Published on: June 26, 2023

ಜಿಇ ಏರೋಸ್ಪೇಸ್ – ಎಚ್ಎಎಲ್ ಸಹಭಾಗಿತ್ವ

ಜಿಇ ಏರೋಸ್ಪೇಸ್ – ಎಚ್ಎಎಲ್ ಸಹಭಾಗಿತ್ವ

ಸುದ್ದಿಯಲ್ಲಿ ಏಕಿದೆ?   ಜನರಲ್ ಇಲೆಕ್ಟ್ರಿಕ್ (ಜಿಇ) ಏರೋಸ್ಪೇಸ್ ಭಾರತ ಸರ್ಕಾರಿ ಸ್ವಾಮ್ಯದ, ಯುದ್ಧ ವಿಮಾನಗಳನ್ನು ಉತ್ಪಾದಿಸುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಸಂಸ್ಥೆಯೊಡನೆ ಭಾರತೀಯ ವಾಯುಪಡೆಗೆ ಅಗತ್ಯವಿರುವ ಯುದ್ಧ ವಿಮಾನಗಳ ಇಂಜಿನ್‌ಗಳನ್ನು ಉತ್ಪಾದಿಸಲು ತಿಳಿವಳಿಕೆ ಒಪ್ಪಂದ (Mou)ಕ್ಕೆ ಸಹಿ ಹಾಕಿರುವುದಾಗಿ ಘೋಷಿಸಿದೆ.

ಮುಖ್ಯಾಂಶಗಳು

  • ಜಿಇ ಏವಿಯೇಷನ್‌ ಸಂಸ್ಥೆ ಜೆಟ್ ಹಾಗೂ ಟರ್ಬೋಪ್ರಾಪ್ ಇಂಜಿನ್‌ಗಳು, ಬಿಡಿಭಾಗಗಳು ಹಾಗೂ ಮಿಲಿಟರಿ, ವಾಣಿಜ್ಯಿಕ ಹಾಗೂ ಸಾಮಾನ್ಯ ವಿಮಾನಗಳ ಆಂತರಿಕ ವ್ಯವಸ್ಥೆಗಳನ್ನು ಒದಗಿಸುತ್ತದೆ. ಈ ಉತ್ಪನ್ನಗಳು ಮತ್ತು ಸೇವೆಗಳನ್ನು ಜಿಇ ಏವಿಯೇಷನ್‌‌ನ ಜಾಗತಿಕ ಸೇವಾ ಜಾಲದ ಬೆಂಬಲದಿಂದ ಒದಗಿಸಲಾಗುತ್ತದೆ.
  • ಈ ರೀತಿ ಎಲ್ಲ ಅವಶ್ಯಕತೆಗಳನ್ನು ಗ್ರಾಹಕರಿಗೆ ಪೂರೈಸಲು, ಜಿಇ ಏರೋಸ್ಪೇಸ್ ತನ್ನ ಎಫ್ 414 ಇಂಜಿನ್‌ಗಳನ್ನು ಭಾರತದಲ್ಲಿ ಉತ್ಪಾದಿಸಬಹುದು.
  • ಈ ಜಂಟಿ ಯೋಜನೆಯನ್ನು ಭಾರತೀಯ ವಾಯುಪಡೆ ತನ್ನ ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಲ್‌ಸಿಎ) ಎಂಕೆ2 ಯೋಜನೆಯ ಭಾಗವಾಗಿ ಪರಿಗಣಿಸುತ್ತಿದೆ.
  • ಈಗಾಗಲೇ ಹಾಕಿಕೊಂಡಿರುವ ವೇಳಾಪಟ್ಟಿಯ ಪ್ರಕಾರ, ತೇಜಸ್ ಮಾರ್ಕ್ 2 ಯುದ್ಧ ವಿಮಾನ 2027 ಅಥವಾ 2028ರಲ್ಲಿ ಉತ್ಪಾದನಾ ಹಂತಕ್ಕೆ ತಲುಪಲಿದೆ. ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ಎಡಿಎ) ಜಿಇ-414 ಇಂಜಿನ್ ಹೊಂದಿರುವ ಈ ವಿಮಾನದ ಮೂಲ ಮಾದರಿಯನ್ನು 2024ರ ಕೊನೆಯ ವೇಳೆಗೆ ಉತ್ಪಾದಿಸುವ ಯೋಜನೆ ಹಾಕಿಕೊಂಡಿದೆ.
  • ಅಮೆರಿಕಾದ ಸಂಸತ್ತಾದ ಕಾಂಗ್ರೆಸ್ಸಿನ ಅನುಮತಿ ದೊರೆತರೆ, ಈ ಇಂಜಿನ್ನನ್ನು ನೂರು ಶೇಕಡಾ ತಂತ್ರಜ್ಞಾನ ವರ್ಗಾವಣೆ (ಟ್ರಾನ್ಸ್‌ಫರ್ ಆಫ್ ಟೆಕ್ನಾಲಜಿ – ಟಿಒಟಿ) ಮೂಲಕ ಭಾರತದಲ್ಲಿ ಉತ್ಪಾದಿಸಲಾಗುತ್ತದೆ.
  • ಜಿಇಯ ಸರಿಸಾಟಿಯಿಲ್ಲದ ಎಫ್414 ಇಂಜಿನ್‌ಗಳು ಎರಡೂ ರಾಷ್ಟ್ರಗಳಿಗೆ ಆರ್ಥಿಕ ಮತ್ತು ರಾಷ್ಟ್ರೀಯ ಭದ್ರತೆಯ ಪ್ರಯೋಜನಗಳನ್ನು ಒದಗಿಸಲಿವೆ.

ಹಿನ್ನೆಲೆ

  • ಜಿಇ ಏರೋಸ್ಪೇಸ್ ಮೊದಲೇ ಭಾರತೀಯ ವಾಯುಪಡೆಯ ಎಲ್‌ಸಿಎ ಎಂಕೆ 2 ಯೋಜನೆಗೆ 99 ಇಂಜಿನ್‌ಗಳನ್ನು ಪೂರೈಸುವುದಾಗಿ ಒಪ್ಪಿಕೊಂಡಿತ್ತು. ಈಗ ಕೈಗೊಂಡಿರುವ ಒಪ್ಪಂದದ ಪರಿಣಾಮವಾಗಿ, ಹಿಂದಿನ ಯೋಜನೆಯೂ ಮುಂದುವರಿಯಲಿದೆ.

1986ರಲ್ಲಿ ಎಲ್‌ಸಿಎಗೆ ಅಗತ್ಯವಿದ್ದ ಎಫ್404 ಇಂಜಿನ್ ಉತ್ಪಾದಿಸಲು ಜಿಇ ಭಾರತದ ಎಡಿಎ ಹಾಗೂ ಎಚ್ಎಎಲ್‌ಗಳಿಗೆ ಬೆಂಬಲ ನೀಡಿತು. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು 1984ರಲ್ಲಿ ಅಮೆರಿಕಾಗೆ ಭೇಟಿ ನೀಡಿದಾಗ ಅವರು ಈ ಇಂಜಿನನ್ನು ಭಾರತಕ್ಕೆ ಪಡೆದಿದ್ದರು. ಇವುಗಳು ಇಂದಿಗೂ ಬಳಕೆಯಲ್ಲಿವೆ.

ಜಿಇ ಏವಿಯೇಷನ್‌

  • ಜಿಇ ಏವಿಯೇಷನ್‌, ಫಾರ್ಚೂನ್ 100 ಕಂಪನಿ ಜಿಇಯ ಅಂಗಸಂಸ್ಥೆಯಾಗಿದೆ.
  • ಸ್ಥಾಪನೆ: 1917
  • ಪ್ರಧಾನ ಕಛೇರಿ : ಈವೆಂಡೇಲ್, ಓಹಿಯೋ, ಯುನೈಟೆಡ್ ಸ್ಟೇಟ್ಸ್
  • ಉತ್ಪಾದನೆ : ವಿಮಾನ ಇಂಜಿನ್ಗಳು,ವಿಮಾನದಲ್ಲಿ ಅಳವಡಿಸಲಾಗಿರುವ ಎಲೆಕ್ಟ್ರಾನಿಕ್ ಉಪಕರಣಗಳು.
  • ಭಾರತದಲ್ಲಿ ಜಿಇ ಸಂಸ್ಥೆಯ ಪಾಲ್ಗೊಳ್ಳುವಿಕೆಗೆ ಬೆಂಗಳೂರಿನ ಜಾನ್ ಎಫ್ ವೆಲ್ಚ್ ಟೆಕ್ನಾಲಜಿ ಸೆಂಟರ್ ಒಂದು ಉದಾಹರಣೆಯಾಗಿದೆ. ಇದು 2000ನೇ ಇಸವಿಯಲ್ಲಿ ಆರಂಭವಾಯಿತು. ಬಳಿಕ 2015ರಲ್ಲಿ ಪುಣೆಯ ಮಲ್ಟಿ ಮೋಡಲ್ ಫ್ಯಾಕ್ಟರಿಯನ್ನು ಆರಂಭಿಸಲಾಯಿತು.