Published on: June 10, 2023

‘ಬಿಪರ್‌ಜಾಯ್’ ಚಂಡಮಾರುತ

‘ಬಿಪರ್‌ಜಾಯ್’ ಚಂಡಮಾರುತ

ಸುದ್ದಿಯಲ್ಲಿ ಏಕಿದೆ? ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಬಿಪರ್‌ಜಾಯ್ ಚಂಡಮಾರುತ ತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಿದೆ.

ಮುಖ್ಯಾಂಶಗಳು

  • ಚಂಡಮಾರುತಕ್ಕೆ ಬಿಪರ್‌ಜಾಯ್ ಎಂಬ ಹೆಸರನ್ನು ಬಾಂಗ್ಲಾದೇಶ ಸೂಚಿಸಿದೆ.
  • ಹವಾಮಾನ ಇಲಾಖೆಯ ಪ್ರಕಾರ ಗುಜರಾತ್‌ ಮೇಲೆ ಇದರ ಪ್ರಭಾವ ಅಧಿಕವಿರಲಿದೆ. ಇದು ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾ ಮೇಲೂ ಪರಿಣಾಮ ಬೀರುವ ಆತಂಕವಿದೆ.

ಬಿಪರ್‌ಜಾಯ್  ಎಂದರೇನು?

  • ಬಿಪರ್‌ಜಾಯ್ ಎಂದರೆ ಅಪಾಯ, ವಿನಾಶ ಹಾಗೂ ದುರಂತ ಎಂಬ ಅರ್ಥ ಸೂಚಿಸುತ್ತದೆ. ಅಂತಾರಾಷ್ಟ್ರೀಯ ಹವಾಮಾನ ಸಂಘಟನೆಯು ಉಷ್ಣ ವಲಯದಲ್ಲಿ ಏಳುವ ಚಂಡಮಾರುತಗಳಿಗೆ ಹೆಸರಿಡಲು ಅನುಸರಿಸುವ ಪದ್ದತಿ ಪ್ರಕಾರ ಈ ಹೆಸರನ್ನು ಇಡಲಾಗಿದೆ.

ಚಂಡಮಾರುತಗಳನ್ನು ಹೇಗೆ ಹೆಸರಿಸಲಾಗುತ್ತದೆ?

  • ಉಷ್ಣ ವಲಯದ ಚಂಡಮಾರುತ ತಟ್ಟುವ ಆಯಾ ಪ್ರದೇಶಗಳ ದೇಶಗಳು ಸೂಚಿಸುವ ಹೆಸರನ್ನೇ ಚಂಡಮಾರುತಗಳಿಗೆ ಇಡುವ ಪದ್ದತಿ ನಡೆದುಕೊಂಡು ಬಂದಿದೆ.
  • ಹಿಂದೂ ಮಹಾಸಾಗರ ವ್ಯಾಪ್ತಿಯ ಪ್ರದೇಶದಲ್ಲಿ ಸೃಷ್ಟಿಯಾಗುವ ಚಂಡಮಾರುತಗಳಿಗೆ ಹೆಸರಿಡುವ ಪದ್ದತಿಯನ್ನು 2004 ರಿಂದ ಆರಂಭ ಮಾಡಲಾಯ್ತು. ಈ ಭಾಗದ 8 ರಾಷ್ಟ್ರಗಳು ಈ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತವೆ.
  • ಭಾರತ, ಬಾಂಗ್ಲಾ ದೇಶ, ಮಾಲ್ಡೀವ್ಸ್, ಮಯನ್ಮಾರ್, ಒಮನ್, ಪಾಕಿಸ್ತಾನ, ಶ್ರೀಲಂಕಾ ಹಾಗೂ ಥೈಲ್ಯಾಂಡ್ ದೇಶಗಳು ಈ ನಾಮಕರಣ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತವೆ. ಈ ದೇಶಗಳು ಚಂಡಮಾರುತಗಳಿಗೆ ಇಡಬಹುದಾದ ಹೆಸರುಗಳನ್ನು ಸೂಚಿಸಿ ಪಟ್ಟಿ ಕಳಿಸಿ ಕೊಡುತ್ತವೆ.
  • ಚಂಡಮಾರುತಗಳು ಸೃಷ್ಟಿಯಾದ ಕೂಡಲೇ ಸರದಿ ಪ್ರಕಾರ ಆಯಾ ದೇಶಗಳು ಸೂಚಿಸಿದ ಹೆಸರನ್ನು ಚಂಡಮಾರುತಗಳಿಗೆಇಡಲಾಗುತ್ತದೆ.
    ಚಂಡಮಾರುತಗಳ ಹೆಸರನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಹಾಗೂ ಉಚ್ಛರಿಸಲು ಸುಲಭ ಇರಬೇಕು. ಹೆಸರುಗಳು ಆಕ್ರಮಣಕಾರಿಯಾಗಿ ಇರಬಾರದು, ವಿವಾದಾತ್ಮಕವಾಗಿ ಇರಬಾರದು. ಜೊತೆಗೆ ವಿವಿಧ ಭಾಷೆಗಳನ್ನು ಈ ಹೆಸರುಗಳು ಒಳಗೊಂಡಿರಬೇಕು. ಈ ಮೂಲಕ ವಿವಿಧ ಪ್ರಾಂತ್ಯಗಳ ಜನರು ಆ ಹೆಸರನ್ನು ಕಂಡು ಹಿಡಿಯಲು ಸುಲಭ ಆಗುವಂತಿರಬೇಕು ಎಂಬ ನಿಯಮಗಳಿವೆ.