Published on: August 8, 2022

ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ

ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ

ಸುದ್ದಿಯಲ್ಲಿ ಏಕಿದೆ?

ನೈಸರ್ಗಿಕ ಪಾರಂಪರಿಕ ಪ್ರದೇಶಗಳು ಎಂದು ಯುನೆಸ್ಕೊ ಪಟ್ಟಿ ಮಾಡಿರುವ ಪ್ರದೇಶಗಳನ್ನೂ ಹೊಂದಿರುವ ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವ ಕರಡು ಅಧಿಸೂಚನೆಯನ್ನು ಕೇಂದ್ರ ಸರ್ಕಾರವು  ಪ್ರಕಟಿಸಿದೆ.

ಮುಖ್ಯಾಂಶಗಳು

  • ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 2018ರ ಅಕ್ಟೋಬರ್‌ 3ರಂದು ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಪಡಿಸಲಾಗಿದೆ.
  • ಸಾರ್ವಜನಿಕರು ಆಕ್ಷೇಪಗಳನ್ನು ಸಲ್ಲಿಸಲು ಅಧಿಸೂಚನೆ ಪ್ರಕಟವಾದ ದಿನದಿಂದ 60 ದಿನಗಳವರೆಗೆ ಅವಕಾಶ ಇದೆ. ಸೆಪ್ಟೆಂಬರ್‌ 3ಕ್ಕೆ ಈ ಗಡುವು ಕೊನೆಗೊಳ್ಳಲಿದೆ.

 ಏನೇನು ನಿಷೇಧ?

ಕರಡು ಅಧಿಸೂಚನೆ ಪ್ರಕಾರ, ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಏನು ಮಾಡಬಾರದು, ಏನು ಮಾಡಬಹುದು ಎಂಬುದರ ವಿವರ ಇಲ್ಲಿದೆ.

  • ಗಣಿಗಾರಿಕೆ: ಗಣಿಗಾರಿಕೆ ಕ್ವಾರಿಗಳು ಮತ್ತು ಮರಳು ಗಣಿಗಾರಿಕೆಗೆ ಸಂಪೂರ್ಣ ನಿಷೇಧ ಇದೆ. ಇಂತಹ ಚಟುವಟಿಕೆಗಳು ಅಲ್ಲಿ ಈಗಾಗಲೇ ನಡೆಯುತ್ತಿದ್ದರೆ ಅಂತಿಮ ಅಧಿಸೂಚನೆ ಪ್ರಕಟವಾದ ಐದು ವರ್ಷಗಳೊಳಗೆ ಅಥವಾ ಅದಕ್ಕೆ ಮೊದಲೇ ಅವುಗಳ ಗುತ್ತಿಗೆ ಅವಧಿ ಮುಗಿದರೆ, ಗುತ್ತಿಗೆ ಅವಧಿ ಮುಗಿದ ತಕ್ಷಣವೇ ಅವುಗಳನ್ನು ಸ್ಥಗಿತಗೊಳಿಸಬೇಕು.
  • ಉಷ್ಣ ವಿದ್ಯುತ್ ಸ್ಥಾವರ: ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ಅವಕಾಶ ಇಲ್ಲ. ಹಾಗೆಯೇ, ಈಗಾಗಲೇ ಇರುವ ಉಷ್ಣ ವಿದ್ಯುತ್ ಸ್ಥಾವರಗಳ ವಿಸ್ತರಣೆಯನ್ನೂ ಮಾಡುವಂತಿಲ್ಲ.
  • ಕೈಗಾರಿಕೆ: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಥವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ‘ಕೆಂಪು’ ವರ್ಗಕ್ಕೆ ಸೇರಿಸಿರುವ ಕೈಗಾರಿಕೆಗಳಿಗೆ ಅವಕಾಶ ಇಲ್ಲ. ಈಗಾಗಲೇ ಇಲ್ಲಿ ಇರುವ ‘ಕೆಂಪು’ ವರ್ಗಕ್ಕೆ ಸೇರಿದ ಕೈಗಾರಿಕೆಗಳು ಮುಂದುವರಿಯಬಹುದು.

ಯಾವುದಕ್ಕೆ ಅವಕಾಶ:

  • ಇಲ್ಲಿ ಇರುವ ಆರೋಗ್ಯ ರಕ್ಷಣೆ ಸಂಸ್ಥೆಗಳೂ ಮುಂದುವರಿಯಬಹುದು. ಆದರೆ, ಅವು ಪ್ರಸ್ತುತ ಇರುವ ನಿಯಮಗಳು ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ಇರಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಈಗಾಗಲೇ ಇರುವ ಪ್ರಸ್ತಾವಗಳು ಜಾರಿಗೆ ಬರಬಹುದು. ಆಸ್ತಿಯ ಮಾಲೀಕತ್ವ ಬದಲಾವಣೆಗೆ ಯಾವ ನಿರ್ಬಂಧವೂ ಇಲ್ಲ.
  • ನಿರ್ಮಾಣ ಕಾಮಗಾರಿ: 20 ಸಾವಿರ ಚದರ ಮೀಟರ್‌ ವಿಸ್ತೀರ್ಣದೊಳಗೆ ನಿರ್ಮಾಣವಾಗುವ ಹೊಸ ಕಟ್ಟಡಗಳು ಅಥವಾ ನಿರ್ಮಾಣಗಳಿಗೆ, ಈಗಾಗಲೇ ಇರುವ ಕಟ್ಟಡ ಅಥವಾ ನಿರ್ಮಾಣವನ್ನು 20 ಸಾವಿರ ಚದರ ಮೀಟರ್‌ ವಿಸ್ತೀರ್ಣದೊಳಗೆ ವಿಸ್ತರಣೆಗೆ ಅವಕಾಶ ಇದೆ. 50 ಹೆಕ್ಟೇರ್ ಪ್ರದೇಶದೊಳಗೆ, 1.5 ಲಕ್ಷ ಚದರ ಮೀಟರ್‌ ಒಳಗಿನ ವಿಸ್ತೀರ್ಣದಲ್ಲಿ ಟೌನ್‌ಶಿಪ್‌ ಅಥವಾ ಪ್ರದೇಶ ಅಭಿವೃದ್ಧಿ ಯೋಜನೆಗೆ ಅವಕಾಶ ಇದೆ. ಮನೆಗಳ ದುರಸ್ತಿ, ವಿಸ್ತರಣೆ, ನವೀಕರಣಕ್ಕೆ ನಿಯಮಗಳು ಮತ್ತು ನಿಬಂಧನೆಗಳಿಗೆ ಅನುಗುಣವಾಗಿ‌ ಅವಕಾಶ ಇದೆ.

ಜಲ ವಿದ್ಯುತ್‌ ಯೋಜನೆ, ಕೈಗಾರಿಕೆಗಳಿಗೆ ಷರತ್ತುಗಳು

ಈ ಎಲ್ಲ ಯೋಜನೆ ಮತ್ತು ಚಟುವಟಿಕೆಗಳಿಗೆ ಈ ಕೆಳಗಿನ ನಿಯಮಗಳು ಮತ್ತು ನಿಯಂತ್ರಣಗಳು ಅನ್ವಯ ಜಲ ವಿದ್ಯುತ್‌ ಯೋಜನೆಗಳು: 2006ರ ಸೆಪ್ಟೆಂಬರ್‌ 14ರಂದು ಪ್ರಕಟವಾದ ಪರಿಸರ ಪರಿಣಾಮ ಅಂದಾಜು ಅಧಿಸೂಚನೆಗೆ ಅನುಗುಣವಾಗಿ, ಹೊಸ ಜಲ ವಿದ್ಯುತ್‌ ಯೋಜನೆಗಳನ್ನು ಸ್ಥಾಪಿಸಲು ಅವಕಾಶ ನೀಡಲಾಗುವುದು. ಆದರೆ, ಈ ಕೆಳಗಿನ ಷರತ್ತುಗಳನ್ನು ಪೂರೈಸಬೇಕು:

  1. ಪ್ರತಿ ಯೋಜನೆಯ ಸಮಗ್ರ ಅಧ್ಯಯನ ನಡೆಸಿ, ಕನಿಷ್ಠ ಹರಿವಿನ ಪ್ರಮಾಣ ನಿಗದಿ ಆಗುವವರೆಗೆ, ಅತ್ಯಂತ ಕಡಿಮೆ ನೀರು ಹರಿವಿನ ಸಮಯದಲ್ಲಿ ಕೂಡ ಶೇ 30ರಷ್ಟು ನೀರು ನದಿಯಲ್ಲಿ ಹರಿಯುವಂತೆ ನೋಡಿಕೊಳ್ಳಬೇಕು
  2. ಪ್ರತಿ ಯೋಜನೆಯಲ್ಲಿಯೂ ನದಿಯ ನೀರಿನ ಹರಿವಿನ ಶೈಲಿ, ಅರಣ್ಯ ಮತ್ತು ಜೀವವೈವಿಧ್ಯದಲ್ಲಿ ಆಗುವ ನಷ್ಟದ ಅಧ್ಯಯನ ನಡೆಸಬೇಕು.
  3. ಎರಡು ಯೋಜನೆಗಳ ನಡುವಣ ಅಂತರವು ಕನಿಷ್ಠ ಮೂರು ಕಿ.ಮೀ. ಇರಬೇಕು. ಯಾವುದೇ ಸಂದರ್ಭದಲ್ಲಿಯೂ ನದಿ ಪಾತ್ರದ ಶೇ 50ರಷ್ಟಕ್ಕಿಂತ ಹೆಚ್ಚು ಭಾಗವು ಅಬಾಧಿತವಾಗಿಯೇ ಇರಬೇಕು.

ಕಿತ್ತಳೆ/ಬಿಳಿ ವರ್ಗದ ಕೈಗಾರಿಕೆ:

  • ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಥವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕಿತ್ತಳೆ ಅಥವಾ ಬಿಳಿ ಬಣ್ಣ ವರ್ಗದಲ್ಲಿ ಸೇರಿಸಿರುವ ಕೈಗಾರಿಕೆಗಳಿಗೆ ಅವಕಾಶ ಇದೆ. ಆದರೆ, ಪರಿಸರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಕೇಂದ್ರದ ಜವಾಬ್ದಾರಿ

  • ಪರಿಸರದ ಮೇಲೆ ಅತ್ಯಂತ ಕಡಿಮೆ ಪರಿಣಾಮ ಬೀರುವ ಕೈಗಾರಿಕೆಗಳಿಗೆ ಉತ್ತೇಜನ ನೀಡಲಾಗುವುದು. ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯವು 2006ರಲ್ಲಿ ಪ್ರಕಟಿಸಿದ್ದ ಪರಿಸರ ಪರಿಣಾಮ ಅಂದಾಜು ಅಧಿಸೂಚನೆಯ ಪರಿಚ್ಛೇದದಲ್ಲಿ ಸೇರ್ಪಡೆಯಾಗಿರುವ ಚಟುವಟಿಕೆಗಳು ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನಡೆಯುತ್ತಿದ್ದರೆ, ಪರಿಸರ ಪರವಾನಗಿ ನೀಡುವ ಮುನ್ನ, ಅಂತಹ ಚಟುವಟಿಕೆಗಳನ್ನು ಪರಿಶೀಲನೆಗೆ ಒಳಪಡಿಸಿ ಪರಿಸರದ ಮೇಲೆ ಅದರಿಂದಾಗುವ ಪರಿಣಾಮವನ್ನು ಅಂದಾಜಿಸಬೇಕು. ಈ ಚಟುವಟಿಕೆಯ ಅಗತ್ಯದ ಬಗ್ಗೆಯೂ ಪರಿಶೀಲನೆ ನಡೆಸಬೇಕು. ಆದರೆ, ನಿರ್ದಿಷ್ಟವಾಗಿ ನಿಷೇಧಿಸಲಾದ ಚಟುವಟಿಕೆಗಳನ್ನು ಮಾತ್ರ ಪರಿಸರ ಪರವಾನಗಿ ನೀಡಲು ಪರಿಗಣಿಸುವಂತಿಲ್ಲ
  • ಪರಿಸರಸೂಕ್ಷ್ಮ ಪ್ರದೇಶದಲ್ಲಿರುವ ಅರಣ್ಯ ಭೂಮಿಯನ್ನು ಅರಣ್ಯೇತರ ಚಟುವಟಿಕೆಗಳಿಗೆ ಬಳಸುವುದಾದರೆ, ಯೋಜನೆಯ ಎಲ್ಲ ಮಾಹಿತಿ– ಪರವಾನಗಿಗಾಗಿ ಅರ್ಜಿ ಹಾಕಿದಲ್ಲಿಂದ ಅನುಮೋದನೆವರೆಗೆ– ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ರಾಜ್ಯ ಅರಣ್ಯ ಸಚಿವಾಲಯದ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಬೇಕು.
  • ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಪಶ್ಚಿಮ ಘಟ್ಟಗಳು ಹಾದು ಹೋಗುವ ಆರು ರಾಜ್ಯಗಳ ಜತೆಗೆ ಸಮನ್ವಯದಲ್ಲಿ ‘ಪಶ್ಚಿಮ ಘಟ್ಟಗಳಿಗಾಗಿ ನಿರ್ಧಾರ ಬೆಂಬಲ ಮತ್ತು ನಿಗಾ ಕೇಂದ್ರವನ್ನು ಸ್ಥಾಪಿಸಬೇಕು.
  • ಈ ಕೇಂದ್ರವು ಪಶ್ಚಿಮ ಘಟ್ಟ ಪ್ರದೇಶದ ಪರಿಸರ ಸ್ಥಿತಿಗತಿಯ ಅಧ್ಯಯನ ನಡೆಸಿ, ವರದಿ ಸಿದ್ಧಪಡಿಸಬೇಕು. ಇದು ನಿಯಮಿತವಾಗಿ ನಡೆಯಬೇಕು. ಅಧಿಸೂಚನೆಯಲ್ಲಿ ಇರುವ ಅಂಶಗಳ ಅನುಷ್ಠಾನಕ್ಕೆ ಬೆಂಬಲ ವ್ಯವಸ್ಥೆಯನ್ನು ಈ ಕೇಂದ್ರವು ರೂಪಿಸಬೇಕು.

ರಾಜ್ಯದ ಜವಾಬ್ದಾರಿ

  • ವೈಜ್ಞಾನಿಕವಾದ ನಿರ್ಧಾರ ಕೈಗೊಳ್ಳುವಿಕೆ ಮತ್ತು ಅನುಷ್ಠಾನವನ್ನು ಬಲಪಡಿಸಲು ಈ ಕೇಂದ್ರವು ನೆರವಾಗಲಿದೆ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅವಕಾಶ ಇರುವ ಚಟುವಟಿಕೆಗಳು ಮತ್ತು ಯೋಜನೆಗಳಿಗೆ ಅನುಮೋದನೆ ನೀಡಿದ ಬಳಿಕದ ನಿಗಾ ವ್ಯವಸ್ಥೆಯನ್ನು ರೂಪಿಸುವುದು ರಾಜ್ಯ ಸರ್ಕಾರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಸಚಿವಾಲಯದ ಪ್ರಾದೇಶಿಕ ಕಚೇರಿಯ ಹೊಣೆಗಾರಿಕೆ.
  • ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಯೋಜನೆಗಳಿಗೆ ಪರಿಸರ ಅನುಮೋದನೆ ಅಥವಾ ಅರಣ್ಯ ಅನುಮೋದನೆ ನೀಡಿದ ಬಳಿಕ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಪ್ರಾದೇಶಿಕ ಕಚೇರಿಯು ಕನಿಷ್ಠ ವರ್ಷಕ್ಕೆ ಒಮ್ಮೆಯಾದರೂ ಪರಿಶೀಲನೆ ನಡೆಸಬೇಕು.
  • ಪಶ್ಚಿಮ ಘಟ್ಟ ಪ್ರದೇಶದ ಪ‍ರಿಸರ ಆರೋಗ್ಯ ಸ್ಥಿತಿಗತಿ ವರದಿಯನ್ನು ಆಯಾ ರಾಜ್ಯ ಸರ್ಕಾರಗಳು ಸಿದ್ಧಪಡಿಸಬೇಕು. ಇದು ಪ್ರತಿ ವರ್ಷ ನಡೆಯಬೇಕು. ಅಧಿಸೂಚನೆಯಲ್ಲಿರುವ ಅಂಶಗಳ ಅನುಷ್ಠಾನ ಮತ್ತು ಅವುಗಳ ಮೇಲಿನ ನಿಗಾಕ್ಕಾಗಿ ಕೈಗೊಂಡ ಕ್ರಮಗಳ ವಿವರಗಳು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು.
  • ಪರಿಶಿಷ್ಟ ಪಂಗಡಗಳು ಮತ್ತು ಇತರ ಪಾರಂಪರಿಕ ಅರಣ್ಯ ನಿವಾಸಿಗಳು (ಅರಣ್ಯ ಹಕ್ಕುಗಳ ಮಾನ್ಯತೆ) ಕಾಯ್ದೆ 2006ರ ಅಡಿಯಲ್ಲಿ ಮಾಹಿತಿಯುಕ್ತ ಸಮ್ಮತಿ ನಿಯಮವನ್ನು ಪಾಲಿಸಬೇಕು. ಯೋಜನೆ ಅಥವಾ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ಗ್ರಾಮಸಭೆಯ ಅನುಮತಿ ಕಡ್ಡಾಯ.
  • ಅನುಷ್ಠಾನ, ನಿಗಾ ವ್ಯವಸ್ಥೆ ಅಧಿಸೂಚನೆಯಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಷ್ಠಾನಗೊಳಿಸುವುದು ಮತ್ತು ಅದರ ಮೇಲೆ ನಿಗಾ ಇರಿಸುವುದು ಪಶ್ಚಿಮ ಘಟ್ಟಗಳು ಹಾದು ಹೋಗುವ ರಾಜ್ಯಗಳ ಹೊಣೆಗಾರಿಕೆ.
  • ಜಲ (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆ 1974 ಅಥವಾ ವಾಯು (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆ 1981ರ ಅಡಿಯಲ್ಲಿ ಅನುಮೋದನೆ ಪಡೆದು ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಸ್ಥಾಪನೆಗೊಂಡ ಎಲ್ಲ ಯೋಜನೆಗಳನ್ನು ವರ್ಷಕ್ಕೆ ಒಂದು ಬಾರಿ ಪರಿಶೀಲನೆಗೆ ಒಳಪಡಿಸಬೇಕು.

 ಉಲ್ಲಂಘನೆಗೆ ಶಿಕ್ಷೆ

  • ಅಧಿಸೂಚನೆಯ ಯಾವುದೇ ಅಂಶದ ಉಲ್ಲಂಘನೆಯಾದಲ್ಲಿ, ಪರಿಸರ (ರಕ್ಷಣೆ) ಕಾಯ್ದೆ 1986ರ ಅಡಿಯಲ್ಲಿ ಮತ್ತು ಇತರ ಕಾಯ್ದೆಗಳ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಧಿಸೂಚನೆಯಲ್ಲಿರುವ ಯಾವುದೇ ಅಂಶವು ಪರಿಸರ ಸೂಕ್ಷ್ಮ ಪ್ರದೇಶದಲ್ಲಿರುವ ಆಸ್ತಿ ಮಾಲೀಕತ್ವದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಮಾಲಿನ್ಯ ಸೂಚ್ಯಂಕಗಳು

  • ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ಮಾಲಿನ್ಯ ಸೂಚ್ಯಂಕವನ್ನು ಆಧರಿಸಿ ಕೈಗಾರಿಕಾ ವಲಯಗಳ ವರ್ಗೀಕರಣಕ್ಕೆ ಮಾನದಂಡಗಳನ್ನು ಅಭಿವೃದ್ಧಿಪಡಿಸಿದೆ, ಇದು ಹೊರಸೂಸುವಿಕೆ (ವಾಯು ಮಾಲಿನ್ಯಕಾರಕಗಳು), ತ್ಯಾಜ್ಯಗಳು (ನೀರಿನ ಮಾಲಿನ್ಯಕಾರಕಗಳು), ಅಪಾಯಕಾರಿ ತ್ಯಾಜ್ಯಗಳು ಮತ್ತು ಸಂಪನ್ಮೂಲ ಬಳಕೆಯಿಂದ ಉತ್ಪತ್ತಿಯಾಗುತ್ತದೆ.·
  • ಈ ಉದ್ದೇಶಕ್ಕಾಗಿ ಉಲ್ಲೇಖಗಳನ್ನು ಜಲ (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಸೆಸ್ (ತಿದ್ದುಪಡಿ) ಕಾಯಿದೆ, 2003, ಪರಿಸರ (ರಕ್ಷಣೆ) ಕಾಯಿದೆ, 1986 ರ ಅಡಿಯಲ್ಲಿ ವಿವಿಧ ಮಾಲಿನ್ಯಕಾರಕಗಳಿಗೆ ಇದುವರೆಗೆ ನಿಗದಿಪಡಿಸಲಾದ ಮಾನದಂಡಗಳು ಮತ್ತು MoEFCC ಹೊರಡಿಸಿದ ಡೂನ್ ವ್ಯಾಲಿ ಅಧಿಸೂಚನೆ, 1989 ರಿಂದ ತೆಗೆದುಕೊಳ್ಳಲಾಗಿದೆ . ಯಾವುದೇ ಕೈಗಾರಿಕಾ ವಲಯದ ಮಾಲಿನ್ಯ ಸೂಚ್ಯಂಕ PI 0 ರಿಂದ 100 ರವರೆಗಿನ ಸಂಖ್ಯೆಯಾಗಿದೆ ಮತ್ತು PI ಯ ಹೆಚ್ಚುತ್ತಿರುವ ಮೌಲ್ಯವು ಕೈಗಾರಿಕಾ ವಲಯದಿಂದ ಹೆಚ್ಚುತ್ತಿರುವ ಮಾಲಿನ್ಯದ ಪ್ರಮಾಣವನ್ನು ಸೂಚಿಸುತ್ತದೆ.

ಕೈಗಾರಿಕಾ ವಲಯಗಳ ವರ್ಗೀಕರಣದ ಉದ್ದೇಶಕ್ಕಾಗಿ ‘ಮಾಲಿನ್ಯ ಸೂಚ್ಯಂಕ ಶ್ರೇಣಿ’ ಮೇಲಿನ ಮಾನದಂಡಗಳು ಈ ಕೆಳಗಿನಂತಿವೆ.

  • ಕೆಂಪು ವರ್ಗ – 60 ಮತ್ತು ಅದಕ್ಕಿಂತ ಹೆಚ್ಚಿನ ಮಾಲಿನ್ಯ ಸೂಚ್ಯಂಕ ಸ್ಕೋರ್ ಹೊಂದಿರುವ ಕೈಗಾರಿಕಾ ವಲಯಗಳು
  • ಕಿತ್ತಳೆ ವರ್ಗ – 41 ರಿಂದ 59 ರ ಮಾಲಿನ್ಯ ಸೂಚ್ಯಂಕ ಸ್ಕೋರ್ ಹೊಂದಿರುವ ಕೈಗಾರಿಕಾ ವಲಯಗಳು
  • ಹಸಿರು ವರ್ಗ – 21 ರಿಂದ 40 ರ ಮಾಲಿನ್ಯ ಸೂಚ್ಯಂಕ ಸ್ಕೋರ್ ಹೊಂದಿರುವ ಕೈಗಾರಿಕಾ ವಲಯಗಳು
  • ಬಿಳಿ ವರ್ಗ – ಮಾಲಿನ್ಯ ಸೂಚ್ಯಂಕ ಸ್ಕೋರ್ 20 ರವರೆಗೆ ಒಳಗೊಂಡಿರುವ ಕೈಗಾರಿಕಾ ವಲಯಗಳು