Published on: April 6, 2023

ನ್ಯಾಟೋ ಸೇರಿದ ಫಿನ್ಲೆಂಡ್‌

ನ್ಯಾಟೋ ಸೇರಿದ ಫಿನ್ಲೆಂಡ್‌

ಸುದ್ದಿಯಲ್ಲಿ ಏಕಿದೆ? ವಿಶ್ವದ ಅತೀದೊಡ್ಡ ಸೇನಾ ಮೈತ್ರಿಕೂಟ ನ್ಯಾಟೋ (ನಾರ್ತ್‌ ಅಟ್ಲಾಂಟಿಕ್‌ ಟ್ರೀಟಿ ಆರ್ಗನೈಜೇಷನ್‌) 31ನೇ ಸದಸ್ಯ ರಾಷ್ಟ್ರವಾಗಿ ಫಿನ್ಲೆಂಡ್‌ ಸೇರ್ಪಡೆಗೊಂಡಿದೆ.

ಮುಖ್ಯಾಂಶಗಳು

  • ಉಕ್ರೇನ್‌ನ ಮೇಲೆ ರಷ್ಯಾದ ಯುದ್ಧಕ್ಕೆ ಮೂಲ ಕಾರಣವಾಗಿದ್ದ ವಿಚಾರದಲ್ಲಿ ಫಿನ್ಲೆಂಡ್‌ ಮಹತ್ವದ ಹೆಜ್ಜೆ ಹಾಕಿದೆ.
  • ಉಕ್ರೇನ್‌ ದೇಶ ನ್ಯಾಟೋಗೆ ಸೇರುವ ಇಚ್ಛೆಯಲ್ಲಿದೆ ಎನ್ನುವ ಕಾರಣಕ್ಕಾಗಿಯೇ ರಷ್ಯಾ ಯುದ್ಧ ಸಾರಿತ್ತು.
  • ಇದು ಅಮೆರಿಕ ನೇತೃತ್ವದ ಸೇನಾ ಮೈತ್ರಿಕೂಟ, ರಷ್ಯಾದ ಜೊತೆಗಿನ ಗಡಿಯನ್ನು ಇನ್ನಷ್ಟು ವಿಸ್ತರಿಸಿಕೊಂಡಂತಾಗಿದೆ.

ಉದ್ದೇಶ

  • 2022 ರಲ್ಲಿ ಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣವು ಯುರೋಪ್‌ನ ಭದ್ರತಾ ದೃಷ್ಟಿಯಲ್ಲಿ ದೊಡ್ಡ ಮಟ್ಟದ ಪರಿಣಾಮವನ್ನು ಬೀರಿದೆ. ಮುಂಬರುವ ಅಪಾಯವನ್ನು ಮನಗಂಡ ಫಿನ್ಲೆಂಡ್‌ ಹಾಗೂ ಸ್ವೀಡನ್‌ ದೇಶಗಳು ದಶಕಗಳ ಕಾಲ ಅಸ್ತಿತ್ವದಲ್ಲಿರಿಸಿಕೊಂಡಿದ್ದ ಸೇನಾ ಆಲಿಪ್ತ ನೀತಿಯನ್ನು ಕೈಬಿಟ್ಟು, ನ್ಯಾಟೋ ಪಡೆಗೆ ಸೇರಲು ಸಜ್ಜಾಗಿದ್ದವು.

ಏನಿದು ನ್ಯಾಟೋ: 

  • ನಾರ್ತ್‌ ಅಟ್ಲಾಂಟಿಕ್‌ ಟ್ರೀಟಿ ಆರ್ಗನೈಜೇಷನ್‌ (NATO) ಎಂಬುದರ ಸಂಕ್ಷಿಪ್ತ ರೂಪವೇ ನ್ಯಾಟೋ. ಉತ್ತರ ಅಟ್ಲಾಂಟಿಕ್ ಮೈತ್ರಿಕೂಟ ಅಥವಾ ಒಕ್ಕೂಟ ಎಂದು ಕೂಡಾ ಕರೆಯಲಾಗುತ್ತದೆ.
  • ಈ ಒಕ್ಕೂಟದ ಮುಖ್ಯ ಉದ್ದೇಶ: ಸದಸ್ಯ ರಾಷ್ಟ್ರಗಳ ಸ್ವಾತಂತ್ರ್ಯ, ಸಾರ್ವಭೌಮತೆ ಹಾಗೂ ಭದ್ರತೆಯನ್ನು ಕಾಪಾಡುವುದು. ಇದಕ್ಕಾಗಿ ರಾಜಕೀಯ ಹಾಗೂ ಮಿಲಿಟರಿ ಶಕ್ತಿ ಸದ್ಬಳಕೆ ಮಾಡುವುದು.
  • ಏಪ್ರಿಲ್ 1949 ರಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ನ್ಯಾಟೋವನ್ನು ಸ್ಥಾಪಿಸಲಾಯಿತು. ಇದರ ಪ್ರಧಾನ ಕಛೇರಿಯು ಬೆಲ್ಜಿಯಂನ ಬ್ರಸೆಲ್ಸ್‌ನಲ್ಲಿದೆ.
  • ಮೂಲ ರಾಷ್ಟ್ರವಾಗಿ ಈ ಸೇನಾ ಒಕ್ಕೂಟಕ್ಕೆ ಸೇರಿದ್ದು 12 ರಾಷ್ಟ್ರಗಳು. ಅಮೆರಿಕ ಅಲ್ಲದೆ, ಬ್ರಿಟನ್‌, ಫ್ರಾನ್ಸ್‌, ಕೆನಡಾ, ಇಟಲಿ, ನೆದರ್ಲೆಂಡ್‌, ಐಸ್ಲೆಂಡ್‌, ಬೆಲ್ಜಿಯಂ, ಲಕ್ಸಂಬರ್ಗ್‌, ನಾರ್ವೆ, ಪೋರ್ಚುಗಲ್‌ ಮತ್ತು ಡೆನ್ಮಾರ್ಕ್‌ ದೇಶ ಒಳಗೊಂಡಿತ್ತು.
  • ಇಂದು ಫಿನ್ಲೆಂಡ್‌ ಸೇರ್ಪಡೆಯೊಂದಿಗೆ ಇದರಲ್ಲಿ ಒಟ್ಟು31 ರಾಷ್ಟ್ರಗಳಿವೆ. ಇನ್ನು ಈ ಸೇನಾಪಡೆಗೆ ಸಾನಾಮ್ಯ ಭದ್ರತಾ ನೀತಿಗಳಿವೆ. ಅದರ ಮೇಲೆಯೇ ನ್ಯಾಯನಿರ್ವಹಿಸುವಂಥ ಮೈತ್ರಿಕೂಟ ಇದಾಗಿದೆ.
  • 31 ರಾಷ್ಟ್ರಗಳ ಪೈಕಿ ಯಾವುದೇ ರಾಷ್ಟ್ರದ ಮೇಲೆ ನ್ಯಾಟೋ ಪಡೆಯಲ್ಲಿ ಇಲ್ಲದ ರಾಷ್ಟ್ರಗಳು ದಾಳಿ ಮಾಡಿದ್ದಲ್ಲಿ ಅದನ್ನು ನ್ಯಾಟೋದ 31 ರಾಷ್ಟ್ರಗಳ ಮೇಲೆ ಮಾಡಿದ ಆಕ್ರಮಣ ಎಂದು ಪರಿಗಣನೆ ಮಾಡಲಾಗುತ್ತದೆ. ಇದರ ವಿರುದ್ಧ ಎಲ್ಲಾ ನ್ಯಾಟೋ ಸದಸ್ಯ ರಾಷ್ಟ್ರಗಳು ಆಕ್ರಮಣದ ವಿರುದ್ಧ ಒಗ್ಗೂಡಿ ಹೋರಾಟ ಮಾಡುತ್ತದೆ.

ನ್ಯಾಟೋ ದ ಕಾರ್ಯತಂತ್ರಗಳು

  • ರಾಜಕೀಯವಾಗಿ, ಇದು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಮತ್ತು ಸಮಸ್ಯೆಗಳನ್ನು ಪರಿಹರಿಸಲು, ವಿಶ್ವಾಸವನ್ನು ನಿರ್ಮಿಸಲು ಮತ್ತು ದೀರ್ಘಾವಧಿಯಲ್ಲಿ ಸಂಘರ್ಷವನ್ನು ತಡೆಗಟ್ಟಲು ರಕ್ಷಣಾ ಮತ್ತು ಭದ್ರತೆಗೆ ಸಂಬಂಧಿಸಿದ ವಿಷಯಗಳ ಕುರಿತು ಸಮಾಲೋಚಿಸಲು ಮತ್ತು ಸಹಕರಿಸಲು ಸದಸ್ಯರನ್ನು ಸಕ್ರಿಯಗೊಳಿಸುತ್ತದೆ. ಮಿಲಿಟರಿ ಕ್ರಮಕ್ಕೆ ಸಂಬಂಧಿಸಿದಂತೆ, ನ್ಯಾಟೋ “ವಿವಾದಗಳ ಶಾಂತಿಯುತ ಪರಿಹಾರಕ್ಕೆ ಬದ್ಧವಾಗಿದೆ” ಎಂದು ಹೇಳುತ್ತದೆ. ರಾಜತಾಂತ್ರಿಕ ಪ್ರಯತ್ನಗಳು ವಿಫಲವಾದರೆ, ಬಿಕ್ಕಟ್ಟು-ನಿರ್ವಹಣೆಯ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಮಿಲಿಟರಿ ಶಕ್ತಿಯನ್ನು ಹೊಂದಿದೆ.
  • ಇದು ಸಾಮೂಹಿಕ ಭದ್ರತೆಯ ವ್ಯವಸ್ಥೆಯನ್ನು ಬಳಸುತ್ತದೆ, ಅದರ ಸ್ವತಂತ್ರ ಸದಸ್ಯ ರಾಷ್ಟ್ರಗಳು ಯಾವುದೇ ಬಾಹ್ಯ ಪಕ್ಷದ ದಾಳಿಗೆ ಪ್ರತಿಕ್ರಿಯೆಯಾಗಿ ಪರಸ್ಪರ ರಕ್ಷಣೆಗೆ ಒಪ್ಪಿಕೊಳ್ಳುತ್ತವೆ. ಇದು ಬಾಹ್ಯ ಶಕ್ತಿಗಳೊಂದಿಗೆ ಮೈತ್ರಿ ಮಾಡಿಕೊಳ್ಳಬಹುದು.

ಇತಿಹಾಸ

  • 2ನೇ ಮಹಾಯುದ್ಧ ಅಂತ್ಯಕಂಡ ಬಳಿಕ ಅದರ ಅಗತ್ಯ ಹೆಚ್ಚಾಯಿತು. ವಿಶ್ವಯುದ್ಧ ಮುಗಿದ ಬಳಿಕ ಸೋವಿಯತ್‌ ಒಕ್ಕೂಟ ಪೂರ್ವ ಯುರೋಪ್‌ನಿಂದ ತನ್ನ ಸೇನಾಪಡೆಗಳನ್ನು ಹಿಂತೆಗೆದುಕೊಳ್ಳಲು ಸ್ಪಷ್ಟವಾಗಿ ನಿರಾಕರಣೆ ಮಾಡಿದ್ದು ಮಾತ್ರವಲ್ಲದೆ 1948ರಲ್ಲಿ ಬರ್ಲಿನ್‌ ನಗರವನ್ನು ಸುತ್ತುವರಿದಿತ್ತು. ಈ ಹಂತದಲ್ಲಿ ನ್ಯಾಟೋದಂಥ ಪಡೆಯ ಅಗತ್ಯವನ್ನು ಅಮೆರಿಕ ಮೊದಲು ಅಂದಾಜು ಮಾಡಿತ್ತು. 1949ರಲ್ಲಿ ನ್ಯಾಟೋ ಮೂಲಕ ಸೋವಿಯತನ್‌ ಆಕ್ರಮಣವನ್ನು ಎದುರಿಸಲು ಅಮೆರಿಕ ಸಜ್ಜಾಯಿತು.

ಪ್ರಯೋಜನಗಳು

  • ಇಡೀ ಯುರೋಪ್‌ ರಾಷ್ಟ್ರಗಳಿಗೆ ಅತಿಯಾದ ಬೆದರಿಕೆ ಇರುವುದು ರಷ್ಯಾ ದೇಶದಿಂದ. ಆದರೆ, ನ್ಯಾಟೋ ಬಲ ಇರುವ ಕಾರಣ ರಷ್ಯಾ ಕೂಡ ಈ ದೇಶಗಳನ್ನು ಎದುರುಹಾಕಿಕೊಳ್ಳೋದಕ್ಕೆ ಭಯಪಡುತ್ತದೆ. ಮಿಲಿಟರಿ ಸಾಮರ್ಥ್ಯವಾಗಲಿ, ರಕ್ಷಣೆಗೆ ಮಾಡುವ ವೆಚ್ಚವಾಗಲಿ, ರಷ್ಯಾ ಹಾಗೂ ನ್ಯಾಟೋ ನಡುವೆ ಯಾವುದೇ ಹೋಲಿಕೆ ಕೂಡ ಸಾಧ್ಯವಿಲ್ಲ.
  • 2021ರಲ್ಲಿ ನ್ಯಾಟೋದ ಎಲ್ಲಾ 30 ಸದಸ್ಯ ರಾಷ್ಟ್ರಗಳ ಒಟ್ಟು ರಕ್ಷಣಾ ವೆಚ್ಚ 1174 ಬಿಲಿಯನ್‌ ಡಾಲರ್‌ ಆಗಿದ್ದರೆ, 2020ರಲ್ಲಿ 1106 ಶತಕೋಟಿ ಡಾಲರ್‌ ಖರ್ಚು ಮಾಡಿದೆ. ಆದರೆ, ರಷ್ಯಾ 2020ರಲ್ಲಿ 61.7 ಶತಕಕೋಟಿ ಡಾಲರ್‌ಅನ್ನು ರಕ್ಷಣೆಗಾಗಿ ವ್ಯಯ ಮಾಡಿದೆ. ಇನ್ನು ನ್ಯಾಟೋ ನೇರವಾಗಿ ಯುದ್ಧದಲ್ಲಿ ಭಾಗಿಯಾದರೆ, 33 ಲಕ್ಷಕ್ಕೂ ಅಧಿಕ ಸೈನಿಕರ ಬಲ ಈ ಸೇನಾ ಒಕ್ಕೂಟಕ್ಕೆ ಇದೆ. ಇನ್ನು ರಷ್ಯಾದಲ್ಲಿ 8 ಲಕ್ಷ ಸಕ್ರಿಯ ಸೈನಿಕರು ಹಾಗೂ 12 ಲಕ್ಷ ಇತರ ಸೈನಿಕರನ್ನು ಹೊಂದಿದೆ.

ಸದಸ್ಯ ರಾಷ್ಟ್ರಗಳು

  • ನ್ಯಾಟೋದಲ್ಲಿ ಪ್ರಸ್ತುತ 31 ದೇಶಗಳಿವೆ; ಈ ಪೈಕಿ ಯುರೋಪ್ ಖಂಡದಲ್ಲಿ 28, ಉತ್ತರ ಅಮೆರಿಕದಲ್ಲಿ ಎರಡು ಮತ್ತು ಯುರೇಷಿಯಾದಲ್ಲಿ ಒಂದು ರಾಷ್ಟ್ರ ಇದೆ.
  • ಫಿನ್ಲೆಂಡ್‌, ಅಲ್ಬೇನಿಯಾ, ಬೆಲ್ಜಿಯಂ, ಬಲ್ಗೇರಿಯಾ, ಕೆನಡಾ, ಕ್ರೊಯೇಷಿಯಾ, ಜೆಕ್ ರಿಪಬ್ಲಿಕ್ ಡೆನ್ಮಾರ್ಕ್ ಎಸ್ಟೋನಿಯಾ, ಫ್ರಾನ್ಸ್, ಜರ್ಮನಿ, ಗ್ರೀಸ್, ಹಂಗೇರಿ, ಐಸ್ಲ್ಯಾಂಡ್, ಇಟಲಿ, ಲಾಟ್ವಿಯಾ, ಲಿಥುವೇನಿಯಾ ಲಕ್ಸೆಂಬರ್ಗ್, ಮಾಂಟೆನೆಗ್ರೊ, ನೆದರ್ಲೆಂಡ್ಸ್, ಉತ್ತರ ಮ್ಯಾಸಿಡೋನಿಯಾ, ನಾರ್ವೆ, ಪೋಲೆಂಡ್, ಪೋರ್ಚುಗಲ್, ರೊಮೇನಿಯಾ, ಸ್ಲೋವಾಕಿಯಾ, ಸ್ಲೊವೇನಿಯಾ, ಸ್ಪೇನ್, ಟರ್ಕಿ, ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್