Published on: September 27, 2022

ಪಾರಂಪರಿಕ ಜ್ಞಾನದ ಡಿಜಿಟಲ್ ಲೈಬ್ರರಿ

ಪಾರಂಪರಿಕ ಜ್ಞಾನದ ಡಿಜಿಟಲ್ ಲೈಬ್ರರಿ

ಸುದ್ದಿಯಲ್ಲಿ ಏಕಿದೆ?

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ  ಭಾರತದ ಸಾಂಪ್ರದಾಯಿಕ ಅಥವಾ ಪಾರಂಪರಿಕ ಜ್ಞಾನದ ಡಿಜಿಟಲ್ ಲೈಬ್ರರಿಗಳ ಡೇಟಾಬೇಸ್‌ ಉಪಯೋಗಿಸಲು ಪೇಟೆಂಟ್ ಕಚೇರಿಗಳ ಜೊತೆಗೆ ಸಾಮಾನ್ಯ ಜನರಿಗೂ ಅನುಮತಿ ನೀಡಲಾಯಿತು.

ಮುಖ್ಯಾಂಶಗಳು

  • ಜಾಗತಿಕವಾಗಿ ಇದೇ ಮೊದಲ ಬಾರಿಗೆ ಇಂಥದ್ದೊಂದು ವಿಶಿಷ್ಟ ಪ್ರಯೋಗ ನಡೆದಿದೆ. ಇದು ಇತರ ರಾಷ್ಟ್ರಗಳಿಗೆ ಮಾದರಿಯಾಗಿದೆ. ಟಿಕೆಡಿಎಲ್‌, ಪ್ರಸ್ತುತ ಆಯುರ್ವೇದ, ಯುನಾನಿ, ಸಿದ್ಧ, ಸೋವಾ ರಿಗ್ಪಾ ಮತ್ತು ಯೋಗದಂತಹ ಭಾರತೀಯ ವೈದ್ಯಕೀಯ ಪದ್ಧತಿಗಳಿಗೆ ಸಂಬಂಧಿಸಿದಂತೆ ದೊರಕಿರುವ ಬರಹಗಳು ಮತ್ತು ದಾಖಲೆಗಳ ಮಾಹಿತಿಯನ್ನು ಒಳಗೊಂಡಿದೆ.
  • ಇಂಗ್ಲಿಷ್, ಜರ್ಮನ್, ಫ್ರೆಂಚ್, ಜಪಾನೀಸ್ ಮತ್ತು ಸ್ಪ್ಯಾನಿಷ್ ಮುಂತಾದ ಐದು ಅಂತರರಾಷ್ಟ್ರೀಯ ಭಾಷೆಗಳಲ್ಲಿ ಡಿಜಿಟಲ್ ರೂಪದಲ್ಲಿ ಈ ಮಾಹಿತಿಗಳನ್ನು ದಾಖಲಿಸಲಾಗಿದೆ.
  • ಸುಳ್ಳು ಪೇಟೆಂಟ್‌ಗಳನ್ನು ತಡೆಯಲು, ವಿಶ್ವದಾದ್ಯಂತ ಇರುವ ಪೇಟೆಂಟ್ ಪರೀಕ್ಷಕರಿಗೆ ಅರ್ಥವಾಗುವ ರೀತಿಯ ಭಾಷೆ ಮತ್ತು ವಿಧಾನದಲ್ಲಿ ಮಾಹಿತಿಗಳನ್ನು ವಿವರಿಸಲಾಗಿದೆ
  • ಇಲ್ಲಿಯವರೆಗೆ ತಪಾಸಣೆ(ಪರೀಕ್ಷೆಯ)ಯಂತಹ ಉದ್ದೇಶಗಳಿಗಾಗಿ ಟಿಕೆಡಿಎಲ್‌ ಡೇಟಾಬೇಸ್‌ ಬಳಸಲು ವಿಶ್ವದಾದ್ಯಂತ 14 ಪೇಟೆಂಟ್ ಕಚೇರಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು.  ಪಾರಂಪರಿಕ ಜ್ಞಾನ ಡಿಜಿಟಲ್ ಲೈಬ್ರರಿಯ ಈ ರಕ್ಷಣಾತ್ಮಕ ಹೆಜ್ಜೆಯು ಭಾರತೀಯ ಸಾಂಪ್ರದಾಯಿಕ ಜ್ಞಾನದ ದುರ್ಬಳಕೆಗೆ ಅವಕಾಶ ನೀಡದಂತೆ ತಡೆಯುತ್ತದೆ. ಹಾಗೆಯೇ, ಇದನ್ನು ಜಾಗತಿಕ ಮಾನದಂಡವೆಂದು ಪರಿಗಣಿಸಲಾಗಿದೆ.

ಉದ್ದೇಶ

  • ಈ ಲೈಬ್ರರಿಯು, ಪ್ರಸ್ತುತ ವೈದ್ಯಕೀಯ ಲೋಕದಲ್ಲಿ ಭಾರತೀಯ ಪಾರಂಪರಿಕ ಚಿಕಿತ್ಸಾ ಪದ್ಧತಿಗಳನ್ನು ವ್ಯಾಪಕವಾಗಿ ಅಳವಡಿಸಲು ಅನುಕೂಲವಾಗುವಂತೆ ಮಾಡುತ್ತದೆ. ಹಾಗೆಯೇ ಪಾರಂಪರಿಕ ಜ್ಞಾನದ ಆಧಾರದ ಮೇಲೆ, ಲಾಭದಾಯಕವಾಗಿ ಉದ್ದಿಮೆಗಳನ್ನು ಕಟ್ಟಲು ಹೊಸ ಉತ್ಪಾದಕರು  ಮತ್ತು ಅನ್ವೇಷಕರನ್ನು ಪ್ರೇರೇಪಿಸುತ್ತದೆ.

ಪ್ರಯೋಜನಗಳು :

  • ಟಿಕೆಡಿಎಲ್‌, ಮಾಹಿತಿಯ ಪ್ರಮುಖ ಮೂಲವಾಗಿದೆ. ಈಗ ಪೇಟೆಂಟ್ ಕಚೇರಿಗಳನ್ನು ಮೀರಿ ಡೇಟಾಬೇಸ್‌ನ ಪ್ರವೇಶವನ್ನು ಸಾಮಾನ್ಯರಿಗೂ ವಿಸ್ತರಿಸಲು ಅನುಮೋದನೆ ದೊರೆತಿರುವುದರಿಂದ, ಪಾರಂಪರಿಕ ಜ್ಞಾನದ ಅತ್ಯುನ್ನತ ಬಳಕೆಗೆ ಅವಕಾಶವಾಗಬಹುದು.
  • ಡಿಜಿಟಲ್ ಗ್ರಂಥಾಲಯ, ಗಿಡಮೂಲಿಕೆ, ಆರೋಗ್ಯ ರಕ್ಷಣೆ ,ಆಯುಷ್, ಫಾರ್ಮಾಸ್ಯುಟಿಕಲ್ಸ್, ಫೈಟೊಫಾರ್ಮಾಸ್ಯುಟಿಕಲ್ಸ್, ಮತ್ತು ನ್ಯೂಟ್ರಾಸ್ಯುಟಿಕಲ್ಸ್ ಕ್ಷೇತ್ರದ ವ್ಯಾಪಾರ ಮತ್ತು ಕಂಪನಿಗಳಿಗೆ ಒತ್ತಾಸೆಯಾಗಿ‌ ನಿಲ್ಲುತ್ತದೆ.
  • ಸಂಶೋಧನಾ ಸಂಸ್ಥೆಗಳು, ಸಾರ್ವಜನಿಕ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು, ಶಿಕ್ಷಣತಜ್ಞರು ಮತ್ತು ವಿದ್ಯಾರ್ಥಿಗಳು, ಪೇಟೆಂಟ್‌ದಾರರು ಮತ್ತು ಅವರ ಕಾನೂನು ಪ್ರತಿನಿಧಿಗಳು ಮತ್ತು ಸರ್ಕಾರ ಹಾಗೂ ಇತರ ಹಲವಾರು ಬಳಕೆದಾರರಿಗೆ ಉತ್ತಮ ಮಾಹಿತಿಯ ಆಕರವಾಗುತ್ತದೆ.
  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಬಳಕೆದಾರರು ಟಿಕೆಡಿಎಲ್‌ ಡೇಟಾಬೇಸ್‌ ಬಳಕೆಗಾಗಿ ಚಂದಾ ಹಣವನ್ನು ಪಾವತಿಸಬೇಕಾಗಿರುತ್ತದೆ

ಪಾರಂಪರಿಕ ಜ್ಞಾನದ ಮಹತ್ವ :

  • ಭಾರತೀಯ ಪಾರಂಪರಿಕ ಜ್ಞಾನವು, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿನ ಅಗತ್ಯಗಳನ್ನು ಪೂರೈಸುವಂತಹ ಸಾಮರ್ಥ್ಯ ಹೊಂದಿದೆ. ಉದಾಹರಣೆಗೆ, ಆಯುರ್ವೇದ, ಸಿದ್ಧ, ಯುನಾನಿ, ಸೋವಾ ರಿಗ್ಪಾ ಮತ್ತು ಯೋಗದಂತಹ ನಮ್ಮ ದೇಶದ ಸಾಂಪ್ರದಾಯಿಕ ಔಷಧ ಹಾಗೂ ಚಿಕಿತ್ಸಾ ಪದ್ಧತಿಗಳು ದೇಶ–ವಿದೇಶದ ಜನರ ಅಗತ್ಯಗಳನ್ನು ಪೂರೈಸುತ್ತಿವೆ.
  • ಇತ್ತೀಚೆಗೆ ಕೋವಿಡ್‌–19  ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ ಈ ಸಾಂಪ್ರದಾಯಿಕ ಔಷಧಗಳನ್ನು ವ್ಯಾಪಕವಾಗಿ ಬಳಸಿರುವುದು ಇದಕ್ಕೆ ಸಾಕ್ಷಿಯಾಗಿದೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಹಾಗೂ ರೋಗ ಹರಡುವ ವೈರಸ್‌ಗಳ ವಿರುದ್ಧ ಹೋರಾಡಲು ಈ ಔಷಧಗಳನ್ನು ಬಳಲಾಗಿತ್ತು.

ಪಾರಂಪರಿಕ ಜ್ಞಾನ ಡಿಜಿಟಲ್ ಲೈಬ್ರರಿ(ಟಿಕೆಡಿಎಲ್‌):  

  • ಇದು 2001ರಲ್ಲಿ, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR) ಹಾಗೂ ಇಂಡಿಯನ್ ಸಿಸ್ಟಮ್ಸ್ ಆಫ್ ಮೆಡಿಸಿನ್ ಮತ್ತು ಹೋಮಿಯೋಪತಿ ಇಲಾಖೆಯು(ಈಗ ಆಯುಷ್ ಸಚಿವಾಲಯ) ಜಂಟಿಯಾಗಿ ಸ್ಥಾಪಿಸಿದ ಭಾರತೀಯ ಪಾರಂಪರಿಕ ಜ್ಞಾನದ ಡೇಟಾಬೇಸ್.

ಆಫ್-ಶೋರ್ ಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್ಸ್ (GCTM) :

  • ಈ ವರ್ಷದ ಏಪ್ರಿಲ್‌ನಲ್ಲಿ, ವಿಶ್ವ ಆರೋಗ್ಯ ಸಂಸ್ಥೆ (WHO) ತನ್ನ ಮೊದಲ ಆಫ್-ಶೋರ್ ಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್ಸ್ (GCTM) ಅಂದರೆ ಪಾರಂಪರಿಕ ಚಿಕಿತ್ಸಾ ಪದ್ಧತಿಗಳ ಜಾಗತಿಕ ಕೇಂದ್ರವನ್ನು ಗುಜರಾತ್‌ನ ಜಾಮ್‌ನಗರದಲ್ಲಿ ಸ್ಥಾಪಿಸಿದೆ.