Published on: October 6, 2021
ಪ್ಲ್ಯಾನೆಟ್ ಎಕ್ಸ್
ಪ್ಲ್ಯಾನೆಟ್ ಎಕ್ಸ್
ಸುದ್ಧಿಯಲ್ಲಿ ಏಕಿದೆ? ನಮ್ಮ ಸೌರಮಂಡಲದಲ್ಲಿ ಅಸ್ತಿತ್ವದಲ್ಲಿ ಇರಬಹುದಾದ 9ನೇ ಗ್ರಹ ಪ್ಲ್ಯಾನೆಟ್ ಎಕ್ಸ್ ಬಗ್ಗೆ ಈಗ ಮತ್ತೆ ಚರ್ಚೆಗಳು ಶುರುವಾಗಿವೆ. ಪ್ಲ್ಯಾನೆಟ್ ಎಕ್ಸ್ ಅಸ್ತಿತ್ವದ ಬಗ್ಗೆ ಪ್ರಬಲ ಸಾಕ್ಷಿಗಳು ದೊರೆಯುತ್ತಿದ್ದು, ಈ ಕಾಲ್ಪನಿಕ ಗ್ರಹ ನೈಜ ಗ್ರಹವಾಗಿ ನಮ್ಮ ಕಣ್ಣಮುಂದೆ ಗೋಚರವಾಗಲಿದೆಯೇ ಎಂಬ ಕುತೂಹಲ ಮೂಡಿದೆ
- ಸೌರಮಂಡಲದ 8ನೇ ಗ್ರಹ ನೆಪ್ಚೂನ್ ಆಚೆ ಇರುವ ಕೈಪರ್ ಬೆಲ್ಟ್ ಆಬ್ಜೆಕ್ಟ್(KBOs) ಪ್ರದೇಶದಲ್ಲಿ ನಮ್ಮ ಭೂಮಿಗಿಂತ ಆರು ಪಟ್ಟು ಹೆಚ್ಚು ದ್ರವ್ಯರಾಶಿ ಹೊಂದಿರುವ ಬೃಹತ್ ಗ್ರಹವೊಂದು ಅಸ್ತಿತ್ವದಲ್ಲಿರಬಹುದು ಎಂಬ ಶಂಕೆ ಖಗೋಳ ವಿಜ್ಞಾನಿಗಳದ್ದು.
ಏನಿದು ಪ್ಲ್ಯಾನೆಟ್ ಎಕ್ಸ್?:
- ಪ್ಲ್ಯಾನೆಟ್ ಎಕ್ಸ್ ಎಂಬುದು ನಮ್ಮ ಸೌರಮಂಡಲದಲ್ಲಿ ಅಸ್ತಿತ್ವದಲ್ಲಿ ಇರಬಹುದಾದ ಗ್ರಹ. ಒಂದು ವೇಳೆ ಈ ಗ್ರಹ ಪತ್ತೆಯಾದರೆ ಅದು ನಮ್ಮ ಸೌರಮಮಂಡಲದ 9ನೇ ಗ್ರಹ ಎಂದು ಕರೆಸಿಕೊಳ್ಳಲಿದೆ. ಪ್ಲುಟೋವನ್ನು ಗ್ರಕಾಯಗಳ ಪಟ್ಟಿಯಿಂದ ಹೊರಹಾಕಿರುವುದರಿಂದ ಈಗ ನಮ್ಮ ಸೌರಮಂಡಲದಲ್ಲಿ 8 ಅಧಿಕೃತ ಗ್ರಹಗಳಿವೆ.
- ಆದರೆ ಪ್ಲ್ಯಾನೆಟ್ ಎಕ್ಸ್ ಇರುವಿಕೆ ಬಗ್ಗೆ ಯಾವುದೇ ಸ್ಪಷ್ಟ ಪುರಾವೆ ಇದುವರೆಗೂ ಸಿಕ್ಕಿಲ್ಲ. ಕೈಪರ್ ಬೆಲ್ಟ್ ಪ್ರದೇಶದ ಸಣ್ಣ ಸಣ್ಣ ಗ್ರಹಕಾಯಗಳ ಮೇಲೆ ಅಗೋಚರ ಗುರುತ್ವಾಕರ್ಷಣೆಯ ಪ್ರಭಾವ ಇದೆ ಎಂಬ ನಂಬಿಕೆಯೇ ಪ್ಲ್ಯಾನೆಟ್ ಎಕ್ಸ್ ಇರುವಿಕೆಯ ಬಗೆಗಿನ ಊಹಾಪೋಹಗಳ ಹುಟ್ಟಿಗೆ ಕಾರಣ.
- ನೆಪ್ಚೂನ್ ಗುರತ್ವ ಬಲಕ್ಕೆ ಒಳಪಡದ ಕೈಪರ್ ಬೆಲ್ಟ್ ವಸ್ತುಗಳು ಸೂರ್ಯನನ್ನು ಸುತ್ತುವ ಪ್ರಕ್ರಿಯೆಯಲ್ಲಿ ಆಗುತ್ತಿರುವ ಬದಲಾವಣೆಗಳೇ ಪ್ಲ್ಯಾನೆಟ್ ಎಕ್ಸ್ ಅಸ್ತಿತ್ವದ ಬಗ್ಗೆ ನಂಬಿಕೆ ಹೆಚ್ಚಾಗುವಂತೆ ಮಾಡಿದೆ.
ಪತ್ತೆ ಏಕೆ ಕಷ್ಟ?:
- ಪ್ಲ್ಯಾನೆಟ್ ಎಕ್ಸ್ನ್ನು ಪತ್ತೆ ಮಾಡಲು ಇರುವ ಬಹುದೊಡ್ಡ ಸವಾಲು ಎಂದರೆ ಅದು ಸೂರ್ಯನಿಂದ ಇರುವ ದೂರ. ಭೂಮಿಯ ಮೇಲಿರುವ ಅಥವಾ ಸದ್ಯ ಬಾಹ್ಯಾಕಾಶದಲ್ಲಿರುವ ಹಬಲ್ ದೂರದರ್ಶಕ ಯಂತ್ರದ ಸಹಾಯದಿಂದಲೂ ಈ ಕಾಲ್ಪನಿಕ ಗ್ರಹವನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಕಕ್ಷೆಗೆ ಸೇರಲು ಸಿದ್ಧವಾಗಿರುವ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಸಹಾಯದಿಂದ ಈ ಗ್ರಹದ ಇರುವಿಕೆ ಬಗ್ಗೆ ಕರುಹು ಸಿಗಬಹುದು ಎಂದು ಆಶಿಸಲಾಗಿದೆ.