Published on: October 4, 2021

ಬಸವಶ್ರೀ ಪ್ರಶಸ್ತಿ

ಬಸವಶ್ರೀ ಪ್ರಶಸ್ತಿ

ಸುದ್ಧಿಯಲ್ಲಿ ಏಕಿದೆ?  ಚಿತ್ರದುರ್ಗದ ಮುರುಘಾ ಮಠದ ವತಿಯಿಂದ ಪ್ರದಾನ ಮಾಡುವ ಬಸವಶ್ರೀ ಪ್ರಶಸ್ತಿಯ 2019ರ ಸಾಲಿಗೆ ಪಂಡಿತ್ ರಾಜೀವ್ ತಾರಾನಾಥ್ ಹಾಗೂ 2020ರ ಸಾಲಿನ ಪ್ರಶಸ್ತಿಗೆ ಇಸ್ರೋ ಮಾಜಿ ಅಧ್ಯಕ್ಷರಾದ ಕೆ. ಕಸ್ತೂರಿ ರಂಗನ್ ಅವರು ಆಯ್ಕೆಯಾಗಿದ್ದಾರೆ.

ಮುಖ್ಯಾಂಶಗಳು

  • ಪ್ರಶಸ್ತಿ ಮೊತ್ತ ಐದು ಲಕ್ಷ ರುಪಾಯಿ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರಲಿದೆ.
  • ಅಕ್ಟೊಬರ್ 17 ರಂದು ನಡೆಯುವ ಸಮಾರಂಭದಲ್ಲಿ ಬಸವಕೇಂದ್ರ ಮುರುಘಾಮಠದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಈ ವೇಳೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಪ್ರಶಸ್ತಿ ಪಡೆದವರ ಕಿರು ಪರಿಚಯ

  • ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರು ಸಾಂಪ್ರದಾಯಿಕ ಹಿಂದೂಸ್ತಾನಿ ಸಂಗೀತದಲ್ಲಿ ಅಗ್ರಗಣ್ಯರು. 1932ರಲ್ಲಿ ಜನಿಸಿ ತಾರಾನಾಥ್ ತಮ್ಮ 9ನೇ ವಯಸ್ಸಿನಿಂದಲೇ ಸಂಗೀತ ಕಚೇರಿ ಆರಂಭ ಮಾಡಿದರು. ಬಳಿಕ ಚಿಕ್ಕ ವಯಸ್ಸಿನಲ್ಲೇ ಆಕಾಶವಾಣಿಗೆ ತಮ್ಮ ಹಾಡುಗಾರಿಕೆ ಶುರು ಮಾಡಿದರು.
  • ತಾರಾನಾಥರು ಸಾಹಿತ್ಯದಲ್ಲಿ ಪಿಎಚ್ಡಿ ಪದವಿ ಪಡೆದಿದ್ದು ತಮಗಿದ್ದ ಇಂಗ್ಲಿಷ್ ಪ್ರಾಧ್ಯಪಕತನವನ್ನು ತ್ಯಜಿಸಿ ಸಂಗೀತವನ್ನು ಅಭ್ಯಸಿಸಲು ಆರಂಭಿಸಿದರು.  ಅಲಿ ಅಕ್ಬರ್ ಖಾನ್ ಶಿಷ್ಯರಾದರು. ಬಳಿಕ  ಪಂಡಿತ್ ರವಿಶಂಕರ್, ಶ್ರೀಮತಿ ಅನ್ನಪೂರ್ಣಾದೇವಿ, ಪಂಡಿತ್ ನಿಖಿಲ್ ಬ್ಯಾನರ್ಜಿ ಮತ್ತು ಉಸ್ತಾದ್ ಆಶಿಶ್ ಖಾನರ ಮಾರ್ಗದರ್ಶನವನ್ನು ಸಹಾ ರಾಜೀವ್ ತಾರಾನಾಥರು ಪಡೆದರು.
  • ಡಾ.ಕೃಷ್ಣಸ್ವಾಮಿ ಕಸ್ತೂರಿರಂಗನ್ ಅವರು ಕರ್ನಾಟಕದ  ಬಾಹ್ಯಾಕಾಶ ವಿಜ್ಞಾನಿಯಾಗಿದ್ದು, ಇವರು 2003 ರವರೆಗೆ 9 ಕ್ಕೂ ಹೆಚ್ಚು ವರ್ಷಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ  ನೇತೃತ್ವ ವಹಿಸಿದ್ದರು.
  • ರಾಷ್ಟ್ರೀಯ ಯೋಜನಾ ಆಯೋಗದ ಸದಸ್ಯರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ. ಇವರಿಗೆ ಭಾರತ ಸರ್ಕಾರ ನೀಡುವ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ (1982), ಪದ್ಮ ಭೂಷಣ (1992), ಪದ್ಮ ವಿಭೂಷಣ (2000) ಗೌರವಗಳು ಲಭಿಸಿವೆ. ಆಧುನಿಕ ಯುಗದ ಬಾಹ್ಯಾಕಾಶ ನೌಕೆ ಇನ್‌ಸ್ಯಾಟ್-2 ಮತ್ತು ಭಾರತೀಯ ದೂರಗ್ರಾಹಿ ಉಪಗ್ರಹಗಳಾದ ಐಆರ್‌ಎಸ್ 1ಎ & 1ಬಿ ಹಾಗೂ ಭಾರತದ ಮೊದಲ ಎರಡು ಪ್ರಾಯೋಗಿಕ ಭೂ ವೀಕ್ಷಣೆಯ ಉಪಗ್ರಹಗಳಾದ ಭಾಸ್ಕರ 1 & 2 ರ ಯೋಜನಾ ನಿರ್ದೇಶಕರಾಗಿದ್ದರು.
  • ಇವರಿಗೆ 2002ರಲ್ಲಿ ಫ್ರಾನ್ಸ್ ದೇಶದ ಆಫೀಸರ್ ಆಫ್ ಲೀಜನ್ ಆಫ್ ದಿ ಹಾನರ್ ಪ್ರಶಸ್ತಿ ಲಭಿಸಿದೆ. 2008ರಲ್ಲಿ ಕರ್ನಾಟಕ ಸರ್ಕಾರ ಇವರ ಅಧ್ಯಕ್ಷತೆಯಲ್ಲಿ ಮೊದಲ ಬಾರಿಗೆ ಕರ್ನಾಟಕ ಜ್ಞಾನ ಆಯೋಗವನ್ನು ನೇಮಿಸಿತ್ತು. ಕೆ. ಕಸ್ತೂರಿ ರಂಗನ್ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿಯು ರಚಿಸಿದ 2020ರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡಿಗೆ ಕೇಂದ್ರ ಕ್ಯಾಬಿನೆಟ್ 2020ರ ಜುಲೈ 29ರಂದು ಅನುಮೋದನೆ ನೀಡಿದೆ.