Published on: August 5, 2021

ದಕ್ಷಿಣ ಚೀನಾ ಸಮುದ್ರಕ್ಕೆ ಭಾರತದಿಂದ 4 ಯುದ್ಧನೌಕೆ

ದಕ್ಷಿಣ ಚೀನಾ ಸಮುದ್ರಕ್ಕೆ ಭಾರತದಿಂದ 4 ಯುದ್ಧನೌಕೆ

ಸುದ್ಧಿಯಲ್ಲಿ ಏಕಿದೆ ? ಚೀನಾಗೆ ಸೆಡ್ಡು ಹೊಡೆಯಲು ಮುಂದಾಗಿರುವ ಭಾರತ ದಕ್ಷಿಣ ಚೀನಾ ಸಮುದ್ರಕ್ಕೆ ಈ ತಿಂಗಳು ಯುದ್ಧನೌಕೆಗಳನ್ನು ಕಳುಹಿಸುತ್ತಿದೆ. ಅಮೆರಿಕ, ಆಸ್ಟ್ರೇಲಿಯಾ, ಜಪಾನ್‌ ಜೊತೆ ನೌಕಾ ಸಮರಾಭ್ಯಾಸವನ್ನು ಭಾರತ ಕೈಗೊಳ್ಳಲಿದೆ. ನಾಲ್ಕು ದೇಶಗಳು ಕ್ವಾಡ್‌ ಎಂಬ ಅನೌಪಚಾರಿಕ ಸಮೂಹವನ್ನು ರಚಿಸಿಕೊಂಡಿದೆ.

ಮುಖ್ಯಾಂಶಗಳು

  • ಭಾರತ ಮತ್ತು ಚೀನಾ ನಡುವಿನ ಸಾಂಪ್ರದಾಯಿಕ ವೈರತ್ವ ಗಲ್ವಾನ್‌ ಸಂಘರ್ಷದ ಬಳಿಕ ಮತ್ತಷ್ಟು ತೀವ್ರತೆ ಪಡೆದಿದ್ದು, ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಈಗ ಆಗ್ನೇಯ ಏಷ್ಯಾ, ದಕ್ಷಿಣ ಚೀನಾ ಸಮುದ್ರ ಮತ್ತು ಪಶ್ಚಿಮ ಪೆಸಿಫಿಕ್‌ಗೆ ಎರಡು ತಿಂಗಳ ಅವಧಿಗೆ ಗೈಡೆಡ್ ಮಿಸೈಲ್‌ ಡೆಸ್ಟ್ರಾಯರ್‌ ಮತ್ತು ಕ್ಷಿಪಣಿ ಯುದ್ಧ ನೌಕೆ ಸೇರಿ ನಾಲ್ಕು ಹಡಗುಗಳನ್ನು ನಿಯೋಜಿಸಲಾಗುವುದು ಎಂದು ನೌಕಾಪಡೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
  • ಸಾಗರ ಕ್ಷೇತ್ರದಲ್ಲಿ ಕಾರ್ಯಾಚರಣೆಯ ವ್ಯಾಪ್ತಿ, ಶಾಂತಿಯುತ ಉಪಸ್ಥಿತಿ ಮತ್ತು ಆಪ್ತ ದೇಶಗಳೊಂದಿಗೆ ಹೊಂದಿರುವ ಒಗ್ಗಟ್ಟನ್ನು ತಿಳಿಸಲು ಭಾರತೀಯ ನೌಕಾಪಡೆಯ ಹಡಗುಗಳನ್ನು ನಿಯೋಜಿಸಲಾಗುತ್ತಿದೆ ಎಂದು ನೌಕಾಪಡೆ ಹೇಳಿದೆ. ದಕ್ಷಿಣ ಚೀನಾ ಸಮುದ್ರ ಚೀನಾ ಹಾಗೂ ಅಮೆರಿಕಕ್ಕೆ ಪ್ರಮುಖವಾಗಿದ್ದು, ಅನೇಕ ಪ್ರದೇಶಗಳನ್ನು ತನ್ನದೆಂದು ಹೇಳಿಕೊಳ್ಳುವ ಚೀನಾದ ಹಕ್ಕನ್ನು ಅಮೆರಿಕ ತಿರಸ್ಕರಿಸಿದ್ದು, ದಕ್ಷಿಣ ಚೀನಾ ಸಮುದ್ರದಲ್ಲಿ ಪ್ರಭುತ್ವ ಸಾಧಿಸಲು ಮುಂದಾಗಿದೆ.
  • ಭಾರತದ ಹಡಗುಗಳು ಗುವಾಮ್‌ ಕರಾವಳಿಯಲ್ಲಿ ಅಮೆರಿಕ, ಜಪಾನ್‌ ಹಾಗೂ ಆಸ್ಟ್ರೇಲಿಯಾದ ಜೊತೆ ವಾರ್ಷಿಕ ಜಂಟಿ ಸಮರಾಭ್ಯಾಸದಲ್ಲಿ ಭಾಗವಹಿಸಲಿವೆ ಎಂದು ನೌಕಾಪಡೆ ತಿಳಿಸಿದೆ.
  • ಈ ಸಾಗರ ಉಪಕ್ರಮಗಳು ಭಾರತೀಯ ನೌಕಾಪಡೆ ಮತ್ತು ಆಪ್ತ ದೇಶಗಳ ನಡುವಿನ ಸಮನ್ವಯತೆಯನ್ನು ಹೆಚ್ಚಿಸುತ್ತದೆ