Published on: October 18, 2022

ಚುನಾವಣೆ ಚಿಹ್ನೆಗಳು

ಚುನಾವಣೆ ಚಿಹ್ನೆಗಳು

ಸುದ್ದಿಯಲ್ಲಿ ಏಕಿದೆ?

ಮಾನ್ಯತೆ ಪಡೆದ ಪಕ್ಷವು ವಿಭಜನೆಯಾದಾಗ ಆ ಪಕ್ಷದ ಚಿಹ್ನೆಯ ಮೇಲೆ ಹಕ್ಕು ಸಾಧಿಸಲು ವಿಭಜಿತ ಬಣಗಳು ಪ್ರಯತ್ನಿಸುತ್ತವೆ. ಈ ಸಂಗತಿ ಇತ್ಯರ್ಥ ಆಗುವವರೆಗೂ ಚುನಾವಣೆ ಆಯೋಗವು ಆ ಚಿಹ್ನೆಯನ್ನು ಸ್ಥಗಿತಗೊಳಿಸುತ್ತದೆ. ಆಗ ವಿಭಜಿತ ಬಣಗಳು ಹೊಸ ಚಿಹ್ನೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಈಗ ಮಹಾರಾಷ್ಟ್ರದ ಶಿವಸೇನೆಯಲ್ಲಿ ಇಂತಹ ಪರಿಸ್ಥಿತಿ ಉದ್ಭವಿಸಿದೆ.

ಮುಖ್ಯಾಂಶಗಳು

ಉಭಯ ಬಣಗಳ ಬೇಡಿಕೆ:

  • ಶಿವಸೇನೆ ಎರಡು ಬಣಗಳಾಗಿ ಒಡೆದಿದೆ. ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಒಂದು ಬಣವಾಗಿದ್ದರೆ, ಇನ್ನೊಂದು ಬಣದ ನಾಯಕ ಏಕನಾಥ ಶಿಂಧೆ ಅವರು ಬಿಜೆಪಿ ಜತೆ ಸರ್ಕಾರ ರಚಿಸುವುದರೊಂದಿಗೆ ಮುಖ್ಯಮಂತ್ರಿಕೂಡ ಆಗಿದ್ದಾರೆ.
  • ಉಭಯ ಬಣಗಳು ತಾವೇ ಮೂಲ ಶಿವಸೇನಾ ಪಕ್ಷವಾಗಿದ್ದು , ಅದರ ಚಿಹ್ನೆಯಾದ ‘ಬಿಲ್ಲುಬಾಣ’ ಗುರುತನ್ನು ತಮಗೇ ನೀಡಬೇಕೆಂದು ಹಕ್ಕು ಪ್ರತಿಪಾದಿಸಿವೆ. ನ್ಯಾಯಾಲಯದ ಕಟಕಟೆ ಏರಿರುವ ಈ ಸಂಗತಿ ಇತ್ಯರ್ಥವಾಗುವವರೆಗೆ ಯಾವುದೇ ಬಣಗಳಿಗೂ ಬಿಲ್ಲುಬಾಣ ಗುರುತನ್ನು ಹಂಚಿಕೆ ಮಾಡದೆ ಆ ಚಿಹ್ನೆಯನ್ನು ಸ್ಥಗಿತಗೊಳಿಸುವ ನಿಧಾರವನ್ನು ಚುನಾವಣೆ ಆಯೋಗ ಮಾಡಿದೆ.

ಆಯೋಗದ ಅಧಿಕಾರ:

  • 1968ರ ಚುನಾವಣೆ ಚಿಹ್ನೆಗಳು (ಮೀಸಲಾತಿ ಮತ್ತು ಹಂಚಿಕೆ) ಆದೇಶ ಪ್ರಕಾರವೇ ಸಂಸತ್ ಅಥವಾ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳಿಗೆ ಚಿಹ್ನೆಗಳ ಆಯ್ಕೆ ಮತ್ತು ಹಂಚಿಕೆ ಮಾಡಲಾಗುತ್ತದೆ. ಈ ಆದೇಶದ ಅನುಷ್ಠಾನ ಪ್ರಾಧಿಕಾರವಾಗಿರುವ ಚುನಾವಣೆ ಆಯೋಗವು ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಚುನಾವಣೆ ಚಿಹ್ನೆಗಳ ಪಟ್ಟಿಯನ್ನು ಸೂಚಿಸುತ್ತ ಬಂದಿದೆ.
  • ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪಕ್ಷಗಳ ಅಭ್ಯರ್ಥಿಗಳು ಬಳಸುವ ‘ಮೀಸಲು ’ ಚಿಹ್ನೆಗಳು ಹಾಗೂ ಮಾನ್ಯತೆ ಹೊಂದಿರದ ನೋಂದಾಯಿತ ಪಕ್ಷಗಳ ಮತ್ತು ಪಕ್ಷೇತರ ಅಭ್ಯರ್ಥಿಗಳಿಗೆ ಹಂಚಿಕೆ ಮಾಡಲಾಗುವ ‘ಮುಕ್ತ’ ಚಿಹ್ನೆಗಳು ಇದರಲ್ಲಿರುತ್ತವೆ.

ಧಾರ್ವಿುಕ ಚಿಹ್ನೆಗಳಿಗೆ ನಿರ್ಬಂಧ:

  • ಧಾರ್ವಿುಕ ಅಥವಾ ಸಾಮುದಾಯಿಕ ಅರ್ಥ ಹೊಂದಿರುವ ಚಿಹ್ನೆಯನ್ನು ಚುನಾವಣೆ ಆಯೋಗ ನಿರ್ಬಂಧಿಸಿದೆ. 2005ರಲ್ಲಿ ಧಾರ್ವಿುಕ/ಸಾಮುದಾಯಿಕ ರೀತಿಯ ಚಿಹ್ನೆಗಳನ್ನು ಹಂಚುವುದನ್ನು ನಿಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಧಾರ್ವಿುಕ ಅರ್ಥದ ದೃಷ್ಟಿ ಇರುವ ’ತ್ರಿಶೂಲ’ ಮತ್ತು ‘ಗದೆ’ ಚಿಹ್ನೆಗಳನ್ನು ಶಿವಸೇನೆಯ ಬಣಗಳಿಗೆ ಹಂಚಿಕೆ ಮಾಡಲು ನಿರಾಕರಿಸಿದೆ.

ಚಿಹ್ನೆಗಳು :

  • ಮುಕ್ತ ಚಿಹ್ನೆಗಳ ಪಟ್ಟಿಸಿದ್ಧಪಡಿಸುವಾಗ ಅವುಗಳು ಒಂದಕ್ಕೊಂದು ಅಥವಾ ಕಾಯ್ದಿರಿಸಿದ ಚಿಹ್ನೆಗಳಿಗೆ ಹೋಲಿಕೆ ಇರದಂತೆ ಕಾಳಜಿ ವಹಿಸಲಾಗುತ್ತದೆ. ಮತದಾರರು ಅನಕ್ಷರಸ್ಥರಾಗಿದ್ದರೂ ಒಬ್ಬ ಅಭ್ಯರ್ಥಿಯನ್ನು ಇನ್ನೊಬ್ಬರಿಂದ ಪ್ರತ್ಯೇಕವಾಗಿ ಗುರುತಿಸಲು ಅನುವಾಗುವಂತೆ ಸುಲಭವಾಗಿ ಗುರುತಿಸಬಹುದಾದ ವಸ್ತುಗಳ ಚಿತ್ರಗಳನ್ನು ಮುಕ್ತ ಚಿಹ್ನೆಗಳು ಹೊಂದಿರುತ್ತವೆ.
  • ಮುಕ್ತ ಚಿಹ್ನೆಗಳ ಪಟ್ಟಿಯನ್ನು 2021ರ ಸೆಪ್ಟೆಂಬರ್ 23 ರಂದು ಕೊನೆಯದಾಗಿ ನವೀಕರಿಸಲಾಗಿದ್ದು , ಇವುಗಳಲ್ಲಿ 197 ಚಿತ್ರಗಳಿವೆ.
  • ಮೀಸಲು ಚಿಹ್ನೆಗಳು : ಮೀಸಲು ಚಿಹ್ನೆಗಳನ್ನು ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ಪಕ್ಷಗಳು ಮಾತ್ರ ಹೊಂದಿರುತ್ತವೆ. ಒಂದು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ಮಾನ್ಯತೆ ಇರುವ ರಾಜ್ಯ ಪಕ್ಷವು ತನ್ನ ಕಾಯ್ದಿರಿಸಿದ ಚಿಹ್ನೆಯನ್ನು ಆ ರಾಜ್ಯಗಳಲ್ಲಿ ಮಾತ್ರವಲ್ಲದೆ, ಮಾನ್ಯತೆ ಇರದ ರಾಜ್ಯಗಳಿಂದ ಸ್ಪರ್ಧಿಸಿದಾಗಲೂ ಅಲ್ಲಿ ತನ್ನ ಮೀಸಲು ಚಿಹ್ನೆ ಪಡೆಯಲು ಮೊದಲ ಹಕ್ಕನ್ನು ಹೊಂದಿರುತ್ತದೆ. ಇದಕ್ಕಾಗಿಯೇ ಮಾನ್ಯತೆ ಪಡೆದ ರಾಜ್ಯ ಪಕ್ಷದ ಮೀಸಲು ಚಿಹ್ನೆಯನ್ನು ಮಾನ್ಯತೆ ಇರದ ರಾಜ್ಯಗಳಲ್ಲಿಯೂ ಇತರ ಪಕ್ಷಗಳ ಅಭ್ಯ ರ್ಥಿ ಗಳ ಬಳಕೆಗೆ ನೀಡಲಾಗುವುದಿಲ್ಲ.
  • ಎಲ್ಲಿಯವರೆಗೆ ಈ ರಾಷ್ಟ್ರೀಯ ಅಥವಾ ರಾಜ್ಯ ಮಟ್ಟದ ಪಕ್ಷಗಳು ಮಾನ್ಯತೆಯ ಷರತ್ತುಗಳನ್ನು ಪೂರೈಸುತ್ತವೆಯೋ ಅಲ್ಲಿಯವರೆಗೆ ಅವು ಮೀಸಲು ಚಿಹ್ನೆ ಉಳಿಸಿಕೊಳ್ಳುತ್ತವೆ.

ಆರು ವರ್ಷ ತಟಸ್ಥ:

  • ಮಾನ್ಯತೆ ಪಡೆದ ಯಾವುದಾದರೂ ಪಕ್ಷವು ರಾಜ್ಯ ಅಥವಾ ರಾಷ್ಟ್ರ ಪಕ್ಷದ ಸ್ಥಾನಮಾನ ಕಳೆದುಕೊಂಡಾಗ, ಅದರ ಮೀಸಲು ಚಿಹ್ನೆ ಕನಿಷ್ಠ ಆರು ವರ್ಷಗಳವರೆಗೆ ತಟಸ್ಥವಾಗಿರುತ್ತದೆ. ಆನಂತರವೇ ಈ ಚಿಹ್ನೆಯನ್ನು ಮುಕ್ತ ಎಂದು ಘೊಷಿಸಲಾಗುತ್ತದೆ. ಮಾನ್ಯತೆ ಪಡೆದ ಹೊಸ ಪಕ್ಷವು ಚುನಾವಣೆ ಆಯೋಗದ ಮುಕ್ತ ಪಟ್ಟಿಯಿಂದ ಮೂರು ಚಿಹ್ನೆಗಳನ್ನು ಆಯ್ಕೆ ಮಾಡಬಹುದು ಅಥವಾ ಪಟ್ಟಿಯಲ್ಲಿಲ್ಲದ ಚಿಹ್ನೆಯನ್ನು ಪ್ರಸ್ತಾಪಿಸಬಹುದು.
  • ಇಂಥ ಚಿಹ್ನೆಯ ಹೆಸರು ಮತ್ತು ವಿನ್ಯಾಸ ಇತರ ಯಾವುದೇ ಚಿಹ್ನೆಗೆ ಹೋಲುವಂತಿರಬಾರದು. ಮಾನ್ಯತೆ ಹೊಂದಿರದ ಅಥವಾ ಹೊಸ ಪಕ್ಷಗಳು ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವ ಪಕ್ಷೇತರರು ಮುಕ್ತ ಚಿಹ್ನೆಗಳ ಪಟ್ಟಿಯಿಂದ ಆಯ್ಕೆ ಮಾಡಬಹುದು ಇಲ್ಲವೇ ಮೂರು ಹೊಸ ಚಿಹ್ನೆಗಳನ್ನು ಪ್ರಸ್ತಾಪಿಸಬಹುದು .

ಪ್ರಾಣಿ-ಪಕ್ಷಿಗಳ ಚಿತ್ರಗಳನ್ನು ಕೈ ಬಿಟ್ಟಿ ದ್ದೇ ಕೆ?

  • 1991ರ ಮುಂಚೆ ಚುನಾವಣೆ ಆಯೋಗವು ಹಲವಾರು ಪಕ್ಷಿಗಳು ಮತ್ತು ಪ್ರಾಣಿಗಳ ಚಿತ್ರಗಳನ್ನು ಚುನಾವಣೆ ಚಿಹ್ನೆಗಳಾಗಿ ನಿಗದಿಪಡಿಸಿತ್ತು. ಆದರೆ, ಇಂತಹ ಪಕ್ಷಿಗಳು ಮತ್ತು ಪ್ರಾಣಿಗಳು ಚುನಾವಣೆ ಪ್ರಚಾರ ಸಂದರ್ಭದಲ್ಲಿ ಕ್ರೌರ್ಯಕ್ಕೆ ಒಳಗಾಗುತ್ತಿವೆ ಎಂದು 1980 ರ ದಶಕದ ಉತ್ತರಾರ್ಧದಲ್ಲಿ ಆಯೋಗಕ್ಕೆ ದೂರುಗಳನ್ನು ನೀಡಲಾಯಿತು. ಒಂದು ಪ್ರಕರಣದಲ್ಲಿ, ಪಾರಿವಾಳ ಚಿಹ್ನೆ ಇರುವ ಪಕ್ಷದ ಅಭ್ಯ ರ್ಥಿಯ ವಿರುದ್ಧ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಸಾರ್ವಜನಿಕ ಸಭೆಗಳಲ್ಲಿ ನೂರಾರು ಪಾರಿವಾಳಗಳನ್ನು ಹತ್ಯೆ ಮಾಡಿದ್ದಾರೆ ಎಂದು ವರದಿಯಾಯಿತು. ಹೀಗಾಗಿ, 1991ರ ಮಾರ್ಚ್ನಲ್ಲಿ ಚುನಾವಣೆ ಆಯೋಗವು , ಚುನಾವಣಾ ಚಿಹ್ನೆಯಾಗಿ ಯಾವುದೇ ಪ್ರಾಣಿ ಅಥವಾ ಪಕ್ಷಿಯನ್ನು ನಿಗದಿಪಡಿಸದಿರುವ ನಿರ್ಧಾರ ತೆಗೆದುಕೊಂಡಿತು.
  • 1991ರ ಮಾರ್ಚ್ 5ರಂದು ಪ್ರಕಟಿಸಲಾದ ಮುಕ್ತ ಚಿಹ್ನೆಗಳ ಪಟ್ಟಿಯಿಂದ ಪಾರಿವಾಳ, ಹದ್ದು , ಕುದುರೆ, ಜೀಬ್ರಾ , ಮೇಕೆ ಮತ್ತು ಮೀನುಗಳ ಚಿತ್ರಗಳನ್ನು ತೆಗೆಯಲಾಯಿತು.

ಸ್ವಯಂ ಪ್ರೇರಣೆಯಿಂದ ತೊರೆಯಲು ಮನವಿ:

  • ಪ್ರಾಣಿಗಳ ಚಿತ್ರವಿರುವ ಮೀಸಲು ಚಿಹ್ನೆಗಳನ್ನು ಹೊಂದಿರುವ ಮಾನ್ಯತೆ ಪಡೆದ ಪಕ್ಷಗಳು ಅವುಗಳನ್ನು ಸ್ವಯಂ ಪ್ರೇರಣೆಯಿಂದ ತೊರೆಯುವಂತೆ ಚುನಾವಣೆ ಆಯೋಗವು ವಿನಂತಿಸಿತು. ಸಿಂಹ ಚಿತ್ರವನ್ನು ಚಿಹ್ನೆಯಾಗಿ ಹೊಂದಿರುವ ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಮತ್ತು ಹುಲಿ ಚಿತ್ರವನ್ನು ಚಿಹ್ನೆಯಾಗಿ ಹೊಂದಿರುವ ಮಿಜೋ ನ್ಯಾಷನಲ್ ಫ್ರಂಟ್ ಪಕ್ಷಗಳು ಆಯೋಗದ ಮನವಿಗೆ ಒಪ್ಪಿದವು.
  • ಆದರೆ, ಆನೆಯ ಚಿತ್ರದ ಚಿಹ್ನೆ ಮಂಜೂರಾದ ಬಿಎಸ್ಪಿ (ಬಹು ಜನ ಸಮಾಜವಾದಿ ಪಾರ್ಟಿ), ಆಸ್ಸಾಂ ಗಣ ಪರಿಷತ್ (ಎಜಿಪಿ) ಮತ್ತು ಸಿಕ್ಕಿಂ ಸಂಗ್ರಾಮ್ ಪರಿಷತ್ ಹಾಗೂ ಸಿಂಹದ ಚಿತ್ರವನ್ನು ಚಿಹ್ನೆಯಾಗಿ ಹೊಂದಿರುವ ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ ಮತ್ತು ಹಿಲ್ ಸ್ಟೇಟ್ ಪೀಪಲ್ಸ್ ಡೆಮಾ ಕ್ರಟಿಕ್ ಪಾರ್ಟಿ ಚಿಹ್ನೆಗಳನ್ನು ಬಿಟ್ಟುಕೊಡಲು ನಿರಾಕರಿಸಿದವು.ಕ್ರೌರ್ಯಕ್ಕೆ ಒಳಗಾಗಲು ಸಾಧ್ಯವಿಲ್ಲದ ದೊಡ್ಡ ಪ್ರಾಣಿಗಳ ಚಿತ್ರಗಳನ್ನು ತಮ್ಮ ಚಿಹ್ನೆಗಳು ಹೊಂದಿವೆ ಎಂಬ ವಾದವನ್ನು ಈ ಪಕ್ಷಗಳು ಮುಂದಿಟ್ಟವು .

ಹೋಲಿಕೆ ಇರಬಾರದು :

  • ಮುಕ್ತ ಅಥವಾ ಮೀಸಲು ಚಿಹ್ನೆಗಳೇ ಇರಲಿ, ಅವುಗಳ ನಡುವೆ ಪರಸ್ಪರ ಹೋಲಿಕೆ ಇರಬಾರದು . ಉದಾಹರಣೆಗೆ, ಗದೆ ಯು ‘ಸ್ಪಿನ್ನಿಂಗ್ ಟಾಪ್’ (ಬುಗುರಿ) ಹೋಲುತ್ತದೆ. ಸೂರ್ಯ (ಕಿರಣಗಳಿಲ್ಲದೆ) ಚಿಹ್ನೆಯು ಸೇಬು , ಎಲೆಕೋಸು ಅಥವಾ ಫುಟ್ಬಾಲ್ನಂತಹ ಮುಕ್ತ ಚಿಹ್ನೆಗಳನ್ನು ಹೋಲುತ್ತದೆ.
  • ಮತಪತ್ರವನ್ನು ನೋಡುವಾಗ ಮತದಾರನ ಮನಸ್ಸಿನಲ್ಲಿ ಯಾವುದೇ ಗೊಂದಲವಾಗದಿರಲೆಂದೇ ಮತದಾನದ ಚಿಹ್ನೆಗಳನ್ನು ಆಕಾರ, ಗಾತ್ರ ಮತ್ತು ರೂಪದಲ್ಲಿ ವಿಭಿನ್ನವಾಗಿ ಇರಿಸಲಾಗುತ್ತದೆ.