Published on: April 14, 2023

ಚುಟುಕು ಸಮಾಚಾರ:13 ಏಪ್ರಿಲ್ 2023

ಚುಟುಕು ಸಮಾಚಾರ:13 ಏಪ್ರಿಲ್ 2023

  • ಜಾಮೀನು ಮೊತ್ತ ಹಾಗೂ ದಂಡವನ್ನು ಪಾವತಿಸಲು ಸಾಧ್ಯವಾಗದ ಬಡ ಕೈದಿಗಳಿಗೆ ಆರ್ಥಿಕ ಸಹಾಯ ಒದಗಿಸುವ ‘ಬಡ ಕೈದಿಗಳಿಗೆ ಆರ್ಥಿಕ ಸಹಾಯ’ ಎನ್ನುವ ವಿಶೇಷ ಯೋಜನೆಯನ್ನು ಘೋಷಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
  • 1991ರ ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆಯಲ್ಲಿನ ಕೆಲ ನಿಬಂಧನೆಗಳ ಸಿಂಧುತ್ವ ಪ್ರಶ್ನಿಸಿ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (ಪಿಐಎಲ್) ದಾಖಲಾಗಿದ್ದು, ಈ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ‘1991ರ ಪೂಜಾ ಸ್ಥಳಗಳ ಕಾಯ್ದೆ’ ಪ್ರಕಾರ ದೇಶದ ಯಾವುದೇ ಧಾರ್ಮಿಕ ಸ್ಥಳದಲ್ಲಿ ಸದ್ಯ ಚಾಲ್ತಿಯಲ್ಲಿ ಇರುವ ಯಾವುದೇ ಧರ್ಮದ ಆಚರಣೆಯ ‘ಧಾರ್ಮಿಕ ಸ್ವರೂಪ’ವನ್ನು ಬದಲಿಸುವಂತಿಲ್ಲ. ದೇಶದ ಸ್ವಾತಂತ್ರ್ಯ ಬಂದ ದಿನ, ಅಂದರೆ 1947ರ ಆಗಸ್ಟ್ 15ರ ನಂತರ ಯಾವ ಧಾರ್ಮಿಕ ಸ್ಥಳದಲ್ಲಿ ಯಾವ ಧರ್ಮದ ಆಚರಣೆ ಇತ್ತೋ, ಅದೇ ಆಚರಣೆ ಮುಂದೆಯೂ ನಿರಂತರವಾಗಿ ಮುಂದುವರೆಯಬೇಕು.
  • ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ತಮ್ಮ ದ್ವಿಪಕ್ಷೀಯ ಕೋಪ್ ಇಂಡಿಯಾ ವಾಯು ಪಡೆಗಳ ವ್ಯಾಯಾಮ 2023 ರ ಏಪ್ರಿಲ್ 10 ರಿಂದ 21 ರವರೆಗೆ ಪಶ್ಚಿಮ ಬಂಗಾಳದ ಕಲೈಕುಂಡದಲ್ಲಿರುವ ವಾಯುನೆಲೆಯಲ್ಲಿ ನಡೆಯಲಿದೆ. ಜಪಾನ್ ವೀಕ್ಷಕ ರಾಷ್ಟ್ರವಾಗಿದೆ. ಆಗಸ್ಟ್ 20, 2018 ರಂದು ಆಯೋಜಿಸಲಾದ ರಕ್ಷಣಾ ಮಂತ್ರಿಗಳ ಸಮ್ಮೇಳನದ ಒಪ್ಪಂದದ ಪ್ರಕಾರ, ಜಪಾನಿನ ವಾಯು ಸೆಲ್ಫ್ ಡಿಫೆನ್ಸ್ ಫೋರ್ಸ್ (JASDF) ವೀಕ್ಷಕರಾಗಿ ಡಿಸೆಂಬರ್ 2018 ರಲ್ಲಿ ಮೊದಲ ಬಾರಿಗೆ ಕೋಪ್ ಇಂಡಿಯಾದಲ್ಲಿ ಭಾಗವಹಿಸಿತು
  • ನೀತಿ ಇಂಟರನ್ಷಿಪ್ ಸ್ಕೀಮ್ 2023: ಇದು ಕೇಂದ್ರ ಸರ್ಕಾರದ ನೀತಿ ಆಯೋಗ, ಪಿಯುಸಿ/ಪದವಿ/ಸ್ನಾತಕೋತ್ರ ಪದವಿ ಅಥವಾ ಪಿ ಎಚ್.ಡಿಗೆ ನೋಂದಣಿ ಮಾಡಿಸಿರುವ ಅಭ್ಯರ್ಥಿಗಳಿಗಾಗಿ ರೂಪಿಸಿರುವ ಉಪಕ್ರಮವಾಗಿದೆ. ಅರ್ಹತೆ:ಭಾರತ ಅಥವಾ ವಿದೇಶಗಳಲ್ಲಿರುವ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳು/ಶೈಕ್ಷಣಿಕ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಇಂಟರನ್ಷಿಪ್ಗೆ ಅರ್ಜಿಸಲ್ಲಿಸಬಹುದು. ಪದವಿ ಓದುತ್ತಿರುವ ವಿದ್ಯಾರ್ಥಿಗಳು, ಹಿಂದಿನ ವರ್ಷದ ಪರೀಕ್ಷೆಯಲ್ಲಿ ಪಾಸಾಗಿರಬೇಕು ಮತ್ತು ಶೇ 85ರಷ್ಟು ಅಂಕಪಡೆದಿರಬೇಕು. ಯುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತರಬೇತಿಯ ಜೊತೆಗೆ, ನೀತಿ ಆಯೋಗದ ಕಾರ್ಯಗಳಲ್ಲೂ ನೆರವಾಗುವ ಮೂಲಕ ಪರಸ್ಪರ ಅನುಕೂಲವಾಗುವಂತೆ ಮಾಡುವುದು ಈ ಉಪಕ್ರಮದ ಉದ್ದೇಶವಾಗಿದೆ.
  • ತೃಣಮೂಲ ಕಾಂಗ್ರೆಸ್ (ಟಿಎಂಸಿ), ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ)ದ ರಾಷ್ಟ್ರೀಯ ಪಕ್ಷದ ಮಾನ್ಯತೆಯನ್ನು ಚುನಾವಣಾ ಆಯೋಗ ಹಿಂಪಡೆದಿದೆ. ಪ್ರಾದೇಶಿಕ ಪಕ್ಷವಾಗಿ ಗುರುತಿಸಿಕೊಂಡಿವೆ. ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ರದ್ದು ಮಾಡಿದ್ದರೂ, ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಎನ್ಸಿಪಿ ಮತ್ತು ಟಿಎಂಸಿಯನ್ನು ರಾಜ್ಯ ಪಕ್ಷಗಳಾಗಿ ಪರಿಗಣಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಬಿಜೆಪಿ, ಕಾಂಗ್ರೆಸ್, ಸಿಪಿಐ(ಎಂ), ಬಹುಜನ ಸಮಾಜ ಪಕ್ಷ (ಬಿಎಸ್ಪಿ), ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ಪಿಪಿ) ಮತ್ತು ಎಎಪಿ ಈಗ ರಾಷ್ಟ್ರೀಯ ಪಕ್ಷಗಳಾಗಿವೆ.