Published on: January 30, 2024
ಜನಮಿತ್ರ
ಜನಮಿತ್ರ
ಸುದ್ದಿಯಲ್ಲಿ ಏಕಿದೆ? ಕರ್ನಾಟಕ ಸರ್ಕಾರ ಬೆಂಗಳೂರು ನಗರದಲ್ಲಿ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಎಂಬ ಕಾರ್ಯಕ್ರಮವನ್ನು ನಡೆಸುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಜನರಿಗೆ ಸರ್ಕಾರಿ ಸೇವೆಗಳನ್ನು ನೀಡಲು ಜನಮಿತ್ರರನ್ನು ನೇಮಕ ಮಾಡಲಾಗುತ್ತದೆ.
ಮುಖ್ಯಾಂಶಗಳು
- ಸರ್ಕಾರಿ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಸರ್ಕಾರ 25 ಸಾವಿರ ಜನಮಿತ್ರರನ್ನು ನೇಮಕ ಮಾಡಲಿದೆ.
- ಸರ್ಕಾರದ ಇ-ಆಡಳಿತ ಇಲಾಖೆಯ ಮೂಲಕ ಜನಮಿತ್ರರ ನೇಮಕ ನಡೆಯಲಿದೆ ಮತ್ತು ನೇಮಕವಾಗುವವರಿಗೆ ಇ-ಆಡಳಿತ ಇಲಾಖೆಯ ಮೂಲಕ ತರಬೇತಿ ಸಹ ನೀಡಲಾಗುತ್ತದೆ.
- ಇದಕ್ಕಾಗಿಯೇ ಜನಮಿತ್ರ ಎಂಬ ಮೊಬೈಲ್ ಅಪ್ಲಿಕೇಶನ್ ತಯಾರು ಮಾಡಲಾಗುತ್ತಿದೆ. ಜನಮಿತ್ರರಾಗಿ ನೇಮಕಗೊಂಡವರ ಮೊಬೈಲ್‌ಗೆ ಮಿಸ್ ಕಾಲ್ ಕೊಡುವ ಮೂಲಕ ಅವರನ್ನು ಸಂಪರ್ಕಿಸಬಹುದು. ಒಂದು ಗಂಟೆಯಲ್ಲಿ ಜನರ ಸಮಸ್ಯೆ ಏನು? ಎಂದು ಅವರು ಕೇಳುವಂತೆ ಯೋಜನೆ ರೂಪಿಸಲಾಗುತ್ತಿದೆ.
- ಆಂಧ್ರ ಪ್ರದೇಶದಲ್ಲಿ ಅಲ್ಲಿನ ಸರ್ಕಾರ ಇದೇ ಮಾದರಿಯ ವ್ಯವಸ್ಥೆ ಮಾಡಿ ಪಕ್ಷದ ಕಾರ್ಯಕರ್ತರನ್ನು ನೇಮಕ ಮಾಡಿದೆ. ಅಲ್ಲಿ ಸರ್ಕಾರದಿಂದಲೂ ಗೌರವ ಸಂಭಾವನೆ ನೀಡುವ ವ್ಯವಸ್ಥೆ ಇದೆ.
ಉದ್ದೇಶ
- ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಕೆಲಸ ನಿರ್ವಹಣೆ ಮಾಡಬಹುದು. ಈ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ.
- ಜನರು ವಿವಿಧ ಇಲಾಖೆಗಳ ಸೇವೆಗಳನ್ನು ಪಡೆಯಲು ಸಮಯ, ಶ್ರಮ, ಹಣ ವ್ಯಯ ಮಾಡಿಕೊಂಡು ಅಲೆದಾಡುವುದು ತಪ್ಪಿಸಲು ‘ಜನಮಿತ್ರ’ರು ನೆರವಾಗಲಿದ್ದಾರೆ.
- ಸರ್ಕಾರದ ವಿವಿಧ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಮತ್ತು ತಾಲೂಕು ಮಟ್ಟದಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲು ಜನಮಿತ್ರರು ನೆರವಾಗಲಿದ್ದಾರೆ.
ಜನಮಿತ್ರರಾಗಲು ಅರ್ಹತೆ ಮತ್ತು ಅವರ ವೇತನ: 10ನೇ ತರಗತಿ ಓದಿರುವ, ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ವಾಸವಾಗಿರುವ, ಚಾಲನಾ ಪರವಾನಗಿ ಹೊಂದಿರುವ ಯುವಕ/ ಯುವತಿಯರನ್ನು ಜನಮಿತ್ರರಾಗಿ ನೇಮಕ ಮಾಡಲಾಗುತ್ತದೆ. ಈ ಸೇವೆಗಾಗಿ ಅವರಿಗೆ ವೇತನದ ಬದಲು ಪ್ರೋತ್ಸಾಹಧನವನ್ನು ನೀಡಲಾಗುತ್ತದೆ.
ಜನರಿಗೆ ಯಾವೆಲ್ಲ ಪ್ರಯೋಜನಗಳು
ಜನಮಿತ್ರರು ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ರಸಗೊಬ್ಬರ ಪಡೆಯಲು ಅರ್ಜಿ, ವಿವಿಧ ಲೈಸೆನ್ಸ್ ನವೀಕರಣ, ಮಣ್ಣಿನ ಪರೀಕ್ಷೆ, ಪಿಂಚಣಿಗೆ ಅರ್ಜಿ ಸಲ್ಲಿಕೆ, ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ಪಡೆಯಲು ಜನರಿಗೆ ಸಹಾಯ ಮಾಡಲಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆಗಳ ಸೇವೆಯನ್ನು ಸಹ ಇವುಗಳ ಮೂಲಕ ಪಡೆಯಬಹುದು.