Published on: March 4, 2024
ಚುಟುಕು ಸಮಾಚಾರ : 4 ಮಾರ್ಚ್ 2024
ಚುಟುಕು ಸಮಾಚಾರ : 4 ಮಾರ್ಚ್ 2024
- ನಮ್ಮ ಮೆಟ್ರೊದಲ್ಲಿ ಪ್ರಯಾಣಿಸುವ ಸೌಲಭ್ಯದೊಂದಿಗೆ, ಡೆಬಿಟ್ ಕಾರ್ಡ್ನಂತೆ ವಾಣಿಜ್ಯ ಮಳಿಗೆಗಳಲ್ಲೂ ಉಪಯೋಗಿಸಬಹುದಾದ ‘ಒನ್ ನೇಷನ್ ಒನ್ ಕಾರ್ಡ್’ ಅನ್ನು ಪರಿಚಯಿಸಲಾಗಿದೆ. ಸಹಯೋಗ: ಆರ್ ಬಿಎಲ್ ಬ್ಯಾಂಕ್ನ ಸಹಯೋಗದಲ್ಲಿ ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜಿ ಕಾರ್ಡ್ ಅನ್ನು ಸಿದ್ಧಪಡಿಸಿದೆ. ನಮ್ಮ ಮೆಟ್ರೊದ ಕೌಂಟರನಲ್ಲಿ ಕಾರ್ಡ್ಗಳನ್ನು ಖರೀದಿಸಬಹುದಾಗಿದೆ. ‘ಬೆಂಗಳೂರಿನ ‘ನಮ್ಮ ಮೆಟ್ರೊ’ದಲ್ಲಿ ಈ ಕಾರ್ಡ್ ಬಳಸುವ ಜೊತೆಗೆ, ಚೆನ್ನೈ, ದೆಹಲಿ ಮೆಟ್ರೊಗಳಲ್ಲೂ ಬಳಸಬಹುದಾಗಿದೆ.
- ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆಗಳು ಹಾಗೂ ಆಯ್ದ ಸಮುದಾಯ ಆರೋಗ್ಯ ಕೇಂದ್ರಗಳನ್ನು ಹಾವು ಕಡಿತ ಚಿಕಿತ್ಸಾ ಕೇಂದ್ರಗಳನ್ನಾಗಿ ಗುರುತಿಸಲಾಗಿದೆ. ಹಾವಿನ ನಂಜಿನ ಲಕ್ಷಣಗಳು ವ್ಯಕ್ತಿಗೆ ಕಂಡುಬಂದಲ್ಲಿ ತಕ್ಷಣ ರೋಗಿಯ ಅಥವಾ ಸಂಬಂಧಿಕರ ಒಪ್ಪಿಗೆ ಪತ್ರ ಪಡೆದು, ಕಡ್ಡಾಯವಾಗಿ ‘ಆ್ಯಂಟಿ ಸ್ನೇಕ್ ವೆನಮ್’ ಅನ್ನು ಉಚಿತವಾಗಿ ಒದಗಿಸಬೇಕು ಎಂದು ಕರ್ನಾಟಕ ರಾಜ್ಯದ ಆರೋಗ್ಯ ಇಲಾಖೆ ತಿಳಿಸಿದೆ.
- ಶಿವಮೊಗ್ಗದ ತೀರ್ಥಹಳ್ಳಿಯ ಸಿಬ್ಬಲಗುಡ್ಡೆಯ ಮತ್ಸ್ಯ ಧಾಮದಲ್ಲಿನ ಮೊಹಶೀರ್ ಹಾಗೂ ಪಂಟಿಯಾಸ್ ತಳಿಯ ಮೀನುಗಳ ರಕ್ಷಣೆಗೆ ಬೇಸಿಗೆಯಲ್ಲಿ ತುಂಗಾ ನದಿಯು ಬರಿದಾಗದಂತೆ ಮೀನುಗಾರಿಕೆ ಇಲಾಖೆ ನೋಡಿಕೊಳ್ಳಬೇಕಿದೆ. ಹೀಗಾಗಿ ಇದೇ ಮೊದಲ ಬಾರಿಗೆ ಅಲ್ಲಿನ ಮೀನುಗಾರಿಕೆ ಹಿತರಕ್ಷಣಾ ಸಮಿತಿಯ ಮೊರೆ ಹೋಗಿದೆ. ಏನಿದು ಮತ್ಸ್ಯ ಧಾಮ: ಕಾವೇರಿ ಹಾಗೂ ತುಂಗೆಯ ಜಲಾನಯನ ಪ್ರದೇಶದಲ್ಲಿ ಕಾಣಸಿಗುವ ಅಳಿವಿನಂಚಿನ ಮೊಹಶೀರ್ ಹೆಸರಿನ ವಿಶಿಷ್ಟ ತಳಿಯ ಮೀನನ್ನು ಸಂರಕ್ಷಿಸಲು ಸರ್ಕಾರ ಮುಂದಾಗಿದೆ. ತುಂಗಾ ನದಿಯ ಶೃಂಗೇರಿ ತೀರ್ಥಹಳ್ಳಿ ತಾಲ್ಲೂಕಿನ ಸಿಬ್ಬಲಗುಡ್ಡೆ ಹಾಗೂ ಶಿವಮೊಗ್ಗ ಬಳಿಯ ಹೊಸಳ್ಳಿಯಲ್ಲಿ ಮೊಹಶೀರ್ ಮೀನುಗಳು ಹೆಚ್ಚಾಗಿ ಕಾಣಸಿಗುವ ಪ್ರದೇವನ್ನು ಸಂರಕ್ಷಿತ ಪ್ರದೇಶ (ಮತ್ಸ್ಯ ಧಾಮ) ಎಂದು ಘೋಷಿಸಲಾಗಿದೆ.
- ಹೃದಯ ತಪಾಸಣೆ ಯೋಜನೆ: ಕೆಎಸ್ಆರ್ಟಿಸಿ ನೌಕರರಿಗೆ ಹೃದಯ ತಪಾಸಣೆ ಯೋಜನೆ ಆರಂಭಿಸಿದ ಬಳಿಕ ಹೃದಯಾಘಾತದಿಂದ ಸಾಯುವ ನೌಕರರ ಪ್ರಮಾಣ ಕಡಿಮೆಯಾಗಿದೆ. ಈ ಹಿಂದೆ ತಿಂಗಳಿಗೆ ಸರಾಸರಿ ನಾಲ್ಕು ಜನ ಮೃತಪಡುತ್ತಿದ್ದರು. ಅದೀಗ ಒಂದಕ್ಕೆ ಇಳಿದಿದೆ. 2023ರ ಜನವರಿ ಒಂದೇ ತಿಂಗಳಲ್ಲಿ 8 ನೌಕರರು ಹೃದಯಾಘಾತದಿಂದ ನಿಧನರಾದಾಗ ನಿಗಮವು ಇದನ್ನು ಗಂಭೀರವಾಗಿ ಪರಿಗಣಿಸಿ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಜೊತೆಗೆ ಕೆಎಸ್ಆರ್ಟಿಸಿ ಒಡಂಬಡಿಕೆ ಮಾಡಿಕೊಂಡಿತ್ತು. ಪ್ರತಿ ನೌಕರರ ತಪಾಸಣೆಗೆ ₹1,200 ಕೆಎಸ್ಆರ್ಟಿಸಿ ಪಾವತಿಮಾಡುವುದು ಈ ಒಡಂಬಡಿಕೆಯಾಗಿದೆ. ಬೆಂಗಳೂರು ಮತ್ತು ಮೈಸೂರಿನ ಜಯದೇವ ಆಸ್ಪತ್ರೆಗಳಲ್ಲಿ ನಿಯಮಿತವಾಗಿ ತಪಾಸಣೆಗಳು ನಡೆಯುತ್ತಿವೆ.
- ಪ್ರತಿ ವರ್ಷ ಮಾರ್ಚ್ 3ರಂದು ವಿಶ್ವ ಶ್ರವಣ ದಿನವನ್ನು ಆಚರಿಸಲಾಗುತ್ತದೆ. 2024ನೇ ಶ್ರವಣ ದಿನದ ವಿಷಯ: ಮನಃ ಸ್ಥಿತಿಯ ಬದಲಾವಣೆ. ಶ್ರವಣ ಸಮಸ್ಯೆಗೆ ಸಂಬಂಧಿಸಿದಂತೆ ಆ ಸಮಸ್ಯೆಯಿಂದ ಬಳಲುತ್ತಿರುವವರು, ಅವರ ಜತೆಗೆ ಇರುವವರು ಮತ್ತು ಸಮಾಜದಲ್ಲಿನ ಎಲ್ಲರ ಮನಸ್ಥಿತಿಯನ್ನು ಬದಲಿಸಬೇಕು ಎಂಬುದು ಈ ಬಾರಿಯ ಗುರಿ.
- ವಿಶ್ವ ವನ್ಯಜೀವಿ ದಿನವನ್ನು ವಾರ್ಷಿಕವಾಗಿ ಮಾರ್ಚ್ 3 ರಂದು ಆಚರಿಸಲಾಗುತ್ತದೆ, ಇದು ವನ್ಯಜೀವಿ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ ಮತ್ತು ನಮ್ಮ ಗ್ರಹದಲ್ಲಿ ವಾಸಿಸುವ ವೈವಿಧ್ಯಮಯ ಜಾತಿಗಳನ್ನು ರಕ್ಷಿಸುವ ಒಂದು ವೇದಿಕೆಯಾಗಿದೆ.ಈ ದಿನದಂದು ವನ್ಯ ಜೀವಿಗಳ ಬಗ್ಗೆ ಅರಿವು ಹಾಗೂ ಶಿಕ್ಷಣ ನೀಡಲು, ವನ್ಯ ಜೀವಿ ವೈವಿದ್ಯತೆಯ ಮತ್ತು ಪ್ರಾಮುಖ್ಯ ತೆಯ ತಿಳುವಳಿಕೆ ಹೆಚ್ಚಿ ಸಲು ಈ ದಿನವನ್ನು ಮೀಸಲಿಡಲಾಗಿದೆ. 2024 ರ ಥೀಮ್: “ಜನರು ಮತ್ತು ಭೂಮಿಯನ್ನು ಸಂಪರ್ಕಿಸುವುದು: ವನ್ಯಜೀವಿಗಳಿಗಾಗಿ ನಾವೀನ್ಯತೆಗಳನ್ನು ಕಂಡುಹಿಡಿಯುವುದು“