Published on: January 6, 2022
ದಿವಾಳಿಯತ್ತ ಶ್ರೀಲಂಕಾ!
ದಿವಾಳಿಯತ್ತ ಶ್ರೀಲಂಕಾ!
ಸುದ್ಧಿಯಲ್ಲಿ ಏಕಿದೆ ? ಕೋವಿಡ್ ಬಿಕ್ಕಟ್ಟಿನಿಂದ ಶ್ರೀಲಂಕಾದ ಪ್ರವಾಸೋದ್ಯಮ ಸೊರಗಿದೆ. ಸರಕಾರದ ವೆಚ್ಚ ಹೆಚ್ಚಳ, ತೆರಿಗೆ ಕಡಿತವೂ ಸೇರಿ ದ್ವೀಪ ರಾಷ್ಟ್ರದ ಆರ್ಥಿಕತೆ ಹದಗೆಟ್ಟಿದ್ದು, ದಿವಾಳಿಯತ್ತ ಸಾಗಿದೆ ಎಂದು ವರದಿಯಾಗಿದೆ.
ಶ್ರೀಲಂಕಾದಲ್ಲಿ ಆಗಿದ್ದೇನು?
- ಹಣದುಬ್ಬರ ಗಗನಕ್ಕೇರಿದೆ. ಆಹಾರ ವಸ್ತುಗಳ ಬೆಲೆ ಭಾರಿ ಹೆಚ್ಚಳವಾಗಿದೆ. ಸರಕಾರದ ಬೊಕ್ಕಸ ಬರಿದಾಗುತ್ತಿದೆ.
ಬಿಕ್ಕಟ್ಟಿಗೆ ಕಾರಣವೇನು?
- ಕೋವಿಡ್ ಸಮಸ್ಯೆಯಿಂದ ಪ್ರವಾಸೋದ್ಯಮ ಮುಗ್ಗರಿಸಿದೆ. ಟೂರಿಸಂ ಲಂಕಾದ ಆರ್ಥಿಕತೆಯ ಜೀವನಾಡಿಯಾಗಿತ್ತು.
- ಸರಕಾರದ ವೆಚ್ಚದಲ್ಲಿ ಏರಿಕೆ
- ತೆರಿಗೆ ಕಡಿತ ಉಪಕ್ರಮಗಳು
- ಚೀನಾಕ್ಕೆ ಕೊಡಬೇಕಿರುವ ಭಾರಿ ಸಾಲದ ಹೊರೆ
- ದಶಕದಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದ ವಿದೇಶಿ ವಿನಿಮಯ ಸಂಗ್ರಹ
- ಸಾಲ ತೀರಿಸಲು ಸರಕಾರ ನೋಟುಗಳನ್ನು ಹೆಚ್ಚು ಮುದ್ರಿಸಿದೆ. ಇದರಿಂದ ಬೆಲೆ ಏರಿಕೆಯಾಗಿದೆ.
- ಪ್ರವಾಸೋದ್ಯಮಕ್ಕೆ ಹೊಡೆತ: ಕೋವಿಡ್ ಪರಿಣಾಮ ಶ್ರೀಲಂಕಾದ ಪ್ರವಾಸೋದ್ಯಮಕ್ಕೆ ತೀವ್ರ ಹೊಡೆತ ಬಿದ್ದಿದೆ. ಇದು ಅಲ್ಲಿನ ಜಿಡಿಪಿಗೆ ಶೇ.10 ಕೊಡುಗೆ ನೀಡುತ್ತಿತ್ತು. ಆದರೆ ಕೋವಿಡ್ ಬಳಿಕ 2 ಲಕ್ಷಕ್ಕೂ ಹೆಚ್ಚು ಮಂದಿ ಪ್ರವಾಸೋದ್ಯಮ ವಲಯದಲ್ಲಿ ತಮ್ಮ ಉದ್ಯೋಗ ಅಥವಾ ಜೀವನೋಪಾಯದ ಮೂಲ, ವೃತ್ತಿಗಳನ್ನು ಕಳೆದುಕೊಂಡಿದ್ದಾರೆ.
- ಹಸಿವಿನ ಸಮಸ್ಯೆ: ವಿಶ್ವಬ್ಯಾಂಕ್ ಪ್ರಕಾರ ಶ್ರೀಲಂಕಾದಲ್ಲಿ ಲಕ್ಷಾಂತರ ಮಂದಿ ಬಡತನದ ರೇಖೆಗಿಂತ ಕೆಳಗೆ ಇಳಿಯಲಿದ್ದಾರೆ. ಹಣದುಬ್ಬರ ನವೆಂಬರ್‌ನಲ್ಲಿ ಶೇ.11.1ಕ್ಕೆ ಜಿಗಿದಿದೆ. ಅಲ್ಲಿನ ಸರಕಾರ ಆರ್ಥಿಕ ತುರ್ತುಪರಿಸ್ಥಿತಿಯನ್ನು ಘೋಷಿಸಿದ ನಂತರ ಮಿಲಿಟರಿ ಪಡೆಯು ಅಕ್ಕಿ, ಸಕ್ಕರೆ ಇತ್ಯಾದಿ ಅಗತ್ಯ ವಸ್ತುಗಳನ್ನು ಸರಕಾರ ನಿಗದಿಪಡಿಸಿದ ದರದಲ್ಲಿ ಮಾರಾಟವಾಗುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ವಹಿಸಿದೆ.
ಭಾರತ ನೆರವು ನಿರೀಕ್ಷೆ:
- ಆರ್ಥಿಕ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾಕ್ಕೆ ಆರ್ಥಿಕ ನೆರವಿನ ಪ್ಯಾಕೇಜ್ ನೀಡಲು ಭಾರತ ಕಾರ್ಯಪ್ರವೃತ್ತವಾಗುವ ನಿರೀಕ್ಷೆ ಇದೆ. ಆಹಾರ, ಇಂಧನ ಮತ್ತು ವೈದ್ಯಕೀಯ ವಸ್ತುಗಳನ್ನೂ ಸರಬರಾಜು ಮಾಡುವ ಸಾಧ್ಯತೆ ಇದೆ. ಲಂಕೆಯಲ್ಲಿ ಭಾರತದ ಹೂಡಿಕೆ ವಿಸ್ತರಣೆಯಾಗುವ ಸಂಭವವೂ ಇದೆ.