Published on: January 5, 2023
ಚುಟುಕು ಸಮಾಚಾರ – 5 ಜನವರಿ 2023
ಚುಟುಕು ಸಮಾಚಾರ – 5 ಜನವರಿ 2023
- ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) 2024 ರಲ್ಲಿ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನವನ್ನು ಕೈಗೊಳ್ಳಲಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ. ಇದರ ಭಾಗವಾಗಿ ಇಸ್ರೋ ಮೊದಲು ಲೇಡಿ ರೋಬೋಟ್ ನ್ನು ಇಸ್ರೋ ಬಾಹ್ಯಾಕಾಶಕ್ಕೆ ಕಳಿಸಲಿದೆ. ‘ವ್ಯೋಮಮಿತ್ರ’ ಎಂಬ ಹೆಸರನ್ನು ಈ ರೋಬೋಟ್ ಗೆ ಇಡಲಾಗಿದೆ
- ನೋಟುಗಳ ರದ್ದು ತಪ್ಪಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಈ ಸಂಬಂಧ ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿದೆ. 2016ರಲ್ಲಿ ಕೇಂದ್ರ ಸರ್ಕಾರ 500 ರು. ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿ ಘೋಷಿಸಿದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿದ್ದ 58 ಅರ್ಜಿಗಳ ಕುರಿತು ಸುಪ್ರೀಂಕೋರ್ಟ್ನ ಸಾಂವಿಧಾನಿಕ ಪೀಠ ಈ ತೀರ್ಪು ನೀಡಿದೆ.
- ಮಹಿಳಾ ಶಿಕ್ಷಣದ ಪ್ರವರ್ತಕಿ ಸಾವಿತ್ರಿಬಾಯಿ ಫುಲೆ ಅವರ 174 ನೇ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಟ್ವೀ ಟ್ ಮೂಲಕ ಗೌರವ ನಮನ ಸಲ್ಲಿಸಿದ್ದಾರೆ. ಇದೇ ವೇಳೆ 18ನೇ ಶತಮಾನದಲ್ಲಿ ವಸಾಹತುಶಾಹಿ ಸಾಮ್ರಾಜ್ಯದ ವಿರುದ್ಧ ಹೋರಾಡಿದ ತಮಿಳುನಾಡಿನ ವೇಲು ನಾಚಿಯಾರ್ ಜನ್ಮದಿನಕ್ಕೆ ಶುಭ ಕೋರಿದ್ದಾರೆ.
- ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯ ಸಿಯೋಮ್ ನದಿಯ ಮೇಲೆ ಬೋಲೆಂಗ್ ಬಳಿ 100 ಮೀಟರ್ ಉದ್ದದ ಸಿಯೋಮ್ ಸೇತುವೆ ಮತ್ತು ಬಾರ್ಡರ್ ರೋಡ್ಸ್ ಆರ್ಗನೈಜೇಶನ್ನಿನ ಇನ್ನೂ 27 ಯೋಜನೆಗಳನ್ನು ರಕ್ಷಣಾ ಮಂತ್ರಿಗಳು ದಿಟಸಮ (ವರ್ಚ್ಯುಯಲ್) ಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಉದ್ಘಾಟನೆ ಮಾಡಿದರು. ಅದರಲ್ಲಿ ಅರುಣಾಚಲ ಪ್ರದೇಶ, ಮಿಜೋರಾಂ, ಲಡಾಖ್ನ ಮೂರು ಟೆಲಿಮೆಡಿಸನ್ ನೂಡ್ ಸಹ ಸೇರಿವೆ. ಸೈನಿಕರು ಹಾಗೂ ಸ್ಥಳೀಯರಿಗೆ ದೂರ ಸಂಪರ್ಕ ರೋಗ ನಿರ್ಣಯದ ಮೂಲಕ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ಸೇವೆ ಇದರಿಂದ ಲಭ್ಯವಾಗಲಿದೆ..
- ಶ್ರೀಲಂಕಾ ವಿರುದ್ಧದ ಮೊದಲ ಟಿ–20 ಪಂದ್ಯದಲ್ಲಿ ಭಾರತದ ಯುವ ವೇಗಿ ಉಮ್ರಾನ್ ಮಲಿಕ್ ಅವರು ದಾಖಲೆ ನಿರ್ಮಿಸಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ವೇಗದ ಬೌಲಿಂಗ್ ಮಾಡಿದ ಭಾರತದ ವೇಗಿ ಎನ್ನುವ ದಾಖಲೆ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಉಮ್ರಾನ್ ಮಲಿಕ್ ಗಂಟೆಗೆ 155 ಕಿ.ಮಿ ವೇಗದಲ್ಲಿ ಬೌಲಿಂಗ್ ಮಾಡಿ ಈ ದಾಖಲೆ ನಿರ್ಮಿಸಿದ್ದು, ಈ ಮೂಲಕ ಈ ದಾಖಲೆಯನ್ನು ಹೊಂದಿದ್ದ ಭಾರತದ ಮತ್ತೋರ್ವ ವೇಗಿ ಜಸ್ಪ್ರೀತ್ ಬೂಮ್ರಾ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಜಾಗತಿಕ ಕ್ರಿಕೆಟ್ ನಲ್ಲಿ ವೇಗವಾಗಿ ಬೌಲಿಂಗ್ ಮಾಡಿದ ದಾಖಲೆ ಪಾಕಿಸ್ತಾನದ ವೇಗಿ ಶೋಯೆಬ್ ಮಲ್ಲಿಕ್ ಅವರ ಹೆಸರಲ್ಲಿದೆ. ಅಖ್ತರ್ 161 ಕಿ.ಮಿ ವೇಗದಲ್ಲಿ ಬೌಲಿಂಗ್ ಮಾಡಿ ಈ ದಾಖಲೆಯನ್ನು ನಿರ್ಮಿಸಿದ್ದಾರೆ.
- 2013 ರಲ್ಲಿ ಮಧ್ಯಯುಗದ ನಂತರ ಕ್ಯಾಥೋಲಿಕ್ ಚರ್ಚ್ನ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೊದಲ ಧರ್ಮಗುರು, ಮಾಜಿ ಪೋಪ್ ಬೆನೆಡಿಕ್ಟ್ XVI ಅವರು 95 ನೇ ವಯಸ್ಸಿನಲ್ಲಿ ನಿಧನರಾದರು. ಜರ್ಮನಿಯವರಾದ ಪೋಪ್ ಎಮೆರಿಟಸ್ ಬೆನೆಡಿಕ್ಟ್ ಅವರ ಮೂಲ ಹೆಸರು ಜೋಸೆಫ್ ರಟ್ಜಿಂಗರ್ ಆಗಿದ್ದು, ಫೆಬ್ರವರಿ 2013 ರಲ್ಲಿ ಅನಾರೋಗ್ಯದ ಕಾರಣ ನೀಡಿ ಬೆನೆಡಿಕ್ಟ್ ಅವರು ಪೋಪ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಅವಧಿಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪವೂ ಕೇಳಿಬಂದಿತ್ತು.