Published on: August 7, 2021

ಪೂರ್ವಾನ್ವಯ ತೆರಿಗೆ

ಪೂರ್ವಾನ್ವಯ ತೆರಿಗೆ

ಸುದ್ಧಿಯಲ್ಲಿ ಏಕಿದೆ ?   9 ವರ್ಷಗಳ ಹಿಂದೆ ಯುಪಿಎ ಸರಕಾರ ಜಾರಿಗೊಳಿಸಿದ್ದ ವಿವಾದಾತ್ಮಕ ಪೂರ್ವಾನ್ವಯ ತೆರಿಗೆ ಪದ್ಧತಿಗೆ ಕೇಂದ್ರ ತಿಲಾಂಜಲಿ ನೀಡಿದ್ದು, ವೊಡಾಫೋನ್‌, ಕೈರ್ನ್‌ ಎನರ್ಜಿ ಮೊದಲಾದ ಕಂಪನಿಗಳು ಎದುರಿಸುತ್ತಿದ್ದ ತೆರಿಗೆ ವಿವಾದಗಳನ್ನು ಇತ್ಯರ್ಥಗೊಳಿಸಲು ಹಾದಿ ಸುಗಮವಾಗಿದೆ.

  • ಇದರಿಂದ ಜಾಗತಿಕ ಹೂಡಿಕೆದಾರರಿಗೆ ಭಾರತದ ತೆರಿಗೆ ನೀತಿಯ ಬಗ್ಗೆ ಸ್ಪಷ್ಟತೆ ಸಿಗಲಿದ್ದು, ಉದ್ಯಮಸ್ನೇಹಿ ನಡೆಯಾಗಿದೆ ಎಂದು ವ್ಯಾಖ್ಯಾನಿಸಲಾಗಿದೆ.

ತೆರಿಗೆ ಕಾನೂನು ತಿದ್ದುಪಡಿಗೆ ವಿಧೇಯಕ

  • ಈ ಹಿಂದೆ 2012ರ ಹಣಕಾಸು ಕಾಯಿದೆಯಲ್ಲಿ ಸೇರಿಸಲಾಗಿದ್ದ ಪೂರ್ವಾನ್ವಯ ತೆರಿಗೆ ಪದ್ಧತಿಯನ್ನು ಹಿಂತೆಗೆದುಕೊಳ್ಳಲು ತೆರಿಗೆ ಕಾನೂನು ತಿದ್ದುಪಡಿ ವಿಧೇಯಕವನ್ನು ಲೋಕಸಭೆಯಲ್ಲಿ ಇದೀಗ ಅಂಗೀಕರಿಸಲಾಗಿದೆ. ಇದು 2012ರ ಪೂರ್ವಾನ್ವಯ ತೆರಿಗೆ ಬೇಡಿಕೆ ಪದ್ಧತಿಯನ್ನು ರದ್ದುಪಡಿಸಲಿದೆ

ಪೂರ್ವಾನ್ವಯ ತೆರಿಗೆ ಹಿನ್ನೆಲೆ ಏನು?

  • ಬ್ರಿಟನ್‌ ಮೂಲದ ಟೆಲಿಕಾಂ ಕಂಪನಿ ವೊಡಾಫೋನ್‌ 2007ರಲ್ಲಿ ಹಾಂಕಾಂಗ್‌ ಮೂಲದ ಹಚಿಸನ್‌ ಕಂಪನಿಯು ಭಾರತದಲ್ಲಿ ನಡೆಸುತ್ತಿದ್ದ ಟೆಲಿಕಾಂ ಉದ್ದಿಮೆಯನ್ನು 11 ಶತಕೋಟಿ ಡಾಲರ್‌ ಕೊಟ್ಟು ಖರೀದಿಸಿತ್ತು. (ಈಗಿನ ಮೌಲ್ಯದಲ್ಲಿ ಸುಮಾರು 80 ಸಾವಿರ ಕೋಟಿ ರೂ.) ಈ ಪ್ರಕರಣವನ್ನು ಭಾರತೀಯ ಮೂಲದ ಆಸ್ತಿಯ ಪರೋಕ್ಷ ವರ್ಗಾವಣೆ ಎಂದು ಪರಿಗಣಿಸಿ, ಆದಾಯ ತೆರಿಗೆ ಇಲಾಖೆಯು ವೊಡಾಫೋನ್‌ಗೆ ತೆರಿಗೆ, ದಂಡ, ಬಡ್ಡಿ ಸೇರಿ 20,000 ಕೋಟಿ ರೂ.ಗಳ ತೆರಿಗೆ ಬೇಡಿಕೆಯ ನೋಟಿಸ್‌ ಜಾರಿಗೊಳಿಸಿತ್ತು.
  • ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ 1961ರ ಆದಾಯ ತೆರಿಗೆ ಕಾಯಿದೆಯ ಪ್ರಕಾರ ಪೂರ್ವಾನ್ವಯಿಸುವಂತೆ ತೆರಿಗೆ ವಿಧಿಸುವಂತಿಲ್ಲ ಎಂದು ತೀರ್ಪು ಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ 2012ರಲ್ಲಿ ಯುಪಿಎ ಸರಕಾರ, ಆದಾಯ ತೆರಿಗೆಗೆ ತಿದ್ದುಪಡಿಯ ಮೂಲಕ ಪೂರ್ವಾನ್ವಯ ತೆರಿಗೆ ಪದ್ಧತಿಯನ್ನು ಜಾರಿಗೊಳಿಸಿತ್ತು. ಇದು 2012ಕ್ಕಿಂತ ಹಳೆಯ ಕೇಸ್‌ಗಳಿಗೂ ಅನ್ವಯವಾಗುತ್ತಿತ್ತು. ಹೀಗಾಗಿ ವೊಡಾಫೋನ್‌ ಮತ್ತೆ ತೆರಿಗೆಯ ಬಲೆಗೆ ಸಿಲುಕಿತ್ತು.
  • 2015ರಲ್ಲಿ ತೆರಿಗೆ ಇಲಾಖೆಯು ಇದೇ ಕಾನೂನಿನ ಅಡಿಯಲ್ಲಿ ಕೈರ್ನ್‌ ಎನರ್ಜಿಗೂ 24,000 ಕೋಟಿ ರೂ. ತೆರಿಗೆ ಬೇಡಿಕೆಯ ನೋಟಿಸ್‌ ರವಾನಿಸಿತ್ತು. ಇದರ ವಿರುದ್ಧ ಕೈರ್ನ್‌ ಕೂಡ ಅಂತಾರಾಷ್ಟ್ರೀಯ ನ್ಯಾಯಾಧೀಕರಣದಲ್ಲಿ ಮೊಕದ್ದಮೆ ಹೂಡಿತ್ತು. ವೊಡಾಫೋನ್‌, ಕೈರ್ನ್‌ ಎರಡೂ ಕೇಸ್‌ಗಳಲ್ಲಿ ಅಂತಾರಾಷ್ಟ್ರೀಯ ನ್ಯಾಯಾಧೀಕರಣಗಳು ಭಾರತದ ವಿರುದ್ಧ ತೀರ್ಪು ನೀಡಿತ್ತು. ಇದುವರೆಗೆ ಒಟ್ಟು 17 ಪ್ರಕರಣಗಳಲ್ಲಿ ಪೂರ್ವಾನ್ವಯ ತೆರಿಗೆಯ ಬೇಡಿಕೆಯ ನೋಟಿಸ್‌ ಜಾರಿಗೊಳಿಸಲಾಗಿದೆ.

ಪರಿಣಾಮವೇನು?

  • ಭಾರತದಲ್ಲಿದೀರ್ಘಕಾಲದಿಂದ ಹೂಡಿಕೆ ಮಾಡಿರುವ ಅಂತಾರಾಷ್ಟ್ರೀಯ ಕಂಪನಿಗಳಿಗೆ ನಿರಾಳವಾಗಲಿದೆ.
  • ಜಾಗತಿಕ ಮಟ್ಟದ ಕಂಪನಿಗಳಿಗೆ ಭಾರತದಲ್ಲಿ ಹೂಡಿಕೆ ಮಾಡಲು, ಉದ್ಯಮ ಬೆಳೆಸಲು ಉತ್ತೇಜನ ಸಿಗಲಿದೆ. ತೆರಿಗೆ ನೀತಿ ಸ್ಪಷ್ಟವಾಗಲಿದೆ.
  • ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಸಹಕಾರಿ