Published on: September 3, 2022

ಭದ್ರತಾ ಪಡೆಗೆ ‘ಡ್ರೋನ್ ಸಮೂಹ’

ಭದ್ರತಾ ಪಡೆಗೆ ‘ಡ್ರೋನ್ ಸಮೂಹ’

ಸುದ್ದಿಯಲ್ಲಿ ಏಕಿದೆ?

ಕೃತಕ ಬುದ್ಧಿಮತ್ತೆ (ಎಐ) ತಂತ್ರಾಂಶವೂ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿದ ‘ಡ್ರೋನ್‌ಗಳ ಸಮೂಹ’ ವನ್ನು ಸಶಸ್ತ್ರ ಪಡೆಗಳಿಗೆ ಸೇರ್ಪಡೆ ಮಾಡಲಾಗುತ್ತಿದೆ. ಗುರಿಗಳನ್ನು ನಿಖರವಾಗಿ ಗುರುತಿಸಿ, ಧ್ವಂಸ ಮಾಡಲು ಈ ಡ್ರೋನ್‌ಗಳಲ್ಲಿನ ಕೃತಕ ಬುದ್ಧಿಮತ್ತೆ ತಂತ್ರಾಂಶ ನೆರವಾಗಲಿದೆ ಎಂದು ಮೂಲಗಳು ಹೇಳಿವೆ.

ಮುಖ್ಯಾಂಶಗಳು

  • ಹೆಸರೇ ಹೇಳುವಂತೆ ‘ಡ್ರೋನ್‌ಗಳ ಸಮೂಹ’ವು ನಿರ್ದಿಷ್ಟ ಸಂಖ್ಯೆಯ ಡ್ರೋನ್‌ಗಳನ್ನು ಒಳಗೊಂಡಿರುತ್ತದೆ. ಈ ‘ಡ್ರೋನ್‌ ಸಮೂಹ’ವನ್ನು ಒಂದೇ ಕೇಂದ್ರದಿಂದ ನಿಯಂತ್ರಿಸಲಾಗುತ್ತದೆ.
  • ‘ಯಾವುದೇ ಕಾರ್ಯಾಚರಣೆ ಕೈಗೊಂಡ ಸಂದರ್ಭದಲ್ಲಿ ವಿವಿಧ ಕಾರಣಗಳಿಂದಾಗಿ ಕೆಲವು ಡ್ರೋನ್‌ಗಳು ಕಾರ್ಯ ನಿಲ್ಲಿಸಿದರೂ, ‘ಸಮೂಹ’ವು ತನ್ನ ಕಾರ್ಯವನ್ನು ಪೂರ್ಣಗೊಳಿಸಿ ಹಿಂದಿರುಗುತ್ತದೆ’ ಎಂದು ಸೇನೆಯ ಸಾರ್ವಜನಿಕ ಮಾಹಿತಿ ವಿಭಾಗದ ಹೆಚ್ಚುವರಿ ಮಹಾನಿರ್ದೇಶನಾಲಯ ತಿಳಿಸಿದೆ.

ಡ್ರೋನ್ ಅನ್ನು ಏಕೆ ಬಳಸಲಾಗುತ್ತದೆ?

ಡ್ರೋನ್‌ಗಳು ಈಗ ಹವಾಮಾನ ಬದಲಾವಣೆಯನ್ನು ಮೇಲ್ವಿಚಾರಣೆ ಮಾಡುವುದರಿಂದ ಹಿಡಿದು ನೈಸರ್ಗಿಕ ವಿಕೋಪಗಳ ನಂತರ ಶೋಧ ಕಾರ್ಯಾಚರಣೆಗಳನ್ನು ನಡೆಸುವುದು, ಛಾಯಾಗ್ರಹಣ, ಚಿತ್ರೀಕರಣ ಮತ್ತು ಸರಕುಗಳನ್ನು ತಲುಪಿಸುವವರೆಗೆ ಅನೇಕ ಕಾರ್ಯಗಳನ್ನು ಮಾಡುತ್ತದೆ. ಆದರೆ ಮಿಲಿಟರಿಯ ವಿಚಕ್ಷಣ, ಕಣ್ಗಾವಲು ಮತ್ತು ಉದ್ದೇಶಿತ ದಾಳಿಗಳಿಗೆ ಅವುಗಳು ಅತ್ಯಂತ ಪ್ರಸಿದ್ಧ ಮತ್ತು ವಿವಾದಾತ್ಮಕ ಬಳಕೆಯಾಗಿದೆ.