Published on: November 16, 2022

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ

ಸುದ್ದಿಯಲ್ಲಿ ಏಕಿದೆ?

ಈ ಬಾರಿಯ ಭಾರತದ ಹುಲಿ ಸಂರಕ್ಷಿತ ಪ್ರದೇಶಗಳ ನಿರ್ವಹಣೆ ಕುರಿತು ನಡೆಸಿರುವ ಮ್ಯಾನೇಜ್‌ಮೆಂಟ್ ಎಫೆಕ್ಟಿವ್‌ನೆಸ್ ಎವಲ್ಯೂಷನ್ ನಲ್ಲಿ ಬಂಡೀಪುರ ಉನ್ನತ ಅಂಕಗಳನ್ನು ಗಳಿಸಿ ಮತ್ತೊಮ್ಮೆ ಅತ್ಯುತ್ತಮ ಹುಲಿ ಸಂರಕ್ಷಿತ ವಲಯ ಎಂಬ ಬಿರುದನ್ನು ತನ್ನದಾಗಿಸಿಕೊಂಡಿದೆ.

ಮುಖ್ಯಾಂಶಗಳು

  • ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆಯ ತಜ್ಞರ ತಂಡವು 4 ವರ್ಷಗಳಿಗೊಮ್ಮೆ ನಿರ್ವಹಣೆಯ ಕುರಿತು ಮೌಲ್ಯಮಾಪನವನ್ನು ಮಾಡುತ್ತದೆ.
  • ಇದರಲ್ಲಿ ಬಂಡೀಪುರ ಹುಲಿ ಸಂರಕ್ಷಿತ ವಲಯ ಶೇ.95.5ರಷ್ಟು ಅಂಕಗಳನ್ನು ಪಡೆದಿದೆ. ಇದು ರಾಜ್ಯದಲ್ಲಿಯೇ ಅತ್ಯಧಿಕವಾಗಿದೆ.
  • ದೇಶದ ಇತರ ಹುಲಿ ಸಂರಕ್ಷಿತ ಪ್ರದೇಶಗಳು ಶೇ.92 ರಿಂದ ಶೇ.94 ಗಳಿಸಿವೆ. ಬಂಡೀಪುರವನ್ನು ದೇಶದಲ್ಲಿ ಮೊದಲ ಅಥವಾ ಎರಡನೆಯ ಉತ್ತಮ ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸುವ ಸಂಭವ ಇದೆ.

ಮೌಲ್ಯಮಾಪನ

  • ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆ, ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಸ್ವಾಯತ್ತ ಸಂಸ್ಥೆಯಿಂದ ಈ ಮೌಲ್ಯಮಾಪನವನ್ನು ಮಾಡಲಾಗಿದೆ.
  • ವಿಜ್ಞಾನಿಗಳು, ನಿವೃತ್ತ ಐಎಫ್‌ಎಸ್ ಅಧಿಕಾರಿಗಳು ಮತ್ತು ವನ್ಯಜೀವಿ ತಜ್ಞರ ತಂಡವು ಪ್ರತಿ 4 ವರ್ಷಗಳಿಗೊಮ್ಮೆ ಮೌಲ್ಯಮಾಪನ ನಡೆಸುತ್ತದೆ. ಹುಲಿ ಸಂರಕ್ಷಿತ ಪ್ರದೇಶದ ನಿರ್ವಹಣೆಯ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತದೆ.

ಮಾನದಂಡಗಳು

  • ಮೌಲ್ಯಮಾಪನದಲ್ಲಿ ಹುಲಿ ಸಂರಕ್ಷಣೆ ನಿರ್ವಹಣೆ, ಸಮುದಾಯದ ಭಾಗವಹಿಸುವಿಕೆ, ಪ್ರವಾಸೋದ್ಯಮ, ರಕ್ಷಣೆ, ಆವಾಸಸ್ಥಾನಗಳ ನಿರ್ವಹಣೆ, ಹುಲಿಗಳ ಸಂಖ್ಯೆ, ವೈದ್ಯಕೀಯ ಸೌಲಭ್ಯಗಳು, ಬುಡಕಟ್ಟು ಸಮುದಾಯಗಳ ಜೊತೆಗಿನ ಸಂಬಂಧ ಅವರ ಸ್ಥಳಗಳು ಸೇರಿದಂತೆ ಅನೇಕ ಅಂಶಗಳನ್ನು ತೆಗೆದುಕೊಳ್ಳಲಾಗುತ್ತದೆ.
  • 2018ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿರುವ 524 ಹುಲಿಗಳ ಪೈಕಿ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವೊಂದರಲ್ಲೇ 173 ಹುಲಿಗಳಿದ್ದರೆ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ 164 ಹುಲಿಗಳಿವೆ.
  • ಇನ್ನೊಂದು ವಿಶೇಷ : ಹುಲಿ ಸಂರಕ್ಷಿತ ಪ್ರದೇಶವಾಗಿ ಬಂಡೀಪುರಕ್ಕೆ ಇದೇ ನವೆಂಬರ್‌ 17ರಂದು 49 ವರ್ಷ ಪೂರ್ಣಗೊಳಿಸಿ ಸುವರ್ಣ ಸಂಭ್ರಮವನ್ನು ಆಚರಿಸುತ್ತಿದೆ.

ಬಂಡೀಪುರ : ಹುಲಿ ಸಂರಕ್ಷಿತ ಪ್ರದೇಶ

  • ಬೆಂಗಾಲ ಟೈಗರ್ ಸಂತತಿ ಉಳಿಸಿ ಬೆಳೆಸಲು ಮತ್ತು ಸಮತೋಲಿತ ಪರಿಸರ ಕಾಪಾಡುವ ಉದ್ದೇಶದಿಂದ 1973 ರಲ್ಲಿ ಅಂದಿನ ಪ್ರಧಾನಿ ಇಂದಿರಾ  ಗಾಂಧಿ ಅವರು ದೇಶದ ೯ ಕಡೆಗಳಲ್ಲಿ ಹುಲಿ ಸಂರಕ್ಷಿತ ಪ್ರದೇಶಗಳನ್ನು ಘೋಷಣೆ ಮಾಡಿದ್ದರು.
  • ಬಂಡೀಪುರ ಟೈಗರ್‌ ಪ್ರಾಜೆಕ್ಟ್‌ ಅಥವಾ ಬಂಡೀಪುರ ಹುಲಿ ಯೋಜನೆಗೆ ಅಂದಿನ ಮುಖ್ಯಮಂತ್ರಿ ಡಿ.ದೇವರಾಜ್‌ ಅರಸ್‌ ಅವರು 1973ರ ನವೆಂಬರ್‌ 17ರಂದು ಚಾಲನೆ ನೀಡಿದ್ದರು.
  • ಭಾರತದ ಮೊಟ್ಟ ಮೊದಲ ಹುಲಿ ರಕ್ಷಿತಾರಣ್ಯಯಾಗಿ ಬಂಡೀಪುರವನ್ನ ಘೋಷಣೆ ಮಾಡಲಾಯಿತು
  • ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿದೆ.
  • ಅಂದು ಹುಲಿ ರಕ್ಷಿತಾರಣ್ಯವಾಗುವ ಸಂದರ್ಭದಲ್ಲಿ ಇಡೀ 1200 ಚದರ ಕಿ.ಮೀ ವ್ಯಾಪ್ತಿಯ ಅರಣ್ಯದಲ್ಲಿದಿದ್ದು ಕೇವಲ 10 ರಿಂದ 13 ಹುಲಿಗಳಷ್ಟೆ ಎಂದು ಅಂದಾಜು ಮಾಡಲಾಗಿತ್ತು.
  • ಉದ್ಯಾನವನವು ಉತ್ತರದಲ್ಲಿ ಕಬಿನಿ ನದಿ ಮತ್ತು ದಕ್ಷಿಣದಲ್ಲಿ ಮೋಯರ್ ನದಿಯಿಂದ ಸುತ್ತುವರಿದಿದೆ.
  • ನುಗು ನದಿಯು ಉದ್ಯಾನವನದ ಮೂಲಕ ಹರಿಯುತ್ತದೆ.

ಹಿನ್ನೆಲೆ

  • ಇದಕ್ಕೂ ಮುನ್ನ 1941ರ ಫೆಬ್ರವರಿ 19ರಂದು ವೇಣುಗೋಪಾಲಸ್ವಾಮಿ ವನ್ಯಜೀವಿ ಉದ್ಯಾನ ಮತ್ತು ಸುತ್ತಮುತ್ತಲಿನ ಕಾಡು ಪ್ರದೇಶವನ್ನು ರಾಷ್ಟ್ರೀಯ ಉದ್ಯಾನ ಎಂದು ಘೋಷಿಸಲಾಗಿತ್ತು. ಬಂಡೀಪುರ ರಾಷ್ಟ್ರೀಯ ಉದ್ಯಾನ ಎಂದು 1985ರಲ್ಲಿ ಮರುನಾಮಕರಣ ಮಾಡಿದಾಗ, ಅದರ ವ್ಯಾಪ್ತಿಯನ್ನು 874.20 ಚದರ ಕಿ.ಮೀ.ಗೆ ವಿಸ್ತರಿಸಲಾಗಿತ್ತು. ಈಗ ಹುಲಿ ಮೀಸಲು ಅರಣ್ಯ 912.04 ಚದರ ಕಿ.ಮೀ. ಇದೆ.

ನಿಮಗಿದು ತಿಳಿದಿರಲಿ

  • ಗಡಿ ಜಿಲ್ಲೆ ಚಾಮರಾಜನಗರ ಹುಲಿಗಳ ನಾಡು ಎಂದೆ ಹೆಸರು ಗಳಿಸಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಬಂಡೀಪುರ, ಬಿಳಿಗಿರಿ ರಕ್ಷಿತಾರಣ್ಯಗಳಿವೆ.