Published on: June 11, 2022
ದಾರಿತಪ್ಪಿಸುವ ಜಾಹೀರಾತು ತಡೆಗೆ ಕ್ರಮ
ದಾರಿತಪ್ಪಿಸುವ ಜಾಹೀರಾತು ತಡೆಗೆ ಕ್ರಮ
ಸುದ್ದಿಯಲ್ಲಿ ಏಕಿದೆ?
ಮುದ್ರಣ, ಟಿ.ವಿ ವಾಹಿನಿಗಳು ಹಾಗೂ ಆನ್ಲೈನ್ ವೇದಿಕೆಗಳಲ್ಲಿ ರಿಯಾಯಿತಿಗಳು ಮತ್ತು ಉಚಿತ ತ್ವರೆಗಳನ್ನು ನೀಡುವ ಮೂಲಕ ಗ್ರಾಹಕರಿಗೆ ಅದರಲ್ಲೂ ಮಕ್ಕಳಿಗೆ ಆಮಿಷ ಒಡ್ಡುವ, ತಪ್ಪು ದಾರಿಗೆ ಎಳೆಯುವ ಜಾಹೀರಾತುಗಳಿಗೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಿ, ಕೇಂದ್ರ ಸರ್ಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಮುಖ್ಯಾಂಶಗಳು
- ಗ್ರಾಹಕ ವ್ಯವಹಾರಗಳ ಸಚಿವಾಲಯವು ತಕ್ಷಣದಿಂದಲೇ ಜಾರಿಗೆ ತಂದಿರುವ ಮಾರ್ಗಸೂಚಿಗಳು, ಮುದ್ರಣ, ಟಿ.ವಿ ವಾಹಿನಿಗಳು ಹಾಗೂ ಆನ್ಲೈನ್ ವೇದಿಕೆಗಳಲ್ಲಿ ಪ್ರಕಟವಾಗುವ ಎಲ್ಲ ಜಾಹೀರಾತುಗಳಿಗೆ ಅನ್ವಯವಾಗಲಿವೆ. ಜಾಹೀರಾತುಗಳನ್ನು ಬಿಂಬಿಸುವವರೂ ಕೈಗೊಳ್ಳಬೇಕಾದ ಬದ್ಧತೆಯನ್ನು ಸೂಚಿಸಿವೆ.
- ಹೊಸ ಮಾರ್ಗಸೂಚಿಗಳ ಉಲ್ಲಂಘನೆಯ ವಿರುದ್ಧ ಗ್ರಾಹಕ ಸಂರಕ್ಷಣಾ ಕಾಯ್ದೆಯ (ಸಿಪಿಎ) ನಿಬಂಧನೆಗಳ ಪ್ರಕಾರ ಕ್ರಮ ಜರುಗಿಸಲಾಗುತ್ತದೆ. ಮೊದಲ ಬಾರಿಯ ಉಲ್ಲಂಘನೆಯ ಅಪರಾಧಕ್ಕೆ ₹10 ಲಕ್ಷ, ಅಪರಾಧ ಪುನರಾವರ್ತನೆಯಾದರೆ ₹50 ಲಕ್ಷ ದಂಡ ವಿಧಿಸಲು ಅವಕಾಶ ಮಾಡಿಕೊಟ್ಟಿದೆ.
- ಸಿಸಿಪಿಎ ಕಾಯ್ದೆಯಡಿ, ಗ್ರಾಹಕರ ಹಕ್ಕುಗಳು ಮತ್ತು ಹಿತಾಸಕ್ತಿ ಮೇಲೆ ಪರಿಣಾಮ ಬೀರುವ, ದಾರಿತಪ್ಪಿಸುವ ಜಾಹೀರಾತುಗಳನ್ನು ನಿಯಂತ್ರಿಸಲು ನಿಬಂಧನೆಗಳಿವೆ.
- ಗ್ರಾಹಕ ಸೇವೆಗಳನ್ನು ಒದಗಿಸುವಲ್ಲಿ ತೊಡಗಿರುವ ಸಾರ್ವಜನಿಕ ವಲಯದ ಘಟಕಗಳು (ಪಿಎಸ್ಯು) ನೀಡುವ ಸರ್ಕಾರಿ ಜಾಹೀರಾತುಗಳಿಗೂ ಈ ಮಾರ್ಗಸೂಚಿಗಳು ಅನ್ವಯಿಸುತ್ತವೆ. ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ಸ್ ಕೌನ್ಸಿಲ್ ಆಫ್ ಇಂಡಿಯಾ (ಎಎಸ್ಸಿಐ) ಸ್ವಯಂ ನಿಯಂತ್ರಣಕ್ಕಾಗಿ ಹೊರಡಿಸಿದ ಜಾಹೀರಾತು ಮಾರ್ಗಸೂಚಿಗಳು ಸಹ ಸಮಾನಾಂತರವಾಗಿ ಜಾರಿಯಲ್ಲಿರುತ್ತವೆ
- ಸರ್ಕಾರ ಹೊರಡಿಸಿರುವ ‘ತಪ್ಪು ದಾರಿಗೆಳೆಯುವ ಜಾಹೀರಾತುಗಳು ಮತ್ತು ಅವುಗಳ ಅನುಮೋದನೆಗಳನ್ನು ತಡೆಗಟ್ಟುವಿಕೆ 2022’ ಹೊಸ ಮಾರ್ಗಸೂಚಿಗಳು, ಮಕ್ಕಳನ್ನು ಗುರಿಯಾಗಿಸುವ ಜಾಹೀರಾತುಗಳನ್ನು ನಿಯಂತ್ರಿಸಲಿದೆ. ಜತೆಗೆ ಬಾಡಿಗೆ ಜಾಹೀರಾತುಗಳನ್ನೂ ನಿಷೇಧಿಸಲಿದೆ. ತಪ್ಪುದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ದೂರುಗಳನ್ನು ಸಲ್ಲಿಸಲು ಗ್ರಾಹಕರು ಮತ್ತು ಗ್ರಾಹಕ ಸಂಸ್ಥೆಗಳಿಗೆ ಅಧಿಕಾರ ನೀಡಲಾಗಿದೆ.
ಮಕ್ಕಳನ್ನು ದಾರಿತಪ್ಪಿಸುವ ಜಾಹೀರಾತುಗಳಿಗೆ ಕಠಿಣ ನಿರ್ಬಂಧ
- ‘ತಪ್ಪುದಾರಿಗೆಳೆಯುವ ಜಾಹೀರಾತನ್ನು ಈಗಾಗಲೇ ಗ್ರಾಹಕ ಸಂರಕ್ಷಣಾ ಕಾಯ್ದೆ 2019 ರ ಸೆಕ್ಷನ್ 2(28) ಅಡಿಯಲ್ಲಿ ವ್ಯಾಖ್ಯಾನಿಸಲಾಗಿದ್ದು, ‘ಬೈಟ್ ಜಾಹೀರಾತು’, ಮತ್ತು ‘ಬಾಡಿಗೆ ಜಾಹೀರಾತು’ಗಳೆಂದು ವ್ಯಾಖ್ಯಾನಿಸಲಾಗಿದೆ.
- ಬೈಟ್ ಜಾಹೀರಾತು ಎಂದರೆ ಗ್ರಾಹಕರನ್ನು ಆಕರ್ಷಿಸಲು ಕಡಿಮೆ ಬೆಲೆಗೆ ಸರಕುಗಳು, ಉತ್ಪನ್ನಗಳು ಅಥವಾ ಸೇವೆಗಳ ಮಾರಾಟಕ್ಕೆ ನೀಡುವ ಜಾಹೀರಾತಾಗಿದೆ.
- ‘ಉಚಿತ ಕ್ಲೈಮ್ ಜಾಹೀರಾತುಗಳು’ ಎಂದೂ ವ್ಯಾಖ್ಯಾನಿಸಿರುವ ‘ಬಾಡಿಗೆ ಜಾಹೀರಾತು’ ಮತ್ತು ಬೈಟ್ ಜಾಹೀರಾತು ನೀಡುವಾಗ ಅನುಸರಿಸಬೇಕಾದ ಷರತ್ತುಗಳನ್ನು ಈ ಮಾರ್ಗಸೂಚಿ ಒಳಗೊಂಡಿದೆ.
- ಉತ್ಪನ್ನ ಅಥವಾ ಸೇವೆಯ ಬಗ್ಗೆ ಮಕ್ಕಳು ಅವಾಸ್ತವಿಕ ನಿರೀಕ್ಷೆಗಳನ್ನು ಹೊಂದುವಂತೆ ಮತ್ತು ಮಾನ್ಯತೆ ಪಡೆದ ಸಂಸ್ಥೆಯಿಂದ ಸಮರ್ಪಕವಾಗಿ ಮತ್ತು ವೈಜ್ಞಾನಿಕವಾಗಿ ದೃಢೀಕರಿಸದೆ ಯಾವುದೇ ಆರೋಗ್ಯ ಅಥವಾ ಪೋಷಕಾಂಶದ ಪ್ರಯೋಜನಗಳನ್ನು ಪಡೆಯಲು ಕಾರಣವಾಗುವಂತೆ ಉತ್ಪನ್ನ ಅಥವಾ ಸೇವೆಯ ವೈಶಿಷ್ಟ್ಯಗಳನ್ನು ಉತ್ಪ್ರೇಕ್ಷಿಸುವುದನ್ನು ಮಾರ್ಗಸೂಚಿಗಳು ನಿರ್ಬಂಧಿಸಿವೆ.
- ಮಕ್ಕಳನ್ನು ಗುರಿಯಾಗಿಸುವ ಜಾಹೀರಾತುಗಳು ಕ್ರೀಡೆ, ಸಂಗೀತ ಅಥವಾ ಸಿನಿಮಾ ಕ್ಷೇತ್ರದ ಯಾವುದೇ ವ್ಯಕ್ತಿಗಳನ್ನು ಒಳಗೊಂಡಿರಬಾರದು. ಯಾವುದೇ ಕಾನೂನಿನ ಅಡಿಯಲ್ಲಿ ಅಂತಹ ಜಾಹೀರಾತುಗಳಿಗೆ ಆರೋಗ್ಯ ಎಚ್ಚರಿಕೆ ಸಂದೇಶ ಅಗತ್ಯ ಎಂದು ಸರ್ಕಾರ ಹೇಳಿದೆ.
- ಇದಲ್ಲದೆ, ತಯಾರಕರು, ಸೇವಾ ಪೂರೈಕೆದಾರರು, ಜಾಹೀರಾತುದಾರರು ಮತ್ತು ಜಾಹೀರಾತು ಏಜೆನ್ಸಿಯ ಕರ್ತವ್ಯಗಳಿಗೆ ಸ್ಪಷ್ಟ ಮಾರ್ಗಸೂಚಿಗಳನ್ನು ವಿಧಿಸಲಾಗಿದೆ.
ಭಾರತೀಯ ವೃತ್ತಿಪರರು ಯಾವುದೇ ಜಾಹೀರಾತು ಬಿಂಬಿಸುವುದನ್ನು ಯಾವುದೇ ಕಾನೂನಿನ ಅಡಿ ನಿರ್ಬಂಧಿಸಿದರೆ, ಅಂತಹ ವೃತ್ತಿಯ ವಿದೇಶಿ ವೃತ್ತಿಪರರು ಆ ಜಾಹೀರಾತುಗಳನ್ನು ಬಿಂಬಿಸುವುದಕ್ಕೆ ಅನುಮತಿ ನೀಡಲಾಗದು ಎಂದು ಮಾರ್ಗಸೂಚಿಯಲ್ಲಿ ಹೇಳಿದೆ.