Published on: July 31, 2021

ತಿರುಪತಿ ದೇಗುಲಕ್ಕೆ ಡ್ರೋನ್‌ ನಿಗ್ರಹ ವ್ಯವಸ್ಥೆ

ತಿರುಪತಿ ದೇಗುಲಕ್ಕೆ ಡ್ರೋನ್‌ ನಿಗ್ರಹ ವ್ಯವಸ್ಥೆ

ಸುದ್ಧಿಯಲ್ಲಿ ಏಕಿದೆ ?  ವಿಶ್ವದ ಅತಿ ಶ್ರೀಮಂತ ದೇಗುಲವೆಂದೇ ಖ್ಯಾತಿ ಪಡೆದಿರುವ ತಿರುಮಲದ ಶ್ರೀ ವೆಂಕಟೇಶ್ವರ ದೇಗುಲಕ್ಕೆ 25 ಕೋಟಿ ರೂ. ವೆಚ್ಚದಲ್ಲಿ ಡ್ರೋನ್‌ ದಾಳಿ ನಿಗ್ರಹ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇಂತಹ ರಕ್ಷಣಾ ವ್ಯವಸ್ಥೆ ಪಡೆದ ದೇಶದ ಪ್ರಪ್ರಥಮ ದೇಗುಲ ಎಂಬ ಹೆಗ್ಗಳಿಕೆಗೂ ತಿರುಪತಿ ಪಾತ್ರವಾಗಿದೆ.

  • ಜಮ್ಮು ವಾಯು ನೆಲೆಗೆ ಡ್ರೋನ್‌ ದಾಳಿ ನಡೆದ ಬಳಿಕ ದೇಶದಲ್ಲಿ ಡ್ರೋನ್‌ ದಾಳಿ ನಿಗ್ರಹವ್ಯವಸ್ಥೆಯನ್ನು ಬಲಪಡಿಸಲು ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಮುಂದಾಗಿದೆ. ಜುಲೈ 6ರಂದು ಕರ್ನಾಟಕದ ಕೋಲಾರದಲ್ಲಿ ಆ್ಯಂಟಿ ಡ್ರೋನ್‌ ಸಿಸ್ಟಮ್‌ನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.

ಏನಿದು ಆ್ಯಂಟಿ ಡ್ರೋನ್‌ ಸಿಸ್ಟಮ್‌?:

  • ಶತ್ರುಗಳ ಡ್ರೋನ್‌ ದಾಳಿಯನ್ನು ತಟಸ್ಥಗೊಳಿಸುವ ವ್ಯವಸ್ಥೆ ಇದಾಗಿದೆ. ಸ್ವದೇಶಿ ನಿರ್ಮಿತ ಈ ತಂತ್ರಜ್ಞಾನವು ಸಂಭಾವ್ಯ ಡ್ರೋನ್‌ ದಾಳಿಯನ್ನು ಪತ್ತೆಹಚ್ಚುವುದು ಮಾತ್ರವಲ್ಲದೆ ಶತ್ರು ಡ್ರೋನ್‌ನ ಸಾಫ್ಟ್‌ ಕಿಲ್‌(ಡ್ರೋನ್‌ನ ಸಂವಹನ ವ್ಯವಸ್ಥೆಯನ್ನು ಜಾಮ್‌ ಮಾಡುವುದು)ಗೂ ಸಹಕರಿಸಲಿದೆ.
  • ಸುಮಾರು 3-4 ಕಿ.ಮೀ. ದೂರದಿಂದಲೇ ಇಂತಹ ಶತ್ರು ಡ್ರೋನ್‌ಗಳನ್ನು ಪತ್ತೆಹಚ್ಚಿ ಅದರ ಸಂವಹನ ವ್ಯವಸ್ಥೆಯನ್ನು ಜಾಮ್‌ ಮಾಡುವ ಸಾಮರ್ಥ್ಯವನ್ನು ಡಿಆರ್‌ಡಿಒನ ಆ್ಯಂಟಿ ಡ್ರೋನ್‌ ಸಿಸ್ಟಮ್‌ ಹೊಂದಿದೆ. ವಾಯುಪಡೆ, ನೌಕಾಪಡೆ ಒಳಗೊಂಡಂತೆ ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಡ್ರೋನ್‌ ನಿಗ್ರಹ ವ್ಯವಸ್ಥೆಯನ್ನು ಡಿಆರ್‌ಡಿಒ ಬಲಪಡಿಸುತ್ತಿದೆ.
  • ಉಗ್ರರ ದಾಳಿಯ ಸಂಭಾವ್ಯತೆ ಇರುವ ದೇಶದ ಪ್ರಮುಖ ದೇಗುಲಗಳೂ ಮುಂದಿನ ದಿನಗಳಲ್ಲಿ ಇಂತಹ ರಕ್ಷಣಾ ವ್ಯವಸ್ಥೆಯನ್ನು ಪಡೆಯಲಿವೆ. ದೇಶದ 74ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಇದೇ ಡ್ರೋನ್‌ ನಿಗ್ರಹ ವ್ಯವಸ್ಥೆ ಕೆಂಪುಕೋಟೆಯಲ್ಲಿ ಕಾರ್ಯನಿರ್ವಹಿಸಿ ಡ್ರೋನ್‌ ದಾಳಿಯ ಮೇಲೆ ನಿಗಾ ವಹಿಸಿತ್ತು.