Published on: October 17, 2022
ಜಲಾಂತರ್ಗಾಮಿ ‘ಐಎನ್‌ಎಸ್ ಅರಿಹಂತ’
ಜಲಾಂತರ್ಗಾಮಿ ‘ಐಎನ್‌ಎಸ್ ಅರಿಹಂತ’
ಸುದ್ದಿಯಲ್ಲಿ ಏಕಿದೆ?
ಜಲಾಂತರ್ಗಾಮಿ ‘ಐಎನ್‌ಎಸ್ ಅರಿಹಂತ’ದಿಂದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು (ಎಸ್‌ಎಲ್‌ಬಿಎಂ) ಬಂಗಾಳ ಕೊಲ್ಲಿಯಲ್ಲಿ ಯಶಸ್ವಿಯಾಗಿ ಉಡಾಯಿಸಲಾಯಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಮುಖ್ಯಾಂಶಗಳು
- ‘ಬಂಗಾಳ ಕೊಲ್ಲಿಯಲ್ಲಿ ಪೂರ್ವನಿರ್ಧರಿತ ಗುರಿಯನ್ನು ಈ ಕ್ಷಿಪಣಿಯು ಬಹಳ ನಿಖರವಾಗಿ ತಲುಪಿತು.
- ಈ ಕ್ಷಿಪಣಿ ವ್ಯವಸ್ಥೆಯ ಕಾರ್ಯಾಚರಣೆ ಹಾಗೂ ತಾಂತ್ರಿಕ ಪರಿಮಾಣಗಳನ್ನು ಈ ಪರೀಕ್ಷೆ ಸಾಬೀತುಪಡಿಸಿತು.
- ಇದು ಭಾರತದ ಪಡೆಗಳ ದಾಳಿ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿದೆ’. ಈ ಕ್ಷಿಪಣಿ ವ್ಯವಸ್ಥೆಯನ್ನು‘ಜಲಾಂತರ್ಗಾಮಿಯಿಂದ ಉಡಾಯಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿ’ (ಎಸ್‌ಎಲ್‌ಬಿಎಂ) ಎನ್ನಲಾಗುತ್ತದೆ.
- ಅಣ್ವಸ್ತ್ರ ದಾಳಿಗೆ ಪ್ರತಿರೋಧ ಒಡ್ಡುವ ಸಾಮರ್ಥ್ಯವನ್ನು ಈ ಕ್ಷಿಪಣಿ ವ್ಯವಸ್ಥೆ ಹೊಂದಿದೆ.
- ಇದು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಮೊದಲ ಕ್ಷಿಪಣಿ ವ್ಯವಸ್ಥೆಯೂ ಆಗಿದೆ.
- ‘ಐಎನ್‌ಎಸ್ ಅರಿಹಂತ’ ಜಲಾಂತರ್ಗಾಮಿಯು 750 ಕಿ.ಮೀ. (ಕೆ–15) ಹಾಗೂ 3,500 ಕಿ.ಮೀ. (ಕೆ–4) ದೂರಕ್ಕೆ ಚಿಮ್ಮಬಲ್ಲ ಕ್ಷಿಪಣಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.
- ದೃಢವಾದ ಮತ್ತು ಖಚಿತವಾದ ಪ್ರತೀಕಾರದ ಸಾಮರ್ಥ್ಯವುಳ್ಳ ಈ ಬ್ಯಾಲಿಸ್ಟಿಕ್ ಕ್ಷಿಪಣಿಯು, ಬಾಹ್ಯ ದಾಳಿಗಳ ಸಂದರ್ಭದಲ್ಲಿ ಅತ್ಯಂತ ಪ್ರಯೋಜನಕಾರಿ ಎಂಬುದು ಸಾಬೀತಾಗಿದೆ. ಆದರೆ ಈ ಕ್ಷಿಪಣಿಯು ಭಾರತದ ʼನೋ ಫಸ್ಟ್ ಯೂಸ್ʼ(ಮೊದಲು ಬಳಕೆ ಮಾಡುವುದಿಲ್ಲ) ಎಂಬ ನೀತಿಗೆ ಬದ್ಧವಾಗಿರಲಿದೆ.
ಉದ್ದೇಶ
- ಭಾರತೀಯ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿಗಳು, ಚೀನಾ ಮತ್ತು ಪಾಕಿಸ್ತಾನ ಜಲಗಡಿಯಲ್ಲಿ ನಿಯೋಜನೆಗೊಳ್ಳುವುದರಿಂದ ಪರಿಸ್ಥಿತಿಗಳು ಬದಲಾಗಲಿವೆ ಎಂದು ನಿರೀಕ್ಷಿಸಲಾಗಿದೆ.
- ಭಾರತವು ಪ್ರಸ್ತುತ ಮೂರು ಸ್ವದೇಶಿ ನಿರ್ಮಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ನೌಕೆಗಳನ್ನು ನಿರ್ವಹಿಸುತ್ತಿದೆ. ಅಲ್ಲದೇ ಮೇಲ್ಮೈಯಿಂದ ಮೇಲ್ಮೈಗೆ ಕ್ಷಿಪಣಿಗಳನ್ನು ಉಡಾಯಿಸಬಲ್ಲ ಕೆ-15 ಮತ್ತು ಕೆ-4 ಎಂಬ ಎರಡು ಜಲಾಂತರ್ಗಾಮಿಯನ್ನು ಅಭಿವೃದ್ಧಿಪಡಿಸಿದೆ.
- ಕೆ-4 ಜಲಾಂತರ್ಗಾಮಿ 3,500 ಕಿಮೀ ವ್ಯಾಪ್ತಿಯನ್ನು ಹೊಂದಿದೆ.
ಈ ಸಾಧನೆಯಿಂದ ಏನು ಲಾಭ..?
- ಭಾರತದ ರಕ್ಷಣಾ ವಲಯಕ್ಕೆ ಹೊಸ ಬಲ ಸಿಕ್ಕಿದೆ. ಭಾರತದ ಅಣ್ವಸ್ತ್ರ ನಿರೋಧಕ ಶಕ್ತಿಯು ಇನ್ನಷ್ಟು ಬಲಗೊಂಡಿದೆ. ಸಮೂಹ ನಾಶಕ ಶಸ್ತ್ರಾಸ್ತ್ರಗಳ ಬಳಕೆ ವಿಚಾರದಲ್ಲಿ ಜಾಗತಿಕ ಸಮುದಾಯದ ಎದುರು ಭಾರತ ಈ ವಿಚಾರದಲ್ಲಿ ತನ್ನ ಬದ್ಧತೆ ಪ್ರದರ್ಶನ ಮಾಡಿದೆ. ಆದರೆ, ಇದೇ ವೇಳೆ ಅಣ್ವಸ್ತ್ರ ದಾಳಿ ವೇಳೆ ರಕ್ಷಣೆ ಪಡೆಯುವ ನಿಟ್ಟಿನಲ್ಲಿ ಹಾಗೂ ಅಣ್ವಸ್ತ್ರ ದಾಳಿ ನಿರೋಧಕ ಶಕ್ತಿಯನ್ನು ಹೊಂದುವಲ್ಲಿ ಭಾರತ ದಿನದಿಂದ ದಿನಕ್ಕೆ ಹೊಸ ಹೆಜ್ಜೆಗಳನ್ನು ಇಡುತ್ತಿದೆ. ಅಣ್ವಸ್ತ್ರ ದಾಳಿ ತಡೆ ಸಾಮರ್ಥ್ಯ ಹೊಂದುವಲ್ಲಿ ಭಾರತ ಸದೃಢತೆ ಸಾಧಿಸುತ್ತಿದೆ .
‘ಐಎನ್‌ಎಸ್ ಅರಿಹಂತ’
- ಈ ಅಣು ಶಕ್ತಿ ಚಾಲಿತ ಸಬ್‌ಮೆರಿನ್ ಅನ್ನು ಜುಲೈ 26, 2009ರಲ್ಲಿ ಅಂದಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಚಾಲನೆ ನೀಡಿದರು. ಆಗಸ್ಟ್ 2013ರಲ್ಲಿ ಈ ಜಲಾಂತರ್ಗಾಮಿ ನೌಕೆಯಲ್ಲಿ ಅಣು ರಿಯಾಕ್ಟರ್ ಅನ್ನು ಕಾರ್ಯಾರಂಭಗೊಳಿಸಲಾಗಿತ್ತು.