಲಿ ಹಣದ ಹರಿವಿನ ಬಗ್ಗೆ ಕಣ್ಗಾವಲು ಮತ್ತು ಈ ಘಟಕಗಳ ಲೆಕ್ಕಪತ್ರ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕಗೊಳಿಸಲು ಆಧಾರ್ ಮಾದರಿಯಲ್ಲಿ ವಿಶಿಷ್ಟ ಗುರುತಿನ ಸಂಖ್ಯೆಯೊಂದಿಗೆ ಎಲ್ಲಾ ಎನ್ಜಿಒಗಳನ್ನು ಕೇಂದ್ರೀಯ ಡೇಟಾ ಹಬ್ ಅಡಿಯಲ್ಲಿ ತರುವ ಕ್ರಮಕ್ಕೆ ಕೇಂದ್ರ ಮುಂದಾಗಿದೆ.
  • ಗುಜರಾತ್‌ನ ಅಂತರರಾಷ್ಟ್ರೀಯ ಆರ್ಥಿಕ ತಾಂತ್ರಿಕ ನಗರದಲ್ಲಿ (ಗಿಫ್ಟ್‌ ಸಿಟಿ) ಆಸ್ಟ್ರೇಲಿಯಾದ ದೇಕಿನ್ ವಿಶ್ವವಿದ್ಯಾಲಯವು ಕ್ಯಾಂಪಸ್‌ ತೆರೆಯಲು ಅನುಮೋದನೆ ನೀಡಿರುವುದಾಗಿ ಅಂತರ ರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರದ ಪ್ರಾಧಿಕಾರ ತಿಳಿಸಿದೆ. ಆ ಮೂಲಕ ಭಾರತದಲ್ಲಿ ಕ್ಯಾಂಪಸ್‌ ತೆರೆಯಲು ಅನುಮತಿ ಪಡೆದ ಮೊದಲ ವಿದೇಶಿ ವಿಶ್ವವಿದ್ಯಾಲಯವಾಗಿದೆ. ಗಾಂಧಿನಗರದಲ್ಲಿ ಮಾ.8ರಂದು ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್‌ ಅವರು ಈ ಕುರಿತಂತೆ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.