Published on: December 21, 2022
ನರೇಗಾ ಯೋಜನೆ:
ನರೇಗಾ ಯೋಜನೆ:
ಸುದ್ದಿಯಲ್ಲಿ ಏಕಿದೆ? ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ) ಅಡಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯದ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆ ಮಹತ್ವದ ಆದೇಶವನ್ನು ಹೊರಡಿಸಿದೆ.
ಮುಖ್ಯಾಂಶಗಳು
- ಇಲಾಖೆಯು ಕಳೆದ ವರ್ಷದಿಂದ ನರೇಗಾ ಜಾಬ್ ಕಾರ್ಡ್ ಹೊಂದಿಲ್ಲದ ಮಹಿಳೆಯರನ್ನು ಗುರುತಿಸಲು ಮನೆ-ಮನೆ ಸಮೀಕ್ಷೆಯನ್ನು ಪ್ರಾರಂಭಿಸಿತ್ತು. ಇಲಾಖೆಯು ಉದ್ಯೋಗಗಳನ್ನು ಒದಗಿಸುವಲ್ಲಿ ಮಹಿಳೆಯರು ಮತ್ತು ಮಹಿಳೆಯರ ನೇತೃತ್ವದ ಕುಟುಂಬಗಳಿಗೆ ಆದ್ಯತೆ ನೀಡುತ್ತಿದೆ.
- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಇಲಾಖೆಯ ಅಂಕಿಅಂಶಗಳ ಪ್ರಕಾರ, ನರೇಗಾ ಯೋಜನೆ ಅಡಿಯಲ್ಲಿ ರಾಜ್ಯವು 1.8 ಕೋಟಿ ಜನರು ನೋಂದಾಯಿಸಿಕೊಂಡಿದ್ದು, ಇದರಲ್ಲಿ 90 ಲಕ್ಷ (ಶೇ.51.42)ಮಹಿಳಾ ಉದ್ಯೋಗಿಗಳಿದ್ದಾರೆಂದು ತಿಳಿದುಬಂದಿದೆ. ಕಳೆದ 5 ವರ್ಷಗಳಲ್ಲಿ ಮಹಿಳೆಯರ ಭಾಗವಹಿಸುವಂತೆ ನಿರಂತರವಾಗಿ ಹೆಚ್ಚಾಗುತ್ತಿರುವುದು ಇದರಿಂದ ತಿಳಿದುಬಂದಿದೆ.
- ಮಹಿಳೆಯರನ್ನು ಕೇಂದ್ರೀಕರಿಸುವ ನರೇಗಾ ಮತ್ತು ಇತರ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಇಲಾಖೆಯು ಎಲ್ಲಾ ಪಂಚಾಯತ್‌ಗಳಲ್ಲಿ ವಿಶೇಷ ಗ್ರಾಮಸಭೆಗಳನ್ನು ನಡೆಸಿದೆ. ಮಹಿಳೆಯರು ಯೋಜನೆಯ ಲಾಭ ಪಡೆದುಕೊಳ್ಳಲು ಗ್ರಾಮ ಸಭೆ ಸ್ಥಳಗಳಲ್ಲಿ ವಿಶೇಷ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಆದೇಶದಲ್ಲಿರುವ ಅಂಶಗಳು
- ಯೋಜನೆಯಡಿ ವಿಶೇಷ ಚೇತನರು ಮತ್ತು ಹಿರಿಯ ನಾಗರಿಕರಿಗೆ ದಿನಕ್ಕೆ ನಿಗದಿತ ಕೂಲಿ ಪಡೆಯಲು ನಿರ್ವಹಿಸಬೇಕಾದ ಕೆಲಸದ ಪ್ರಮಾಣದಲ್ಲಿ ಶೇ.50 ರಷ್ಟು ರಿಯಾಯಿತಿಯನ್ನು ರಾಜ್ಯ ಸರ್ಕಾರ ನೀಡಿದೆ.
- ಸದ್ಯ ಮಹಿಳೆಯರ ಭಾಗವಹಿಸುವಿಕೆ ಶೇ.51ರಷ್ಟಿದ್ದು, ಇದನ್ನು ಶೇ.60 ಕ್ಕೆ ಹೆಚ್ಚಿಸುವ ಗುರಿ ಇದೆ. ಶೇ.60 ಕ್ಕಿಂತ ಹೆಚ್ಚಿನ ಪ್ರಮಾಣದ ಮಹಿಳೆಯರನ್ನು ಹೊಂದಿರುವ ಕಾಮಗಾರಿಗಳಲ್ಲಿ ಮಹಿಳೆಯರು ನಿರ್ವಹಿಸಬೇಕಾದ ಕೆಲಸದ ಪ್ರಮಾಣದಲ್ಲಿ ಶೇ.10 ರಷ್ಟು ರಿಯಾಯಿತಿ ನೀಡಲಾಗಿದೆ.
- ನರೇಗಾ ಕಾಮಗಾರಿಗಳಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು, ಅವರ ದೈಹಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡುವುದು ಅವಶ್ಯಕವಾಗಿದೆ.
- ಈ ಹಿನ್ನೆಲೆಯಲ್ಲಿ ಕೆಲಸ ನಿರ್ವಹಿಸುವ 6 ತಿಂಗಳು ತುಂಬಿದ ಗರ್ಭಿಣಿಯರಿಗೆ ಮಗುವಿನ ಜನನದವರೆಗೆ ಹಾಗೂ ಬಾಣಂತಿಯರಿಗೆ ಮಗುವಿನ ಜನನ ದಿನಾಂಕದಿಂದ 6 ತಿಂಗಳವರೆಗೆ ನಿಗದಿತ ಕೂಲಿ ಪಡೆಯಲು ನಿಗದಿಪಡಿಸಲಾದ ಕೆಲಸದ ಪ್ರಮಾಣದಲ್ಲಿ ಶೇ.50 ರಷ್ಟು ರಿಯಾಯಿತಿ ಸಿಕ್ಕಿದೆ. ಈ ರಿಯಾಯಿತಿ ನೀಡಲು ಆರೋಗ್ಯ ಇಲಾಖೆ ನೀಡುವ ತಾಯಿ ಕಾರ್ಡ್ ಆಧಾರವಾಗಿ ಪರಿಗಣಿಸಲು ತಿಳಿಸಲಾಗಿದೆ.
ಉದ್ದೇಶ
- ಮಾರ್ಚ್ 2023 ರ ವೇಳೆಗೆ ಒಟ್ಟು ಉದ್ಯೋಗಿಗಳ ಸಂಖ್ಯೆಯಲ್ಲಿ ಶೇಕಡಾ 60 ರಷ್ಟು ಮಹಿಳೆಯರನ್ನು ತಲುಪುವ ಗುರಿಯನ್ನು ಹೊಂದಿದೆ. ಈ ಉಪಕ್ರಮವು ಮಹಿಳೆಯರ ಸಬಲೀಕರಣಕ್ಕೆ ಸಹಕಾರಿಯಾಗಲಿದೆ. ಮಹಿಳೆಯರಲ್ಲಿ ಹೆಚ್ಚಿನವರು ವಲಸೆ ಹೋಗದ ಕಾರಣ ಯೋಜನೆ ಅನೇಕರಿಗೆ ಅನುಕೂಲವಾಗಿದೆ ಮತ್ತು ಮಹಿಳೆಯರ ಕೆಲಸದ ಸಾಮರ್ಥ್ಯವೂ ಉತ್ತಮವಾಗಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ)
- ದೇಶದ ಎಲ್ಲ ರಾಜ್ಯಗಳ ಗ್ರಾಮೀಣ ಭಾಗದ ಜನರ ಜೀವನಕ್ಕೆ ಭದ್ರತೆ ಹೆಚ್ಚಿಸಲು ಎಲ್ಲ ವಯಸ್ಕ ಜನರಿಗೆ ವರ್ಷದಲ್ಲಿ 100 ದಿನಗಳ ಕೆಲಸ ಒದಗಿಸುವ ಗುರಿ ಹೊಂದಿರುವ ಯೋಜನೆಯನ್ನು 2005ರ ಸೆಪ್ಟೆಂಬರ್ 5ರಂದು ಜಾರಿಗೆ ತರಲಾಯಿತು. ಆರಂಭದಲ್ಲಿ ಈ ಯೋಜನೆಗೆ ‘ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ (NREGA) ಎಂದು ಹೆಸರಿಸಲಾಯಿತು.
- ಆದರೆ 2009ರ ಅಕ್ಟೋಬರ್ 2ರಂದು ಈ ಯೋಜನೆಯ ಹೆಸರನ್ನು ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MNREGA)’ ಎಂದು ಬದಲಾಯಿಸಲಾಯಿತು.
- ಪ್ರಾರಂಭಿಸಿದ್ದು (ಪ್ರಧಾನಿ): ಮನಮೋಹನ್ ಸಿಂಗ್
- ಸಚಿವಾಲಯ: ಗ್ರಾಮೀಣಾಭಿವೃದ್ಧಿ ಸಚಿವಾಲಯ
ಯೋಜನೆಯ ಉದ್ದೇಶ
- ಈ ಯೋಜನೆಯಡಿ ಉದ್ಯೋಗಾವಕಾಶ ಕಲ್ಪಿಸುವುದು.
- ಇದು ನೈಸರ್ಗಿಕ ಸಂಪನ್ಮೂಲಗಳನ್ನು ಪುನರ್ನಿರ್ಮಿಸಲು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜೀವನೋಪಾಯ ಮತ್ತು ಆಸ್ತಿಗಳನ್ನು ಸೃಷ್ಟಿಸುವ ಗುರಿ ಹೊಂದಿದೆ.
- ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಪ್ರತಿ ಕುಟುಂಬದ ಒಬ್ಬ ಸದಸ್ಯನಿಗೆ 100 ದಿನಗಳ ಉದ್ಯೋಗ ಒದಗಿಸುವುದು.
ಅರ್ಹತೆ
- ಭಾರತದ ಪ್ರಜೆಯಾಗಿರಬೇಕು, ಅದರಲ್ಲೂ ಗ್ರಾಮೀಣ ಪ್ರದೇಶದ ನಿವಾಸಿಯಾಗಿರಬೇಕು
- ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು
- ಅರ್ಜಿದಾರರು ಈ ಯೋಜನೆಯಲ್ಲಿ ಸ್ವಯಂಪ್ರೇರಣೆಯಿಂದ ಕೆಲಸ ಮಾಡಲು ಸಿದ್ಧರಿರಬೇಕು.
ಕೂಲಿ
- ಈ ಯೋಜನೆಯಡಿ ಆಯಾ ರಾಜ್ಯಗಳಿಗೆ ಅನುಗುಣವಾಗಿ ಕೂಲಿಯನ್ನು ನಿಗದಿ ಮಾಡಲಾಗಿದೆ. ಇದೀಗ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ಬರುವಂತೆ ನರೇಗಾ ಯೋಜನೆ ಕೂಲಿಯನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಕರ್ನಾಟಕದಲ್ಲಿ 309 ರೂ. ಕೂಲಿಯನ್ನು ಪಡೆಯುತ್ತಿದ್ದಾರೆ.
MNREGA (NREGA) ಜಾಬ್ ಕಾರ್ಡ್
- ಎಲ್ಲಾ ಫಲಾನುಭವಿಗಳಿಗೆ ಒದಗಿಸಲಾದ ದಾಖಲೆಯಾಗಿದ್ದು, ಫಲಾನುಭವಿಯು ಮಾಡಿದ ಕೆಲಸದ ಬಗ್ಗೆ ಮಾಹಿತಿಯನ್ನು ಒಳಗೊಂಡಿರುತ್ತದೆ. ಫಲಾನುಭವಿಯ ಕಾರ್ಡ್‌ನಲ್ಲಿ ನೀಡಬೇಕಾದ ಮಾಹಿತಿ- ಹೆಸರು, ವಿಳಾಸ, ಪೋಷಕರ ಹೆಸರು, ಜಾಬ್ ಕಾರ್ಡ್ ಸಂಖ್ಯೆಯನ್ನು ಹೊಂದಿರುತ್ತದೆ. ಈ ಕಾರ್ಡ್ MNREGA ಯೋಜನೆಯಡಿ ಕೆಲಸ ಮಾಡುವ ವ್ಯಕ್ತಿಗೆ 100 ದಿನಗಳ ಉದ್ಯೋಗ ನೀಡುವ ಹಕ್ಕನ್ನು ಒದಗಿಸುತ್ತದೆ.