Published on: November 22, 2021

ಭಾರತದ ಅತ್ಯಂತ ಸ್ವಚ್ಛ ನಗರ

ಭಾರತದ ಅತ್ಯಂತ ಸ್ವಚ್ಛ ನಗರ

ಸುದ್ಧಿಯಲ್ಲಿ ಏಕಿದೆ ?  ಕೇಂದ್ರ ಸರ್ಕಾರವು ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ ಮೂಲಕ 2021ನೇ ಸಾಲಿನ ಭಾರತದ ಅತ್ಯಂತ ಸ್ವಚ್ಛ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸತತ ಐದನೇ ವರ್ಷ ಕೂಡ ಮಧ್ಯಪ್ರದೇಶದ ಇಂದೋರ್, ಅತ್ಯಂತ ಸ್ವಚ್ಛ ನಗರ ಎನಿಸಿಕೊಂಡಿದೆ.

ಮುಖ್ಯಾಂಶಗಳು

  • ಇಂದೋರ್ ಬಳಿಕ ಸೂರತ್ ಮತ್ತು ವಿಜಯವಾಡ ನಗರಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ.
  • ‘ಗಂಗಾ ಪಟ್ಟಣ’ ವಿಭಾಗದಲ್ಲಿ ವಾರಾಣಸಿ ಅತ್ಯಂತ ಸ್ವಚ್ಛ ನಗರ ಎನಿಸಿಕೊಂಡಿದೆ. 1 ರಿಂದ 10 ಲಕ್ಷ ಜನಸಂಖ್ಯೆ ಇರುವ ಸಣ್ಣ ನಗರಗಳ ವಿಭಾಗದಲ್ಲಿ ದಿಲ್ಲಿ ಮೊದಲ ಸ್ಥಾನದಲ್ಲಿದೆ. ಛತ್ತೀಸಗಡದ ಅಂಬಿಕಾಪುರ ಮತ್ತು ಆಂಧ್ರಪ್ರದೇಶದ ತಿರುಪತಿ ನಂತರದ ಸ್ಥಾನಗಳಲ್ಲಿವೆ.

ಸ್ವಚ್ಛ ಸರ್ವೇಕ್ಷಣಾ ಅಭಿಯಾನ

  • ದೇಶದ ಅತ್ಯಂತ ಸ್ವಚ್ಛ ರಾಜ್ಯ ಎಂಬ ಹೆಗ್ಗಳಿಕೆ ಛತ್ತೀಸಗಡಕ್ಕೆ ಸಿಕ್ಕಿದೆ. ಸ್ವಚ್ಛ ನಗರಗಳ ಪಟ್ಟಿಯಲ್ಲಿ ಇಂದೋರ್, ಸೂರತ್, ವಿಜಯವಾಡ, ನವಿ ಮುಂಬೈ, ದಿಲ್ಲಿ, ಪುಣೆ, ಭೋಪಾಲ್, ವಡೋದರಾ, ವಿಶಾಖಪಟ್ಟಣ ಮತ್ತು ಅಹ್ಮದಾಬಾದ್ ಮೊದಲ ಹತ್ತು ಸ್ಥಾನಗಳಲ್ಲಿವೆ.
  • ಹತ್ತು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ನಗರಗಳನ್ನು ಈ ಸಮೀಕ್ಷೆಯಲ್ಲಿ ಪರಿಗಣಿಸಲಾಗುತ್ತದೆ. 2014ರಲ್ಲಿ ಆರಂಭಿಸಲಾದ ಸ್ವಚ್ಛ ಭಾರತ ಅಭಿಯಾನದ ಭಾಗವಾಗಿ ಪ್ರತಿ ವರ್ಷವೂ ನಗರಗಳ ಸ್ವಚ್ಛತೆ ಹಾಗೂ ನೈರ್ಮಲ್ಯೀಕರಣ ಚಟುವಟಿಕೆಗಳ ಆಧಾರದಲ್ಲಿ ಸ್ವಚ್ಛ ನಗರ ಎಂಬ ಶೀರ್ಷಿಕೆ ನೀಡಲಾಗುತ್ತದೆ.
  • ರಾಷ್ಟ್ರಪತಿ ಕೋವಿಂದ್ ಅವರು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದ ನಗರಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಮೌಲ್ಯಮಾಪನ

  • ತ್ಯಾಜ್ಯ ವಿಲೇವಾರಿ ಕುರಿತಾದ ಕ್ಷೇತ್ರ ಅಧಿಕಾರಿಗಳು ಮತ್ತು ನಾಗರಿಕರ ಪ್ರತಿಕ್ರಿಯೆ, ಬಯಲಶೌಚ ಮುಕ್ತದಲ್ಲಿನ ರೇಟಿಂಗ್, ಸಮುದಾಯ ಶೌಚಾಲಯಗಳ ಕಾರ್ಯಸ್ಥಿತಿ ಮತ್ತು ನಿರ್ವಹಣೆ, ಶೌಚಾಲಯಗಳಿಂದ ತ್ಯಾಜ್ಯಗಳ ಸಮರ್ಪಕ ನಿರ್ವಹಣೆ, ತೆರೆದ ಚರಂಡಿಗಳಲ್ಲಿ ಅಥವಾ ನೀರಿನ ಮೂಲಗಳಲ್ಲಿ ಶುದ್ಧೀಕರಿಸಲಾಗದ ರಾಡಿ ಸೇರಿಕೊಳ್ಳದಂತೆ ತಡೆಯುವುದು ಮುಂತಾದವುಗಳ ಆಧಾರದಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ.
  • ಸ್ವಚ್ಛ ಭಾರತ ಅಭಿಯಾನದ ನೋಡಲ್ ಏಜೆನ್ಸಿಯಾಗಿರುವ ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಸಚಿವಾಲಯ 2016ರಲ್ಲಿ 73 ನಗರಗಳಲ್ಲಿ ತನ್ನ ಮೊದಲ ಸಮೀಕ್ಷೆ ನಡೆಸಿತ್ತು. ನಂತರದ ವರ್ಷ 434 ನಗರಗಳಲ್ಲಿ ಸಮೀಕ್ಷೆ ನಡೆಸಿತ್ತು. 2018ರ ಸಮೀಕ್ಷೆಯಲ್ಲಿ 4,203 ನಗರಗಳು, 2019ರಲ್ಲಿ 4,237 ಮತ್ತು 2021ರಲ್ಲಿ 4,320 ನಗರಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ.
  • ಈ ಸಲದ ಸ್ಪರ್ಧೆಯಲ್ಲಿ ‘ಪ್ರೇರಕ್‌ ದೌಡ್‌ ಸಮ್ಮಾನ್‌’ ವರ್ಗದಲ್ಲಿ ದಿವ್ಯಾ (ಪ್ಲಾಟಿನಂ), ಅನುಪಮ (ಚಿನ್ನ), ಉಜ್ವಲ (ಬೆಳ್ಳಿ), ಉದಿತ್‌ (ಕಂಚು) ಹಾಗೂ ಆರೋಹಿ (ಭರವಸೆದಾಯಕ) ಎಂಬ ಐದು ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ಕರ್ನಾಟಕ ಮತ್ತು ಸ್ವಚ್ಛ ಸರ್ವೇಕ್ಷಣಾ ಅಭಿಯಾನ

  • ಈ ಹಿಂದೆ ಹಲವು ಬಾರಿ ಮೊದಲ ಸ್ಥಾನ ಗಳಿಸಿದ್ದ ಮೈಸೂರು ಈಗ 17 ನೇ ಸ್ಥಾನಕ್ಕೆ ಕುಸಿದಿದ್ದು, ಹುಬ್ಬಳ್ಳಿ-ಧಾರವಾಡ 57 ನೇ ಸ್ಥಾನದಲ್ಲಿದ್ದರೆ, ಬೆಂಗಳೂರು ನಗರ 89 ರಲ್ಲಿದೆ.
  • 2015, 2016ರಲ್ಲಿ ಸತತ ಎರಡು ಬಾರಿ ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಮೈಸೂರು ಈ ಬಾರಿ ಸಮಗ್ರ ವಿಭಾಗದಲ್ಲಿ 11ನೇ ಸ್ಥಾನಕ್ಕೆ ಜಾರಿದೆ. ಟಾಪ್‌ 10 ಪಟ್ಟಿಯಿಂದ ಹೊರಬಿದ್ದಿದೆ.
  • ಈ ಬಾರಿ 1ರಿಂದ 10 ಲಕ್ಷ ಜನಸಂಖ್ಯೆಯೊಳಗಿನ ನಗರಗಳ ಸ್ವಚ್ಛತೆಯ ವಿಭಾಗದಲ್ಲಿ ಮೈಸೂರು ದೇಶದ ನಂ.1 ‘ಸ್ವಯಂ ಸುಸ್ಥಿರ ನಗರ’ (ಸೆಲ್‌್ಫ ಸಸ್ಟೈನಬಲ್‌ ಸಿಟಿ) ಪ್ರಶಸ್ತಿಯನ್ನು ಪಡೆದುಕೊಂಡಿದೆ. ಜತೆಗೆ ಈ ಬಾರಿಯೂ ‘ಫೈವ್‌ ಸ್ಟಾರ್‌’ ರ‍್ಯಾಂಕಿಂಗ್‌ನೊಂದಿಗೆ ‘ತ್ಯಾಜ್ಯ ಮಕ್ತ ನಗರ’ ಪ್ರಶಸ್ತಿ ಗಿಟ್ಟಿಸಿಕೊಂಡಿದೆ. ದೇಶದ 9 ನಗರಗಳಿಗೆ ಫೈವ್‌ ಸ್ಟಾರ್‌ ರ‍್ಯಾಂಕಿಂಗ್‌ನೊಂದಿಗೆ ತ್ಯಾಜ್ಯಮುಕ್ತ ಪ್ರಶಸ್ತಿ ನೀಡಲಾಗಿದ್ದು, ಆ ಪೈಕಿ ಮೈಸೂರು ನಗರ ಸಹ ಒಂದಾಗಿದೆ.

ಬೆಂಗಳೂರಿಗೆ ‘ವೇಗದ’ ಗರಿ

  • ಈ ಬಾರಿಯ ಸ್ವಚ್ಛ ಸರ್ವೇಕ್ಷಣೆಯಲ್ಲಿ ಉದ್ಯಾನನಗರಿ ಬೆಂಗಳೂರು ‘ಅತಿ ವೇಗದ ನಗರ’ ಹೆಗ್ಗಳಿಕೆಗೆ ಪಾತ್ರವಾಗಿದೆ. 40 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರಗಳ ವಿಭಾಗದಲ್ಲಿ ಈ ಪ್ರಶಸ್ತಿ ಪಡೆದಿದೆ. ಇದೇ ವೇಳೆ 10 ಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆಯುಳ್ಳ 48 ನಗರ ಸ್ಥಳೀಯ ಸಂಸ್ಥೆಗಳ ಪಟ್ಟಿಯಲ್ಲಿ ಬಿಬಿಎಂಪಿ 28ನೇ ಸ್ಥಾನ ಗಳಿಸಿದೆ.
  • 500 ಅಂಕಗಳನ್ನು ಪಡೆಯುವ ಮೂಲಕ ಬಯಲು ಶೌಚಮುಕ್ತ ನಗರವೆಂಬ ಹಿರಿಮೆಗೂ ಬೆಂಗಳೂರು ಪಾತ್ರವಾಗಿದೆ. ಆದರೆ, ‘ಕಸ ಮುಕ್ತ ನಗರ’ ವಿಭಾಗದಲ್ಲಿ ಯಾವುದೇ ಅಂಕ ಗಳಿಸುವಲ್ಲಿ ವಿಫಲವಾಗಿದೆ.
  • ಆರು ಸೂಚ್ಯಂಕಗಳನ್ನು ಆಧರಿಸಿ ಈ ವರ್ಗೀಕರಿಸಲಾಗಿತ್ತು. ಕಸವನ್ನು ಹಸಿ, ಒಣ ಹಾಗೂ ಅಪಾಯಕಾರಿ ಎಂದು ವಿಂಗಡಿಸುವುದು, ಹಸಿ ಕಸದಲ್ಲಿ ಸಂಸ್ಕರಣೆಗೆ ಒಳಗಾಗುವ ಕಸದ ಪ್ರಮಾಣ, ಹಸಿ ಮತ್ತು ಒಣ ಕಸಗಳ ಸಂಸ್ಕರಣೆ ಮತ್ತು ಮರುಬಳಕೆ, ಕಟ್ಟಡ ತ್ಯಾಜ್ಯಗಳ ಸಂಸ್ಕರಣೆ, ಭೂಭರ್ತಿ ಕೇಂದ್ರಕ್ಕೆ ತಲುಪುವ ಕಸದ ಪ್ರಮಾಣ ನಗರದ ನೈರ್ಮಲ್ಯ ಗುಣಮಟ್ಟ ಆಧರಿಸಿ ಈ ಪ್ರಶಸ್ತಿಗೆ ಆಯ್ಕೆ ನಡೆದಿದೆ. ಇದರಲ್ಲಿ ಯಾವ ವಿಭಾಗದಲ್ಲೂ ಬಿಬಿಎಂಪಿ ಸ್ಥಾನ ಪಡೆದಿಲ್ಲ.
  • ಈ ಬಾರಿಯ ಸ್ಪರ್ಧೆಯಲ್ಲಿ ಪಾಲಿಕೆಗಳ ಸೇವಾ ಗುಣಮಟ್ಟದ ಸುಧಾರಣೆ (ಗರಿಷ್ಠ 2400 ಅಂಕ), ಪ್ರಮಾಣೀಕರಣ (ಗರಿಷ್ಠ 1800 ಅಂಕ) ಹಾಗೂ ನಾಗರಿಕರ ಪ್ರತಿಕ್ರಿಯೆ (ಗರಿಷ್ಠ 1800) ಸೇರಿದಂತೆ ಒಟ್ಟು 6000 ಅಂಕಗಳನ್ನು ನಿಗದಿಪಡಿಸಲಾಗಿತ್ತು.
  • ಇದರಲ್ಲಿ ಬಿಬಿಎಂಪಿ ಒಟ್ಟು 3585.5 ಅಂಕಗಳನ್ನು ಪಡೆದಿದೆ. ರಾಷ್ಟ್ರೀಯ ಸರಾಸರಿಗಿಂತ (2,072) ಹಾಗೂ ರಾಜ್ಯದ ಸರಾಸರಿಗಿಂತ (1,530) ಬಿಬಿಎಂ‍ಪಿ ಮುಂದಿದೆ.
  • ಬಿಬಿಎಂಪಿಗೆ ಹೆಚ್ಚು ಅಂಕ ಸಿಕ್ಕಿರುವುದು (1,933.10) ಸೇವಾ ಗುಣಮಟ್ಟ ಸುಧಾರಣೆ ವಿಭಾಗದಲ್ಲಿ. ಈ ಸಾಧನೆಯಿಂದಾಗಿ ಕಳೆದ ಸಾಲಿಗಿಂತ ತುಸು ಉತ್ತಮ ಸಾಧನೆ ತೋರಿಸಲು ಸಾಧ್ಯವಾಗಿದೆ.
  • ನಾಗರಿಕರ ಪ್ರತಿಕ್ರಿಯೆಗೆ ಈ ಬಾರಿ ಗರಿಷ್ಠ 1800 ಅಂಕ ಪಡೆಯುವ ಅವಕಾಶವಿತ್ತು. ಅದರಲ್ಲಿ ಬಿಬಿಎಂಪಿಗೆ 1152.45 ಅಂಕಗಳು ಸಿಕ್ಕಿವೆ. ಕಳೆದ ಸಾಲಿಗೆ ಹೋಲಿಸಿದರೆ ಈ ವಿಭಾಗದಲ್ಲಿ ತುಸು ಉತ್ತಮ ಸಾಧನೆಯನ್ನು ಬಿಬಿಎಂಪಿ ಮಾಡಿದೆ.

ಕರ್ನಾಟಕದ ಹಿನ್ನಡೆಗೆ ಕಾರಣ

  • ಹಲವು ನಾಗರೀಕ ಸಂಸ್ಥೆಗಳು, ಯೋಜನೆಗಳ ಕಳಪೆ ಅನುಷ್ಠಾನದಿಂದಾಗಿ ನಗರದಲ್ಲಿ ಕಳೆದ 5 ವರ್ಷಗಳಿಂದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸುವ ಸ್ವಚ್ಛ ಸರ್ವೇಕ್ಷಣಾ ರ್ಯಾಕಿಂಗ್ ಪಟ್ಟಿಯಲ್ಲಿ ಉನ್ನತ ಸ್ಥಾನ ಪಡೆಯಲು ಸಾಧಅಯವಾಗಲಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
  • ದೇಶದಲ್ಲಿಯೇ ಬೆಂಗಳೂರಿನಲ್ಲಿ ಅತೀ ಹೆಚ್ಚು ತ್ಯಾಜ್ಯ ಸ್ವಯಂ ಸೇವಕರನ್ನು ಹೊಂದಿದೆ. ಆದರೂ ಘನತ್ಯಾಜ್ಯ ನಿರ್ವಹಣೆಯಲ್ಲಿ ನಗರದ ಶ್ರೇಯಾಂಕವು ಸುಧಾರಿಸುತ್ತಿಲ್ಲ ಏಕೆಂದರೆ ಸಮನ್ವಯ ಮತ್ತು ನಾಯಕತ್ವದ ಕೊರತೆ ಇದಕ್ಕೆ ಕಾರಣವಾಗಿದೆ