Published on: September 15, 2021

‘ನ್ಯಾಟ್ ಗ್ರಿಡ್’

‘ನ್ಯಾಟ್ ಗ್ರಿಡ್’

ಸುದ್ಧಿಯಲ್ಲಿ ಏಕಿದೆ? ದೇಶದಲ್ಲಿನ ವಿವಿಧ ರಾಜ್ಯಗಳ ಗುಪ್ತಚರ ಇಲಾಖೆಗಳನ್ನು ಒಂದೇ ರಾಷ್ಟ್ರೀಯ ಜಾಲದ ಅಡಿಯಲ್ಲಿ ತಂದು, ಆಧುನಿಕ ತಂತ್ರಜ್ಞಾನ ಆಧರಿಸಿ ಕ್ಷಣ ಮಾತ್ರದಲ್ಲಿ ದಾಳಿ, ಉಗ್ರರ ಚಟುವಟಿಕೆಗಳ ಮಾಹಿತಿ ರವಾನಿಸಲು ಅನುಕೂಲವಾಗುವಂತಹ ‘ನ್ಯಾಟ್‌ ಗ್ರಿಡ್‌’ (ನ್ಯಾಷನಲ್‌ ಇಂಟೆಲಿಜೆನ್ಸ್‌ ಗ್ರಿಡ್‌) ಶೀಘ್ರದಲ್ಲಿಯೇ ದೇಶದಲ್ಲಿ ಅಸ್ವಿತ್ವಕ್ಕೆ ಬರಲಿದೆ.

ಅಗತ್ಯತೆ

  • ನೆರೆಯ ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಸಂಘಟನೆ ಅಧಿಕಾರ ವಹಿಸಿಕೊಂಡಿರುವುದರಿಂದ ಭಾರತಕ್ಕೆ ಉಗ್ರ ಸಂಘಟನೆಗಳಿಂದ ಹೊಸ ಸವಾಲು ಎದುರಾಗುವ ಸಾಧ್ಯತೆ ಇದೆ. ಅದನ್ನು ಸಮರ್ಥವಾಗಿ ಎದುರಿಸಲು ‘ನ್ಯಾಟ್‌ ಗ್ರಿಡ್‌’ ಸಹಾಯ ಮಾಡಲಿದೆ.

ಏನಿದು ನ್ಯಾಟ್‌ ಗ್ರಿಡ್‌?

  • ಉಗ್ರರು, ಅವರ ಸಹಚರರು, ವಿವಿಧ ಉಗ್ರ ಸಂಘಟನೆಗಳು, ಸ್ಲಿಪರ್‌ ಸೆಲ್‌ಗಳು, ಉಗ್ರರ ಜಾಲಕ್ಕೆ ಹೊಸ ಸೇರ್ಪಡೆಗಳು, ಆರ್ಥಿಕ ಅಪರಾಧಿಗಳು, ಮಾಫಿಯಾ ಜಾಲಗಳಿಂದ ಉಗ್ರರಿಗೆ ನೆರವು, ಪ್ರಭಾವಿಗಳನ್ನು ಅಪಘಾತದ ಮಾದರಿಯಲ್ಲಿ ಉಗ್ರರು ಹತ್ತಿಕ್ಕಿದ ಘಟನೆಗಳೂ ಸೇರಿದಂತೆ ಸಮಗ್ರ ಮಾಹಿತಿಯನ್ನು ಒಂದೇ ಕಡೆಯಲ್ಲಿ ಸಂಗ್ರಹಿಸಲಾಗುತ್ತದೆ.
  • ಇದರಿಂದ ದೇಶದ ಯಾವುದೇ ಮೂಲೆಯಲ್ಲಿ ಅನುಮಾನಾಸ್ಪದ ಘಟನೆಗಳು ವರದಿಯಾದಲ್ಲಿ ನ್ಯಾಟ್‌ ಗ್ರಿಡ್‌ ಮೂಲಕ ತನಿಖಾ ಸಂಸ್ಥೆಗಳು ಅಗತ್ಯ ಮೂಲ ಮಾಹಿತಿಗಳನ್ನು ಕ್ಷಣ ಮಾತ್ರದಲ್ಲಿ ಪಡೆಯಬಹುದಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಗ್ರ ಸಂಘಟನೆಗಳು ಭಾರತವನ್ನು ಗುರಿಯಾಗಿಸಿ ನಡೆಸಲು ಇಚ್ಛಿಸಿದ ದಾಳಿಗಳ ಸುಳಿವುಗಳು ಕೂಡ ಈ ಜಾಲದಲ್ಲಿ ತನಿಖಾ ಸಂಸ್ಥೆಗಳಿಗೆ ಲಭ್ಯವಾಗಲಿದೆ.
  • ಆಯಾ ರಾಜ್ಯದ ಪೊಲೀಸರು ಮುಂಚಿತವಾಗಿಯೇ ಜಾಗರೂಕತೆ ವಹಿಸಿ ದಾಳಿ ವಿಫಲಗೊಳಿಸಲು ನ್ಯಾಟ್‌ ಗ್ರಿಡ್‌ ವರದಾನದಂತೆ ಕಾರ್ಯನಿರ್ವಹಿಸಲಿದೆ.
  • ಸಿಬಿಐ, ಆದಾಯ ಗುಪ್ತಚರ ವಿಭಾಗ, ಇ.ಡಿ, ಐಟಿ, ಮಾದಕ ವಸ್ತು ನಿಯಂತ್ರಣ ಸಂಸ್ಥೆ, ಜಿಎಸ್‌ಟಿ ವಂಚನೆ ತಡೆ ಪಡೆ, ಹಣಕಾಸು ಅವ್ಯವಹಾರ ಪತ್ತೆ ಸಂಸ್ಥೆಗಳು, ಎನ್‌ಐಎ ಒಂದೇ ಜಾಲದಲ್ಲಿ ಗೌಪ್ಯ ವಿಚಾರಗಳನ್ನು ಹಂಚಿಕೊಳ್ಳಲಿವೆ.

‘ನ್ಯಾಟ್‌ ಗ್ರಿಡ್‌’ ಯೋಜನೆ ನಡೆದುಬಂದ ದಾರಿ..

  • 2010ನೇ ಸಾಲಿನಲ್ಲಿಯೇ ಕೇಂದ್ರ ಸಚಿವ ಸಂಪುಟವು ನ್ಯಾಟ್‌ಗ್ರಿಡ್‌ ಯೋಜನೆಗೆ ಅನುಮೋದನೆ ನೀಡಿತ್ತು
  • 3,400 ಕೋಟಿ ರೂ.ಗಳನ್ನು ಉದ್ದೇಶಿತ ನ್ಯಾಟ್‌ಗ್ರಿಡ್‌ ಯೋಜನೆಗೆ ಮೀಸಲಿಡಲಾಗಿದೆ

ಮೂರು ಹಂತದ ಯೋಜನೆ

  • ಹಂತ 1ರಲ್ಲಿ 10 ತನಿಖಾ ಸಂಸ್ಥೆಗಳೊಂದಿಗೆ ದೇಶದ 21 ಕಡೆಗಳಿಗೆ ಗುಪ್ತಚರ ಮಾಹಿತಿಗಳು ರವಾನೆ ಆಗಲಿವೆ
  • ಹಂತ 2ರಲ್ಲಿ 950 ಹೆಚ್ಚುವರಿ ತನಿಖಾ ಸಂಸ್ಥೆಗಳು ಜಾಲಕ್ಕೆ ಸೇರ್ಪಡೆಯಾಗಲಿವೆ
  • ಹಂತ 3ರಲ್ಲಿ ದೇಶಾದ್ಯಂತ ಕನಿಷ್ಠ 1,000 ತನಿಖಾ ಸಂಸ್ಥೆಗಳಿಗೆ ವಿವಿಧ ರಾಜ್ಯಗಳಿಗೆ ಅಪರಾಧ ಕೃತ್ಯಗಳ ಸುಳಿವಿನ ಗೌಪ್ಯ ಸಂದೇಶ ರವಾನೆಯಾಗಲಿದೆ.