Published on: December 16, 2021

ಪಾರ್ಕರ್ ಸೋಲಾರ್ ಪ್ರೋಬ್

ಪಾರ್ಕರ್ ಸೋಲಾರ್ ಪ್ರೋಬ್

ಸುದ್ಧಿಯಲ್ಲಿ ಏಕಿದೆ ? ನಾಸಾದ ಪಾರ್ಕರ್ ಸೋಲಾರ್ ಪ್ರೋಬ್ ಸೂರ್ಯನ ಮೇಲ್ಭಾಗದ ವಾತಾವರಣವಾದ ಕರೊನಾ ಮೂಲಕ ಹಾದು ಹೋಗಿದೆ. ಅಲ್ಲದೆ, ಅದರಿಂದ ಕಣಗಳು ಹಾಗೂ ಆಯಸ್ಕಾಂತೀಯ ಭಾಗಗಳ ಮಾದರಿಗಳನ್ನು ಸಂಗ್ರಹಿಸಿದೆ.

ಮುಖ್ಯಾಂಶಗಳು

  • ಪಾರ್ಕರ್ ಸೋಲಾರ್ ಪ್ರೋಬ್ ನೌಕೆಯ ಈ ಐತಿಹಾಸಿಕ ಸಾಧನೆ ಸೌರ ವ್ಯವಸ್ಥೆಯ ರಚನೆ, ಉಗಮದ ಕುರಿತಾದ ಅಧ್ಯಯನಕ್ಕೆ ಮಹತ್ವದ ಮೈಲುಗಲ್ಲು ಆಗಲಿದೆ. ಚಂದ್ರನ ಅಂಗಳದಲ್ಲಿ ಕಾಲಿರಿಸುವ ಮೂಲಕ ಅದರ ಹುಟ್ಟು ಹಾಗೂ ರಚನೆಯ ಬಗ್ಗೆ ಅಧ್ಯಯನದಲ್ಲಿ ಮುಂದುವರಿಯಲು ವಿಜ್ಞಾನಿಗಳಿಗೆ ಸಾಧ್ಯವಾಗಿದೆ. ಈಗ ಭೂಮಿಗೆ ಅತಿ ಹತ್ತಿರವಿರುವ ನಕ್ಷತ್ರ, ಸುಡು ಸೂರ್ಯನ ಕುರಿತಾದ ಬಹಳ ಪ್ರಮುಖವಾದ ಮಾಹಿತಿಗಳು ಮತ್ತು ಸೌರ ವ್ಯವಸ್ಥೆಯಲ್ಲಿನ ಅದರ ಪ್ರಭಾವದ ಬಗ್ಗೆ ಅಧ್ಯಯನಕ್ಕೆ ನೆರವಾಗಲಿದೆ.
  • ಪಾರ್ಕರ್ ನೌಕೆಯು ಸೌರ ಮೇಲ್ಮೈ ಸಮೀಪದಲ್ಲಿ ಸುತ್ತು ಹಾಕಿದಾಗ, ಇತರೆ ಬಾಹ್ಯಾಕಾರ ನೌಕೆಗಳು ಕಂಡುಕೊಳ್ಳಲು ಸಾಧ್ಯವಾಗಿರದ ಹೊಸ ವಿಷಯಗಳನ್ನು ಆವಿಷ್ಕರಿಸಿದೆ. ಭೂಮಿಯಲ್ಲಿರುವ ನಮ್ಮ ಮೇಲೆ ಪ್ರಭಾವ ಬೀರಬಲ್ಲ, ಸೌರ ವಾಯುವಿನ ಒಳಗೆ ಸೂರ್ಯನಿಂದ ಬರುವ ಕಣಗಳನ್ನು ಅದು ಪತ್ತೆಹಚ್ಚುತ್ತಿದೆ. 2019ರಲ್ಲಿ ಸೌರ ವಾಯುವಿನಲ್ಲಿ (Solar Wind) ಆಯಸ್ಕಾಂತೀಯ ಜಿಗ್-ಜ್ಯಾಗ್ ರಚನೆಯನ್ನು ಪಾರ್ಕರ್ ಪತ್ತೆಹಚ್ಚಿತ್ತು. ಇವುಗಳಿಗೆ ಸ್ವಿಚ್‌ಬ್ಯಾಕ್‌ಗಳೆಂದು ಹೆಸರು ನೀಡಲಾಗಿದ್ದು, ಸೂರ್ಯನ ಸಮೀಪದಲ್ಲಿ ಇವು ಅಸಂಖ್ಯಾತ ಪ್ರಮಾಣದಲ್ಲಿವೆ. ಆದರೆ ಅವುಗಳು ಹೇಗೆ ಮತ್ತು ಎಲ್ಲಿ ರಚನೆಯಾಗಿವೆ ಎನ್ನುವುದು ನಿಗೂಢವಾಗಿದೆ. ಸೂರ್ಯನ ಸಮೀಪದಲ್ಲಿ ಹಾದು ಹೋಗುವ ಮೂಲಕ ಪಾರ್ಕರ್ ಸೋಲಾರ್ ಪ್ರೋಬ್ ಈಗ ಅವುಗಳ ಹುಟ್ಟಿನ ಒಂದು ಸ್ಥಳವಾದ ಸೌರ ಮೇಲ್ಮೈಯನ್ನು ಗುರುತಿಸಿದೆ.
  • ಕರೊನಾ (Corona) ಮೂಲಕದ ಮೊದಲ ಪಯಣದಲ್ಲಿ ಅದು, ಮತ್ತಷ್ಟು ಹಾರಾಟಗಳ ಭರವಸೆಯನ್ನು ಮೂಡಿಸಿದೆ. ಹಾಗೆಯೇ ಬಲುದೂರದ ಭೂಮಿಯಿಂದ ಅಧ್ಯಯನ ಮಾಡಲು ಸಾಧ್ಯವಾಗದ ಮಹತ್ವದ ದಾಖಲೆಗಳನ್ನು ಒದಗಿಸುವುದನ್ನು ಮುಂದುವರಿಸಲಿದೆ.

ಹಿಂದೆಂದಿಗಿಂತಲೂ ಹತ್ತಿರ

  • ಪಾರ್ಕರ್ ಸೋಲಾರ್ ಪ್ರೋಬ್ ನೌಕೆಯನ್ನು 2018ರಲ್ಲಿ ಮೊದಲು ಉಡಾವಣೆ ಮಾಡಲಾಗಿತ್ತು. ಇದುವರೆಗಿನ ಯಾವುದೇ ನೌಕೆಗೆ ಸಾಧ್ಯವಾಗದಷ್ಟು ಸೂರ್ಯನ ಹತ್ತಿರ ಪ್ರಯಾಣಿಸಿವ ಮೂಲಕ ಅದರ ನಿಗೂಢತೆಗಳನ್ನು ಭೇದಿಸುವುದು ಇದರ ಉದ್ದೇಶವಾಗಿತ್ತು. ಅದರ ಉಡಾವಣೆಯಾಗಿ ಮೂರು ವರ್ಷಗಳ ಬಳಿಕ ಪಾರ್ಕರ್ ಕೊನೆಗೂ ಸೂರ್ಯನ ಅಂಗಳವನ್ನು ಪ್ರವೇಶಿಸಿದೆ.
  • ಭೂಮಿಯಂತೆ ಸೂರ್ಯನಲ್ಲಿ ಘನವಾದ ಮೇಲ್ಮೈ ಇಲ್ಲ. ಆದರೆ ಅದರಲ್ಲಿ ಗುರುತ್ವಾಕರ್ಷಣೆ ಮತ್ತು ಆಯಸ್ಕಾಂತೀಯ ಬಲಗಳಿಂದ ಸೂರ್ಯನ ಸರಹದ್ದಿನಲ್ಲಿ ಸೌರ ವಸ್ತುಗಳಿಂದ ರೂಪುಗೊಂಡ ಅತಿ ತಾಪಮಾನದ ವಾತಾವರಣವಿದೆ. ಉಷ್ಣತೆ ಹೆಚ್ಚಳ ಮತ್ತು ಒತ್ತಡವು ಆ ವಸ್ತುವನ್ನು ಸೂರ್ಯನಿಂದ ದೂರ ತಳ್ಳುತ್ತದೆ. ಹಾಗೆ ಅದು ಗುರುತ್ವಾಕರ್ಷಣೆ ಮತ್ತು ಆಯಸ್ಕಾಂತೀಯ ವಲಯಗಳು ತನ್ನನ್ನು ಹಿಡಿದಿಟ್ಟುಕೊಳ್ಳಲಾರದಷ್ಟು ದುರ್ಬಲವಾಗಿರುವ ಸ್ಥಳದತ್ತ ತೆರಳುತ್ತದೆ.
  • ಅಲ್ಫೆನ್ ಕ್ರಿಟಿಕಲ್ ಸರ್ಫೇಸ್ ಎಂದು ಕರೆಯಲಾಗುವ ಮೇಲ್ಮೈನಲ್ಲಿ ಸೌರ ವಾತಾವರಣ ಅಂತ್ಯಗೊಳ್ಳಲಿದ್ದು, ಸೌರ ವಾಯು ಆರಂಭವಾಗುತ್ತದೆ. ಸೌರ ವಾಯು ಸೂರ್ಯನಲ್ಲಿನ ಆಯಸ್ಕಾಂತೀಯ ವಲಯವನ್ನು ಸೌರ ವ್ಯವಸ್ಥೆಯತ್ತ, ಭೂಮಿಯತ್ತ ಮತ್ತು ಅದರಾಚೆಗೂ ಸಾಗಿಸುತ್ತದೆ. ಮುಖ್ಯವಾಗಿ ಅಲ್ಫೆನ್ ಕ್ರಿಟಿಕಲ್ ಸರ್ಫೇಸ್‌ನಲ್ಲಿ ಸೋಲಾರ್ ವಿಂಡ್ ಎಷ್ಟು ವೇಗವಾಗಿ ಸಾಗುತ್ತದೆ ಎಂದರೆ, ಗಾಳಿಯ ಒಳಗಿನ ಅಲೆಗಳು ಸೂರ್ಯನ ಕಡೆಗೆ ಅದನ್ನು ಮರಳಿ ಮರಳಿ ತರುವಷ್ಟು ವೇಗವಾಗಿ ಪ್ರಯಾಣಿಸಲಾರದು. ಇದರಿಂದ ಅವುಗಳ ಸಂಪರ್ಕ ಕಡಿತಗೊಳ್ಳುತ್ತದೆ.