Published on: January 9, 2023

ಪ್ರವಾಸಿ ಭಾರತೀಯ ದಿವಸ ಸಮ್ಮೇಳನ 2023

ಪ್ರವಾಸಿ ಭಾರತೀಯ ದಿವಸ ಸಮ್ಮೇಳನ 2023

ಸುದ್ದಿಯಲ್ಲಿ ಏಕಿದೆ? 17ನೇ ಪ್ರವಾಸಿ ಭಾರತೀಯ ದಿವಸ ಸಮ್ಮೇಳನವು ಮಧ್ಯಪ್ರದೇಶ ಸರಕಾರದ ಸಹಯೋಗದಲ್ಲಿ 2023ರ ಜನವರಿ 8ರಿಂದ 10ರವರೆಗೆ ಇಂದೋರ್‌ನಲ್ಲಿ ನಡೆಯಲಿದೆ.

ಮುಖ್ಯಾಂಶಗಳು

  • ಸುಮಾರು 70 ರಾಷ್ಟ್ರಗಳ 3500ಕ್ಕೂ ಹೆಚ್ಚು ʼಡಯಾಸ್ಪೊರಾʼ ಸದಸ್ಯರು ಈಗಾಗಲೇ ಪ್ರವಾಸಿ ಭಾರತೀಯ ದಿವಸ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ನೋಂದಣಿ ಮಾಡಿಕೊಂಡಿದ್ದಾರೆ.
  • ಭಾರತದ ಸ್ವಾತಂತ್ರ್ಯಕ್ಕಾಗಿ ಡಯಾಸ್ಪೊರಾ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯನ್ನು ಸಾರುವ ನಿಟ್ಟಿನಲ್ಲಿ “ಆಜಾದಿ ಕಾ ಅಮೃತ ಮಹೋತ್ಸವ್‌ (ಸ್ವಾತಂತ್ರ್ಯದ ಅಮೃತ ಮಹೋತ್ಸವ)- ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಸಾಗರೋತ್ತರ ಭಾರತೀಯರ ಕೊಡುಗೆ” ಪರಿಕಲ್ಪನೆಯಡಿ ಪ್ರಥಮ ಬಾರಿಗೆ ರೂಪಿಸಲಾದ ಡಿಜಿಟಲ್‌ ಪಿಬಿಡಿ ಪ್ರದರ್ಶನವನ್ನು ಗೌರವಾನ್ವಿತ ಪ್ರಧಾನ ಮಂತ್ರಿಗಳು ಉದ್ಘಾಟಿಸಲಿದ್ದಾರೆ.
  • ನಾಲ್ಕು ವರ್ಷಗಳ ಬಳಿಕ ಹಾಗೂ ಕೋವಿಡ್‌- 19 ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ನಂತರ ನಡೆಯುತ್ತಿರುವ ಪ್ರಥಮ ಭೌತಿಕ ಸಮ್ಮೇಳನವಾಗಿರುವ ಕಾರಣಕ್ಕೆ 17ನೇ ಪಿಬಿಡಿ ಸಮ್ಮೇಳನವು ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಹಿಂದಿನ ಪಿಬಿಡಿ ಸಮ್ಮೇಳನವು ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದ್ದ 2021ರಲ್ಲಿ ವರ್ಚ್ಯುವಲ್‌ ರೂಪದಲ್ಲಿ ನಡೆದಿತ್ತು.
  • ಪರಿಕಲ್ಪನೆ: ಈ ಬಾರಿಯ ಪ್ರವಾಸಿ ಭಾರತೀಯ ದಿವಸವು “ಡಯಾಸ್ಪೊರಾ (ಜಗತ್ತಿನ ನಾನಾ ಕಡೆ ಜೀವನ ರೂಪಿಸಿಕೊಂಡಿರುವ ಸಾಗರೋತ್ತರ ಭಾರತೀಯರು): ಅಮೃತ ಕಾಲದಲ್ಲಿ ಭಾರತದ ಪ್ರಗತಿಯ ವಿಶ್ವಾಸಾರ್ಹ ಪಾಲುದಾರರು” ಎಂಬ ಪರಿಕಲ್ಪನೆಯಡಿ ರೂಪುಗೊಂಡಿದೆ.
  • ಸಹಯೋಗ: ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಸಹಯೋಗದಲ್ಲಿ ನೆರವೇರಲಿದೆ.
  • ಮುಖ್ಯ ಅತಿಥಿಗಳು: ಗಯಾನಾ ಸಹಕಾರಿ ಗಣ್ಯರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಡಾ. ಮೊಹಮ್ಮದ್‌ ಇರ್ಫಾನ್‌ ಅಲಿ.
  • ವಿಶೇಷ ಅತಿಥಿಗಳು: ಸುರಿನಾಮ್‌ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಚಂದ್ರಿಕಾಪೆರ್ಸಾದ್‌ ಸಂತೋಕಿ
  • ಅಂಚೆ ಚೀಟಿ ಬಿಡುಗಡೆ: ಸುರಕ್ಷತೆ, ಕಾನೂನುಬದ್ಧ, ಕ್ರಮಬದ್ಧ ಹಾಗೂ ಕೌಶಲ್ಯದ ವಲಸೆಯ ಪ್ರಾಮುಖ್ಯತೆಯನ್ನು ಸಾರುವುದರ ಸ್ಮರಣಾರ್ಥ “ಸುರಕ್ಷಿತ್‌ ಜಾಯೇನ್‌, ಪ್ರಶಿಕ್ಷಿತ್‌ ಜಾಯೇನ್‌ʼ (ಸುರಕ್ಷಿತವಾಗಿ ಹೋಗಿ, ಸುಶಿಕ್ಷಿತರಾಗಿ ಹೋಗಿ) ಅಂಚೆ ಚೀಟಿ ಬಿಡುಗಡೆಯಾಗಲಿದೆ.

ಜನವರಿ 9ರಂದು ಏನು ವಿಶೇಷ?

  • ಜನವರಿ 9 (1915) ಮಹಾತ್ಮ ಗಾಂಧಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದ ದಿನ. ಅದಕ್ಕಾಗಿಯೇ ಈ ದಿನವನ್ನು ಪ್ರವಾಸಿ ಭಾರತೀಯ ದಿವಸ್ ಎಂದು ಆಚರಣೆ ಮಾಡಲಾಗುತ್ತದೆ. ಎಲ್‌ಎಂ ಸಿಂಘ್ವಿ ನೇತೃತ್ವದ ಭಾರತೀಯ ಡಯಾಸ್ಪೊರಾ ಉನ್ನತ ಮಟ್ಟದ ಸಮಿತಿ ನೀಡಿದ ಶಿಫಾರಸುಗಳ ಮೇರೆಗೆ ಪ್ರವಾಸಿ ಭಾರತೀಯ ದಿನವನ್ನು ಆಚರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆಗಿನ ಪ್ರಧಾನಿ ಅಟಲ್ ಬಿಹಾರ್ ವಾಜಪೇಯಿ ಅವರ ಘೋಷಣೆಯ ನಂತರ ಪ್ರವಾಸಿ ಭಾರತೀಯ ದಿವಸ್ ಆಚರಿಸಲು ನಿರ್ಧರಿಸಲಾಯಿತು.

ಆಚರಣೆಯ ಹಿಂದಿನ ಉದ್ದೇಶ

  • ವಿದೇಶದಲ್ಲಿರುವ ಭಾರತೀಯರ ಸಾಧನೆಗಳನ್ನು ಜಗತ್ತಿ ಮುಂದಿಡಲು ಪ್ರತಿ ವರ್ಷ ಜನವರಿ 9 ರಂದು ಪ್ರವಾಸಿ ಭಾರತೀಯ ದಿವಸ್ ಆಚರಿಸಲಾಗುತ್ತದೆ.ಈ ಆಚರಣೆಯು ವಿದೇಶದಲ್ಲಿರುವ ಭಾರತೀಯರ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಜಗತ್ತು ಗುರುತಿಸುವಂತೆ ಮಾಡುತ್ತದೆ. ಪ್ರವಾಸಿ ಭಾರತೀಯ ದಿವಸ್ ಹೆಸರಿನಲ್ಲಿ, ವಲಸಿಗರಿಗೆ ಸ್ಥಳೀಯರನ್ನು ಭೇಟಿ ಮಾಡಲು ಅವಕಾಶ ಸಿಗುತ್ತದೆ. 2003 ರಿಂದ ದೇಶದಲ್ಲಿ ಪ್ರವಾಸಿ ಭಾರತೀಯ ದಿವಸ್ ಅನ್ನು ಆಚರಿಸಲಾಗುತ್ತದೆ.