Published on: October 4, 2021

ಜಲ್ ಜೀವನ್ ಮಿಷನ್ ಆ್ಯಪ್

ಜಲ್ ಜೀವನ್ ಮಿಷನ್ ಆ್ಯಪ್

ಸುದ್ಧಿಯಲ್ಲಿ ಏಕಿದೆ? 2024ರೊಳಗೆ ದೇಶದ ಪ್ರತಿ ಹಳ್ಳಿಗೂ ನಿರಂತರ ಶುದ್ಧ ಕುಡಿಯುವ ನೀರು ಕಲ್ಪಿಸುವ ಮಹತ್ವಾಕಾಂಕ್ಷಿ ಜಲ್‌ ಜೀವನ್‌ ಮಿಷನ್‌ನ (ಜೆಜೆಎಮ್‌) ಭಾಗವಾಗಿರುವ ಮೊಬೈಲ್‌ ಅಪ್ಲಿಕೇಷನ್‌ ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅನಾವರಣಗೊಳಿಸಿದರು.

ಆ್ಯಪ್‌ನ ಗುರಿ

  • ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಕಲ್ಪಿಸುವ ಕಾರ್ಯಕ್ಕೆ ತಂತ್ರಜ್ಞಾನದ ಸ್ಪರ್ಷ ನೀಡುವುದೇ ಆ್ಯಪ್‌ನ ಗುರಿ.

ಏನಿದು ಆ್ಯಪ್‌?

  • ಜಲ್‌ ಜೀವನ್‌ ಮಿಷನ್‌ ವೆಬ್‌ಸೈಟ್‌ನಲ್ಲಿ ವಿವರಿಸಿರುವಂತೆ, ಮೊಬೈಲ್‌ ಅಪ್ಲಿಕೇಷನ್‌ನಲ್ಲಿ ಕುಡಿಯುವ ನೀರು ಸರಬರಾಜು ಹಾಗೂ ಮೂಲಸೌಕರ್ಯದ ಕುರಿತ ಮಾಹಿತಿಗಳಿರುತ್ತವೆ. ಗ್ರಾಹಕರು ಆಧಾರ್‌ ಸಂಖ್ಯೆ ಮೂಲಕ ಆ್ಯಪ್‌ಗೆ ನೋಂದಣಿ ಮಾಡಿಕೊಂಡು, ತಾವು ಕುಡಿಯುತ್ತಿರುವ ನೀರು ಹಾಗೂ ಅದರ ಶುದ್ಧತೆಯ ಕುರಿತ ಮಾಹಿತಿ ಪಡೆಯಬಹುದು.
  • ಅಂತೆಯೇ, ಆ್ಯಪ್‌ ಮೂಲಕ ಗ್ರಾಮ, ಜಿಲ್ಲೆ ಹಾಗೂ ರಾಜ್ಯ ಮಟ್ಟದ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೂ ಕ್ಷಣಕ್ಷಣದ ಮಾಹಿತಿ ರವಾನೆಯಾಗಲಿದೆ. ಏಕೀಕೃತ ವ್ಯವಸ್ಥೆ ಮೂಲಕ ಆ್ಯಪ್‌ನ ಡೇಟಾ ನಿರ್ವಹಣೆ ಮಾಡಲಾಗುತ್ತದೆ.
  • ಇದರಲ್ಲಿ ಗ್ರಾಮಗಳು, ಜಿಲ್ಲೆಗಳು ಹಾಗೂ ರಾಜ್ಯ ಮಟ್ಟದ ಕಾರ್ಯಯೋಜನೆ ಕುರಿತ ಮಾಹಿತಿ ಇರುತ್ತದೆ. ನೀರಿನ ಗುಣಮಟ್ಟ ಹಾಗೂ ಲಭ್ಯತೆ ಕುರಿತು ಆ್ಯಪ್‌ ಮೂಲಕ ರೇಟಿಂಗ್‌ ನೀಡುವುದಕ್ಕೂ ಗ್ರಾಹಕರಿಗೆ ಅವಕಾಶವಿದೆ.

ತಂತ್ರಜ್ಞಾನದ ಸ್ಪರ್ಶ ಹೇಗೆ?

  • ನೀರು ಸರಬರಾಜು ವ್ಯವಸ್ಥೆಯ ನಿರ್ವಹಣೆ ತಂತ್ರಜ್ಞಾನ ಆಧಾರಿತ ಆಧುನಿಕ ಸಾಧನಗಳ ಬಳಕೆಯೂ ಯೋಜನೆಯಲ್ಲಿದೆ. ಇಂಟರ್ನೆಟ್‌ ಆಫ್‌ ಥಿಂಗ್ಸ್‌ (ಐಒಟಿ) ಆಧಾರಿತ ಸೆನ್ಸರ್‌ಗಳು, ನೀರಿನ ಮೀಟರ್‌ಗಳು, ನೀರಿನ ಗುಣಮಟ್ಟ ಪರೀಕ್ಷೆ ಕಿಟ್‌ಗಳು ಜಾರಿಗೆ ಬರಲಿವೆ.
  • ಈ ಕಿಟ್‌ಗಳು ಫಾಸ್ಪೆಟ್‌, ಸಲ್ಫೇಟ್‌ ಸೇರಿದಂತೆ ಅಪಾಯಕಾರಿ 12 ಮಾದರಿಯ ಖನಿಜಗಳ ಪತ್ತೆ ಸಾಮರ್ಥ್ಯ ಹೊಂದಿದೆ. ಇದರ ನೆರವಿನಿಂದ 2024ರೊಳಗೆ ಕಡಿಮೆ ವೆಚ್ಚದಲ್ಲಿ ಪ್ರತಿ ಹಳ್ಳಿಗೂ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಗುರಿ ಸರಕಾರದ ಮುಂದಿದೆ.
  • ಕೊಳವೆಗೆ ಅಳವಡಿಸಲಾಗುವ ಸೆನ್ಸರ್‌, ನೀರು ಎಷ್ಟು ಪ್ರಮಾಣದಲ್ಲಿ ಹರಿಯುತ್ತಿದೆ ಎಂಬುದನ್ನು ಗಮನಿಸುವ ಜತೆಗೆ ಮಾಲಿನ್ಯದ ಮೇಲೂ ನಿಗಾ ಇಡುತ್ತದೆ. ನೀರಿನ ಒತ್ತಡ ನಿರ್ವಹಣೆ ಸೆನ್ಸಾರ್‌ ಬಳಕೆಯಾಗಲಿದ್ದು, ಎಷ್ಟು ಪ್ರಮಾಣದಲ್ಲಿ ನೀರು ಬಳಕೆಯಾಗುತ್ತದೆ ಎಂಬ ಮಾಹಿತಿ ಸಂಗ್ರಹಿಸಲಿದೆ.
  • ಜಲ ಸಂಗ್ರಹಾಗಾರಗಳಲ್ಲಿ ಸಂಗ್ರಹ ಪ್ರಮಾಣ ಮಾಹಿತಿಗಾಗಿ ಅರಿಯಲು ಸೆನ್ಸರ್‌ ಅಳವಡಿಸಲಾಗುತ್ತದೆ.

ಯಾರಿಂದ ನಿರ್ವಹಣೆ?

  • ಕೇಂದ್ರದ ಜಲ ಶಕ್ತಿ ಇಲಾಖೆ ಒಟ್ಟು ಮಾಹಿತಿ ನಿರ್ವಹಣೆ ಮಾಡುತ್ತದೆ. ಈ ಮೂಲಕ ದೇಶಾದ್ಯಂತ ಸಮರ್ಪಕ ಕುಡಿಯುವ ನೀರು ಲಭ್ಯವಾಗುತ್ತಿರುವ ಬಗ್ಗೆ ನಿಗಾ ಇಡಲಿದೆ.
  • ದೇಶದ ಮೂಲೆ ಮೂಲೆಯಲ್ಲಿರುವ ಪ್ರಯೋಗಾಲಯಗಳಲ್ಲಿ ನಡೆಸಲಾದ ನೀರಿನ ಗುಣಮಟ್ಟ ಪರೀಕ್ಷೆ ವರದಿಗಳು ಇಲಾಖೆಗೆ ಲಭ್ಯವಾಗಲಿದೆ. ಯೋಜನೆಯಡಿ, ಸ್ಥಳೀಯ ಅಧಿಕಾರಿಗಳು ಆಗಾಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಪ್ರತಿಯೊಂದು ಗ್ರಾಮಗಳಲ್ಲಿ ಐದು ಮಹಿಳೆಯರನ್ನು ನೇಮಕ ಮಾಡಿಕೊಂಡು ಆಧುನಿಕ ಸಾಧನಗಳ ಅಳವಡಿಕೆ ಹಾಗೂ ಪರೀಕ್ಷೆಗೆ ನಿಯೋಜಿಸಲಾಗುತ್ತದೆ.