Published on: June 6, 2023

ನೂತನ ಸಂಸತ್‌ ಭವನದಲ್ಲಿದೆ ಕರ್ನಾಟಕದ ಸಿದ್ದಾಪುರ ಗ್ರಾಮದ ಉಲ್ಲೇಖ

ನೂತನ ಸಂಸತ್‌ ಭವನದಲ್ಲಿದೆ ಕರ್ನಾಟಕದ ಸಿದ್ದಾಪುರ ಗ್ರಾಮದ ಉಲ್ಲೇಖ

ಸುದ್ದಿಯಲ್ಲಿ ಏಕಿದೆ? ಹೊಸದಾಗಿ ಕಟ್ಟಿರುವ ಸಂಸತ್‌ ಭವನದಲ್ಲಿ ಕರ್ನಾಟಕದ ಸ್ಥಳಗಳಾದ ಕೊಪ್ಪಳ, ಮಸ್ಕಿ, ಹಾಗೂ ರಾಂಪುರದ ಬಳಿಯಿರುವ ಅಶೋಕ ಸಿದ್ದಾಪುರ ಗ್ರಾಮದ ಹೆಸರನ್ನು ನಮೂದಿಸಲಾಗಿದೆ.

ಮುಖ್ಯಾಂಶಗಳು

  • ಹೊಸದಾಗಿ ಕಟ್ಟಿರುವ ಸಂಸತ್ ಭವನದಲ್ಲಿ ಸಾಮ್ರಾಟ್ ಅಶೋಕನು ಆಳಿದ ಅಖಂಡ ಭಾರತದ ಭೌಗೋಳಿಕ ಭಾಗವನ್ನು ತೋರಿಸುವ ಭೂಪಟವನ್ನು ಅಳವಡಿಸಲಾಗಿದೆ. ಈ ಭೂಪಟದಲ್ಲಿ ಅಶೋಕನ ಶಿಲಾಶಾಸನಗಳು ದೊರೆತಿರುವ ಸ್ಥಳಗಳು ಹಾಗೂ ಕೆಲ ಪ್ರಮುಖ ಪಟ್ಟಣಗಳ ಹೆಸರನ್ನು ಬರೆಯಲಾಗಿದೆ.
  • ಈ ಕಲಾಕೃತಿಯಲ್ಲಿ ಅಶೋಕನ ಶಿಲಾಶಾಸನ, ಅಶೋಕ ಸಾಮ್ರಾಟ, ಆತನ ಪತ್ನಿ ಹಾಗೂ ಇಬ್ಬರು ಮಕ್ಕಳಿರುವ ಸುಣ್ಣದ ಕಲ್ಲಿನಲ್ಲಿ ಕೆತ್ತಿದ ಉಬ್ಬುಶಿಲ್ಪದ ಚಿತ್ರಗಳನ್ನು ರೂಪಿಸಲಾಗಿದೆ.
  • ವಿಶೇಷವೇನೆಂದರೆ, ರಾಂಪುರದ ಬಳಿಯಿರುವ ಅಶೋಕ ಸಿದ್ದಾಪುರ ಗ್ರಾಮದ ಹೆಸರನ್ನು ನಮೂದಿಸಿರುವುದು, ಜತೆಗೆ ಕರ್ನಾಟಕದ ಇತರೆ ಸ್ಥಳಗಳಾದ ಕೊಪ್ಪಳ ಮತ್ತು ಮಸ್ಕಿಯ ಹೆಸರುಗಳು ಸಹ ಇದರಲ್ಲಿದೆ.

ಅಶೋಕ ಸಿದ್ದಾಪುರ ಗ್ರಾಮದ ವಿಶೇಷತೆ

  • ಈ ಸಿದ್ದಾಪುರ ಗ್ರಾಮಕ್ಕೆ ಅಶೋಕ ಸಿದ್ದಾಪುರ ಎಂದು ಹೆಸರು ಬರಲು ಕಾರಣ ಅಲ್ಲಿ ದೊರೆತಿರುವ ಅಶೋಕನ ಶಿಲಾಶಾಸನ. ಸುಮಾರು 2250 ವರ್ಷಗಳ ಹಿಂದೆ ಅಂದರೆ ಕ್ರಿ.ಪೂ. 3ನೇ ಶತಮಾನದಲ್ಲಿ ಈ ಶಾಸನವನ್ನು ಕೆತ್ತಲಾಗಿದೆ.
  • ಬಳ್ಳಾರಿಯಿಂದ ಬೆಂಗಳೂರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿನ ರಾಂಪುರ ಪಟ್ಟಣದ ನಂತರ ಅಶೋಕ ಸಿದ್ದಾಪುರ ಗ್ರಾಮ ಸಿಗುತ್ತದೆ. ಇಲ್ಲಿಅಶೋಕ ಶಾಸನ ಇರುವ ಕಲ್ಲಿನ ಕಟ್ಟಡವನ್ನು ಕಾಣಬಹುದಾಗಿದೆ. ಹತ್ತಿರದಲ್ಲಿಯೇ ಸುಮಾರು ಮೂರು ನಾಲ್ಕು ಕಿ.ಮಿ. ಅಂತರದಲ್ಲಿ ಇನ್ನೆರೆಡು ಶಾಸನಗಳು ಸಿಕ್ಕಿವೆ. ಬ್ರಹ್ಮಗಿರಿ ಬೆಟ್ಟ ಮತ್ತು ಜಟಿಂಗರಾಮೇಶ್ವರ ಬೆಟ್ಟದಲ್ಲಿಯೂ ಶಾಸನಗಳು ದೊರೆತಿವೆ.
  • ಶಾಸನಗಳ ಪಿತಾಮಹ ಎಂದು ಗುರುತಿಸಲ್ಪಟ್ಟ ಬಿ.ಎಲ್ ರೈಸ್ ಅವರು 1891 ರಷ್ಟು ಹಿಂದೆಯೇ, ಸಿದ್ದಾಪುರದಲ್ಲಿ ಅಶೋಕ ಚಕ್ರವರ್ತಿಯ ಶಿಲಾ ಶಾಸನಗಳನ್ನು ಶೋಧಿಸಿದರು. ಅಂದಿನಿಂದ ಸಿದ್ದಾಪುರ ಗ್ರಾಮವನ್ನು ಅಶೋಕ ಸಿದ್ದಾಪುರ ಎಂದೇ ಗುರುತಿಸುತ್ತಾರೆ.

ಶಾಸನಗಳಲ್ಲಿ ಕೆತ್ತಲಾಗಿರುವ  ವಿಷಯ

  • ಕ್ರಿ.ಪೂ. 3ನೇ ಶತಮಾನದಲ್ಲಿ ಅಶೋಕ ಮಹಾರಾಜ ಆಡಳಿತ ಅವಧಿಯಲ್ಲಿ ಈ ಸ್ಥಳದಲ್ಲಿ “ಇಸಿಲಾ” ಪಟ್ಟಣ ಇತ್ತು ಎಂದು ಶಾಸನದಲ್ಲಿ ಉಲ್ಲೇಖಿಸಲಾಗಿದೆ.
  • ಈ ಸ್ಥಳದಲ್ಲಿ 5000 ವರ್ಷದ ಹಿಂದೆಯಿಂದಲೂ ಜನರು ವಾಸವಾಗಿದ್ದರು ಎಂದು ಗುರುತಿಸಿದ್ದಾರೆ.
  • ಮೌರ್ಯ ಸಾಮ್ರಾಜ್ಯದ ದಕ್ಷಿಣ ಗಡಿಗಳನ್ನು ಗುರುತಿಸುವ ಕೆಲಸದಲ್ಲಿ ಈ ಸಂಶೋಧನೆಯಿಂದ ಬಹಳ ಸಹಾಯವಾಯಿತು ಎಂದು ಅಭಿಪ್ರಾಯ ಪಟ್ಟಿದ್ದಾರೆ.
  • ಈ ಶಾಸನಗಳು, ಕನ್ನಡ ಭಾಷೆಯ ಪ್ರಾಚೀನತೆಯನ್ನು ತೀರ್ಮಾನಿಸುವುದರಲ್ಲಿಯೂ ಮುಖ್ಯವಾದ ಪಾತ್ರವನ್ನು ವಹಿಸಿದವು. ಏಕೆಂದರೆ, ಈ ಶಾಸನದಲ್ಲಿ ಬರುವ ‘ಇಸಿಲ’ ಎಂಬ ಪದವು, ದಿನಾಂಕ ಸಹಿತವಾದ ಶಾಸನಗಳಲ್ಲಿ ದೊರಕಿರುವ, ಕನ್ನಡ ಭಾಷೆಯ ಪದಗಳಲ್ಲಿ ಅತ್ಯಂತ ಪ್ರಾಚೀನವಾದುದು. ಈ ಪದದ ಅರ್ಥ ‘ಕೋಟೆ’ ಎಂದು. ಈ ಪ್ರದೇಶವನ್ನು ಕೂಡ ಇಸಿಲ ಎಂದೇ ಕರೆಯಲಾಗಿದೆ. ಇಸಿಲವು ಸುವರ್ಣಗಿರಿಯ ಮಹಾಮಾತ್ರರ ರಾಜಧಾನಿಯಾಗಿತ್ತು. ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಿಂಗರಾಮೇಶ್ವರ ಸ್ಥಳಗಳಲ್ಲಿ ದೊರೆತ ಅಶೋಕ ಸಮ್ರಾಟನ ಶಾಸನಗಳಿಂದ ಮೌರ್ಯರ ಆಡಳಿತ ಮೈಸೂರಿನವರೆಗೂ ವಿಸ್ತರಿಸಿತ್ತು ಎಂದು ಗೊತ್ತಾಗುತ್ತದೆ.

ರಾಜ್ಯದಲ್ಲಿ ಒಟ್ಟು 17 ಶಾಸನಗಳು:

  • ಅಶೋಕನ ಒಟ್ಟು 155 ಶಾಸನಗಳು ಇದುವರೆಗೂ ಲಭ್ಯವಾಗಿದ್ದು, ಅದರಲ್ಲಿ 17 ನಮ್ಮ ರಾಜ್ಯದಲ್ಲಿ ದೊರೆತಿವೆ. ಅದರಲ್ಲಿ ಮೂರು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬ್ರಹ್ಮಗಿರಿ, ಸಿದ್ದಾಪುರ, ಜಟಿಂಗರಾಮೇಶ್ವರದಲ್ಲಿವೆ.
  • ಶಾಸನಗಳೆಲ್ಲ ಬ್ರಾಹ್ಮಿ ಮತ್ತು ಖರೋಷ್ಠಿ ಲಿಪಿಗಳಲ್ಲಿವೆ. ಬ್ರಾಹ್ಮಿ ಬರಹವನ್ನು ಎಡಗಡೆಯಿಂದ ಬಲಗಡೆಗೂ ಖರೋಷ್ಠಿಯನ್ನು ಈಗಿನ ಉರ್ದು ಭಾಷೆಯಂತೆ ಬಲದಿಂದ ಎಡಕ್ಕೂ ಓದಬೇಕು. ಬ್ರಹ್ಮಗಿರಿ ಶಾಸನದ ಕೊನೆಯ ಪಂಕ್ತಿ ಖರೋಷ್ಠಿಯಲ್ಲಿದೆ.