Published on: January 10, 2023

ಜೋಶಿಮಠ

ಜೋಶಿಮಠ


ಸುದ್ದಿಯಲ್ಲಿ ಏಕಿದೆ? ಇತಿಹಾಸ ಪ್ರಸಿದ್ಧ ಉತ್ತರಾಖಂಡ್ನ ಜೋಶಿಮಠ ಅಳವಿನಂಚಿಗೆ ತಲುಪುತ್ತಿದ್ದು, ಈ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಗಳನ್ನು ತುರ್ತು ಪರಿಶೀಲನೆ ನಡೆಸಲು ಸುಪ್ರೀಕೋರ್ಟ್ ನಿರಾಕರಿಸಿದೆ.


ಕಾರಣ : ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಪಿಎಸ್ ನರಸಿಂಹ ಅವರಿದ್ದ ಪೀಠವು, ಈ ಸಮಸ್ಯೆಯನ್ನು ಪರಿಶೀಲಿಸಲು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸಂಸ್ಥೆಗಳಿವೆ ಎಂದು ಹೇಳಿದ್ದು, ವಿಚಾರಣೆಯನ್ನು ಮುಂದೂಡಿದೆ.

ಮುಖ್ಯಾಂಶಗಳು

  • ಏಷ್ಯಾದ ಅತ್ಯಂತ ದೊಡ್ಡ ರೋಪ್‌ವೇ ಆಗಿರುವ ಔಲಿ ರೋಪ್‌ವೇ ಕೆಳಭಾಗದಲ್ಲೂ ಭೂಕುಸಿತ ಸಂಭವಿಸಿದೆ. ಹೀಗಾಗಿ ರೋಪ್‌ವೇ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
  • ಜೋಶಿಮಠವನ್ನು ಭೂಕುಸಿತ ವಲಯ ಎಂದು ಘೋಷಿಸಲಾಗಿದ್ದು ಕುಸಿಯುತ್ತಿರುವ ಪಟ್ಟಣದಲ್ಲಿ ಹಾನಿಗೊಳಗಾದ ಮನೆಗಳಲ್ಲಿ ಸಿಲುಕಿದ್ದ 60ಕ್ಕೂ ಹೆಚ್ಚು ಕುಟುಂಬಗಳನ್ನು ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ಭೂಕುಸಿತಕ್ಕೆ ಕಾರಣ

  • ಹೈಡಲ್ ಪವರ್ ಪ್ರಾಜೆಕ್ಟ್ ಗಾಗಿ ದೊಡ್ಡ ದೊಡ್ಡ ಸುರಂಗಗಳನ್ನು ಕೊರೆಯಲಾಗುತ್ತಿದ್ದು, ಈ ಸುರಂಗದಲ್ಲಿ ನಡೆಯುತ್ತಿರುವ ಸ್ಫೋಟಗಳು ಇಡೀ ಜೋಶಿಮಠ ಪಟ್ಟಣವನ್ನು ನಡುಗಿಸುತ್ತಿದೆ. ಪರಿಣಾಮ ಇಲ್ಲಿನ ಮನೆಗಳು, ಕಟ್ಟಡಗಳು, ಬಿರು ಬಿಟ್ಟಿದ್ದು, ಯಾವುದೇ ಹಂತದಲ್ಲಿ ಕುಸಿಯುವ ಭೀತಿ ಸೃಷ್ಟಿಸಿದೆ.

ತಜ್ಞರ ಅಭಿಪ್ರಾಯಗಳು

  • ಈ ಬಗ್ಗೆ ಮಾಹಿತಿ ನೀಡಿರುವ ತಜ್ಞರು ಜೋಷಿ ಮಠ ಉತ್ತರಖಂಡದ ಚಮೋಲಿ ಜಿಲ್ಲೆಯಲ್ಲಿ 6ಸಾವಿರ ಅಡಿ ಎತ್ತರದ ಪಟ್ಟಣವಾಗಿದೆ. ಇದು ಸಕ್ರಿಯ ಭೂಕಂಪನ ಪ್ರದೇಶವಾಗಿದ್ದು, ಭೂಕಂಪಗಳ ಹೆಚ್ಚಿನ ಅಪಾಯವಿರುವ ಭೂಕಂಪನ ಸಕ್ರಿಯ ವಲಯ ಎಂದು ತಜ್ಞರು ಹೇಳಿದ್ದಾರೆ. ಈ ಭೂಮಿ ನಿಧಾನಗತಿಯಲ್ಲಿ ಮುಳುಗಡೆಯಾಗುತ್ತಿದ್ದು, ಈ ವಿಚಿತ್ರ ಚಲನೆಗೆ ಇಲ್ಲಿನ ಅಭಿವೃದ್ಧಿ ಕಾಮಗಾರಿಗಳು ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿನ ಕಟ್ಟಡಕಾಮಗಾರಿ, ಜನಸಂದಣಿ, ರಸ್ತೆ ನಿರ್ಮಾಣ, ಅತಿಯಾದ ಹವಾಮಾನ ಕೂಡ ಈ ಮುಳುಗಡೆಗೆ ಕಾರಣ ಎಂದು ಹೇಳಲಾಗಿದೆ.

2001ರಲ್ಲೇ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಕೆ

  • ಭೌಗೋಳಿಕ ಅಂಶಗಳ ಹೊರತಾಗಿ, ಜೋಶಿಮಠ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಸಂಭವನೀಯ ಅಪಾಯಗಳ ಬಗ್ಗೆ ತಜ್ಞರ ಎಚ್ಚರಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದೇ ಇರುವುದೇ ಈ ಭೂ ಕುಸಿತಕ್ಕೆ ಪ್ರಮುಖ ಕಾರಣ ಎಂದು ಪರಿಸರವಾದಿ ಚಂಡಿ ಪ್ರಸಾದ್ ಭಟ್ ಅವರು ಹೇಳಿದ್ದಾರೆ.
  • ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಏಜೆನ್ಸಿ(ಎನ್‌ಆರ್‌ಎಸ್‌ಎ) ಸೇರಿದಂತೆ ದೇಶದ ಸುಮಾರು ಹನ್ನೆರಡು ಪ್ರಮುಖ ವೈಜ್ಞಾನಿಕ ಸಂಸ್ಥೆಗಳಿಂದ ರಿಮೋಟ್ ಸೆನ್ಸಿಂಗ್ ಮತ್ತು ಜಿಯೋಗ್ರಾಫಿಕ್ ಇನ್ಫರ್ಮೇಷನ್ ಸಿಸ್ಟಮ್ (ಜಿಐಎಸ್) ಬಳಸಿ ಅಧ್ಯಯನ ನಡೆಸಲಾಗಿದೆ.
  • ಜೋಶಿಮಠ ಸೇರಿದಂತೆ ಸಂಪೂರ್ಣ ಚಾರ್ ಧಾಮ್ ಮತ್ತು ಮಾನಸ ಸರೋವರ ಯಾತ್ರೆ ಮಾರ್ಗಗಳನ್ನು ಒಳಗೊಂಡ ವಲಯ ಮ್ಯಾಪಿಂಗ್ ಅನ್ನು ಆ ಸಮಯದಲ್ಲಿ ಡೆಹ್ರಾಡೂನ್, ತೆಹ್ರಿ, ಉತ್ತರಕಾಶಿ, ಪೌರಿ, ರುದ್ರಪ್ರಯಾಗ, ಪಿಥೋರಗಢ, ನೈನಿತಾಲ್ ಮತ್ತು ಚಮೋಲಿ ಜಿಲ್ಲಾಡಳಿತಗಳಿಗೆ ಸಲ್ಲಿಸಲಾಗಿತ್ತು.
  • ಈ ವಲಯ ಮ್ಯಾಪಿಂಗ್ ವರದಿಯಲ್ಲಿ ಜೋಶಿಮಠದ 124.54 ಚದರ ಕಿ.ಮೀ ಪ್ರದೇಶದಲ್ಲಿ ಭೂಕುಸಿತಕ್ಕೆ ಒಳಗಾಗುವ ಸಾಧ್ಯತೆಗೆ ಅನುಗುಣವಾಗಿ ಆರು ಭಾಗಗಳಾಗಿ ವಿಂಗಡಿಸಲಾಗಿದೆ.
  • ಮ್ಯಾಪ್ ಮಾಡಲಾದ ಶೇಕಡಾ 99 ರಷ್ಟು ಪ್ರದೇಶವನ್ನು ವಿವಿಧ ಹಂತಗಳಲ್ಲಿ ಭೂಕುಸಿತ ಪೀಡಿತ ಎಂದು ತೋರಿಸಲಾಗಿದೆ.
  • ಶೇ. 39 ರಷ್ಟು ಪ್ರದೇಶವನ್ನು ಹೆಚ್ಚಿನ ಅಪಾಯದ ವಲಯವೆಂದು ಗುರುತಿಸಲಾಗಿದೆ.   ಶೇಕಡಾ 28 ರಷ್ಟು ಪ್ರದೇಶವನ್ನು ಮಧ್ಯಮ ಅಪಾಯದ ವಲಯ ಮತ್ತು ಶೇ. 29 ರಷ್ಟು ಪ್ರದೇಶವನ್ನು ಕಡಿಮೆ-ಅಪಾಯದ ವಲಯ ಎಂದು ಗುರುತಿಸಲಾಗಿದೆ.

ಜೋಶಿಮಠ: ಉತ್ತರಖಂಡದ ಚಮೋಲಿ ಜಿಲ್ಲೆಯಲ್ಲಿ 6ಸಾವಿರ ಅಡಿ ಎತ್ತರದ ಪಟ್ಟಣವಾಗಿದೆ. ಜೋಶಿಮಠವು ಬದರಿನಾಥ ಮತ್ತು ಹೇಮಕುಂಡ್ ಸಾಹಿಬ್‌ ಸೇರಿದಂತೆ ಹಿಂದೂ ಹಾಗೂ ಸಿಖ್ಖರ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಪ್ರಮುಖ ದ್ವಾರವಾಗಿದೆ. ಚೀನಾ ಗಡಿ ಸಮೀಪದಲ್ಲೇ ಇರುವುದರಿಂದ, ಪ್ರಮುಖ ಸೇನಾ ನೆಲೆಗಳೂ ಕೂಡ ಇಲ್ಲಿವೆ.