Published on: February 27, 2023
ಚುಟುಕು ಸಮಾಚಾರ:27 ಫೆಬ್ರವರಿ 2023
ಚುಟುಕು ಸಮಾಚಾರ:27 ಫೆಬ್ರವರಿ 2023
- ಶಿವಮೊಗ್ಗದ ಸಮೀಪದ ಸೋಗಾನೆ ಗ್ರಾಮದ ಬಳಿ ನಿರ್ಮಿಸಲಾದ ನೂತನ ವಿಮಾನ ನಿಲ್ದಾಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಶಿವಮೊಗ್ಗ ಏರ್ಪೋರ್ಟ್ ರಾಜ್ಯದ 9ನೇ ಹಾಗೂ ದೇಶದ 148ನೇ ವಿಮಾನ ನಿಲ್ದಾಣ ಆಗಿದೆ. ರಾಜ್ಯದ ಎರಡನೇ ಅತಿ ಉದ್ದದ ರನ್ವೇ ಹೊಂದಿರುವ ಇದು, ಮಧ್ಯಕರ್ನಾಟಕದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಗೂ ಪಾತ್ರವಾಗಿದೆ.ಪ್ರಧಾನಿ ನರೇಂದ್ರ ಮೋದಿಯವರು 98ನೇ ಮನ್ ಕಿ ಬಾತ್ ನಡೆಸಿಕೊಟ್ಟಿದ್ದು, ಇದರಲ್ಲಿ ಟೆಲಿ ಸಮಲೋಚನೆ ಮೂಲಕ ವೈದ್ಯಕೀಯ ಸೇವೆ ನೀಡುವ ಇ-ಸಂಜೀವಿನಿ ಆಪ್ ಕುರಿತು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
- ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮದ್ದೂರಿನ ಶಿಂಷಾ ಸಹಕಾರಬ್ಯಾಂಕ್ ನಿಯಮಿತದ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿರ್ಬಂಧ ಹೇರಿದೆ. ಬ್ಯಾಂಕ್ನ ಹಣಕಾಸು ಸ್ಥಿತಿ ಹದಗೆಡುತ್ತಿರುವ ಕಾರಣ ಆರ್ಬಿಐ ಈ ತೀರ್ಮಾನ ಕೈಗೊಂಡಿದೆ. ಆರ್ಬಿಐ ಅನುಮತಿ ಇಲ್ಲದೆ ಈ ಹೊಸದಾಗಿ ಸಾಲ ಕೊಡು ವಂತಿಲ್ಲ, ಹೊಸದಾಗಿ ಹೂಡಿಕೆ ಮಾಡುವಂತಿಲ್ಲ, ಹೊಸದಾಗಿ ಠೇವಣಿ ಸ್ವೀಕರಿಸುವಂತೆಯೂ ಇಲ್ಲ.
- ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನದ ‘RRR’ ಚಿತ್ರಕ್ಕೆ ಮತ್ತೊಂದು ಜಾಗತಿಕ ಮನ್ನಣೆ ದೊರೆತಿದ್ದು, 4 ವಿಭಾಗಗಳಲ್ಲಿ ಹಾಲಿವುಡ್ ಕ್ರಿಟಿಕ್ಸ್ ಪ್ರಶಸ್ತಿಗೆ ಚಿತ್ರ ಭಾಜನವಾಗಿದೆ. ಅತ್ಯುತ್ತಮ ಆ್ಯಕ್ಷನ್ ಸಿನಿಮಾ, ಅತ್ಯುತ್ತಮ ಇಂಟರ್ನ್ಯಾಷನಲ್ ಫೀಚರ್ ಸಿನಿಮಾ, ಅತ್ಯುತ್ತಮ ಒರಿಜಿನಲ್ ಸಾಂಗ್ ಹಾಗೂ ಬೆಸ್ಟ್ ಸ್ಟಂಟ್ ವಿಭಾಗದಲ್ಲಿ ಹಾಲಿವುಡ್ ಕ್ರಿಟಿಕ್ಸ್ ಅವಾರ್ಡ್ಸ್ ಲಭಿಸಿದೆ.
- ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯ ನಡೆಸಿದ್ದ ರಾಷ್ಟ್ರಮಟ್ಟದ ಪೆನ್ ಎ ಲೋರಿ (ಜೋಗುಳ ಗೀತೆ ರಚನೆ) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಚಾಮರಾಜನಗರ ಜಿಲ್ಲೆಯ ಬಿ.ಎಂ. ಮಂಜುನಾಥ್ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರು ಮನ್ ಕಿ ಬಾತ್ ನಲ್ಲಿ ಹೊಗಳಿದ್ದಾರೆ. “’ಏಕತಾ ದಿವಸದ ಅಂಗವಾಗಿ ಭಕ್ತಿಗೀತೆ, ಜೋಗುಳಪದ (ಲಾಲಿ ಹಾಡು) ಮತ್ತು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಅದರಲ್ಲಿ ದೇಶದಾದ್ಯಂತ ಐದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಜೋಗುಳ ಗೀತೆ ಸ್ಪರ್ಧೆಯಲ್ಲಿ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಬಿ.ಎಂ. ಮಂಜುನಾಥ್ ಪ್ರಥಮ ಬಹುಮಾನ ಪಡೆದಿದ್ದಾರೆ. ಕನ್ನಡದಲ್ಲಿ ಅವರ ಬರೆದ “ಮಲಗು ಕಂದ ಮಲಗು ಕೂಸೆ” ಕವಿತೆಗೆ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಬಹುಮಾನ ದೊರಕಿದೆ ಎಂದಿದ್ದಾರೆ. ಬಿ.ಎನ್ ಮಂಜುನಾಥ್ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಕಾಡಂಚಿನ ಬಾಳೆಗುಣಸೆ ಎಂಬ ಗ್ರಾಮದವರು. ಎಲ್ಐಸಿ ಪ್ರತಿನಿಧಿ ಆಗಿರುವ ಇವರು ಪ್ರವೃತ್ತಿಯಲ್ಲಿ ಕವಿ.
- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಫಲಾನುಭವಿಗಳಿಗೆ, ಬೆಳಗಾವಿಯಲ್ಲಿ ಪಿಎಂ ನರೇಂದ್ರ ಮೋದಿ ಅವರು ಇಂದು ಪಿಎಂ ಕಿಸಾನ್ ರೈತರ ಬ್ಯಾಂಕ್ ಖಾತೆಗಳಿಗೆ 13ನೇ ಕಂತಿನ 16,800 ಕೋಟಿ ರೂಪಾಯಿಗಳನ್ನು ಜಮಾ ಮಾಡಲಿದ್ದಾರೆ. ಇದುವರೆಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 12 ಕಂತುಗಳನ್ನು ಸರ್ಕಾರವು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆಯಡಿ, ಅರ್ಹ ರೈತರಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ.ಗಳ ಮೂರು ಸಮಾನ ಕಂತುಗಳಲ್ಲಿ ವಾರ್ಷಿಕವಾಗಿ 6,000 ರೂ. ಆರ್ಥಿಕ ನೆರವು ನೀಡಲಾಗುತ್ತದೆ. ಈ ಮೊತ್ತವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ. ಈ ಯೋಜನೆಯನ್ನು ಫೆಬ್ರವರಿ, 2019 ರಲ್ಲಿ ಪರಿಚಯಿಸಲಾಯಿತು, ಆದರೆ ಡಿಸೆಂಬರ್, 2018 ರಿಂದ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.