Published on: October 15, 2021

ಪಿಎಂ ಗತಿಶಕ್ತಿ ಯೋಜನೆ

ಪಿಎಂ ಗತಿಶಕ್ತಿ ಯೋಜನೆ

ಸುದ್ಧಿಯಲ್ಲಿ ಏಕಿದೆ?  ಬಹು ಮಾದರಿ ಸಂಪರ್ಕ ಏರ್ಪಡಿಸುವ ₹100 ಲಕ್ಷ ಕೋಟಿ ಮೌಲ್ಯದ ‘ಪಿಎಂ ಗತಿ ಶಕ್ತಿ’ ರಾಷ್ಟ್ರೀಯ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ಕೊಟ್ಟರು. ಸಾಗಣೆ ವೆಚ್ಚ ಕಡಿಮೆ ಮಾಡಿ, ಆರ್ಥಿಕತೆ ಉತ್ತೇಜಿಸುವ ಹಾಗೂ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಗುರಿಯನ್ನು ಇದು ಹೊಂದಿದೆ.

  • ಯೋಜನೆಯು ಎಲ್ಲ ಸಂಬಂಧಿತ ಇಲಾಖೆಗಳನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸುವ ಮೂಲಕ ಯೋಜನೆಗಳಿಗೆ ಹೆಚ್ಚಿನ ಶಕ್ತಿ ಮತ್ತು ವೇಗವನ್ನು ನೀಡುವ ಗುರಿ ಹೊಂದಿದೆ. ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳ ಮೂಲಸೌಕರ್ಯ ಯೋಜನೆಗಳನ್ನು ಒಂದೇ ದೃಷ್ಟಿಕೋನದಿಂದ ವಿನ್ಯಾಸಗೊಳಿಸಿ ಕಾರ್ಯಗತಗೊಳಿಸಲಾಗುವುದು.
  • ರಸ್ತೆ, ರೈಲ್ವೆ, ವಿಮಾನಯಾನ, ಕೃಷಿ ಹೀಗೆ ಸರ್ಕಾರದ ವಿವಿಧ ಕ್ಷೇತ್ರಗಳ ಯೋಜನೆಗಳನ್ನು ಸಂಘಟಿತ ರೀತಿಯಲ್ಲಿ ಅಭಿವೃದ್ಧಿಪಡಿಸಲು ಗತಿ ಶಕ್ತಿ ಯೋಜನೆಯು ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುತ್ತದೆ.
  • ಗತಿಶಕ್ತಿ ರಾಷ್ಟ್ರೀಯ ಯೋಜನೆ ಸರಿಯಾದ ಮಾಹಿತಿ ಮತ್ತು ನಿರ್ದೇಶನವನ್ನು ನೀಡುತ್ತದೆ. ಇದರಿಂದ ನಿಗದಿತ ಸಮಯದ ಚೌಕಟ್ಟಿನೊಳಗೆ ಸರ್ಕಾರಿ ಯೋಜನೆಗಳು ಪೂರ್ಣಗೊಳ್ಳುತ್ತವೆ.
  • ಭಾರತದಲ್ಲಿ ಜಿಡಿಪಿಯ ಶೇ 13ರಷ್ಟು ವೆಚ್ಚವು ಸಾಗಣೆಗೆ ಹೋಗುತ್ತಿದೆ. ಈ ಯೋಜನೆಯು ಸಾಗಣೆ ವೆಚ್ಚದ ಜೊತೆಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಸಮಯವನ್ನು ಕಡಿತಗೊಳಿಸುವ ಗುರಿ ಹೊಂದಿದೆ, ಇದು ಹೂಡಿಕೆ ತಾಣವಾಗಲು ಭಾರತಕ್ಕೆ ಉತ್ತೇಜನ ನೀಡುತ್ತದೆ.

‘ಪಿಎಂ ಗತಿ ಶಕ್ತಿ – ರಾಷ್ಟ್ರೀಯ ಮಾಸ್ಟರ್ ಪ್ಲಾನ್ ನ ಆರು ಸ್ತಂಭಗಳು:

1.ಸಮಗ್ರತೆ: ಇದು ಒಂದು ಕೇಂದ್ರೀಕೃತ ಪೋರ್ಟಲ್‌ನೊಂದಿಗೆ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಎಲ್ಲಾ ಅಸ್ತಿತ್ವದಲ್ಲಿರುವ ಮತ್ತು ಯೋಜಿತ ಉಪಕ್ರಮಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ಇಲಾಖೆಯು ಈಗ ಪರಸ್ಪರರ ಚಟುವಟಿಕೆಗಳ ಗೋಚರತೆಯನ್ನು ಹೊಂದಿದ್ದು, ಸಮಗ್ರ ಯೋಜನೆಯಲ್ಲಿ ಯೋಜನೆಗಳನ್ನು ಕಾರ್ಯಗತಗೊಳಿಸುವಾಗ ನಿರ್ಣಾಯಕ ಡೇಟಾವನ್ನು ಒದಗಿಸುತ್ತದೆ.

2. ಆದ್ಯತೆ: ಈ ಮೂಲಕ, ವಿವಿಧ ಇಲಾಖೆಗಳು ತಮ್ಮ ಯೋಜನೆಗಳಿಗೆ ವಿವಿಧ-ವಿಭಾಗದ ಪರಸ್ಪರ ಕ್ರಿಯೆಗಳ ಮೂಲಕ ಆದ್ಯತೆ ನೀಡಲು ಸಾಧ್ಯವಾಗುತ್ತದೆ.

3.ಅತ್ಯಂತ ಪ್ರಶಸ್ತವಾಗಿಸುವುದು (ಆಪ್ಟಿಮೈಸೇಶನ್) : ನಿರ್ಣಾಯಕ ಅಂತರಗಳನ್ನು ಗುರುತಿಸಿದ ನಂತರ ಯೋಜನೆಗಳನ್ನು ಪ್ಲಾನ್ ಮಾಡುವಲ್ಲಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ವಿವಿಧ ಸಚಿವಾಲಯಗಳಿಗೆ ಸಹಾಯ ಮಾಡುತ್ತದೆ. ಸರಕುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸಲು, ಸಮಯ ಮತ್ತು ವೆಚ್ಚದ ದೃಷ್ಟಿಯಿಂದ ಅತ್ಯಂತ ಸೂಕ್ತವಾದ ಮಾರ್ಗವನ್ನು ಆಯ್ಕೆ ಮಾಡಲು ಯೋಜನೆಯು ಸಹಾಯ ಮಾಡುತ್ತದೆ.

4.ಸಮನ್ವಯತೆ: ವೈಯಕ್ತಿಕ ಸಚಿವಾಲಯಗಳು ಮತ್ತು ಇಲಾಖೆಗಳು ಹೆಚ್ಚಾಗಿ ಪ್ರತ್ಯೇಕ ಪ್ರತ್ಯೇಕವಾಗಿ ಕೆಲಸ ಮಾಡುತ್ತವೆ. ಯೋಜನೆಯನ್ನು ರೂಪಿಸುವುದು ಮತ್ತು ಅನುಷ್ಠಾನದಲ್ಲಿ ಸಮನ್ವಯದ ಕೊರತೆಯು ವಿಳಂಬಕ್ಕೆ ಕಾರಣವಾಗುತ್ತದೆ. ಪಿಎಂ ಗತಿಶಕ್ತಿಯು ಪ್ರತಿಯೊಂದು ಇಲಾಖೆಯ ಚಟುವಟಿಕೆಗಳನ್ನು ಹಾಗೂ ವಿವಿಧ ಹಂತದ ಆಡಳಿತಗಳನ್ನು ಅವುಗಳ ನಡುವೆ ಕೆಲಸದ ಸಮನ್ವಯವನ್ನು ಖಾತ್ರಿಪಡಿಸುವ ಮೂಲಕ ಸಮಗ್ರ ರೀತಿಯಲ್ಲಿ ಸಿಂಕ್ರೊನೈಸ್ ಮಾಡಲು ಸಹಾಯ ಮಾಡುತ್ತದೆ.

5. ವಿಶ್ಲೇಷಣಾತ್ಮಕ: ಈ ಯೋಜನೆಯು ಸಂಪೂರ್ಣ ಡೇಟಾವನ್ನು ಒಂದೇ ಸ್ಥಳದಲ್ಲಿ ಜಿಐಎಸ್ ಆಧಾರಿತ ಪ್ರಾದೇಶಿಕ ಯೋಜನೆ ಮತ್ತು 200+ ಪದರಗಳನ್ನು ಹೊಂದಿರುವ ವಿಶ್ಲೇಷಣಾತ್ಮಕ ಸಾಧನಗಳನ್ನು ಒದಗಿಸುತ್ತದೆ, ಇದು ಕಾರ್ಯಗತಗೊಳಿಸುವ ಏಜೆನ್ಸಿಗೆ ಉತ್ತಮ ಗೋಚರತೆಯನ್ನು ಒದಗಿಸುತ್ತದೆ.

6. ಕ್ರಿಯಾತ್ಮಕತೆ : ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳು ಈಗ ಜಿಐಎಸ್ ಪ್ಲಾಟ್‌ಫಾರ್ಮ್ ಮೂಲಕ ಕ್ರಾಸ್ ಸೆಕ್ಟರಲ್ (ಬೇರೆ ಬೇರೆ ವಿಭಾಗದ) ಯೋಜನೆಗಳ ಪ್ರಗತಿಯನ್ನು ದೃಶ್ಯೀಕರಿಸಲು, ಪರಿಶೀಲಿಸಲು ಮತ್ತು ಮೇಲ್ವಿಚಾರಣೆ ಮಾಡಲು ಸಾಧ್ಯವಾಗುತ್ತದೆ, ಏಕೆಂದರೆ ಉಪಗ್ರಹ ಚಿತ್ರಣವು ನಿಯತಕಾಲಿಕವಾಗಿ ನೆಲದ ಪ್ರಗತಿಯನ್ನು ನೀಡುತ್ತದೆ ಮತ್ತು ಪೋರ್ಟಲ್‌ನಲ್ಲಿ ನಿಯಮಿತವಾಗಿ ಯೋಜನೆಗಳ ಪ್ರಗತಿಯನ್ನು ನವೀಕರಿಸಲಾಗುತ್ತದೆ. ಇದು ಮಾಸ್ಟರ್ ಪ್ಲಾನ್ ನವೀಕರಿಸಲು ಸಹಾಯ ಮಾಡುತ್ತದೆ.

ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆಯ ವಿಶೇಷತೆ ಏನು?

  • ಪಿಎಂ ಗತಿ ಶಕ್ತಿ ಯೋಜನೆ ಮೂಲಕ ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲಾಗುವುದು. – ಈ ಯೋಜನೆಯು ಮೂಲಭೂತ ಸೌಕರ್ಯಗಳ ಸರ್ವತೋಮುಖ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ.
  • ಸ್ಥಳೀಯ ಉತ್ಪಾದಕರನ್ನು ಜಾಗತಿಕವಾಗಿ ಸ್ಪರ್ಧಾತ್ಮಕಗೊಳಿಸಲಾಗುವುದು.
  • ಹೊಸ ಆರ್ಥಿಕ ವಲಯಗಳನ್ನು ಸಹ ಯೋಜನೆಯಡಿ ಅಭಿವೃದ್ಧಿಪಡಿಸಲಾಗುವುದು.
  • ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆಯನ್ನು ಪ್ರಧಾನಿ ಮೋದಿಯವರು 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಘೋಷಿಸಿದ್ದರು.
  • ಗತಿ ಶಕ್ತಿ ಯೋಜನೆಯ ಒಟ್ಟು ಬಜೆಟ್ ಅನ್ನು 100 ಲಕ್ಷ ಕೋಟಿಗಳಿಗೆ ನಿಗದಿಪಡಿಸಲಾಗಿದೆ.
  • ಈ ಯೋಜನೆಯ ಮೂಲಕ ಸಮಗ್ರ ಮೂಲಸೌಕರ್ಯದ ಅಡಿಪಾಯವನ್ನು ಹಾಕಲಾಗುವುದು.
  • ಆಧುನಿಕ ಮೂಲಸೌಕರ್ಯದೊಂದಿಗೆ ಮೂಲಸೌಕರ್ಯ ನಿರ್ಮಾಣದಲ್ಲಿ ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳಲಾಗುವುದು.