Published on: December 3, 2021

ಪುಟ್ಟೇನಹಳ್ಳಿ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ

ಪುಟ್ಟೇನಹಳ್ಳಿ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ

ಸುದ್ಧಿಯಲ್ಲಿ ಏಕಿದೆ ? ಯಲಹಂಕದ ಪುಟ್ಟೇನಹಳ್ಳಿ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶವನ್ನು ರಕ್ಷಣೆ ಮಾಡಬೇಕು ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈ ಕೋರ್ಟ್ ಅರಣ್ಯ ಇಲಾಖೆಗೆ ಅದರ ನಿರ್ವಹಣಾ ಮೇಲುಸ್ತುವಾರಿ ನೀಡಿದೆ.

ಹಿನ್ನಲೆ

  • ಯಲಹಂಕದ ಪುಟ್ಟೇನಹಳ್ಳಿ ಕೆರೆ ನಿರ್ವಹಣೆಯನ್ನು ಬಿಬಿಎಂಪಿಗೆ ವಹಿಸಿ ರಾಜ್ಯ ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಆದೇಶ ರದ್ದು ಪಡಿಸುವಂತೆ ಕೋರಿ ಯಲಹಂಕ ಪುಟ್ಟೇನಹಳ್ಳಿ ಕೆರೆ ಮತ್ತು ಪಕ್ಷಿ ಸಂರಕ್ಷಣಾ ಟ್ರಸ್ಟ್ ಮತ್ತು ಸ್ಥಳೀಯ ನಿವಾಸಿಗಳು ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ನ್ಯಾಯಾಲಯ ಏನು ಹೇಳಿದೆ ?

  • ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ‘ಪುಟ್ಟೇನಹಳ್ಳಿ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶವನ್ನು ನಿಯಂತ್ರಿಸಲು ಮತ್ತು ನಿರ್ವಹಿಸಲು ಮುಖ್ಯ ವನ್ಯಜೀವಿ ವಾರ್ಡನ್ ಸಮರ್ಥ ಅಧಿಕಾರಿಯಾಗಿರುವುದನ್ನು ಕೋರ್ಟ್ ಗಮನಿಸಿದೆ.
  • ಅಂತೆಯೇ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶವನ್ನು ಬಿಬಿಎಂಪಿಗೆ ಹಸ್ತಾಂತರಿಸಲು ರಾಜ್ಯ ಸರ್ಕಾರ ಡಿಸೆಂಬರ್ 11, 2019 ರ ಅಧಿಸೂಚನೆಯನ್ನು ರದ್ದುಗೊಳಿಸಿ, ಮೀಸಲು ನೋಡಿಕೊಳ್ಳುವಂತೆ ಅರಣ್ಯ ಇಲಾಖೆಗೆ ಸೂಚಿಸಿತು.
  • ಅಲ್ಲದೆ ಮೀಸಲು ಪ್ರದೇಶದಲ್ಲಿ ಬಾಕಿ ಉಳಿದಿರುವ ಕಾಮಗಾರಿಗೆ ಮೀಸಲಿಟ್ಟಿರುವ 25 ಲಕ್ಷ ರೂ.ಗಳನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಸೂಚಿಸಿದ ನ್ಯಾಯಾಲಯ, ಪಕ್ಷಿಗಳು, ಗೂಡುಗಳು, ಅವುಗಳ ಮರಿ, ಮೊಟ್ಟೆಗಳನ್ನು ಸಂರಕ್ಷಿಸಲು ಸೂಕ್ತ ನಿರ್ವಹಣೆ ಮತ್ತು ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವಂತೆ ಆದೇಶಿಸಿತು.
  • ಸಸ್ಯ ಮತ್ತು ಪ್ರಾಣಿಗಳ ಸುರಕ್ಷತೆಗಾಗಿ ಪುಟ್ಟೇನಹಳ್ಳಿ ಸಂರಕ್ಷಣಾ ಮೀಸಲು ಪ್ರದೇಶಕ್ಕೆ ಕೊಳಚೆನೀರು ಸೋರಿಕೆಯಾಗುವುದನ್ನು ತಡೆಯಲು / ನಿಲ್ಲಿಸಲು ಎಲ್ಲಾ ಸಮರ್ಪಕ ಮತ್ತು ಸಂಪೂರ್ಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ನ್ಯಾಯಾಲಯವು BWSSB ಗೆ ನಿರ್ದೇಶನ ನೀಡಿದೆ

ಸಂರಕ್ಷಣಾ ಮೀಸಲು

  • ರಾಷ್ಟ್ರೀಯಉದ್ಯಾನವನ, ಅಭಯಾರಣ್ಯ ಅಥವಾ ಸಂರಕ್ಷಣಾ ಮೀಸಲು ಪ್ರದೇಶವನ್ನು ಒಳಗೊಂಡಿರದ ಯಾವುದೇ ಖಾಸಗಿ ಅಥವಾ ಸಮುದಾಯ ಭೂಮಿಯನ್ನು ಸಮುದಾಯ ಅಥವಾ ವ್ಯಕ್ತಿಯು ವನ್ಯಜೀವಿಗಳನ್ನು ಸಂರಕ್ಷಿಸಲು ಸ್ವಯಂಪ್ರೇರಿತರಾಗಿದಲ್ಲಿ ಅಂಥ ಆವಾಸಸ್ಥಾನವನ್ನು ರಾಜ್ಯ ಸರ್ಕಾರವು ಸಮುದಾಯ ಮೀಸಲು ಎಂದು ವನ್ಯಜೀವಿ (ಸಂರಕ್ಷಣಾ) ಕಾಯ್ದೆ ೧೯೭೨ ರಕಲಂ36 ಸಿ ಯ ಅಡಿಯಲ್ಲಿ ಅಧಿಸೂಚಿಸಬಹುದಾಗಿರುತ್ತದೆ.
  • ಅಂತಹ ಸಮುದಾಯ ಮೀಸಲುಗಳನ್ನು ವನ್ಯಜೀವಿ (ಸಂರಕ್ಷಣಾ) ಕಾಯ್ದೆ೧೯೭೨ ರ ಕಲಂ ೩೬ಡಿ ರಡಿ ನಿರ್ವಹಣೆಮಾಡಲಾಗುತ್ತದೆ.

ಪುಟ್ಟೇನಹಳ್ಳಿ ಕೆರೆ ಹಕ್ಕಿ ವನ್ಯಧಾಮ

  • ಪುಟ್ಟೇನಹಳ್ಳಿ ಕೆರೆ ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಹೋಬಳಿಯಲ್ಲಿದೆ.ಇದು ಬೆಂಗಳೂರಿನಲ್ಲಿ ಯೆಲಮಲ್ಲಪ್ಪ ಚೆಟ್ಟಿ ಸರಣಿ ಕೆರೆಗಳ ಭಾಗವಾಗಿದೆ.ಈ ಸರಣಿ ಕೆರೆಗಳು ಪೂರ್ವಾಭಿಮುಖವಾಗಿ ಹರಿದು ದಕ್ಷಿಣ ಪಿನಾಕಿನಿ ನದಿ ಸೇರುತ್ತವೆ, ಅದು ಅಂತಿಮವಾಗಿ ಕಾವೇರಿ ನದಿಯನ್ನು ಸೇರುತ್ತದೆ.
  • ದಿನಾಂಕ 29.04.2015ರ ಅಧಿಸೂಚನೆ ಮೂಲಕ ಕರ್ನಾಟಕ ಸರ್ಕಾರ ಪುಟ್ಟೇನಹಳ್ಳಿ ಕರೆಯನ್ನು “ಪುಟ್ಟೇನಹಳ್ಳಿ ಕೆರೆ ಪಕ್ಷಿ ಸಂರಕ್ಷಣಾ ಮೀಸಲು” ಎಂದು ಘೋಷಿಸಿತು.
  • ಪುಟ್ಟೇನಹಳ್ಳಿ ಪಕ್ಷಿ ಸಂರಕ್ಷಣಾ ಮೀಸಲು 2 ದ್ವೀಪಗಳನ್ನು ಒಳಗೊಂಡಿದೆ. ಅಕೇಶಿಯಾ ನಿಲೋಟಿಕಾ (ಜಾಲಿ), ವಿಟೆಕ್ಸ್ ಲ್ಯುಕೊಕ್ಸಿಲಾನ್ (ನಿರಿರಾಂಜಿ) ಮತ್ತು ಟರ್ಮಿನಾಲಿಯಾ ಅರ್ಜುನಾ (ಹೊಳೆ ಮತ್ತಿ) ಸಸಿಗಳನ್ನು ಖಾಲಿ ಸ್ಥಳಗಳಲ್ಲಿ ಮತ್ತು ಪಾಂಡಾನಸ್ ಗಳನ್ನು ದ್ವೀಪದ ಬದಿಗಳಲ್ಲಿ ನೆಡುವ ಮೂಲಕ ವಾಸಸ್ಥಳ ಸುಧಾರಣೆಯನ್ನು ಕೈಗೊಳ್ಳಲಾಗಿದೆ. ಇದರ ಜೊತೆಗೆ ಲ್ಯಾಂಟನಾ ಪೊದೆಗಳನ್ನು ತೆಗೆದುಹಾಕಲಾಗಿದೆ.